ಅಫ್ಘಾನ್​​ನಿಂದ ಇಂದು ಭಾರತಕ್ಕೆ ಬಂದ 146 ಮಂದಿಯಲ್ಲಿ ಇಬ್ಬರಿಗೆ ಕೊರೊನಾ ಸೋಂಕು; ಆಸ್ಪತ್ರೆಗೆ ದಾಖಲು

Afghanistan Crisis: ಇಂದು ದೆಹಲಿಗೆ ಬಂದು ಇಳಿದಿದ್ದು 146 ಜನರ ಎರಡನೇ ಬ್ಯಾಚ್ ಆಗಿದೆ. ಇಷ್ಟೂ ಜನ ಸ್ವಲ್ಪ ದಿನಗಳ ಹಿಂದೆ ಯುಎಸ್​ ಮತ್ತು ಉತ್ತರ ಅಟ್ಲಾಂಟಿಕ ಒಪ್ಪಂದ ಸಂಸ್ಥೆಗಳ (NATO) ಯುದ್ಧ ವಿಮಾನದ ಮೂಲಕ ಕಾಬೂಲ್​ನಿಂದ ದೋಹಾಕ್ಕೆ ಹೋಗಿದ್ದರು.

ಅಫ್ಘಾನ್​​ನಿಂದ ಇಂದು ಭಾರತಕ್ಕೆ ಬಂದ 146 ಮಂದಿಯಲ್ಲಿ ಇಬ್ಬರಿಗೆ ಕೊರೊನಾ ಸೋಂಕು; ಆಸ್ಪತ್ರೆಗೆ ದಾಖಲು
ಸಾಂಕೇತಿಕ ಚಿತ್ರ
Follow us
TV9 Web
| Updated By: Lakshmi Hegde

Updated on: Aug 23, 2021 | 6:02 PM

ದೆಹಲಿ: ತಾಲಿಬಾನ್​ ಉಗ್ರರ ಹಿಡಿತಕ್ಕೆ ಒಳಗಾಗಿರುವ ಅಫ್ಘಾನಿಸ್ತಾನ (Afghanistan)ದಲ್ಲಿರುವ ಭಾರತೀಯರನ್ನು ವಾಪಸ್​ ದೇಶಕ್ಕೆ ತರುವ ಕಾರ್ಯ ಭರದಿಂದ ಸಾಗುತ್ತಿದೆ. ದಿನಕ್ಕೆ ಎರಡು ವಿಮಾನಗಳು ಕಾಬೂಲ್​ ಏರ್​ಪೋರ್ಟ್(Kabul Airport)​ನಿಂದ ಹೊರಟು ಭಾರತ ತಲುಪುತ್ತಿದ್ದು, ವಿವಿಧ ಬ್ಯಾಚ್​ಗಳ ಮೂಲಕ ಜನರನ್ನು ಕರೆತರಲಾಗುತ್ತಿದೆ. ಆದರೀಗ ಈ ಸ್ಥಳಾಂತರದ ಮಧ್ಯೆ ಕೊರೊನಾ ಆತಂಕ ಶುರುವಾಗಿದೆ. ಇಂದು ಬೆಳಗ್ಗೆ ಅಫ್ಘಾನ್(Afghan)​​ನಿಂದ ದೆಹಲಿಗೆ ಬಂದ 146 ಭಾರತೀಯ ಪ್ರಯಾಣಿಕರಲ್ಲಿ, ಇಬ್ಬರಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ. ಅವರನ್ನು ಎಲ್​ಎನ್​ಜೆಪಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಉಪ ವಿಭಾಗೀಯ ಮ್ಯಾಜಿಸ್ಟ್ರೇಟ್ ರಾಜೇಂದ್ರ ಕುಮಾರ್​ ತಿಳಿಸಿದ್ದಾರೆ.

ಇಂದು ದೆಹಲಿಗೆ ಬಂದು ಇಳಿದಿದ್ದು 146 ಜನರ ಎರಡನೇ ಬ್ಯಾಚ್ ಆಗಿದೆ. ಇಷ್ಟೂ ಜನ ಸ್ವಲ್ಪ ದಿನಗಳ ಹಿಂದೆ ಯುಎಸ್​ ಮತ್ತು ಉತ್ತರ ಅಟ್ಲಾಂಟಿಕ ಒಪ್ಪಂದ ಸಂಸ್ಥೆಗಳ (NATO) ಯುದ್ಧ ವಿಮಾನದ ಮೂಲಕ ಕಾಬೂಲ್​ನಿಂದ ದೋಹಾಕ್ಕೆ ಹೋಗಿದ್ದರು. ಅಲ್ಲಿಂದ ನಾಲ್ಕು ವಿವಿಧ ವಿಮಾನಗಳ ಮೂಲಕ ದೆಹಲಿಗೆ ಬಂದಿಳಿದಿದ್ದಾರೆ. ಹಾಗೇ, ಭಾನುವಾರ ಸುಮಾರು 400 ಜನರನ್ನು ವಿವಿಧ ವಿಮಾನಗಳ ಮೂಲಕ ಅಪ್ಘಾನ್​ನಿಂದ ಭಾರತಕ್ಕೆ ಕರೆತರಲಾಗಿದೆ. ಅದರಲ್ಲಿ 329 ಮಂದಿ ಭಾರತೀಯರೇ ಆಗಿದ್ದಾರೆ. ಅಫ್ಘಾನ್​ನಲ್ಲಿರುವ ಹಿಂದು ಮತ್ತು ಸಿಖ್​ ಸಮುದಾಯದವರನ್ನೂ ಭಾರತಕ್ಕೆ ಕರೆತರಲಾಗುತ್ತಿದೆ.

ಸ್ಥಳಾಂತರ ಪ್ರಕ್ರಿಯೆಯೂ ಸವಾಲು ಕಾಬೂಲ್​ ನ್ನು ಕಳೆದ ಭಾನುವಾರ ತಾಲಿಬಾನ್​ ವಶಪಡಿಸಿಕೊಂಡ ಬೆನ್ನಲ್ಲೇ ಅಲ್ಲಿಂದ ಹೇಗಾದರೂ ಸರಿ ಪಾರಾಗಬೇಕು ಎಂದು ಹೋರಾಡುವವರ ಸಂಖ್ಯೆ ಹೆಚ್ಚಾಗಿದೆ. ಈ ಮಧ್ಯೆ ಏರ್​ಪೋರ್ಟ್​ನಲ್ಲಿ ಅವ್ಯವಸ್ಥೆ ಹೆಚ್ಚಾಗಿದೆ. ನೂಕು-ನುಗ್ಗಲಿನಿಂದಾಗಿ ಹಲವರು ಪ್ರಾಣಕಳೆದುಕೊಂಡಿದ್ದಾರೆ. ಈ ಮಧ್ಯೆ ಯುಎಸ್​ಗೆ ಐಸಿಸ್​ ಉಗ್ರರ ಬೆದರಿಕೆಯೂ ಇದೆ. ಕಾಬೂಲ್​ ವಿಮಾನ ನಿಲ್ದಾಣವನ್ನೇ ಸ್ಫೋಟಿಸುತ್ತೇವೆ ಎಂದು ಹೇಳಿದ್ದಾರೆಂಬುದನ್ನು ಅಮೆರಿಕ ಅಧ್ಯಕ್ಷ ಜೋ ಬೈಡನ್​ ತಿಳಿಸಿದ್ದಾರೆ. ಆಗಸ್ಟ್​ 31ರೊಳಗೆ ಸ್ಥಳಾಂತರ ಪ್ರಕ್ರಿಯೆ ಮುಗಿಸಬೇಕು ಎಂಬ ಗುರಿಯನ್ನು ಅಮೆರಿಕ ಇಟ್ಟುಕೊಂಡಿದೆ.

ಇದನ್ನೂ ಓದಿ: ಇದೇ ಮೊದಲ ಬಾರಿಗೆ ಐವರು ಮಹಿಳಾ ಅಧಿಕಾರಿಗಳಿಗೆ ಕರ್ನಲ್ ದರ್ಜೆಯ ಬಡ್ತಿ​ ನೀಡಿದ ಭಾರತೀಯ ಸೇನೆ

ನಮ್ಮಕ್ಕ ಸುಧಾಕ್ಕನಿಗೆ ದೊಡ್ಡ ನಮಸ್ಕಾರ: ಕಿದ್ವಾಯಿ ಆಸ್ಪತ್ರೆಯ ವಿವಿಧ ಘಟಕಗಳನ್ನು ಉದ್ಘಾಟಿಸಿ ಸಿಎಂ ಬೊಮ್ಮಾಯಿ ಮಾತು