ಲಾಸ್ ಏಂಜಲೀಸ್ನಲ್ಲಿ ಮನೆಯೊಂದರಲ್ಲಿ ನಡೆಯುತ್ತಿದ್ದ ಬರ್ತ್ ಡೇ ಪಾರ್ಟಿ(Birtday Party)ಯಲ್ಲಿ ಮೂರ್ನಾಲ್ಕು ಜನರು ನಡೆಸಿದ ಗುಂಡಿನ ದಾಳಿಗೆ ನಾಲ್ವರು ಮೃತಪಟ್ಟಿದ್ದು, ಒಬ್ಬ ವ್ಯಕ್ತಿ ಗಾಯಗೊಂಡಿದ್ದಾರೆ. ಭಾನುವಾರ ತಡರಾತ್ರಿ ಘಟನೆ ನಡೆದಿದ್ದಾಗಿ ಸ್ಥಳೀಯ ಪೊಲೀಸರು ಮಾಹಿತಿ ನೀಡಿದ್ದಾರೆ. ಲಾಸ್ ಏಂಜಲೀಸ್ನ ಇಂಗ್ಲೆವುಡ್ ಎಂಬ ನಗರದ ಮನೆಯೊಂದರಲ್ಲಿ ಯುವತಿಯ ಹುಟ್ಟುಹಬ್ಬದ ಪಾರ್ಟಿ ನಡೆಯುತ್ತಿತ್ತು. ತಡರಾತ್ರಿ 1.30ರ ಹೊತ್ತಿಗೆ ಪೊಲೀಸರಿಗೆ ಈ ಶೂಟೌಟ್ ಮಾಹಿತಿ ಸಿಕ್ಕಿದೆ ಎಂದು ನಗರದ ಮೇಯರ್ ಜೇಮ್ಸ್ ಬಟ್ಸ್ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಇಬ್ಬರು ಮಹಿಳೆಯರು ಅಂದರೆ ಬರ್ತ್ ಡೇ ಸಂಭ್ರಮದಲ್ಲಿದ್ದ ಯುವತಿ ಮತ್ತು ಆಕೆಯ ಸಹೋದರಿ ಹಾಗೂ ಇಬ್ಬರು ಪುರುಷರು ಮೃತರು. ಇನ್ನೊಬ್ಬ ವ್ಯಕ್ತಿಯ ಸ್ಥಿತಿ ಗಂಭೀರವಾಗಿದ್ದು, ಆತನನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂದೂ ಮಾಹಿತಿ ನೀಡಿದ್ದಾರೆ. ಇದೊಂದು ಉದ್ದೇಶಿತ ಹೊಂಚುದಾಳಿ ಎಂದಿದ್ದಾರೆ.
ಘಟನೆ ನಡೆದ ನಂತರ ರಾತ್ರಿ 1.43ರ ಹೊತ್ತಿಗೆ ಈ ಮನೆಯ ಬಳಿ ಅಗ್ನಿಶಾಮಕ ದಳದ ಸಿಬ್ಬಂದಿ, ಪ್ಯಾರಾಮೆಡಿಕಲ್ ಸಿಬ್ಬಂದಿ ಕೂಡ ತೆರಳಿದ್ದಾರೆ. ಇದು ಯಾವುದೋ ಕ್ರಿಮಿನಲ್ ಗ್ಯಾಂಗ್ ನಡೆಸಿದ ದಾಳಿಯೇ ಆಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಆದರೆ ಶೂಟೌಟ್ ನಡೆಸಲು ನೈಜ ಕಾರಣವೇನು ಎಂಬುದು ಇನ್ನೂ ತನಿಖೆಯ ನಂತರವೇ ತಿಳಿಯಬೇಕಾಗಿದೆ. ಮೃತಪಟ್ಟ ಯುವತಿಯರಲ್ಲಿ ಬ್ರೀಹ್ನಾ ಸ್ಟೈನ್ಸ್ ಎಂಬಾಕೆ ತನ್ನ 20ನೇ ವರ್ಷದ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಳು. ಈಕೆಯೊಂದಿಗೆ ಸಹೋದರಿ ಹ್ಯಾಮಿಲ್ಟನ್ (25 ವರ್ಷ)ಗೆ ಕೂಡ ದುಷ್ಕರ್ಮಿಗಳು ಗುಂಡು ಹೊಡೆದಿದ್ದಾರೆ.
ಘಟನೆಯ ಬಗ್ಗೆ ಪ್ರತಿಕ್ರಿಯೆ ನೀಡಿದ ಮೃತ ಯುವತಿಯರ ತಾಯಿ ಕಣ್ಣೀರು ಹಾಕಿದ್ದಾರೆ. ನನ್ನ ಮಕ್ಕಳಿಬ್ಬರೂ ತುಂಬ ಸುಂದರವಾಗಿದ್ದರು. ಅವರಿಗೆ ಮುಂದೆ ಒಳ್ಳೆಯ ಭವಿಷ್ಯವಿತ್ತು. ಬಾಳಿ-ಬದುಕಬೇಕಾದವರು ಹೀಗೆ ಉಸಿರು ನಿಲ್ಲಿಸಿದ್ದು ತುಂಬ ನೋವಾಗಿದೆ ಎಂದು ಹೇಳಿದ್ದಾರೆ. ಆದರೆ ಇವರೊಂದಿಗೆ ಹತ್ಯೆಗೀಡಾದ ಇಬ್ಬರು ಪುರುಷರ ಪರಿಚಯ ನನಗೆ ಇಲ್ಲ. ಅವರಿಬ್ಬರೂ ನಮ್ಮ ಕುಟುಂಬಕ್ಕೆ ಸೇರಿದವರು ಅಲ್ಲ ಎಂದೂ ಸ್ಪಷ್ಟಪಡಿಸಿದ್ದಾರೆ. ಇದೊಂದು ಪಕ್ಕಾ ಹೊಂಚು ಹಾಕಿ ಮಾಡಲಾದ ದಾಳಿ. ಈ ದಾಳಿಗೆ ವಿವಿಧ ರೀತಿಯ ಮಾರಕಾಸ್ತ್ರಗಳನ್ನು ಬಳಸಲಾಯಿತು. ರೈಫಲ್, ಹ್ಯಾಂಡ್ಗನ್ಗಳು ಬಳಕೆಯಾಗಿವೆ. ಈ ನಾಲ್ವರನ್ನು ಕೊಲ್ಲಬೇಕು ಎಂದು ಉದ್ದೇಶ ಹೊಂದಿಯೇ ನಡೆಸಿದ ದಾಳಿ ಎಂದು ಮೇಯರ್ ಜೇಮ್ಸ್ ಬಟ್ಸ್ ಹೇಳಿದ್ದಾರೆ. ಸದ್ಯ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಇದನ್ನೂ ಓದಿ: ಬೆಂಗಳೂರು ವಿಶ್ವವಿದ್ಯಾಲಯದಿಂದ ಮಹಾ ಯಡವಟ್ಟು! 70 ಅಂಕದ ಪರೀಕ್ಷೆಗೆ 73 ಅಂಕ ನೀಡಿದ ವಿವಿ