ಸೇನೆಗೆ ಜನರನ್ನು ಭರ್ತಿ ಮಾಡಿಕೊಳ್ಳುವ ರಷ್ಯನ್ ಅಧ್ಯಕ್ಷ ವ್ಲಾದಿಮಿರ್ ಪುಟಿನ್ (Vladimir Putin) ಅವರ ನಿರ್ಧಾರ ತಿರುಗುಬಾಣ ಆಗಬಹುದಾದ ಎಲ್ಲ ಲಕ್ಷಣಗಳು ಗೋಚರಿಸುತ್ತಿವೆ. ಸೋಮವಾರಂದು ರಷ್ಯಾದ ಇರ್ಕುಸ್ಕ್ (Irkutsk) ಪ್ರಾಂತ್ಯದಲ್ಲಿ ನಡೆದ ಘಟನೆಯೊಂದು ಈ ಮಾತಿಗೆ ಇಂಬು ನೀಡುತ್ತದೆ. ದಿ ಗಾರ್ಡಿಯನ್ ಪತ್ರಿಕೆಯ ವರದಿಯೊಂದರ ಪ್ರಕಾರ ಸದರಿ ಪ್ರಾಂತ್ಯದ ಉಸ್ತ್-ಇಲ್ಲಿಮ್ಸ್ಕ್ ಹೆಸರಿನ ಪಟ್ಟಣದ ಸೇನಾ ಕಚೇರಿಯೊಂದರಲ್ಲಿ ಸೇನೆಗೆ ನೇಮಕಾತಿ ಮಾಡಿಕೊಳ್ಳುವ ಪ್ರಕ್ರಿಯೆ ಜಾರಿಯಲ್ಲಿದ್ದಾಗ ಯುವಕನೊಬ್ಬ ಕಚೇರಿಯೊಳಗೆ ನುಗ್ಗಿ ನೇಮಕಾತಿ ಸಮಿತಿಯ (draft committee) ಮುಖ್ಯಸ್ಥನ ಮೇಲೆ ಗುಂಡಿನ ದಾಳಿ ನಡೆಸಿದ್ದಾನೆ. ಸಮಿತಿಯ ಮುಖ್ಯಸ್ಥ ಗಂಭೀರವಾಗಿ ಗಾಯಗೊಂಡಿರುವನೆಂದು ಪತ್ರಿಕೆಯ ವರದಿಯಲ್ಲಿ ಹೇಳಲಾಗಿದೆ. ಸೈಬೇರಿಯನ್ ಭಾಗದ ನಗರವಾಗಿರುವ ಉಸ್ತ್-ಇಲ್ಲಿಮ್ಸ್ಕ್ ನಲ್ಲಿನ ಜನಸಂಖ್ಯೆ ಸುಮಾರು 85,000 ಅಂತ ಹೇಳಲಾಗಿದೆ. ಯುವಕರನ್ನು ಸೇನೆಗೆ ನೇಮಕಾತಿ ಮಾಡಿಕೊಳ್ಳುವ ಪುಟಿನ್ ನಿರ್ಧಾರದ ವಿರುದ್ಧ ರಷ್ಯಾದಲ್ಲಿ ವ್ಯಾಪಕ ಪ್ರತಿಭಟನೆಗಳು ನಡೆಯುತ್ತಿವೆ.
ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೋಗಳಲ್ಲಿ ಬಂದೂಕಧಾರಿ ಯುವಕ ನೇಮಕಾತಿ ನಡೆಯುತ್ತಿರುವ ಕಚೇರಿಯ ಮೇಲೆ ಗುಂಡು ಹಾರಿಸುತ್ತಿರುವುದು ಕಾಣಿಸುತ್ತದೆ. ಒಂದು ಕ್ಲಿಪ್ಪಿಂಗ್ ನಲ್ಲಿ ಅವನು ನೇಮಕಾತಿ ಸಮಿತಿ ಮುಖ್ಯಸ್ಥನ ಮೇಲೆ ತೀರ ಹತ್ತಿರದಿಂದ ಗುಂಡು ಹಾರಿಸುತ್ತಿರುವುದು ರೆಕಾರ್ಡ್ ಆಗಿದೆ. ನೇಮಕಾತಿಗಾಗಿ ಬಂದಿದ್ದ ಜನ ದಿಕ್ಕಾಪಾಲಾಗಿ ಓಡುತ್ತಿರುವುದನ್ನು ಸಹ ನೋಡಬಹುದು. ದಾಳಿಕೋರನನ್ನು ನಂತರ ವಶಕ್ಕೆ ಪಡೆಯಲಾಯಿತು.
Mobilized man killed a drafting office commander in Ust-Ilimsk, Irkutsk region, Russia.
Alexandr Yeliseev, the commander, was shot four times almost point blank.
The murderer is Ruslan Zinin, born in 1997, "partially mobilized". He decided jail is better than death in Ukraine. pic.twitter.com/s0IvHJZJBO
— Anton Gerashchenko (@Gerashchenko_en) September 26, 2022
ಗಾಯಗೊಂಡಿರುವ ಅಧಿಕಾರಿಯನ್ನು ಸ್ಥಳೀಯ ಆಸ್ಪತ್ರೆಯೊಂದರಲ್ಲಿ ದಾಖಲಿಸಲಾಗಿದ್ದು ಅವರ ಸ್ಥಿತಿ ಚಿಂತಾಜನಕವಾಗಿದೆಯೆಂದು ಹೇಳಲಾಗಿದೆ. ಅವರನ್ನು ಸ್ಟ್ರೆಚರ್ ಒಂದರಲ್ಲಿ ಕಟ್ಟಡದಿಂದ ಹೊರತರುತ್ತಿರುವುದು ಮತ್ತೊಂದು ವಿಡಿಯೋ ಕ್ಲಿಪ್ ನಲ್ಲಿ ಕಾಣಿಸುತ್ತದೆ. ಆ ವ್ಯಕ್ತಿ ಅಲ್ಲಾಡುತ್ತಿರಲಿಲ್ಲ ಎಂದು ದಿ ಗಾರ್ಡಿಯನ್ ವರದಿ ಮಾಡಿದೆ.
ಇರ್ಕುಸ್ಕ್ ನ ಗವರ್ನರ್ ಇಗೋರ್ ಕೊಬ್ಜೆವ್ ಟೆಲಿಗ್ರಾಮ್ ಮೆಸೇಜೊಂದರಲ್ಲಿ ನೇಮಕಾತಿ ವಿಭಾಗದ ಮುಖ್ಯಸ್ಥರನ್ನು ಚಿಂತಾಜನಕ ಸ್ಥಿತಿಯಲ್ಲಿ ಆಸ್ಪತ್ರೆಗೆ ಸೇರಿಸಲಾಗಿದೆ ಎಂದು ಹೇಳಿದ್ದಾರೆ. ಪೊಲೀಸರ ವಶದಲ್ಲಿರುವ ದಾಳಿಕೋರನ ಮೇಲೆ ಅತ್ಯಂತ ಕಠಿಣ ಕ್ರಮ ಜರುಗಿಸಲಾಗುವುದು ಅಂತ ಗವರ್ನರ್ ಹೇಳಿರುವುದನ್ನು ಪತ್ರಿಕೆ ವರದಿ ಮಾಡಿದೆ.
ಗುಂಡಿನ ದಾಳಿ ಆರಂಭಿಸುವ ಮುನ್ನ ಆ ವ್ಯಕ್ತಿಯು ‘ಯಾರೊಬ್ಬರೂ ಇಲ್ಲಿಂದ ಕದಲುವಂತಿಲ್ಲ,’ ಎಂದು ನೇಮಕಾತಿ ಕಟ್ಟಡದಲ್ಲಿ ನೆರೆದಿದ್ದ ಉದ್ಯೋಗಾಕಾಂಕ್ಷಿಗಳಿಗೆ ಎಚ್ಚರಿಸಿದನಂತೆ.
ದಾಳಿಕೋರನನ್ನು ರುಸ್ಲಾನ್ ಜಿನಿನ್ ಅಂತ ಗುರುತಿಸಲಾಗಿದ್ದು ಅವನು 25-ವರ್ಷದವನಾಗಿದ್ದಾನೆ ಎಂದು ರಾಯಿಟರ್ ಸುದ್ದಿಸಂಸ್ಥೆ ವರದಿ ಮಾಡಿದೆ.
ಕಳೆದ ಬುಧವಾರದಂದು ರಷ್ಯನ್ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ನೇಮಕಾತಿ ಮಾಡಿಕೊಳ್ಳುವ ಬಗ್ಗೆ ಘೋಷಣೆ ಮಾಡಿದ ಮೇಲೆ ಹಲವಾರು ನೇಮಕಾತಿ ಕಚೇರಿಗಳ ಮೇಲೆ ದಾಳಿಗಳು ನಡೆದಿವೆ.
ನೇಮಕಾತಿ ವಿರುದ್ಧ ವಾರಾಂತ್ಯದಲ್ಲಿ ಡಾಗೆಸ್ತಾನ ಮತ್ತು ಯುಕೂತಿಯ ಹೆಸರಿನ ಸ್ಥಳಗಳಲ್ಲಿ ಪ್ರತಿಭಟನೆಗಳು ನಡೆದಿದ್ದವು. ಈ ಎರಡು ಭಾಗಗಳಿಂದ ಅಸಂಖ್ಯಾತ ಸೈನಿಕರು ರಷ್ಯಾದ ಪರ ಉಕ್ರೇನಲ್ಲಿ ಯುದ್ಧ ಮಾಡುತ್ತಿದ್ದಾರೆ.