ಅಫ್ಘಾನಿಸ್ತಾನವನ್ನು ತಾಲಿಬಾನ್ (Taliban Government) ವಶಪಡಿಸಿಕೊಂಡ ಬಳಿಕ ಅಲ್ಲಿನ ಅನೇಕ ವ್ಯವಸ್ಥೆಗಳು ಬದಲಾಗಿವೆ. ಈಗಂತೂ ತಾಲಿಬಾನ್ ಸರ್ಕಾರ ಆಡಳಿತಕ್ಕೆ ಬಂದಿದೆ. ತಾಲಿಬಾನಿಗಳೆಂದರೆ ಮೊದಲಿನಿಂದಲೂ ಮಹಿಳಾ ಹಕ್ಕುಗಳ ವಿರೋಧಿಗಳು ಎಂಬ ಮಾತಿದೆ. ಸದ್ಯ ತಾಲಿಬಾನಿಗಳು ಶಾಲಾ-ಕಾಲೇಜು, ಮದರಸಾಗಳ ಪ್ರಾರಂಭಕ್ಕೆ ಅನುಮತಿ ನೀಡಿದ್ದರೂ, ಇನ್ನೂ ಹೆಣ್ಣುಮಕ್ಕಳ ಪಾಲಿಗೆ ಶಿಕ್ಷಣ (Girls Education) ಸವಾಲಾಗಿದೆ. ಎಲ್ಲ ಶಿಕ್ಷಕರು ಮತ್ತು ಗಂಡುಮಕ್ಕಳು ಶಾಲೆಗಳಿಗೆ ಹಾಜರಾಗಬಹುದು ಎಂದು ತಾಲಿಬಾನ್ ಸರ್ಕಾರ ಹೇಳಿದೆ. ಆದರೆ ಇದು ಸರಿಯಲ್ಲ, ಹೆಣ್ಣುಮಕ್ಕಳ ಶಿಕ್ಷಣಕ್ಕೂ ಅವಕಾಶ ಕೊಡಬೇಕು ಎಂಬ ಆಗ್ರಹ ಅಫ್ಘಾನಿಸ್ತಾನದಲ್ಲೇ ಹೆಚ್ಚುತ್ತಿದೆ. ಹಾಗೇ, ಈಗೊಬ್ಬಳು ಅಫ್ಘಾನಿಸ್ತಾನದ ಬಾಲಕಿ ಹೆಣ್ಣುಮಕ್ಕಳ ಶಿಕ್ಷಣದ ಬಗ್ಗೆ ಧೈರ್ಯವಾಗಿ ಮಾತನಾಡಿ, ತಾಲಿಬಾನಿಗಳನ್ನು ವಿರೋಧಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟೆ ವೈರಲ್ ಆಗುತ್ತಿದೆ.
ಅಫ್ಘಾನಿಸ್ತಾನದ ಪತ್ರಕರ್ತ ಬಿಲಾಲ್ ಸರ್ವರಿ ಎಂಬುವರು ತಮ್ಮ ಟ್ವಿಟರ್ ಖಾತೆಯಲ್ಲಿ ಬಾಲಕಿಯ ವಿಡಿಯೋವನ್ನು ಶೇರ್ ಮಾಡಿಕೊಂಡಿದ್ದಾರೆ. ‘ಈ ದೇಶದ ಅಭಿವೃದ್ಧಿಗಾಗಿ ನಾವೂ ಏನನ್ನಾದರೂ ಮಾಡಬೇಕು. ಅಲ್ಲಾ ನಮಗೆ ಆ ಅವಕಾಶ ಕೊಟ್ಟಿದ್ದಾನೆ. ಮಹಿಳೆಯರಿಗೂ ಪುರುಷರಷ್ಟೇ ಸಮಾನವಾದ ಹಕ್ಕು ಇದೆ. ಈ ಅವಕಾಶ, ಹಕ್ಕನ್ನು ಕಸಿದುಕೊಳ್ಳಲು ತಾಲಿಬಾನಿಗಳು ಯಾರು?’ ಎಂದು ಬಾಲಕಿ ಪ್ರಶ್ನಿಸಿದ್ದನ್ನು ವಿಡಿಯೋದಲ್ಲಿ ನೋಡಬಹುದು. ಅಷ್ಟೇ ಅಲ್ಲ, ‘ಇಂದಿನ ಬಾಲಕಿಯರೇ ಮುಂದಿನ ತಾಯಂದಿರು. ಈಗ ಬಾಲಕಿಯರಿಗೆ ಶಿಕ್ಷಣ ಪಡೆಯಲು ಅವಕಾಶ ಕೊಡದೆ ಇದ್ದರೆ, ಮುಂದೆ ಅವರ ಮಕ್ಕಳಿಗೆ ಒಳ್ಳೆಯ ನಡವಳಿಕೆ ಕಲಿಸುವುದಾದರೂ ಹೇಗೆ? ನಾನು ಹೊಸ ಪೀಳಿಗೆಯ ಹುಡುಗಿ. ನಾನು ಕೇವಲ, ತಿನ್ನಲು, ನಿದ್ದೆ ಮಾಡಲು, ಮನೆಯಲ್ಲೇ ಇರಲು ಹುಟ್ಟಿಲ್ಲ. ನನಗೆ ಶಾಲೆಗೆ ಹೋಗಬೇಕು. ಈ ದೇಶದ ಅಭಿವೃದ್ಧಿಗಾಗಿ ನಾನೇದಾರೂ ಮಾಡಬೇಕು’ ಎಂದು ಬಾಲಕಿ ಹೇಳಿದ್ದಾಳೆ.
ಮುಂದುವರಿದು ಮಾತನಾಡಿದ ಬಾಲಕಿ, ‘ಶಿಕ್ಷಣವೇ ಇಲ್ಲದೆ ಈ ದೇಶ ಅಭಿವೃದ್ಧಿಯಾಗುವುದಾದರೂ ಹೇಗೆ? ಅಫ್ಘಾನ್ನಲ್ಲಿ ಹೆಣ್ಣು ಮಕ್ಕಳು ಶಿಕ್ಷಣವನ್ನೇ ಪಡೆಯದಿದ್ದರೆ ನಮ್ಮ ಮುಂದಿನ ಸಂತತಿ ಸುಶಿಕ್ಷಿತರಾಗುವುದು ಹೇಗೆ? ಶಿಕ್ಷಣವಂತರಾಗದೆ ನಮಗೆ ಈ ಜಗತ್ತಿನಲ್ಲಿ ಗೌರವ ಸಿಗುವುದಿಲ್ಲ’ಎಂದು ಹೇಳಿದ್ದಾಳೆ. ಈ ವಿಡಿಯೋ ಟ್ವಿಟರ್ನಲ್ಲಿ ಸಿಕ್ಕಾಪಟೆ ವೈರಲ್ ಆಗುತ್ತಿದೆ. ತಾಲಿಬಾನಿಗಳ ವಿರುದ್ಧವಾಗಿ, ತನ್ನ ಹಕ್ಕುಗಳನ್ನು ಪಡೆಯಲು ಬಾಲಕಿ ದಿಟ್ಟವಾಗಿ ಮಾತನಾಡಿದ್ದನ್ನು ನೆಟ್ಟಿಗರು ಶ್ಲಾಘಿಸಿದ್ದಾರೆ.
“I want to go to school.” Powerful message from this eloquent Afghan girl. pic.twitter.com/PdAMtg9Fjm
— BILAL SARWARY (@bsarwary) September 22, 2021
ಇದನ್ನೂ ಓದಿ: ಮಂಗಳೂರು: ತ್ಯಾಜ್ಯ ಸಂಗ್ರಹದಿಂದ ನದಿ ನೀರು ಕಲುಷಿತ; ಪಾಲಿಕೆ ನಿರ್ಲಕ್ಷ್ಯಕ್ಕೆ ಹೈಕೋರ್ಟ್ ಅಸಮಾಧಾನ
ಹಾಸನ: ದೊಡ್ಡಗದ್ದವಳ್ಳಿಯ ಮಹಾಕಾಳಿ ದೇಗುಲಕ್ಕೆ 1 ವರ್ಷದಿಂದ ಬೀಗ; ಪುರಾತತ್ವ ಇಲಾಖೆ ನಿರ್ಲಕ್ಷ್ಯಕ್ಕೆ ಜನರ ಅಸಮಾಧಾನ
Published On - 4:37 pm, Fri, 24 September 21