80 ಮಕ್ಕಳು ಕಿಡ್ನ್ಯಾಪ್​ ಆಗಿ ತಿಂಗಳಾಯಿತು..ನಿಲ್ಲುತ್ತಿಲ್ಲ ಪಾಲಕರ ರೋಧನೆ; ಹಣಕ್ಕಾಗಿ ದುಷ್ಕರ್ಮಿಗಳ ಬೇಡಿಕೆ

Nigeria: ಇದೀಗ ಅಪಹರಣಗೊಂಡಿರುವ ಮಕ್ಕಳು ಕಡುನಾ ಜಿಲ್ಲೆಯ ಬೆಥೆಲ್​ ಬಾಪ್ಟಿಸ್ಟ್​ ಹೈಸ್ಕೂಲ್​ನವರಾಗಿದ್ದಾರೆ. ಕಳೆದ ಡಿಸೆಂಬರ್​ನಿಂದ ಒಂದಲ್ಲ ಒಂದು ಶಾಲೆಯ ಮಕ್ಕಳನ್ನು ಅಪಹರಿಸಿ, ಹಣದೋಚಲಾಗುತ್ತಿದೆ.

80 ಮಕ್ಕಳು ಕಿಡ್ನ್ಯಾಪ್​ ಆಗಿ ತಿಂಗಳಾಯಿತು..ನಿಲ್ಲುತ್ತಿಲ್ಲ ಪಾಲಕರ ರೋಧನೆ; ಹಣಕ್ಕಾಗಿ ದುಷ್ಕರ್ಮಿಗಳ ಬೇಡಿಕೆ
ಅಪಹರಣಗೊಂಡ ಮಕ್ಕಳ ಪಾಲಕರ ದುಃಖ
Updated By: Lakshmi Hegde

Updated on: Aug 05, 2021 | 3:11 PM

ನೈಜೀರಿಯಾದ ಉತ್ತರದಲ್ಲಿರುವ ವಸತಿ ಶಾಲೆಯೊಂದರಿಂದ ದುಷ್ಕರ್ಮಿಗಳು 80 ಮಕ್ಕಳನ್ನು ಅಪಹರಣ ಮಾಡಿ ಒಂದು ತಿಂಗಳೇ ಕಳೆಯಿತು. ಪಾಲಕರ ರೋಧನೆ ನೋಡಲಾಗುತ್ತಿಲ್ಲ. ಆದರೆ ಅಪಹರಣಕಾರರು ಅವರನ್ನಿನ್ನೂ ಬಿಟ್ಟಿಲ್ಲ. ಈಗ ಅಪಹರಣಾಕಾರರು ಮಕ್ಕಳನ್ನು ಬಿಡಬೇಕು ಎಂದರೆ ಹಣ ಬೇಕು ಎನ್ನುತ್ತಿದ್ದಾರೆ. ಪ್ರತಿ ಮಗುವಿಗೆ 1 ಮಿಲಿಯನ್​ ನೈರಾ (1.50 ಲಕ್ಷ ರೂ.ಗೂ ಅಧಿಕ)ಗಳನ್ನು ವಿಮೋಚನಾ ಮೊತ್ತವನ್ನಾಗಿ ನೀಡಬೇಕು ಎಂದು ಬೇಡಿಕೆ ಇಟ್ಟಿದ್ದಾರೆ. ಮಕ್ಕಳ ಬಿಡುಗಡೆಗಾಗಿ ಪಾದ್ರಿಯೊಬ್ಬರು ಮಧ್ಯಸ್ಥಿಕೆ ವಹಿಸಿದ್ದಾರೆ. ಅವರ ಮೂಲಕವೇ ಅಪಹರಣಕಾರರು ತಮ್ಮ ಬೇಡಿಕೆ ಮುಂದಿಟ್ಟಿದ್ದಾರೆ ಎಂದು ವರದಿಯಾಗಿದೆ.

ಇದೀಗ ಅಪಹರಣಗೊಂಡಿರುವ ಮಕ್ಕಳು ಕಡುನಾ ಜಿಲ್ಲೆಯ ಬೆಥೆಲ್​ ಬಾಪ್ಟಿಸ್ಟ್​ ಹೈಸ್ಕೂಲ್​ನವರಾಗಿದ್ದಾರೆ. ಕಳೆದ ಡಿಸೆಂಬರ್​ನಿಂದ ಒಂದಲ್ಲ ಒಂದು ಶಾಲೆಯ ಮಕ್ಕಳನ್ನು ಅಪಹರಿಸಿ, ಹಣದೋಚಲಾಗುತ್ತಿದೆ. ಇದೀಗ ಮಕ್ಕಳ ಅಪಹರಣ ನಡೆದ 10ನೇ ಶಾಲೆ ಇದಾಗಿದೆ. ಒಟ್ಟು 80 ವಿದ್ಯಾರ್ಥಿಗಳು ಅಪಹರಣ ಆಗಿದ್ದಾರೆ. ಪ್ರತಿ ವಿದ್ಯಾರ್ಥಿಗೆ 1 ಮಿಲಿಯನ್​ ನೈರಾಗಳಷ್ಟು ಹಣ ಬೇಕು ಎಂದು ದುಷ್ಕರ್ಮಿಗಳು ಕೇಳುತ್ತಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ಶಾಲೆಯಿಂದ ಒಟ್ಟು 108 ವಿದ್ಯಾರ್ಥಿಗಳನ್ನು ಅಪಹರಣ ಮಾಡಲಾಗಿತ್ತು. ಕಿಡ್ನ್ಯಾಪ್​ ಮಾಡಿದ ಎರಡೇ ದಿನಕ್ಕೆ 28 ವಿದ್ಯಾರ್ಥಿಗಳನ್ನು ಅವರು ಬಿಟ್ಟರು. ಆದರೆ ಉಳಿದ 80 ಮಂದಿ ಅವರ ಬಳಿಯೇ ಇದ್ದಾರೆ ಎಂದು ಶಿಕ್ಷಣ ಸಂಸ್ಥೆಯ ಧರ್ಮಗುರು ರೆವರೆಂಡ್ ಇಟೆ ಜೋಸೆಫ್ ಹಯಾಬ್ ತಿಳಿಸಿದ್ದಾರೆ ಎಂದು ರಾಯಿಟರ್ಸ್​ ವರದಿ ಮಾಡಿದೆ.

ಉತ್ತರ ನೈಜೀರಿಯಾದಲ್ಲಿ ಈತ್ತೀಚೆಗೆ ಮಕ್ಕಳನ್ನು ಅಪಹರಣ ಮಾಡುವ ಕೃತ್ಯ ತುಂಬ ಹೆಚ್ಚಾಗುತ್ತಿದೆ. ಶಸ್ತ್ರಧಾರಿಗಳ ಗುಂಪು ಹೀಗೆ ಶಾಲೆಗಳಿಂದ ಮಕ್ಕಳನ್ನು ಅಪಹರಿಸಿ, ಹಣಕ್ಕಾಗಿ ಬೇಡಿಕೆ ಇಡುತ್ತಿದೆ. ಇದನ್ನು ಮೊದಲು ಪ್ರಾರಂಭಿಸಿದ್ದು ನೈಜೀರಿಯಾದ ಜಿಹಾದಿಗಳ ಗುಂಪು ಬೋಕೋ ಹರಾಮ್​. ಈಗೀಗ ಹಣಕ್ಕಾಗಿ ಕಿಡ್ನ್ಯಾಪ್​ ಮಾಡುವ ದರೋಡೆಕೋರರ ಗುಂಪು ಹಲವಾರು ಹುಟ್ಟುಕೊಂಡಿದೆ ಎಂದು ಹೇಳಲಾಗಿದೆ.

ಇದನ್ನೂ ಓದಿ: Arvind Bellad: ನಾಳೆ ಧಾರವಾಡ ಬಂದ್ ಇಲ್ಲ; ಶಾಸಕ ಅರವಿಂದ ಬೆಲ್ಲದಗೆ ಸಚಿವ ಸ್ಥಾನ ದೊರೆಯದ್ದಕ್ಕೆ ಬಂದ್ ಎಂದು ವೈರಲ್ ಆದದ್ದು ಸುಳ್ಳುಸುದ್ದಿ

80 schoolchildren Kidnapped In Nigeria Kidnappers Demand Money to release