Afghanistan Crisis ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಆಳ್ವಿಕೆಗೆ ಒಂದು ವಾರ; ಏನೇನಾಯ್ತು? ಮುಂದೇನಾಗಬಹುದು?
Taliban: ತಾಲಿಬಾನ್ ಹೋರಾಟಗಾರರು ಮನೆ ಮನೆಗೆ ಹೋಗಲು ಪ್ರಾರಂಭಿಸಿದರು.ಕೆಲಸಕ್ಕೆ ಗೈರುಹಾಜರಾದ ನಗರದ ಕೆಲಸಗಾರರನ್ನು ಹುಡುಕಿದರು. ನೂರಾರು ಶಸ್ತ್ರಸಜ್ಜಿತ ಜನರು ನಗರದಾದ್ಯಂತ ಚೆಕ್‌ಪೋಸ್ಟ್‌ಗಳನ್ನು ಸ್ಥಾಪಿಸಿದರು. ಪ್ರಾದೇಶಿಕ ಆಸ್ಪತ್ರೆಯ ಪ್ರವೇಶದ್ವಾರದಲ್ಲಿ ಗೋಡೆಯ ಮೇಲೆ ಹೊಸ ಸೂಚನೆ ಕಾಣಿಸಿಕೊಂಡಿತು
ಅಫ್ಘಾನಿಸ್ತಾನದ (Afghanistan) ಕುಂಡುಜ್ (Kunduz) ನಗರದಲ್ಲಿ ತಾಲಿಬಾನ್ (Taliban) ನೇಮಕ ಮಾಡಿದ ಮೇಯರ್ ಗುಲ್ ಮೊಹಮ್ಮದ್ ಎಲಿಯಾಸ್ (Gul Mohammad Elias) ಅವರ ಮೊದಲ ದಿನವಾಗಿತ್ತು. ಆಗಸ್ಟ್ 8 ರಂದು ಬಂಡುಕೋರರು ಉತ್ತರ ಅಫ್ಘಾನಿಸ್ತಾನದಲ್ಲಿ ನಗರದ ನಿಯಂತ್ರಣವನ್ನು ವಶಪಡಿಸಿಕೊಂಡರು. ಇದು ವಾರಗಳ ಹೋರಾಟದ ನಂತರ ಶಿಥಿಲಗೊಂಡಿತ್ತು. ವಿದ್ಯುತ್ ತಂತಿಗಳು ಕೆಳಗೆ ಬಿದ್ದಿವೆ. ಜನರೇಟರ್‌ಗಳಿಂದ ನಡೆಸಲ್ಪಡುವ ನೀರು ಸರಬರಾಜು, ಹೆಚ್ಚಿನ ನಿವಾಸಿಗಳನ್ನು ತಲುಪಲಿಲ್ಲ. ಬೀದಿಗಳಲ್ಲಿ ಕಸ ಮತ್ತು ಪಳೆಯುಳಿಕೆಗಳು ಬಿದ್ದಿವೆ. ಆ ಸಮಸ್ಯೆಗಳನ್ನು ಬಗೆಹರಿಸಬಹುದಾದ ಪೌರ ಕಾರ್ಮಿಕರು ತಾಲಿಬಾನಿಗಳಿಗೆ ಹೆದರಿ ಮನೆಯಲ್ಲಿ ಅಡಗಿಕೊಂಡಿದ್ದರು. ಆದ್ದರಿಂದ ಮೇಯರ್ ಆಗಿ ನೇಮಕವಾಗಿದ್ದ ಬಂಡುಕೋರರ ಕಮಾಂಡರ್ ಅವರನ್ನು ಕೆಲಸಕ್ಕೆ ಮರಳುವಂತೆ ಮನವೊಲಿಸಲು ತಮ್ಮ ಹೊಸ ಕಚೇರಿಗೆ ಕೆಲವರನ್ನು ಕರೆಸಿದರು. “ನಮ್ಮ ಜಿಹಾದ್ ಪುರಸಭೆಯೊಂದಿಗೆ ಇಲ್ಲ ಎಂದು ನಾನು ಹೇಳಿದೆ. ನಮ್ಮ ಜಿಹಾದ್ ಒಕ್ಕಲು ಬಂದವರು ಮತ್ತು ಆಕ್ರಮಣಕಾರರನ್ನು ರಕ್ಷಿಸುವವರ ವಿರುದ್ಧವಾಗಿದೆ ಎಲಿಯಾಸ್ ನ್ಯೂಯಾರ್ಕ್ ಟೈಮ್ಸ್‌ಗೆ ದೂರವಾಣಿ ಮೂಲಕ ಹೇಳಿದ್ದಾರೆ. ಆದರೆ ದಿನದಿಂದ ದಿನಕ್ಕೆ ಪುರಸಭೆಯ ಕಛೇರಿಗಳು ಹೆಚ್ಚಾಗಿ ಖಾಲಿಯಾಗಿದ್ದರಿಂದ, ಎಲಿಯಾಸ್ ಹೆಚ್ಚು ನಿರಾಶೆಗೊಂಡರು.ಅವರು ಖಾರವಾಗಿಯೇ ಆದೇಶಗಳನ್ನು ನೀಡತೊಡಗಿದರು.
ತಾಲಿಬಾನ್ ಹೋರಾಟಗಾರರು ಮನೆ ಮನೆಗೆ ಹೋಗಲು ಪ್ರಾರಂಭಿಸಿದರು.ಕೆಲಸಕ್ಕೆ ಗೈರುಹಾಜರಾದ ನಗರದ ಕೆಲಸಗಾರರನ್ನು ಹುಡುಕಿದರು. ನೂರಾರು ಶಸ್ತ್ರಸಜ್ಜಿತ ಜನರು ನಗರದಾದ್ಯಂತ ಚೆಕ್‌ಪೋಸ್ಟ್‌ಗಳನ್ನು ಸ್ಥಾಪಿಸಿದರು. ಪ್ರಾದೇಶಿಕ ಆಸ್ಪತ್ರೆಯ ಪ್ರವೇಶದ್ವಾರದಲ್ಲಿ ಗೋಡೆಯ ಮೇಲೆ ಹೊಸ ಸೂಚನೆ ಕಾಣಿಸಿಕೊಂಡಿತು. ಉದ್ಯೋಗಿಗಳು ಕೆಲಸಕ್ಕೆ ಮರಳಬೇಕು ಅಥವಾ ತಾಲಿಬಾನ್ನಿಂದ ಶಿಕ್ಷೆಯನ್ನು ಎದುರಿಸಬೇಕಾಗುತ್ತದೆ ಎಂದು ಅಲ್ಲಿ ಬರೆದಿತ್ತು.
ತಾಲಿಬಾನ್ ಶರವೇಗದಲ್ಲಿ ವಶಪಡಿಸಿಕೊಂಡ ನಗರಗಳ ಸರಣಿಯಲ್ಲಿ ಮೊದಲನೆಯದು ಕುಂಡುಜ್. ಬಂಡುಕೋರರು ಈಗ ಅಫ್ಘಾನಿಸ್ತಾನದ ನಿಯಂತ್ರಣದಲ್ಲಿದ್ದಾರೆ. ಅವರು ಈಗ ಲಕ್ಷಾಂತರ ಜನರಿಗೆ ಮೂಲಭೂತ ಸೇವೆಗಳನ್ನು ಒದಗಿಸಬಲ್ಲ ನಿರ್ವಾಹಕರಾಗಿ ಕಾರ್ಯನಿರ್ವಹಿಸಬೇಕು. ಕುಂಡುಜ್‌ನಲ್ಲಿರುವವರ ಅನುಭವವು ತಾಲಿಬಾನ್‌ಗಳು ಹೇಗೆ ಆಡಳಿತ ನಡೆಸಬಹುದು ಮತ್ತು ದೇಶದ ಉಳಿದ ಭಾಗಗಳಲ್ಲಿ ಏನಾಗಬಹುದು ಎಂಬುದರ ಬಗ್ಗೆ ಸ್ಥೂಲನೋಟವನ್ನು ನೀಡುತ್ತದೆ.
ಕೆಲವೇ ದಿನಗಳಲ್ಲಿ ಬಂಡುಕೋರರು ಪೌರಕಾರ್ಮಿಕರನ್ನು ಮರಳಿ ಕೆಲಸಕ್ಕೆ ಸೇರಿಸುವ ವಿಫಲ ಪ್ರಯತ್ನಗಳಿಂದ ನಿರಾಶೆಗೊಂಡರು. ದೂರವಾಣಿ ಮೂಲಕ ಅವರು ನಿವಾಸಿಗಳ ಮೇಲೆ ಭಯ ಸೃಷ್ಟಿಸಿದರು. “ನಾನು ಹೆದರುತ್ತೇವೆ, ಏಕೆಂದರೆ ಏನಾಗುತ್ತದೆ ಮತ್ತು ಅವರು ಏನು ಮಾಡುತ್ತಾರೆ ಎಂದು ನನಗೆ ತಿಳಿದಿಲ್ಲ”. “ನಾವು ಅವರನ್ನು ನೋಡಿ ಮುಗುಳ್ನಗಬೇಕು, ಅದು ಭಯದಿಂದಲೇ. ನಾವು ಅತೃಪ್ತರಾಗಿದ್ದೇವೆ ಎಂದು ಹೆಸರು ಹೇಳಲು ಬಯಸದ ವ್ಯಕ್ತಿಯೊಬ್ಬರು ಹೇಳಿರುವುದಾಗಿ ದಿ ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ.
ಕುಂಡುಜ್ನಲ್ಲಿ ತಾಲಿಬಾನ್ ನಿಯಂತ್ರಣಕ್ಕೆ ಬಂದ ಮೂರು ದಿನಗಳ ನಂತರ ಅತಿಕುಲ್ಲಾ ಒಮಾರ್ಖಿಲ್ ಎಂಬ ಅಧಿಕಾರಿಗೆ ತನ್ನ ಕಚೇರಿಗೆ ಹೋಗುವಂತೆ ಒಬ್ಬ ಬಂಡುಕೋರ ಹೋರಾಟಗಾರನಿಂದ ಕರೆ ಬಂದಿತು. ಕುಂಡುಜ್‌ನ ಮೇಯರ್ ಅವರೊಂದಿಗೆ ಮಾತನಾಡಲು ಬಯಸಿದ್ದಾರೆ ಎಂದು ಅವರು ಹೇಳಿದರು. ಬಂಡುಕೋರರು ಬೀದಿಗಳಿಗೆ ಧುಮುಕಿದ್ದರಿಂದ ಒಮರ್ಕಿಲ್ ಮನೆಯಲ್ಲಿಯೇ ಇದ್ದನು. ಇಡೀ ನಗರ ಅಶಾಂತಿಯ ತಾಣದಂತೆ ಭಾಸವಾಗಿತ್ತು. ತಾಲಿಬಾನ್ 2015 ರಲ್ಲಿ ಮತ್ತು 2016 ರಲ್ಲಿ ಕುಂಡುಜ್ ಅನ್ನು ವಶಪಡಿಸಿಕೊಂಡಾಗ ಮತ್ತೆ ಎರಡು ಬಾರಿ ಅವರು ಇದೇ ರೀತಿಯ ಕ್ಷಣವನ್ನು ಅನುಭವಿಸಿದ್ದರು. ಎರಡೂ ಬಾರಿ ಬಂಡುಕೋರರನ್ನು ಯುಎಸ್ ವಾಯುದಾಳಿಯ ಸಹಾಯದಿಂದ ಹಿಂದಕ್ಕೆ ಓಡಿಸಲಾಗಿತ್ತು.
ಆದರೆ ಈ ಬಾರಿ ತಾಲಿಬಾನ್ ಹಿಡಿತ ಸಾಧಿಸಿದ ಕೆಲ ದಿನಗಳ ನಂತರ, ಇಡೀ ಅಫ್ಘಾನ್ ಸೇನಾ ದಳವು ಬಂಡುಕೋರರ ಮುಂದೆ ಶರಣಾಯಿತು. ಕುಂಡುಜ್ನ್ನು ಇನ್ನು ರಕ್ಷಿಸಲಾಗುವುದಿಲ್ಲ ಎಂದು ಸೇನಾಪಡೆ ತಮ್ಮ ಆಯುಧಗಳನ್ನು ಮತ್ತು ವಾಹನಗಳನ್ನು ಬಂಡುಕೋರರ ಸುಪರ್ದಿಗೆ ಒಪ್ಪಿಸಿ ಶರಣಾದರು. ಒಮಾರ್ಖಿಲ್ ಪುರಸಭೆಯ ಕಚೇರಿಗೆ ಬಂದಾಗ ವಿಸ್ತಾರವಾದ ಕಾಂಪೌಂಡ್ ಯುದ್ಧನಂತರದ ಮೌನವಾದಂತೆ ಇತ್ತು. ಸರ್ಕಾರದ ಎಲ್ಲಾ ವಾಹನಗಳು, ಕಸದ ಟ್ರಕ್‌ಗಳು ಮತ್ತು ಕಂಪ್ಯೂಟರ್‌ಗಳು ತಾಲಿಬಾನ್‌ಗಳು ಅಧಿಕಾರ ವಹಿಸಿಕೊಳ್ಳುವ ಮೊದಲು ಮತ್ತು ಅವರು ವಶಪಡಿಸಿಕೊಂಡ ಪಟ್ಟಣಗಳನ್ನು ಲೂಟಿ ಮಾಡುತ್ತಾರೆ ತಿಳಿದಿದ್ದ ಜನರು ತಾಲಿಬಾನ್ ಹೋರಾಟಗಾರರು ನಗರಕ್ಕೆ ಧಾವಿಸುವ ಮುನ್ನವೇ ಅದನ್ನು ತೊರೆದು ಹೋಗಿದ್ದರು. ಗೋಡೆಗಳ ಮೇಲೆ ಅಧ್ಯಕ್ಷ ಅಶ್ರಫ್ ಘನಿಯ ಫೋಟೊ ಇರಲಿಲ್ಲ. ಅದರ ಬದಲಾಗಿ ತಾಲಿಬಾನ್‌ನ ಬಿಳಿ ಧ್ವಜಗಳನ್ನು ನೇತುಹಾಕಲಾಗಿತ್ತು.
ಕಟ್ಟಡದ ಒಳಗೆ ಒಮರ್ಕಿಲ್ ಎಂಟು ಮುನ್ಸಿಪಲ್ ಉದ್ಯೋಗಿಗಳ ಜತೆಯಾಗಿದ್ದು ತಾಲಿಬಾನ್ ಕಮಾಂಡರ್ ಎಲಿಯಾಸ್ ತಮ್ಮನ್ನು ಹೊಸ ಮೇಯರ್ ಎಂದು ಪರಿಚಯಿಸಿಕೊಂಡರು. ಉದ್ದನೆಯ ಗಡ್ಡ ಹೊಂದಿರುವ ಯುವಕ ಎಲಿಯಾಸ್ ನಿಮ್ಮನ್ನು ತಾಲಿಬಾನ್ ಗುರಿಯಾಗಿಸುವುದಿಲ್ಲ ಎಂದು ಉದ್ಯೋಗಿಗಳಿಗೆ ಎಂದು ಭರವಸೆ ನೀಡಿದರು. ಜನರ ಮನೋಸ್ಥೈರ್ಯವನ್ನು ಸುಧಾರಿಸಲು ಕೆಲಸಕ್ಕೆ ಮರಳುವಂತೆ ಸೂಚಿಸಿದರು. ಅವರ ಮೊಬೈಲ್ ಸಂಖ್ಯೆಯನ್ನು ಹಂಚಿಕೊಂಡ ಅವರು ತಾಲಿಬಾನ್ ಹೋರಾಟಗಾರರಿಂದ ಏನಾದರೂ ತೊಂದರೆಗಳಿದ್ದಲ್ಲಿ ಕರೆ ಮಾಡುವಂತೆ ಹೇಳಿದರು.
“ನಾವು ನಗರವನ್ನು ವಶಪಡಿಸಿಕೊಂಡಿದ್ದೇವೆ ಮತ್ತು ಈಗ ನಾವು ಮೂಲಭೂತ ಸೇವೆಗಳನ್ನು ಒದಗಿಸುತ್ತೇವೆ ಎಂದು ಜನರಿಗೆ ಭರವಸೆ ನೀಡಬಹುದು” ಎಲಿಯಾಸ್ ಹೇಳಿರುವುದಾಗಿ ದೂರವಾಣಿ ಸಂದರ್ಶನದಲ್ಲಿ ಒಮಾರ್ಖಿಲ್ ಹೇಳಿದ್ದಾರೆ.
ಸಭೆಯ ಮಧ್ಯೆಯೇ ಅಂಗಡಿಯವರು ಮೇಯರ್ ನೋಡಲು ತಾಲಿಬಾನ್ ಅಂಗರಕ್ಷಕನನ್ನು ಬೇಡಿಕೊಂಡರು. ಇತರ ನೂರಾರು ಮಂದಿಯಂತೆ ಅವರ ಗೂಡಂಗಡಿ ತಾಲಿಬಾನ್ ಹೋರಾಟಗರಾರ ಆರ್ಭಟದ ವೇಳೆ ಸುಟ್ಟುಹೋಗಿತ್ತು. ಅಂಗಡಿಯವರು ತಮ್ಮ ಅಂಗಡಿಗಳಲ್ಲಿ ಉಳಿದಿರುವ ವಸ್ತುಗಳನ್ನು ಲೂಟಿ ಮಾಡಲಾಗುವುದು ಎಂದು ಹೆದರಿ, ತಮ್ಮ ವಸ್ತುಗಳನ್ನು ಸುರಕ್ಷಿತವಾಗಿ ಸಂಗ್ರಹಿಸಲು ಮಾರುಕಟ್ಟೆಗೆ ಹಿಂತಿರುಗಲು ತಾಲಿಬಾನ್ ಅವಕಾಶ ನೀಡಬಹುದು ಎಂದು ಬಯಸಿದ್ದರು ಎಂದು ಒಮರ್ಕಿಲ್ ಹೇಳಿದರು. ಉಳಿದ ದಿನಗಳಲ್ಲಿ ಎಲಿಯಾಸ್ ಇತರ ಪುರಸಭೆಯ ನಾಯಕರನ್ನು ಭೇಟಿಯಾದರು, ಸೇವೆಗಳನ್ನು ಪುನಃಸ್ಥಾಪಿಸಲು ಪ್ರಯತ್ನಿಸಿದರು.
ಸರ್ಕಾರಿ ಸ್ವಾಮ್ಯದ ನೀರು ಮತ್ತು ಒಳಚರಂಡಿ ನಿಗಮದಲ್ಲಿ ನೀರು ಸರಬರಾಜನ್ನು ಪುನರಾರಂಭಿಸಲು ಅವರು ಒತ್ತಾಯಿಸಿದರು. ವಿದ್ಯುತ್ ತಂತಿಗಳನ್ನು ಮೊದಲು ಸರಿಪಡಿಸಬೇಕು ಎಂದು ಮ್ಯಾನೇಜರ್ ಹೇಳಿದಾಗ, ಅವರು ತಮ್ಮ ಉದ್ಯೋಗಿಗಳನ್ನು ಕೆಲಸಕ್ಕೆ ಮರಳುವಂತೆ ಒತ್ತಾಯಿಸಲು ವಿದ್ಯುತ್ ಇಲಾಖೆಯ ನಿರ್ದೇಶಕರಿಗೆ ಹೇಳಿದರು.
ಸ್ಥಳೀಯ ಆರೋಗ್ಯ ಇಲಾಖೆಯಲ್ಲಿ ಹೊಸ ತಾಲಿಬಾನ್ ನಿರ್ದೇಶಕರು ಅದೇ ಸಂದೇಶವನ್ನು ಆಸ್ಪತ್ರೆ ಸಿಬ್ಬಂದಿಗೆ ತಲುಪಿಸಿದರು. ಬಂಡುಕೋರರು ಆರೋಗ್ಯ ಕಾರ್ಯಕರ್ತರಿಗೆ ನೀರು ನೀಡಿದರು ಮತ್ತು ಆ ರಾತ್ರಿ ಊಟಕ್ಕೆ ಪಾವತಿಸಲು ಪ್ರತಿ ಆಸ್ಪತ್ರೆಯ ಸಿಬ್ಬಂದಿಗೆ 500 ಅಫ್ಘನೀಸ್ (ಸುಮಾರು ₹ 6) ನೀಡಿದರು.
ಸ್ವಲ್ಪ ಸುಧಾರಣೆ ಕಾಣಿಸಿಕೊಳ್ಳಲು ಶುರುವಾಯಿತು. ಸರ್ಕಾರಿ ಟ್ರಕ್‌ಗಳು ಬೀದಿಗಳಲ್ಲಿನ ಕಸವನ್ನು ತೆಗೆದುಹಾಕಲು ಪ್ರಾರಂಭಿಸಿದವು ಮತ್ತು ಕಾರ್ಮಿಕರು ವಿದ್ಯುತ್ ತಂತಿಗಳನ್ನು ಸರಿಪಡಿಸಿದರು. ಸಹಜ ಸ್ಥಿತಿಗೆ ಮರಳಿದ್ದರೂ ಅಲ್ಲಿ ಅಸಮಾಧಾನ ನೆಲೆಯೂರಿತ್ತು.
ಕುಂಡುಜ್ನಲ್ಲಿನ ಪ್ರತಿಯೊಂದು ಅಂಗಡಿಗಳನ್ನು ಮುಚ್ಚಲಾಯಿತು. ಅಂಗಡಿಯವರು, ತಮ್ಮ ಅಂಗಡಿಗಳನ್ನು ತಾಲಿಬಾನ್ ಹೋರಾಟಗಾರರು ಲೂಟಿ ಮಾಡುತ್ತಾರೆ ಎಂಬ ಭಯದಿಂದ, ತಮ್ಮ ಸರಕುಗಳನ್ನು ಮನೆಗೆ ತೆಗೆದುಕೊಂಡು ಹೋದರು. ಪ್ರತಿದಿನ ಮಧ್ಯಾಹ್ನ ಬೀದಿಗಳು ನಿವಾಸಿಗಳಿಂದ ಖಾಲಿ ಆಗುತ್ತಿದ್ದವು. ಅವರು ಸರ್ಕಾರಿ ವಿಮಾನಗಳು ಆಕಾಶದಲ್ಲಿ ಹೂಂಕರಿಸುತ್ತಿದ್ದಂತೆ ವಾಯುದಾಳಿಗಳಿಗೆ ಹೆದರುತ್ತಿದ್ದರು.ಸುಮಾರು 500 ತಾಲಿಬಾನ್ ಹೋರಾಟಗಾರರು ನಗರದ ಸುತ್ತಲೂ ಬೀಡುಬಿಟ್ಟಿದ್ದರು. ಪ್ರತಿಯೊಂದು ಬೀದಿ ಮೂಲೆಯಲ್ಲೂ ಚೆಕ್‌ಪೋಸ್ಟ್‌ಗಳನ್ನು ನಿರ್ವಹಿಸುತ್ತಿದ್ದರು.
“ಜನರು ಹೆದರುತ್ತಾರೆ, ಅವರು ಸಂತೋಷವಾಗಿಲ್ಲ, ಮತ್ತು ಜನರು ಸಂತೋಷವಾಗಿದ್ದಾರೆ ಎಂದು ಯಾರಾದರೂ ಹೇಳಿದರೆ, ಅವನು ಸುಳ್ಳು ಹೇಳುತ್ತಿದ್ದಾನೆ” ಎಂದು ಸಾರ್ವಜನಿಕ ಆರೋಗ್ಯ ನಿರ್ದೇಶನಾಲಯದಲ್ಲಿ ಒಬ್ಬ ಉದ್ಯೋಗಿ ಹೇಳಿದರು. ” ನಮ್ಮ ಭವಿಷ್ಯ ಏನಾಗುತ್ತದೆ? ಎಂಬುದರ ಬಗ್ಗೆ ಎಲ್ಲರೂ ಗಾಬರಿಯಿಂದ ನೋಡುತ್ತಿದ್ದಾರೆ. ವಾರದ ಅಂತ್ಯದ ವೇಳೆಗೆ ಅನೇಕ ನಿವಾಸಿಗಳಿಗೆ ಭಯ ಏನೆಂಬುದು ಅರಿವಿಗೆ ಬಂದಿತ್ತು.
ಪ್ರಾದೇಶಿಕ ಆಸ್ಪತ್ರೆಯಲ್ಲಿ,ತಾಲಿಬಾನ್ ಹೋರಾಟಗಾರರು ನೌಕರರ ದೂರವಾಣಿ ಸಂಖ್ಯೆಗಳು ಮತ್ತು ಮನೆ ವಿಳಾಸಗಳ ಪಟ್ಟಿಯನ್ನು ವಶಪಡಿಸಿಕೊಂಡರು ಮತ್ತು ಅವರು ಕೆಲಸಕ್ಕೆ ಮರಳಬೇಕೆಂದು ಒತ್ತಾಯಿಸಿ ಅವರಿಗೆ ಕರೆ ಮಾಡಲು ಪ್ರಾರಂಭಿಸಿದರು ಎಂದು ಭದ್ರತಾ ಕಾಳಜಿಯಿಂದ ಅನಾಮಧೇಯರಾಗಿರಲು ಬಯಸಿದ ಒಬ್ಬ ಆರೋಗ್ಯ ಕಾರ್ಯಕರ್ತ ಹೇಳಿದರು.
ಕಾಬೂಲ್ಗೆ ಪಲಾಯನಗೈದ ಇನ್ನೊಬ್ಬ ವ್ಯಕ್ತಿ ತಾಲಿಬಾನ್ ಹೋರಾಟಗಾರನಿಂದ ಕರೆ ಸ್ವೀಕರಿಸಿದನು. ಅವನು ಕೆಲಸಕ್ಕೆ ಮರಳಬೇಕೆಂದು ಒತ್ತಾಯಿಸಿದನು. ಅವರು ಮಧ್ಯರಾತ್ರಿ ಕುಂಡುಜ್ಗೆ ಬಸ್ ಹತ್ತಿದರು ಮತ್ತು ಅವರು ಬಂದಾಗ ನೇರವಾಗಿ ಆಸ್ಪತ್ರೆಗೆ ಹೋದರು.
ಆಸ್ಪತ್ರೆಯಲ್ಲಿ ಶಸ್ತ್ರಸಜ್ಜಿತ ತಾಲಿಬಾನ್ ಹಾಜರಾತಿಯನ್ನು ಗಮನಿಸುತ್ತಿದ್ದರು. ಮಹಿಳಾ ಸಿಬ್ಬಂದಿಗಳು ಆಕಾಶ ನೀಲಿ ಬುರ್ಖಾಗಳನ್ನು ಧರಿಸಿದ್ದರು. ಏಕೆಂದರೆ ಅವರು ಶಸ್ತ್ರಚಿಕಿತ್ಸೆಗಳಲ್ಲಿ ಸಹಾಯ ಮಾಡಿದರು ಮತ್ತು ವೈಮಾನಿಕ ದಾಳಿಯಿಂದ ಗಾಯಗೊಂಡವಿರಿಗೆ ಶುಶ್ರೂಷೆ ನೀಡಿದ್ದಾರೆ ಎಂದು ಆರೋಗ್ಯ ಸಿಬ್ಬಂದಿಯೊಬ್ಬರು ಭಯದಿಂದಲೇ ಹೇಳಿದರು. “ಆಸ್ಪತ್ರೆಯ ಒಳಗೆ ಅವರು ಶಸ್ತ್ರಸಜ್ಜಿತರಾಗಿದ್ದಾರೆ. ಆಸ್ಪತ್ರೆಯ ಅಂಗಳದಲ್ಲಿ ಅವರು ಶಸ್ತ್ರಸಜ್ಜಿತರಾಗಿದ್ದಾರೆ “ಎಂದು ಆರೋಗ್ಯ ಕಾರ್ಯಕರ್ತರು ಹೇಳಿದರು. “ರೋಗಿಗಳಾದ ತಾಲಿಬಾನ್ ಹೋರಾಟಗಾರರು ಕೂಡ ಶಸ್ತ್ರಾಸ್ತ್ರಗಳೊಂದಿಗೆ ಆಸ್ಪತ್ರೆಗೆ ಪ್ರವೇಶಿಸುತ್ತಾರೆ.”
ಪುರಸಭೆಯ ಕಟ್ಟಡದಲ್ಲಿ ಎಲಿಯಾಸ್ ಬುಧವಾರ ಪೌರಕಾರ್ಮಿಕರ ಮತ್ತೊಂದು ಸಭೆಯನ್ನು ಕರೆದರು. ಈ ಸಮಯದಲ್ಲಿ ಅವನ ಪಕ್ಕದಲ್ಲಿ ಆಯುಧಧಾರಿಗಳಾದ ಹೋರಾಟಗಾರರು ಇದ್ದರು. ಪ್ರೆಸ್ ಮ್ಯಾನೇಜರ್‌ಗಳಿಗೆ ಮನೆಯಲ್ಲೇ ಇರುವಂತೆ ತಿಳಿಸಲಾಯಿತು, ಹಾಗೆಯೇ ಸರ್ಕಾರಕ್ಕಾಗಿ ಕೆಲಸ ಮಾಡಿದ ಮಹಿಳೆಯರೂ ಸಹ ಮನೆಯಲ್ಲಿರುವಂತೆ ಹೇಳಲಾಯಿತು. ಮದ್ಯಯುಕ್ತ ಪಾನೀಯಗಳು ಮತ್ತು ಹಲಾಲ್ ಅಲ್ಲದ ಹೆಪ್ಪುಗಟ್ಟಿದ ಚಿಕನ್ ಮಾರಾಟವನ್ನು ನಿಷೇಧಿಸಲಾಗಿದೆ ಎಂದು ಹೊಸ ಮೇಯರ್ ಘೋಷಿಸಿದರು. ಕಟ್ಟುನಿಟ್ಟಾದ ತಾಲಿಬಾನ್ ಆಳ್ವಿಕೆ, ಮರಳಿದೆ ಎಂದು ತೋರುತ್ತದೆ.
ಇದನ್ನೂ ಓದಿ: Afghanistan: ಅಫ್ಘಾನಿಸ್ತಾನದಲ್ಲಿ ಅಲ್ಲೋಲ ಕಲ್ಲೋಲ, ಕಾಬೂಲ್ ಏರ್‌ಪೋರ್ಟ್ ಬಳಿ ಫೈರಿಂಗ್, ವಿಮಾನಗಳ ಹಾರಾಟ ರದ್ದು
ಇದನ್ನೂ ಓದಿ: Afghanistan Crisis: ಪ್ರಮುಖ ನಗರಗಳನ್ನು ವಶಪಡಿಸಿಕೊಂಡ ತಾಲೀಬಾನ್; ಅಫ್ಘಾನಿಸ್ತಾನದಲ್ಲಿನ ಪ್ರಮುಖ ಬೆಳವಣಿಗೆಗಳು ಏನೇನು?
(A week into Taliban rule in Afghanistan glimpse of Kunduz city what is the future)