ನೆಲೆಗಾಗಿ ಅಲೆದಾಟ: ಅಫ್ಘಾನ್ ನಿರಾಶ್ರಿತರ ಬಗ್ಗೆ ಅಮೆರಿಕದ ಉದಾಸೀನ ಧೋರಣೆ

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Aug 30, 2021 | 10:26 PM

ಅಫ್ಘಾನ್ ನಿರಾಶ್ರಿತರ ಪಾಲಿಗೆ ಅಮೆರಿಕ ಮಿತ್ರರಾಷ್ಟ್ರವಾಗಿ ವರ್ತಿಸಿಲ್ಲ. ಉದಾರತೆಯ ಉಪದೇಶ ಮಾಡುವ ಅಮೆರಿಕ 20 ವರ್ಷಗಳಲ್ಲಿ ಸ್ವೀಕರಿಸಿರುವ ಅಫ್ಘಾನ್ ನಿರಾಶ್ರಿತರ ಸಂಖ್ಯೆ ಕೇವಲ 20,000 ಮಾತ್ರ.

ನೆಲೆಗಾಗಿ ಅಲೆದಾಟ: ಅಫ್ಘಾನ್ ನಿರಾಶ್ರಿತರ ಬಗ್ಗೆ ಅಮೆರಿಕದ ಉದಾಸೀನ ಧೋರಣೆ
ಅಫ್ಘಾನ್ ನಿರಾಶ್ರಿತರು
Follow us on

ಅಫ್ಘಾನಿಸ್ತಾನದಿಂದ ಸಾವಿರಾರು ನಿರಾಶ್ರಿತರು ಹೊರನಡೆಯಲು ಪ್ರಯತ್ನಿಸುತ್ತಿರುವ ಚಿತ್ರಗಳು ಮಾಧ್ಯಮಗಳಲ್ಲಿ ಪ್ರಕಟವಾಗುತ್ತಿವೆ. ದೇಶದಿಂದ ಹೊರಹೋಗುವ ಉದ್ದೇಶದೊಂದಿಗೆ ವಿಮಾನ ನಿಲ್ದಾಣದಲ್ಲಿ ನೆರೆದಿರುವವರು ಅಫ್ಘಾನ್ ನಿರಾಶ್ರಿತರ ಪೈಕಿ ತಕ್ಕಮಟ್ಟಿಗೆ ಸ್ಥಿತಿವಂತರಾದವರ ಒಂದು ಸಣ್ಣ ಗುಂಪು ಮಾತ್ರ. ಇದಕ್ಕಿಂತಲೂ ಎಷ್ಟೋ ಪಟ್ಟು ದೊಡ್ಡದಾದ, ಆರ್ಥಿಕವಾಗಿ ನಿಕೃಷ್ಟ ಸ್ಥಿತಿಯಲ್ಲಿರುವವರ ಗುಂಪುಗಳು ರಸ್ತೆಯ ಮಾರ್ಗದಲ್ಲಿ ಗಡಿ ದಾಟಿ ನೆರೆಹೊರೆಯ ದೇಶಗಳಲ್ಲಿ ಆಶ್ರಯ ಪಡೆದಿವೆ.

ಅಫ್ಘಾನಿಸ್ತಾನದ ಜನರು ದೇಶಬಿಟ್ಟು ಹೊರನಡೆಯುತ್ತಿರುವುದು ಈಗ ದೊಡ್ಡ ಸುದ್ದಿಯಾಗುತ್ತಿದೆಯಾದರೂ, ಕಳೆದ ಹತ್ತಾರು ವರ್ಷಗಳಿಂದ ಈ ವಿದ್ಯಮಾನ ನಡೆಯುತ್ತಲೇ ಇದೆ. ಅಫ್ಘಾನಿಸ್ತಾನದ ಮೇಲೆ ಸೋವಿಯತ್ ಒಕ್ಕೂಟದ ಆಕ್ರಮಣ, ಅದಕ್ಕೆ ಮುಜಾಹಿದ್ದೀನ್​ಗಳ ಪ್ರತಿರೋಧ, ನಂತರ ತಾಲಿಬಾನಿಗಳ ಮೇಲುಗೈ, ಅಮೆರಿಕದಿಂದ ಮೊದಲ 20 ವರ್ಷಗಳ ಹಿಂದೆ ತಾಲಿಬಾನ್ ಸರ್ಕಾರದ ಪತನ, ಇದೀಗ ತಾಲಿಬಾನಿಗಳಿಂದ ಅಮೆರಿಕ ಬೆಂಬಲಿತ ಸರ್ಕಾರದ ಪತನ ಸೇರಿದಂತೆ ಪ್ರತಿ ಸ್ಥಿತ್ಯಂತರವೂ ಲಕ್ಷಾಂತರ ನಿರಾಶ್ರಿತರನ್ನು ಹುಟ್ಟುಹಾಕಿದೆ.

ಇದರ ಜೊತೆಗೆ ಅಫ್ಘಾನಿಸ್ತಾನದಲ್ಲಿಯೇ ಯುದ್ಧದಾಹಿ ವಾರ್​ಲಾರ್ಡ್​ಗಳ ಕಾಟದಿಂದ ಹೈರಾಣಾಗಿ ಸ್ವಂತ, ಮನೆ, ಭೂಮಿ ಕಳೆದುಕೊಂಡು ಸ್ವದೇಶದಲ್ಲಿಯೇ ನಿರಾಶ್ರಿತರಾದವರ ಸಂಖ್ಯೆಯೂ ಬೃಹತ್ ಪ್ರಮಾಣದಲ್ಲಿದೆ. ಅಫ್ಘಾನ್ ನಿರಾಶ್ರಿತರ ಬಗ್ಗೆ ಅಫ್ಘಾನಿಸ್ತಾನದ ಮಾನವ ಹಕ್ಕು ಆಯೋಗದ ಮುಖ್ಯಸ್ಥ ಶಹರ್​ಜಾದ್ ಅಹಮದ್ ‘ದಿ ಕಾನ್​ವರ್ಸೇಶನ್’ ಜಾಲತಾಣಕ್ಕೆ ಸುದೀರ್ಘ ಲೇಖನ ಬರೆದಿದ್ದಾರೆ.

ಯಾವ ದೇಶದಲ್ಲಿ ಎಷ್ಟು ಮಂದಿಗೆ ಆಶ್ರಯ?
2020ರಲ್ಲಿ ಅಫ್ಘಾನಿಸ್ತಾನದ ನಿರಾಶ್ರಿತರಿಗೆ ಆಶ್ರಯ ಕೊಟ್ಟ ಮೊದಲ 10 ದೇಶಗಳ ವಿವರ ಹೀಗಿದೆ.
ಪಾಕಿಸ್ತಾನ 14,38,432, ಇರಾನ್ 7,78,000, ಜರ್ಮನಿ 1,47,994, ಆಸ್ಟ್ರಿಯಾ 40,096, ಫ್ರಾನ್ಸ್​ 31,546, ಸ್ವೀಡನ್ 29,927, ಗ್ರೀಸ್ 21,456, ಸ್ವಿಟ್ಜರ್​ಲೆಂಡ್ 14,523, ಇಟಲಿ 12,096, ಆಸ್ಟ್ರೇಲಿಯಾ 10,659. ಭಾರತವು 2020ರಲ್ಲಿ 8,275 ಮಂದಿಗೆ ಆಶ್ರಯ ನೀಡಿದೆ. ಅಮೆರಿಕ ಕೇವಲ 1,592 ಮಂದಿಗೆ ಆಶ್ರಯ ನೀಡಿದೆ.

ಇದನ್ನೂ ಓದಿ: ಹಳ್ಳಿಗಳನ್ನು ನಿರ್ಲಕ್ಷಿಸಿದ್ದು ದೊಡ್ಡ ತಪ್ಪಾಯ್ತು: ತಾಲಿಬಾನ್​ಗೆ ಶಕ್ತಿ ತುಂಬಿದ್ದು ಅಫ್ಘಾನ್ ಸರ್ಕಾರದ ತಪ್ಪು ಕೃಷಿ ನೀತಿಗಳು

ಅಫ್ಘಾನಿಸ್ತಾನದಿಂದ ಗಡಿ ದಾಟಿರುವ ನಿರಾಶ್ರಿತರು

ಅಮೆರಿಕ ಬಗ್ಗೆ ಆಕ್ರೋಶ
ಕಳೆದ 20 ವರ್ಷಗಳಿಂದ ಅಫ್ಘಾನಿಸ್ತಾನದಲ್ಲಿ ಪರೋಕ್ಷವಾಗಿ ಅಧಿಕಾರದಲ್ಲಿದ್ದರೂ ಅಫ್ಘಾನ್ ನಿರಾಶ್ರಿತರ ಪಾಲಿಗೆ ಅಮೆರಿಕ ಮಿತ್ರರಾಷ್ಟ್ರವಾಗಿ ವರ್ತಿಸಿಲ್ಲ. ಉದಾರತೆಯ ಉಪದೇಶ ಮಾಡುವ ಅಮೆರಿಕ 20 ವರ್ಷಗಳಲ್ಲಿ ಸ್ವೀಕರಿಸಿರುವ ಅಫ್ಘಾನ್ ನಿರಾಶ್ರಿತರ ಸಂಖ್ಯೆ ಕೇವಲ 20,000 ಮಾತ್ರ. ಒಂದು ವರ್ಷಕ್ಕೆ ಸರಾಸರಿ 1 ಸಾವಿರ ಅಫ್ಘಾನ್ನರಿಗೆ ಅಮೆರಿಕ ಪೌರತ್ವ ನೀಡಿದೆ. 2020-2021ರ ಆರ್ಥಿಕ ವರ್ಷದಲ್ಲಿ ಒಟ್ಟು 11,800 ನಿರಾಶ್ರಿತರಿಗೆ ಅಮೆರಿಕದಲ್ಲಿ ಆಶ್ರಯ ಸಿಕ್ಕಿದೆ. ಇದರಲ್ಲಿ ಅಫ್ಘಾನ್ನರ ಸಂಖ್ಯೆ ಕೇವಲ 495 ಮಾತ್ರ. ಸುಮಾರು 90,000 ವಿಸಾ ಅರ್ಜಿಗಳು ಅಮೆರಿಕ ಸರ್ಕಾರದ ಎದುರು ಇವೆ.

ಸದ್ಯದ ಪರಿಸ್ಥಿತಿ ಏನು?
ಅಮೆರಿಕ ನೇತೃತ್ವದಲ್ಲಿ ನಡೆದ 20 ವರ್ಷದ ಅಂತರ್ಯುದ್ಧದಲ್ಲಿ 47,000 ನಾಗರಿಕರು ಮತ್ತು 66,000 ಅಫ್ಘಾನ್ ಭದ್ರತಾ ಸಿಬ್ಬಂದಿ ಮೃತಪಟ್ಟಿದ್ದಾರೆ. ಅಫ್ಘಾನಿಸ್ತಾನವನ್ನು ತಾಲಿಬಾನ್ ತನ್ನ ಸುಪರ್ದಿಗೆ ತೆಗೆದುಕೊಳ್ಳುವ ಮೊದಲಿನಿಂದಲೂ ಸಾರ್ವಜನಿಕರ ಸಾವುನೋವಿನ ಪ್ರಮಾಣ ಹೆಚ್ಚಾಗುತ್ತಲೇ ಇತ್ತು. ತಾಲಿಬಾನ್ ಆಡಳಿತ ಜಾರಿಯಾಗುವ ಮೊದಲಿನಿಂದಲೂ ಅಲ್ಲಿನ ಜನರು ದೇಶ ಬಿಡಲು ಹಾತೊರೆಯುತ್ತಿದ್ದರು. ಆದರೆ ತಾಲಿಬಾನ್ ಆಡಳಿತ ಜಾರಿಯಾದ ಮೇಲೆ ದೇಶ ಬಿಡುವವರ ಸಂಖ್ಯೆ ಗಮನಾರ್ಹ ಪ್ರಮಾಣದಲ್ಲಿ ಹೆಚ್ಚಾಗಿದೆ.

ಅಫ್ಘಾನಿಸ್ತಾನದಿಂದ ವಾಪಸ್ ಹೋಗಲು ಅಮೆರಿಕಕ್ಕೆ ನೀಡಿರುವ ಗಡುವು ಆಗಸ್ಟ್ 31ಕ್ಕೆ ಕೊನೆಯಾಗಲಿದೆ. ನಂತರದ ದಿನಗಳಲ್ಲಿ ತಾಲಿಬಾನ್ ಆಡಳಿತ ಹೇಗಿರುತ್ತೆ ಎಂದು ಹೆದರುತ್ತಿರುವ ಅಫ್ಘಾನಿಗಳು ದೇಶ ಬಿಡಲು ಹಾತೊರೆಯುತ್ತಿದ್ದಾರೆ. ಈ ಗಡುವಿನ ನಂತರವೂ ಕೆನಡಾ (20,000) ಮತ್ತು ಬ್ರಿಟನ್ (20,000) ಅಫ್ಘಾನ್ ನಿರಾಶ್ರಿತರಿಗೆ ಅಶ್ರಯ ಕಲ್ಪಿಸುವುದಾಗಿ ಭರವಸೆ ನೀಡಿವೆ

ಟರ್ಕಿ, ಆಸ್ಟ್ರಿಯಾ ಮತ್ತು ಸ್ವಿಟ್ಜ್​ರ್​ಲೆಂಡ್​ ದೇಶಗಳು ಅಫ್ಘಾನ್ ನಿರಾಶ್ರಿತರನ್ನು ಸ್ವೀಕರಿಸುವುದಿಲ್ಲ ಎಂದು ಘೋಷಿಸಿವೆ. ಅಲ್​ಬೇನಿಯಾ, ಕತಾರ್, ಕೋಸ್ಟರಿಕಾ, ಮೆಕ್ಸಿಕೊ, ಚಿಲಿ, ಈಕ್ವೆಡಾರ್, ಕೊಲಂಬಿಯಾ ಮತ್ತು ಉಗಾಂಡ ದೇಶಗಳು ಮುಂದಿನ ದಿನಗಳಲ್ಲಿ ಅಫ್ಘಾನ್ ನಿರಾಶ್ರಿತರಿಗೆ ಆಶ್ರಯ ನೀಡುವ ಭರವಸೆ ನೀಡಿವೆ.

ಅಫ್ಘಾನಿಸ್ತಾನದೊಂದಿಗೆ ಭೂ ಗಡಿ ಹಂಚಿಕೊಂಡಿರುವ ಪಾಕಿಸ್ತಾನ ಮತ್ತು ಇರಾನ್ ದೇಶಗಳು ಮುಂದಿನ ದಿನಗಳಲ್ಲಿಯೂ ಅಫ್ಘಾನ್ ನಿರಾಶ್ರಿತರಿಗೆ ಆಶ್ರಯ ನೀಡುವುದನ್ನು ಮುಂದುವರಿಸಬೇಕಾಗಬಹುದು. ಈಗಾಗಲೇ ಆರ್ಥಿಕವಾಗಿ ಜರ್ಝರಿತವಾಗಿರುವ ಈ ಎರಡೂ ದೇಶಗಳು ನಿರಾಶ್ರಿತರ ಸವಾಲನ್ನು ಹೇಗೆ ನಿರ್ವಹಿಸಲಿವೆ ಎಂಬುದನ್ನು ಕಾದು ನೋಡಬೇಕು.

(Afghanistan Refugee Crisis Where do these people go)

ಇದನ್ನೂ ಓದಿ: ‘ಭಾರತ ಒಂದು ಪ್ರಮುಖ ರಾಷ್ಟ್ರ..ನಮ್ಮಿಂದ ಅದಕ್ಕೆ ಏನೂ ಅಪಾಯವಿಲ್ಲ’-ತಾಲಿಬಾನ್​ ವಕ್ತಾರ

ಇದನ್ನೂ ಓದಿ: Tv9 Exclusive: ಭಾರತ, ಕಾಶ್ಮೀರದ ಬಗ್ಗೆ ನಮ್ಮ ನಿಲುವು ಸ್ಪಷ್ಟವಾಗಿದೆ: ತಾಲಿಬಾನ್ ವಕ್ತಾರ ಸುಹೇಲ್ ಶಾಹಿನ್ ಸಂದರ್ಶನ