ರಷ್ಯಾದ ಸೇನಾಪಡೆಗಳು ಈಗಾಗಲೇ ಉಕ್ರೇನ್ (Russia Attack On Ukraine) ಮೇಲೆ ದಾಳಿ ಪ್ರಾರಂಭಿಸಿದ್ದು, ಉಕ್ರೇನ್ನ ಗಡಿ ದಾಟಿ ಚೆರ್ನಿಹಿವ್, ಖಾರ್ಕಿವ್ ಮತ್ತು ಲುಹಾನ್ಸ್ಕ್ ಪ್ರದೇಶಗಳಿಗೆ ಕಾಲಿಟ್ಟಿವೆ. ರಷ್ಯಾ ಸಶಸ್ತ್ರಪಡೆಗಳ ತೀವ್ರವಾದ ಶೆಲ್ ದಾಳಿಯಿಂದಾಗಿ ಇದುವರೆಗೆ ಏಳು ಜನರು ಮೃತರಾಗಿದ್ದು, 9ಮಂದಿ ಗಾಯಗೊಂಡಿದ್ದಾಗಿ ಉಕ್ರೇನ್ ಆಡಳಿತ ತಿಳಿಸಿದ್ದಾಗಿ ರಾಯಿಟರ್ಸ್ ಸುದ್ದಿ ಮಾಧ್ಯಮ ವರದಿ ಮಾಡಿದೆ. ಗುರುವಾರ ಪುತಿನ್ (Vladimir Putin) ಏಕಾಏಕಿ ಉಕ್ರೇನ್ ಮೇಲೆ ಸೇನಾ ಕಾರ್ಯಾಚರಣೆಗೆ ಸೂಚನೆ ನೀಡಿದರು. ಅದರ ಬೆನ್ನಲ್ಲೇ ರಷ್ಯಾ ಪಡೆಗಳು ಉಕ್ರೇನ್ನ ಕರಾವಳಿ ತೀರದಲ್ಲಿ ಲ್ಯಾಂಡ್ ಆಗಿದ್ದು, ಹಲವು ನಗರಗಳಲ್ಲಿ ಕ್ಷಿಪಣಿ, ಶೆಲ್ ದಾಳಿ ಶುರುವಿಟ್ಟುಕೊಂಡಿವೆ. ಈ ಮಧ್ಯೆ ವಿಶ್ವದ ದಿಗ್ಗಜ ರಾಷ್ಟ್ರಗಳು ರಷ್ಯಾದ ಮೇಲೆ ಸಾಧ್ಯವಾದ ಎಲ್ಲ ರೀತಿಯಲ್ಲೂ ನಿರ್ಬಂಧ ಹೇರಬೇಕು ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಮನವಿ ಮಾಡಿದ್ದಾರೆ.
ಇದಕ್ಕೂ ಮೊದಲು ಉಕ್ರೇನ್ ಪೂರ್ವಭಾಗದಲ್ಲಿರುವ ಲುಹಾನ್ಸ್ಕ್ ಪ್ರದೇಶದಲ್ಲಿ ರಷ್ಯಾದ 5 ವಿಮಾನಗಳು ಮತ್ತು ಒಂದು ಹೆಲಿಕಾಪ್ಟರ್ನ್ನು ಹೊಡೆದುರುಳಿಸಲಾಗಿದೆ ಎಂದು ಉಕ್ರೇನ್ ಸೇನೆ ಮಾಹಿತಿ ನೀಡಿದ್ದಾಗಿ ರಾಯಿಟರ್ಸ್ ಹೇಳಿತ್ತು. ಹಾಗೇ, ಇನ್ನೊಂದೆಡೆ, ಉಕ್ರೇನಿಯನ್ ಮಿಲಿಟರಿ ವಾಯುನೆಲೆಗಳು ಮತ್ತು ವಾಯು ರಕ್ಷಣಾ ವ್ಯವಸ್ಥೆ ನಿಷ್ಕ್ರಿಯಗೊಳಿಸಿದ್ದಾಗಿ ರಷ್ಯಾ ರಕ್ಷಣಾ ಸಚಿವಾಲಯವೂ ಹೇಳಿಕೆ ಬಿಡುಗಡೆ ಮಾಡಿದೆ. ಆದರೆ ತಮ್ಮ ವಾಯು ಸೇನಾ ನೆಲೆಗೆ ಯಾವುದೇ ಅಪಾಯವಾಗಿಲ್ಲ. ರಷ್ಯ ಸುಳ್ಳು ಹೇಳುತ್ತಿರುವುದಾಗಿ ಉಕ್ರೇನ್ ತಿಳಿಸಿದೆ. ಉಕ್ರೇನ್ನಲ್ಲಿ ರಷ್ಯಾ ದಾಳಿಗೆ ಸಂಬಂಧಪಟ್ಟಂತೆ ಬಿಡುಗಡೆಯಾದ ಹೊಸ ನಕ್ಷೆಯ ಪ್ರಕಾರ, ಉಕ್ರೇನ್ ದೇಶದಾದ್ಯಂತ ರಷ್ಯಾ ಸೇನಾಪಡೆಗಳು ವಿವಿಧ ಮಾದರಿಯ ದಾಳಿಯಲ್ಲಿ ತೊಡಗಿಕೊಂಡಿವೆ. ಅಲ್ಲದೆ, ಉಕ್ರೇನ್ನ ಪಶ್ಚಿಮ ಗಡಿಭಾಗದಲ್ಲಿರುವ, ನ್ಯಾಟೋ ಸದಸ್ಯತ್ವ ಹೊಂದಿರುವ ರಾಷ್ಟ್ರಗಳಾದ ಪೋಲ್ಯಾಂಡ್ ಮತ್ತು ಹಂಗೇರಿ ಸಮೀಪವೂ ರಷ್ಯಾ ಸೇನೆಗಳು ದಾಳಿ ನಡೆಸುತ್ತಿವೆ ಎನ್ನಲಾಗಿದೆ.
ಇಂದು ರಷ್ಯಾ ಅಧ್ಯಕ್ಷ ಪುತಿನ್ ಉಕ್ರೇನ್ ಮೇಲೆ ಸೇನಾ ಕಾರ್ಯಾಚರಣೆಯನ್ನು ಘೋಷಿಸಿದ ಸಂದರ್ಭದಲ್ಲಿ ವಿಶ್ವಸಂಸ್ಥೆ ಭದ್ರತಾ ಮಂಡಳಿಯ ತುರ್ತು ಸಭೆ ನಡೆಯುತ್ತಿತ್ತು. ಉಕ್ರೇನ್ನಲ್ಲಿ ವಿದ್ಯಾರ್ಥಿಗಳಿಗೆ ಎಂದಿನಂತೆ ಆನ್ಲೈನ್ ತರಗತಿಗಳು ನಡೆಯುತ್ತಿದ್ದವು. ಒಮ್ಮೆಲೇ ಸಮರ ಸಾರಿದ ಪುತಿನ್ ನಡೆಯಿಂದ ಇಡೀ ರಾಷ್ಟ್ರ ಆತಂಕಕ್ಕೆ ಒಳಗಾಗಿ ಸುಧಾರಿಸಿಕೊಳ್ಳುವುದಕ್ಕೂ ಮೊದಲೇ ರಷ್ಯಾ ಪಡೆಗಳು ಉಕ್ರೇನ್ ಕರಾವಳಿ ತೀರಕ್ಕೆ ಬಂದಿಳಿದಿದ್ದವು ಎಂದು ಹೇಳಲಾಗಿದೆ. ರಷ್ಯಾ ಉಕ್ರೇನ್ ಮೇಲೆ ದಂಡೆತ್ತಿ ಹೋದ ಬೆನ್ನಲ್ಲೇ, ಎರಡು ದಿನಗಳ ಮಾಸ್ಕೋ ಭೇಟಿ ಹಮ್ಮಿಕೊಂಡಿದ್ದ ಪಾಕಿಸ್ತಾನ ಪ್ರಧಾನಿ ವಾಪಸ್ ಪಾಕ್ಗೆ ತೆರಳಿದ್ದಾರೆ.
ಇದನ್ನೂ ಓದಿ: Russia- Ukraine Crisis: ರಷ್ಯಾ- ಉಕ್ರೇನ್ ಬಿಕ್ಕಟ್ಟಿನ ಮಧ್ಯೆ ನಿಮ್ಮ ಮನೆ ಬಜೆಟ್ಗೆ ಎಂಥ ಘಾತ!
Published On - 1:24 pm, Thu, 24 February 22