ವಾಸ ಮಾಡುವ ಸ್ಥಳದಲ್ಲಿ ಡೆಂಟಿಸ್ಟ್ ಅಲಭ್ಯತೆ ಕಾರಣ ಇಂಗ್ಗೆಂಡ್ ಮಹಿಳೆಯೊಬ್ಬರು 13 ಹಲ್ಲು ತಾವೇ ಕಿತ್ತುಕೊಂಡಿದ್ದಾರೆ

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Jul 23, 2022 | 8:03 AM

ವ್ಯಾಟ್ಸ್ ಸ್ಥಳೀಯ ಮಾಧ್ಯಮಗಳೊಂದಿಗೆ ಮಾತಾಡಿದ ಬಳಿಕ ಅವರ ನೋವಿನ ಕತೆ ಸಾಮಾಜಿಕ ಜಾಲತಾಣಗಳಲ್ಲಿ ಜನಪ್ರಿಯಗೊಂಡಿದೆ. ಹಾಗಾಗಿ, ಜನರು ಅವರೆಡೆ ಸಹಾಯಹಸ್ತ ಚಾಚಲು ಮುಂದಾಗಿದ್ದಾರೆ.

 ವಾಸ ಮಾಡುವ ಸ್ಥಳದಲ್ಲಿ ಡೆಂಟಿಸ್ಟ್ ಅಲಭ್ಯತೆ ಕಾರಣ ಇಂಗ್ಗೆಂಡ್ ಮಹಿಳೆಯೊಬ್ಬರು 13 ಹಲ್ಲು ತಾವೇ ಕಿತ್ತುಕೊಂಡಿದ್ದಾರೆ
ಡಾನಿಯೆಲ್ಲ ವ್ಯಾಟ್ಸ್​
Follow us on

ಯುನೈಟೆಡ್ ಕಿಂಗ್ಡಮ್ ನ (United Kingdom) ಒಬ್ಬ ಮಹಿಳೆಗೆ ತುರ್ತಾಗಿ ದಂತವೈದ್ಯನೊಬ್ಬನ ಸೇವೆಯ ಅವಶ್ಯಕತೆಯಿತ್ತು. ದುರದೃಷ್ಟವಶಾತ್ ಆಕೆಗೆ ನ್ಯಾಶನಲ್ ಹೆಲ್ತ್ ಸರ್ವಿಸ್ ನಲ್ಲಿ (ಎನ್ ಹೆಚ್ ಎಸ್) (NHS) ಒಬ್ಬ ಡೆಂಟಿಸ್ಟ್ (dentist) ಕೂಡ ಸಿಗಲಿಲ್ಲ. ಹಾಗಾಗಿ ಆಕೆ ತನ್ನ 13 ಹಲ್ಲು ಕಿತ್ತಿಕೊಂಡರು ಎಂದು ಡೈಲಿ ಸ್ಟಾರ್ ವರದಿ ಮಾಡಿದೆ.

ಹಲ್ಲು ಕಿತ್ತಿಕೊಂಡಿರುವ ಮಹಿಳೆಯ ಹೆಸರು ಡಾನಿಯೆಲ್ಲ ವ್ಯಾಟ್ಸ್. 42-ವರ್ಷ ವಯಸ್ಸಿನ ಅವರು ಬಿಟ್ಟುಬಿಡದ ವಸಡು ನೋವಿನಿಂದ ಬಳಲುತ್ತಿದ್ದಾರೆ. ತಾನು ವಾಸವಾಗಿರುವ ಸ್ಥಳದಲ್ಲಿದ್ದ ಎನ್ ಹೆಚ್ ಎಸ್ ಡೆಂಟಿಸ್ಟ್ ಕ್ಲಿನಿಕ್ ಏಳು ವರ್ಷಗಳ ಹಿಂದೆಯೇ ಮುಚ್ಚಲ್ಲಟ್ಟಿದೆಯಂತೆ. ಖಾಸಗಿ ಡೆಂಟಿಸ್ಟ್ ಬಳಿ ಚಿಕಿತ್ಸೆ ಮಾಡಿಕೊಳ್ಳುವಷ್ಟು ಹಣ ಆಕೆಯ ಬಳಿ ಇಲ್ಲ.

ಸಫ್ಫೋಲ್ಕ್ ನ ಬೆರಿ ಸೆಂಟ್ ಎಡ್ಮಂಟ್ಸ್ ನಿವಾಸಿಯಾಗಿರುವ ವ್ಯಾಟ್ ಅವರ ಬಾಯಲ್ಲೀಗ 14 ಹಲ್ಲು ಉಳಿದುಕೊಂಡಿದ್ದು ಹಲ್ಲಿನ ಸೆಟ್ ಬಾಯಲ್ಲಿ ಫಿಟ್ ಮಾಡಬೇಕೆಂದರೆ ಅವುಗಳಲ್ಲಿ ಇನ್ನೂ 8 ಹಲ್ಲುಗಳನ್ನು ಕಿತ್ತಬೇಕಾದ ಅವಶ್ಯಕತೆಯಿದೆ. ಡೈಲಿ ಸ್ಟಾರ್ ವರದಿಯ ಪ್ರಕಾರ ತನ್ನ ಹಲ್ಲುಗಳ ನಡುವಿನ ಅಂತರ ಕಾಣದಿರಲೆಂದು ನಗುವುದನ್ನು ಬಿಟ್ಟುಬಿಟ್ಟಿದ್ದಾರಂತೆ.

‘ನಾನು ಪ್ರತಿದಿನ ನೋವು ಅನುಭವಿಸುತ್ತೇನೆ ಮತ್ತು ಅದರ ಉಪಶಮನಕ್ಕಾಗಿ ಪೇನ್ ಕಿಲ್ಲರ್ ಗಳ ಮೊರೆಹೋಗುತ್ತೇನೆ. ನಾನು ಕೆಲಸಕ್ಕೆ ಹೋಗುತ್ತೇನೆ ಮತ್ತು ಮನೆಯಲ್ಲಿ ಮಕ್ಕಳನ್ನೂ ನೋಡಿಕೊಳ್ಳುತ್ತೇನೆ. ಹಲ್ಲುಗಳ ನಡುವಿನ ಅಂತರ ಕಾಣದಿರಲೆಂದು ನಗುವುದನ್ನು ಅವಾಯ್ಡ್ ಮಾಡುತ್ತೇನೆ. ಹಾಗೆಯೇ, ನನಗೆ ಚೆನ್ನಾಗಿ ಗೊತ್ತಿರುವವರೂ ಸೇರಿದಂತೆ ಜನರರೊಂದಿಗೆ ಮಾತಾಡುವುದು ನನಗಿಷ್ಟವಾಗುವುದಿಲ್ಲ,’ ಎಂದು ವ್ಯಾಟ್ಸ್ ಹೇಳಿದ್ದಾರೆ.

ವ್ಯಾಟ್ಸ್ ಸ್ಥಳೀಯ ಮಾಧ್ಯಮಗಳೊಂದಿಗೆ ಮಾತಾಡಿದ ಬಳಿಕ ಅವರ ನೋವಿನ ಕತೆ ಸಾಮಾಜಿಕ ಜಾಲತಾಣಗಳಲ್ಲಿ ಜನಪ್ರಿಯಗೊಂಡಿದೆ. ಹಾಗಾಗಿ, ಜನರು ಅವರೆಡೆ ಸಹಾಯಹಸ್ತ ಚಾಚಲು ಮುಂದಾಗಿದ್ದಾರೆ.

ಸ್ಥಳೀಯ ಕೌನ್ಸಿಲರ್ ಕೇಟಿ ಪಾರ್ಕರ್ ಅವರು ವ್ಯಾಟ್ಸ್ ಗಾಗಿ ಒಂದು ಫಂಡ್ ರೈಸಿಂಗ್ ಕ್ಯಾಂಪೇನ್ ಆರಂಭಿಸಿದ್ದಾರೆ. ಈ ಹಣದಿಂದಲೇ ವ್ಯಾಟ್ಸ್ ಅವರಿಗೆ ಖಾಸಗಿ ಡೆಂಟಲ್ ಕ್ಲಿನಿಕ್ ನಲ್ಲಿ ಹಲ್ಲುಗಳನ್ನು ಕೀಳಿಸಿ ಹಲ್ಲಿನ ಸೆಟ್ ಹಾಕಿಸಲಾಗುವುದು.
‘ಅವರು ಬಹಳ ಸ್ವಾಭಿಮಾನದ ಮಹಿಳೆ, ಇದೆಲ್ಲ ಅವರಿಗೆ ಇಷ್ಟವಾಗದು ಅಂತ ಗೊತ್ತಿದೆ. ಆದರೆ ಅವರಿಗಾಗಿ ಇದನ್ನು ಮಾಡುವ ಹಂಬಲ ನನ್ನದು,’ ಎಂದು ಕೌನ್ಸಿಲರ್ ಹೇಳಿದ್ದಾರೆ.

ವ್ಯಕ್ತಿಯೊಬ್ಬರು ಹಲ್ಲು ಕೀಳಿಸಲು ಸುಮಾರು ಒಂದು ಲಕ್ಷ ರೂ. ಸಹಾಯ ಮಾಡಿದ್ದಾರೆ. ‘ಅವರು ಮಾಡಿರುವ ಸಹಾಯ ಕಣ್ಣಲ್ಲಿ ನೀರು ತರಿಸುತ್ತದೆ ಮತ್ತು ಸಮುದಾಯದ ಈ ಪರಿ ಪ್ರತಿಕ್ರಿಯೆ ನನ್ನನ್ನು ಮೂಕವಿಸ್ಮಿತಳಾಗಿಸಿದೆ,’ ಎಂದು ವ್ಯಾಟ್ಸ್ ಹೇಳಿದ್ದಾರೆ.

‘ನನ್ನ ಕಷ್ಟ ಅರಿತು, ನನಗೆ ಗೊತ್ತೇ ಇರದ ಜನ ಸಹಾಯ ಮಾಡುತ್ತಿರುವುದು ಧನ್ಯತೆಯ ಭಾವ ಮೂಡಿಸಿದೆ. ಇದನ್ನು ನಾನು ನಿರೀಕ್ಷಿಸಿರಲಿಲ್ಲ,’ ಎಂದು ಅವರು ಹೇಳಿದ್ದಾರೆ.

ಡೈಲಿ ಸ್ಟಾರ್ ವರದಿಯ ಪ್ರಕಾರ ವ್ಯಾಟ್ಸ್ ಅವರು ಖಾಸಗಿ ಡೆಂಟಿಸ್ಟ್ ಒಬ್ಬರನ್ನು ಜುಲೈ 14 ರಂದೇ ಭೇಟಿಯಾಗಿದ್ದಾರೆ ಮತ್ತು 8 ಹಲ್ಲುಗಳ ಪೈಕಿ 4ನ್ನು ಕೀಳಲಾಗಿದೆ. ಆಗಸ್ಟ್ ಮಧ್ಯಭಾಗದಲ್ಲಿ ಮತ್ತೊಂದು ಸಿಟ್ಟಿಂಗ್ ಇದ್ದು ಆಗ ಉಳಿದ 4 ಹಲ್ಲುಗಳನ್ನು ಕೀಳಲಾಗುತ್ತದಂತೆ, ಅದಾದ 15 ದಿನಗಳ ಬಳಿಕ ಹಲ್ಲಿನ ಸೆಟ್ ಜೋಡಿಸಲಾಗುವುದು.