ಅಫ್ಘಾನಿಸ್ತಾನದಲ್ಲಿ ಈಗ ದೊಡ್ಡ ಮಾನವೀಯ ಬಿಕ್ಕಟ್ಟು ಸೃಷ್ಟಿಯಾಗಿದೆ. ಆಗಸ್ಟ್ 31ರ ಡೆಡ್ಲೈನ್ ಒಳಗೆ ತಮ್ಮ ದೇಶದ ನಾಗರಿಕರನ್ನು ಸುರಕ್ಷಿತವಾಗಿ ಏರ್‌ಲಿಫ್ಟ್ ಮಾಡಬೇಕೆಂದು ಹಲವು ದೇಶಗಳು ಹರಸಾಹಸಪಡುತ್ತಿವೆ. ಅಫ್ಘಾನ್ ನಾಗರಿಕರು ದುಬಾರಿ ವಿಮಾನ ಟಿಕೆಟ್ ದರ ತೆತ್ತು ವಿದೇಶಗಳಿಗೆ ಹೋಗಲಾಗದೆ ಪರದಾಡುತ್ತಿದ್ದಾರೆ. ಇತ್ತ ಭಾರತದಲ್ಲಿ ಅಫ್ಘಾನ್ ಬಿಕ್ಕಟ್ಟಿನ ಬಗ್ಗೆ ಸರ್ವಪಕ್ಷ ಸಭೆ ನಡೆದಿದೆ.
ಅಫ್ಘಾನಿಸ್ತಾನದ ಮಾನವೀಯ ಬಿಕ್ಕಟ್ಟು ಎಂಥ ಕಲ್ಲು ಹೃದಯದವರನ್ನು ಒಂದು ಕ್ಷಣ ಕರಗಿಸಿಬಿಡುತ್ತೆ. ತಾಯ್ನಾಡು ಬಿಟ್ಟು ಹೋಗಲು ಜನರು ಮುಗಿಬೀಳುವ ಪರಿಸ್ಥಿತಿ ವಿಶ್ವದ ಕೆಲವೇ ರಾಷ್ಟ್ರಗಳಲ್ಲಿ ಬಂದಿದೆ. ಈಗ ಅಫ್ಘಾನ್ನರಿಗೆ ತಾಯ್ನಾಡು ಬಿಟ್ಟು ಹೋದರೆ ಮಾತ್ರವೇ ಬದುಕಲು ಸಾಧ್ಯ ಎಂಬ ಭಾವನೆ ಬಂದಿದೆ. ಆದರೆ, ಎಲ್ಲರನ್ನೂ ಸ್ಥಳಾಂತರಿಸಲು ಸಾಧ್ಯವಾಗುವುದಿಲ್ಲ. ಈಗ ಆಮೆರಿಕ, ಇಂಗ್ಲೆಂಡ್, ಫ್ರಾನ್ಸ್, ಜರ್ಮನ್, ಆಸ್ಟ್ರೇಲಿಯಾ, ಭಾರತ ಸೇರಿದಂತೆ ಹಲವು ದೇಶಗಳು ತಮ್ಮ ನಾಗರಿಕರನ್ನು ಏರ್‌ಲಿಫ್ಟ್ ಮಾಡುತ್ತಿವೆ. ತಮ್ಮ ದೇಶದ ನಾಗರಿಕರ ಜೊತೆಗೆ ಕೆಲ ಅಫ್ಘಾನ್ ನಾಗರಿಕರನ್ನು ಮಾನವೀಯತೆಯ ದೃಷ್ಟಿಯಿಂದ ಏರ್‌ಲಿಫ್ಟ್ ಮಾಡಿವೆ.
ಆಮೆರಿಕ ಆಗಸ್ಟ್ 14ರಿಂದ 25ರ ಅವಧಿಯಲ್ಲಿ 88 ಸಾವಿರ ಜನರನ್ನು ಏರ್‌ಲಿಫ್ಟ್ ಮಾಡಿರುವುದಾಗಿ ಹೇಳಿದೆ. ವಿಶ್ವದ ಇತಿಹಾಸದಲ್ಲಿ ಇದೊಂದು ಅತಿ ದೊಡ್ಡ ಏರ್‌ಲಿಫ್ಟ್ ಕಾರ್ಯಾಚರಣೆ. ಈಗ ಆಮೆರಿಕ ಸೇರಿದಂತೆ ಪ್ರಮುಖ ದೇಶಗಳು ಸಮಯದ ಜೊತೆಗೆ ಓಡುತ್ತಾ, ಜನರನ್ನು ಏರ್‌ಲಿಫ್ಟ್ ಮಾಡಬೇಕಾಗಿದೆ. ಈವರೆಗೆ 4,500 ಆಮೆರಿಕನ್ ಕುಟುಂಬಗಳನ್ನು ಕರೆದೊಯ್ಯಲಾಗಿದೆ. ಇನ್ನೂ ಒಂದೂವರೆ ಸಾವಿರ ಆಮೆರಿಕರನ್ನರು ಅಫ್ಘಾನಿಸ್ತಾನದಲ್ಲಿದ್ದಾರೆ. ಜೊತೆಗೆ 6 ಸಾವಿರ ಆಮೆರಿಕಾ ಸೈನಿಕರು ಅಲ್ಲಿದ್ದಾರೆ. ಹೀಗಾಗಿ ಕೊನೆಯ ಮೂರ್ನಾಲ್ಕು ದಿನ ತನ್ನ ಸೈನಿಕರ ಏರ್ಲಿಫ್ಟ್ಗೆ ಆಮೆರಿಕ ಸಮಯ ಮೀಸಲಿಡಬೇಕಾಗುತ್ತೆ. ಈಗ ನಿತ್ಯ 18ರಿಂದ 20 ಸಾವಿರ ಜನರನ್ನು ಆಮೆರಿಕ ಏರ್‌ಲಿಫ್ಟ್ ಮಾಡುತ್ತಿದೆ.
ತಾಲಿಬಾನ್ ಸಂಘಟನೆಯು ಆಗಸ್ಟ್ 31ರೊಳಗೆ ಆಮೆರಿಕ ಸೇರಿದಂತೆ ಎಲ್ಲ ದೇಶಗಳು ತಮ್ಮ ಏರ್‌ಲಿಫ್ಟ್ ಕಾರ್ಯಾಚರಣೆ ಪೂರ್ಣಗೊಳಿಸಬೇಕು. ಆಗಸ್ಟ್ 31ರೊಳಗೆ ಆಮೆರಿಕ ಮತ್ತು ನ್ಯಾಟೋ ಪಡೆ ಸೈನಿಕರು ದೇಶ ಖಾಲಿ ಮಾಡಬೇಕೆಂದು ಡೆಡ್ಲೈನ್ ನೀಡಿದೆ. ಆ ಡೆಡ್ಲೈನ್ ವಿಸ್ತರಣೆ ಸಾಧ್ಯವಿಲ್ಲ. ಒಂದು ವೇಳೆ ಡೆಡ್ಲೈನ್ ಬಳಿಕವೂ ಅಫ್ಘಾನಿಸ್ತಾನದಲ್ಲಿ ಆಮೆರಿಕದ ಸೈನಿಕರು ಉಳಿದಕೊಂಡಿದ್ದರೆ ತಾಲಿಬಾನ್ ಆ ಬಗ್ಗೆ ತೀರ್ಮಾನ ಕೈಗೊಳ್ಳುತ್ತೆ ಎಂದು ತಾಲಿಬಾನ್ ವಕ್ತಾರ ಜಬೀವುಲ್ಲಾ ಮುಜಾಯಿದ್ ಎಚ್ಚರಿಸಿದ್ದಾನೆ.
ಅಫ್ಘಾನಿಸ್ತಾನದಲ್ಲಿ ಆಮೆರಿಕಾ ಮತ್ತು ನ್ಯಾಟೊ ಪಡೆಗಳಿಗೆ ನೆರವಾದ ಎರಡೂವರೆ ಲಕ್ಷ ಅಫ್ಘಾನ್ ನಾಗರಿಕರು ಈಗ ಪ್ರಾಣಭೀತಿ ಎದುರಿಸುತ್ತಿದ್ದಾರೆ. ಆಮೆರಿಕಾ ಪ್ರಜೆಗಳಿಗೆ ದುಭಾಷಿಗಳಾಗಿ, ಚಾಲಕರಾಗಿ ಇವರು ನೆರವಾಗಿದ್ದರು. ಇವರೆಲ್ಲರನ್ನೂ ಸ್ಥಳಾಂತರಿಸಬೇಕಾದ ಒತ್ತಡವೂ ಈಗ ಅಮೆರಿಕ ಮೇಲಿದೆ. ಆದರೆ ಉಳಿದಿರುವ ಐದು ದಿನಗಳಲ್ಲಿ ಎರಡೂವರೆ ಲಕ್ಷ ಜನರ ಸ್ಥಳಾಂತರ ಸಾಧ್ಯವಿಲ್ಲ. ಆಗಸ್ಟ್ 31ರ ಬಳಿಕವೂ ಜನರ ಸ್ಥಳಾಂತರಕ್ಕೆ ಅವಕಾಶ ನೀಡಬೇಕೆಂದು ತಾಲಿಬಾನ್ ಮೇಲೆ ಒತ್ತಡ ಹೇರುತ್ತೇವೆ. ಈಗಾಗಲೇ ತಾಲಿಬಾನ್ ಸಂಘಟನೆಯು ಆಗಸ್ಟ್ 31ರ ನಂತರವೂ ಜನರು ದೇಶ ಬಿಟ್ಟು ಹೋಗಲು ಅವಕಾಶ ಕೊಡುವುದಾಗಿ ಭರವಸೆ ನೀಡಿದೆ ಎಂದು ಆಮೆರಿಕಾ ಹೇಳಿದೆ.
ದೆಹಲಿಯಲ್ಲಿ ಅಫ್ಘಾನ್ ಬೆಳವಣಿಗೆಗಳ ಬಗ್ಗೆ ಸರ್ವಪಕ್ಷ ಸಭೆ
ದೆಹಲಿಯಲ್ಲಿ ಅಫ್ಘಾನಿಸ್ತಾನದ ಬಿಕ್ಕಟ್ಟಿನ ಬಗ್ಗೆ ಗುರುವಾರ ಸರ್ವಪಕ್ಷ ಸಭೆ ನಡೆಯಿತು. ಕೇಂದ್ರ ವಿದೇಶಾಂಗ ಸಚಿವ ಜೈಶಂಕರ್ ಅಫ್ಘಾನಿಸ್ತಾನದ ಬೆಳವಣಿಗೆಗಳ ಬಗ್ಗೆ ಸರ್ವಪಕ್ಷ ನಾಯಕರಿಗೆ ವಿವರಣೆ ನೀಡಿದ್ದಾರೆ. ಭಾರತವು ಎಷ್ಟು ಮಂದಿಯನ್ನು ಏರ್‌ಲಿಫ್ಟ್ ಮಾಡಲು ಸಾಧ್ಯವಾಗುತ್ತೋ ಅಷ್ಟು ಮಂದಿಯನ್ನು ಏರ್‌ಲಿಫ್ಟ್ ಮಾಡಲಿದೆ. ಈಗಾಗಲೇ ನೂರಾರು ಮಂದಿಯನ್ನು ಏರ್‌ಲಿಫ್ಟ್ ಮಾಡಲಾಗಿದೆ. ವಿಪಕ್ಷಗಳ ನಾಯಕರು ಕೂಡ ಭಾರತೀಯರನ್ನು ಸುರಕ್ಷಿತವಾಗಿ ಏರ್‌ಲಿಫ್ಟ್ ಮಾಡಬೇಕು ಎಂದು ಸಭೆಯಲ್ಲಿ ಹೇಳಿದ್ದಾರೆ. ತಾಲಿಬಾನ್ ಆಳ್ವಿಕೆಗೆ ಭಾರತ ಮಾನ್ಯತೆ ನೀಡುವ ಬಗ್ಗೆ ಜೈಶಂಕರ್ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ. ಈ ಬಗ್ಗೆ ಭಾರತ ಸರ್ಕಾರದ ನಿರ್ಧಾರಕ್ಕಾಗಿ ತಾಳ್ಮೆಯಿಂದ ಕಾಯಬೇಕೆಂದು ಹೇಳಿದ್ದಾರೆ. ಭಾರತವು ಇದುವರೆಗೂ ಅಫ್ಘಾನಿಸ್ತಾನದಿಂದ 800 ಮಂದಿಯನ್ನು ಏರ್‌ಲಿಫ್ಟ್ ಮಾಡಿ ಭಾರತಕ್ಕೆ ಕರೆ ತಂದಿದೆ. ಇಂದು ಕೂಡ 180 ಜನರು ಭಾರತಕ್ಕೆ ಬರುವ ನಿರೀಕ್ಷೆ ಇದೆ ಎಂದು ಹೇಳಿದರು.
ವಿಮಾನ ನಿಲ್ದಾಣದತ್ತ ಹೋಗಬೇಡಿ: 3 ರಾಷ್ಟ್ರಗಳಿಂದ ಎಚ್ಚರಿಕೆ
ಕಾಬೂಲ್ ವಿಮಾನ ನಿಲ್ದಾಣದತ್ತ ಹೋಗಬೇಡಿ ಎಂದು ಆಮೆರಿಕ, ಇಂಗ್ಲೆಂಡ್ ಹಾಗೂ ಆಸ್ಟ್ರೇಲಿಯಾ ದೇಶಗಳು ತಮ್ಮ ದೇಶದ ನಾಗರಿಕರಿಗೆ ಸಲಹೆ ನೀಡಿವೆ. ವಿಮಾನ ನಿಲ್ದಾಣದ ಬಳಿ ಭಯೋತ್ಪಾದನಾ ದಾಳಿ ನಡೆಯುವ ಸಾಧ್ಯತೆ ಇದೆ. ಹೀಗಾಗಿ ಅತ್ತ ಹೋಗಬೇಡಿ ಎಂದು ಆಸ್ಟ್ರೇಲಿಯಾ ತನ್ನ ಸಲಹೆಗೆ ಕಾರಣ ನೀಡಿದೆ. ಕಾಬೂಲ್ ವಿಮಾನ ನಿಲ್ದಾಣದ ಬಳಿ ಆತ್ಮಾಹುತಿ ದಾಳಿ ನಡೆಯುವ ಭೀತಿ ಈಗ ಪ್ರಮುಖ ದೇಶಗಳನ್ನು ಕಾಡುತ್ತಿದೆ.
ಭಾರತದ ವೀಸಾ ಕದ್ದ ಪಾಕ್ ಐಎಸ್ಐ
ಭಾರತವು ಅಫ್ಘಾನಿಸ್ತಾನದ ನಾಗರಿಕರಿಗೆ ವೀಸಾ ನೀಡಿತ್ತು. ಇವು ಕಾಬೂಲ್‌ನ ಖಾಸಗಿ ಟ್ರಾವೆಲ್ಸ್ ಏಜೆನ್ಸಿಯ ಬಳಿ ಇದ್ದವು. ಆದರೆ ಆಗಸ್ಟ್ 15, 16ರಂದು ಖಾಸಗಿ ಟ್ರಾವೆಲ್ಸ್ ಏಜೆನ್ಸಿಗೆ ನುಗ್ಗಿದ ಪಾಕಿಸ್ತಾನದ ಐಎಸ್ಐ ಏಜೆಂಟರು ಅಫ್ಘಾನ್ ನಾಗರಿಕರ ಪಾಸ್ಪೋರ್ಟ್, ಭಾರತದ ವೀಸಾವನ್ನು ಕಳವು ಮಾಡಿದ್ದಾರೆ. ಭಾರತದ ವೀಸಾ ದುರ್ಬಳಕೆ ಮಾಡಿಕೊಂಡು ಪಾಕಿಸ್ತಾನದ ಭಯೋತ್ಪಾದಕರು ಭಾರತಕ್ಕೆ ಬರುವ ಭೀತಿ ಎದುರಾಗಿತ್ತು. ಹೀಗಾಗಿ ಭಾರತ ಸರ್ಕಾರವು ಅಫ್ಘಾನ್ ನಾಗರಿಕರಿಗೆ ನೀಡಿದ್ದ ಎಲ್ಲ ವೀಸಾಗಳನ್ನು ರದ್ದುಗೊಳಿಸಿದೆ. ಅಫ್ಘಾನ್ ನಾಗರಿಕರು ಇ-ವೀಸಾ ಪಡೆದು ಭಾರತಕ್ಕೆ ಬರಬೇಕೆಂದು ಸೂಚಿಸಿದೆ. ಈಗಾಗಲೇ 15 ಸಾವಿರ ಮಂದಿ ಭಾರತಕ್ಕೆ ಬರಲು ಇ-ವೀಸಾ ಕೋರಿ ಮನವಿ ಸಲ್ಲಿಸಿದ್ದಾರೆ.
ಪಾಕಿಸ್ತಾನ ನಮ್ಮ ಎರಡನೇ ಮನೆ ಇದ್ದಂತೆ ಎಂದು ತಾಲಿಬಾನ್ ವಕ್ತಾರ ಜಬೀವುಲ್ಲಾ ಮುಜಾಯಿದ್ ಹೇಳಿದ್ದಾನೆ. ಪಾಕಿಸ್ತಾನದೊಂದಿಗೆ ವ್ಯಾಪಾರ, ವಾಣಿಜ್ಯ ಸಂಬಂಧ ಹೊಂದಲು ಅಫ್ಘಾನಿಸ್ತಾನ ಬಯಸುತ್ತೆ ಎಂದೂ ಅವನು ಹೇಳಿದ್ದಾನೆ. ಭಾರತ-ಪಾಕಿಸ್ತಾನದ ನಡುವಿನ ವಿವಾದಗಳನ್ನು ಆ ಎರಡು ದೇಶಗಳೇ ಕುಳಿತು ಬಗೆಹರಿಸಿಕೊಳ್ಳಬೇಕು. ಭಾರತದೊಂದಿಗೆ ಉತ್ತಮ ಸಂಬಂಧ ಹೊಂದಲು ತಾಲಿಬಾನ್ ಬಯಸುತ್ತೆ. ಆಗಸ್ಟ್ 31ರೊಳಗೆ ಅಫ್ಘಾನಿಸ್ತಾನದಲ್ಲಿ ಹೊಸ ಸರ್ಕಾರ ರಚನೆಯಾಗಿರುತ್ತೆ ಎಂದು ಜಬೀವುಲ್ಲಾ ಮುಜಾಯೀದ್ ಹೇಳಿದ್ದಾನೆ.
ಅಫ್ಘಾನಿಸ್ತಾನದ ಕಾಬೂಲ್ ವಿಮಾನ ನಿಲ್ದಾಣದ ಹೊರಗೆ ಇಂದೂ ಸಹ ಸಾವಿರಾರು ಜನರು ಜಮಾಯಿಸಿದ್ದಾರೆ. ಏರ್ಪೋರ್ಟ್ ರಸ್ತೆಗಳನ್ನು ತಾಲಿಬಾನ್ ಬಂದ್ ಮಾಡಿದ್ದರೂ, ಅಡ್ಡದಾರಿಗಳ ಮೂಲಕ ವಿಮಾನ ನಿಲ್ದಾಣ ತಲುಪಿಕೊಂಡಿರುವ ಸಾವಿರಾರು ಜನರು ಅಲ್ಲಿ ಜಮಾಯಿಸಿದ್ದಾರೆ.
ಖಾಸಗಿ ಚಾರ್ಟೆಡ್ ವಿಮಾನದ ಟಿಕೆಟ್ಗೆ 4.81 ಲಕ್ಷ
ಆಮೆರಿಕಾದ ಡಿಫೆನ್ಸ್ ಕಂಟ್ರಾಕ್ಟರ್ ಎರಿಕ್ ಪ್ರಿನ್ಸ್ ಎಂಬಾತ ಕಾಬೂಲ್ನಿಂದ ಈಗ ತನ್ನ ಚಾರ್ಟೆಡ್ ವಿಮಾನಗಳ ಹಾರಾಟ ನಡೆಸುತ್ತಿದ್ದಾನೆ. ಆದರೆ, ಈತನ ಖಾಸಗಿ ಚಾರ್ಟೆಡ್ ವಿಮಾನದಲ್ಲಿ ಪ್ರಯಾಣ ಮಾಡಲು ಒಂದು ಟಿಕೆಟ್ಗೆ ಬರೋಬ್ಬರಿ 6,500 ಡಾಲರ್ ಹಣ ಪಾವತಿಸಬೇಕು, ಭಾರತದ ರೂಪಾಯಿ ಲೆಕ್ಕದಲ್ಲಿ ಹೇಳುವುದಾದರೇ, 4.81 ಲಕ್ಷ ರೂಪಾಯಿ. 345 ಸೀಟಿನ ವಿಮಾನದಲ್ಲಿ ಬರೀ 50 ಜನರು ಮಾತ್ರ ಪ್ರಯಾಣ ಮಾಡಿದ್ದಾರೆ. ಮಾನವೀಯತೆಯ ಬಿಕ್ಕಟ್ಟುನ್ನು ಕೆಲವರು ಹಣ ಮಾಡುವ ದಂಧೆಗೆ ಬಳಸಿಕೊಳ್ಳುತ್ತಿದ್ದಾರೆ. ಹಣ ಇದ್ದವರು ಹೇಗಾದರೂ ಕಾಬೂಲ್ನಿಂದ ವಿದೇಶಕ್ಕೆ ಶಿಫ್ಟ್ ಆಗಬಹುದು, ಹಣ ಇಲ್ಲದಿದ್ದರೆ, ಅಫ್ಘಾನಿಸ್ತಾನದಲ್ಲಿ ತಾಲಿಬಾನ್ನಿಂದ ನರಕಯಾನೆ ಅನುಭವಿಸಬೇಕಾಗಿದೆ.
(Afghanistan News Update Threat of Suicide Bomb in Kabul Airport)
ಇದನ್ನೂ ಓದಿ: ತಾಲಿಬಾನ್ ಬಗ್ಗೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ ನಿರುತ್ತರರಾದರು ಅಮೆರಿಕ ಅಧ್ಯಕ್ಷ ಜೋ ಬೈಡನ್
ಇದನ್ನೂ ಓದಿ: Ahmad Massoud: ಪಂಜ್ಶಿರ್ ಕಣಿವೆಯಲ್ಲಿ ತಾಲಿಬಾನ್ ವಿರೋಧಿ ಹೋರಾಟ ಮುಂದುವರಿಸುತ್ತಿರುವ ಅಹ್ಮದ್ ಮಸೂದ್ ಯಾರು?