ಹಳ್ಳಿಗಳನ್ನು ನಿರ್ಲಕ್ಷಿಸಿದ್ದು ದೊಡ್ಡ ತಪ್ಪಾಯ್ತು: ತಾಲಿಬಾನ್​ಗೆ ಶಕ್ತಿ ತುಂಬಿದ್ದು ಅಫ್ಘಾನ್ ಸರ್ಕಾರದ ತಪ್ಪು ಕೃಷಿ ನೀತಿಗಳು

|

Updated on: Aug 30, 2021 | 6:03 PM

Agrarian Crisis: ತಾಲಿಬಾನ್ ಅಧಿಕಾರಕ್ಕೆ ಬರಲು ಬರಗಾಲ, ಹಳ್ಳಿಗಳ ನಿರ್ಲಕ್ಷ್ಯ, ಅಫ್ಘಾನ್ ಸರ್ಕಾರದ ತಪ್ಪು ಕೃಷಿ ನೀತಿಯೇ ಮುಖ್ಯ ಕಾರಣ. ಕೇವಲ ಭ್ರಷ್ಟಾಚಾರ ಅಥವಾ ಮಿಲಿಟರಿ ವೈಫಲ್ಯವಷ್ಟೇ ಅಫ್ಘಾನಿಸ್ತಾನದ ಪ್ರಜಾಸತ್ತಾತ್ಮಕ ಸರ್ಕಾರ ಪತನಗೊಳ್ಳಲು ಕಾರಣವಲ್ಲ.

ಹಳ್ಳಿಗಳನ್ನು ನಿರ್ಲಕ್ಷಿಸಿದ್ದು ದೊಡ್ಡ ತಪ್ಪಾಯ್ತು: ತಾಲಿಬಾನ್​ಗೆ ಶಕ್ತಿ ತುಂಬಿದ್ದು ಅಫ್ಘಾನ್ ಸರ್ಕಾರದ ತಪ್ಪು ಕೃಷಿ ನೀತಿಗಳು
ಸತತ ಬರಗಾಲದಿಂದ ಅಫ್ಘಾನಿಸ್ತಾನ ತತ್ತರಿಸುತ್ತಿದೆ
Follow us on

ಅಫ್ಘಾನಿಸ್ತಾನದಲ್ಲಿ ಅಶ್ರಫ್ ಘನಿ ನೇತೃತ್ವದ ಸರ್ಕಾರ ಪತನಗೊಂಡು 15 ದಿನಗಳಾಗಿವೆ. ಆಗಸ್ಟ್ 15ರಂದು ನಡೆದ ನಾಯಕೀಯ ಬೆಳವಣಿಗೆಗಳಲ್ಲಿ ಕಾಬೂಲ್​ ಯಾರೂ ನಿರೀಕ್ಷಿಸದ ರೀತಿಯಲ್ಲಿ ತಾಲಿಬಾನ್ ತೆಕ್ಕೆಗೆ ಜಾರಿತು. ತಾಲಿಬಾನ್​ ಇಷ್ಟು ಬೇಗ ಶಕ್ತಿ ವೃದ್ಧಿಸಿಕೊಂಡಿದ್ದು ಹೇಗೆ? ಅಮೆರಿಕನ್ನರಿಂದ ತರಬೇತಿ ಪಡೆದಿದ್ದ ಅಫ್ಘಾನ್ ಸೇನೆ ಕುಸಿದಿದ್ದು ಏಕೆ? ಎಂಬ ಪ್ರಶ್ನೆಗಳಿಗೆ ಉತ್ತರ ಹುಡುಕಿ ಹೊರಟ ಹಲವರು ಸರ್ಕಾರ ಮತ್ತು ಅದರ ಅಧೀನದಲ್ಲಿದ್ದ ಮಿಲಿಟರಿಯಲ್ಲಿ ತಾಂಡವವಾಡುತ್ತಿದ್ದ ಭ್ರಷ್ಟಾಚಾರವೇ ಇದಕ್ಕೆ ಮೂಲ ಕಾರಣ ಎಂದು ಷರಾ ಬರೆದುಬಿಟ್ಟರು.

ದಿನ ಕಳೆದಂತೆ ಅಫ್ಘಾನಿಸ್ತಾನದ ಪತನಕ್ಕೆ ಕಾರಣಗಳು ಸ್ಪಷ್ಟವಾಗುತ್ತಿವೆ. ಕೇವಲ ಭ್ರಷ್ಟಾಚಾರ ಅಥವಾ ಮಿಲಿಟರಿ ವೈಫಲ್ಯವಷ್ಟೇ ಅಫ್ಘಾನಿಸ್ತಾನದ ಪ್ರಜಾಸತ್ತಾತ್ಮಕ ಸರ್ಕಾರ ಪತನಗೊಳ್ಳಲು ಕಾರಣವಲ್ಲ ಎಂಬುದು ಸ್ಪಷ್ಟವಾಗುತ್ತಿದೆ. ಗ್ರಾಮೀಣ ಪ್ರದೇಶಗಳನ್ನು, ಮುಖ್ಯವಾಗಿ ಕೃಷಿಯನ್ನು ಮತ್ತು ರೈತರನ್ನು ನಿರ್ಲಕ್ಷಿಸಿದ್ದಕ್ಕೆ ಅಲ್ಲಿನ ಸರ್ಕಾರ ಈ ಮಟ್ಟದ ಬೆಲೆ ತೆರಬೇಕಾಯಿತು. ಹವಾಮಾನ ಬದಲಾವಣೆ, ಕೃಷಿ ಪದ್ಧತಿಯಲ್ಲಿ ಆಗುತ್ತಿರುವ ವ್ಯತ್ಯಯ, ರೈತರ ಮೇಲೆ ಇರುವ ಒತ್ತಡಗಳನ್ನು ಅಲ್ಲಿನ ಸರ್ಕಾರ ಅರ್ಥ ಮಾಡಿಕೊಂಡಿದ್ದರೆ ಅಫ್ಘಾನಿಸ್ತಾನಕ್ಕೆ ಈ ಪರಿಸ್ಥಿತಿ ಬರುತ್ತಿರಲಿಲ್ಲ ಎಂಬ ವಿಶ್ಲೇಷಣೆಗಳನ್ನು ಹಲವು ಅಂತರರಾಷ್ಟ್ರೀಯ ಸಂಸ್ಥೆಗಳು ಮುಂದಿಡುತ್ತಿವೆ.

ಅಮೆರಿಕದ ಸಿಬಿಎಸ್ ನ್ಯೂಸ್ ಜಾಲತಾಣದಲ್ಲಿ ಈ ಕುರಿತು ಪ್ರಕಟವಾಗಿರುವ ಲೇಖನದ ಕನ್ನಡ ಅನುವಾದ ಇಲ್ಲಿದೆ.

***

ಹವಾಮಾನ ವೈಪರಿತ್ಯದಿಂದಾಗಿ ಗ್ರಾಮೀಣ ಅಫ್ಘಾನಿಸ್ತಾನವು ತತ್ತರಿಸಿದೆ. ಕಳೆದ ಮೂರು ದಶಕಗಳಿಂದ ಪ್ರವಾಹ ಮತ್ತು ಬರಗಾಲಗಳು ಅಫ್ಘಾನ್​ನಲ್ಲಿ ಬೆಳೆ ಹಾಳುಮಾಡುತ್ತಿವೆ. ಹಸಿವು ತಾಂಡವವಾಡುತ್ತಿದೆ. ಇದಕ್ಕೆ ಹವಾಮಾನ ವೈಪರಿತ್ಯ ಕಾರಣ ಎಂಬುದನ್ನು ತಿಳಿಯದ ತಾಲಿಬಾನ್ ಜನರ ನೋವನ್ನು ತನ್ನ ಲಾಭಕ್ಕೆ ತಕ್ಕಂತೆ ಬಳಸಿಕೊಂಡಿತು.

ಶೇ 60ರಷ್ಟು ಅಫ್ಘಾನಿಗಳಿಗೆ ಕೃಷಿಯೇ ಮುಖ್ಯ ಆದಾಯದ ಮೂಲ. 2019ರಲ್ಲಿ ವಿಶ್ವ ಆಹಾರ ಯೋಜನೆ (World Food Programme – WFP), ವಿಶ್ವಸಂಸ್ಥೆಯ ಪರಿಸರ ಯೋಜನೆ (United Nations Environment Program – UNEP) ಮತ್ತು ಅಫ್ಘಾನಿಸ್ತಾನ ರಾಷ್ಟ್ರೀಯ ಪರಿಸರ ಸಂರಕ್ಷಣಾ ಸಂಸ್ಥೆಗಳು (Afghanistan’s National Environmental Protection Agency – ANEPA) ನಡೆಸಿದ ಜಂಟಿ ಅಧ್ಯಯನದ ಪ್ರಕಾರ ಹವಾಮಾನ ವೈಪರಿತ್ಯದಿಂದ ಸಂಕಷ್ಟ ಅನುಭವಿಸಿದ ವಿಶ್ವದ ದೇಶಗಳಲ್ಲಿ ಅಫ್ಘಾನಿಸ್ತಾನವು 6ನೇ ಸ್ಥಾನದಲ್ಲಿದೆ.

ವಿಶ್ವಬ್ಯಾಂಕ್ ಪ್ರಕಾರ ಕಳೆದ 20 ವರ್ಷಗಳಲ್ಲಿ ಅಫ್ಘಾನಿಸ್ತಾನದ ಒಟ್ಟು ರಾಷ್ಟ್ರೀಯ ಉತ್ಪನ್ನಕ್ಕೆ ಕೃಷಿಯು ಶೇ 20ರಿಂದ 40ರಷ್ಟು ಕೊಡುಗೆ ನೀಡಿದೆ. ಅಫ್ಘಾನಿಸ್ತಾನದ ಕಲ್ಲಂಗಡಿ ಹಣ್ಣು, ಪೈನ್​ನಟ್, ಒಣದ್ರಾಕ್ಷಿ ಮತ್ತಿತರ ಕೃಷಿ ಉತ್ಪನ್ನಗಳು ವಿಶ್ವವಿಖ್ಯಾತವಾಗಿವೆ. ಆದರೆ ಹವಾಮಾನ ವೈಪರಿತ್ಯದಿಂದಾಗಿ ಕೃಷಿ ಕೆಲಸ ನಿರ್ವಹಿಸುವುದು ಅಲ್ಲಿನ ಜನರಿಗೆ ಕಷ್ಟವಾಗಿದೆ.

ಬರಗಾಲ ಅಥವಾ ಅತಿಯಾಗಿ ನೀರು ಹರಿದು ಸತ್ವ ಕಳೆದುಕೊಂಡ ಭೂಮಿಯಿಂದಾಗಿ ಅಲ್ಲಿನ ರೈತರಿಗೆ ಜೀವನ ಸಾಗಿಸಲು ಸಾಕಾಗುವಷ್ಟು ಇಳುವರಿ ಪಡೆಯಲು, ಜಾನುವಾರುಗಳನ್ನು ಸಾಕಲು ಸಾಧ್ಯವಾಗುತ್ತಿಲ್ಲ. ಹಳ್ಳಿಗಳಲ್ಲಿ ಬಡತನ ವ್ಯಾಪಿಸಿಕೊಂಡಾಗ ಸಾಲ ಪಡೆಯುವುದು ಅನಿವಾರ್ಯವಾಯಿತು. ಇಂಥ ಸಂದರ್ಭದಲ್ಲಿ ಆಸರೆಗೆ ಬರಬೇಕಿದ್ದ ಸರ್ಕಾರ ರೈತರ ಬೆಂಬಲಕ್ಕೆ ಸರಿಯಾಗಿ ನಿಲ್ಲಲಿಲ್ಲ. ಸಾಹುಕಾರರಿಂದ ಸಾಲ ಪಡೆದ ರೈತರು ಅದನ್ನು ತೀರಿಸುವ ಮಾರ್ಗಕಾಣದೆ ಅವರ ಹಂಗಿನಲ್ಲಿ ದಿನದೂಡಬೇಕಾದ ಸ್ಥಿತಿ ಬಂತು. ಅಫ್ಘಾನಿಸ್ತಾನದ ಬಹುತೇಕ ಸಾಹುಕಾರರು ಯುದ್ಧದಾಹಿ ವಾರ್​ಲಾರ್ಡ್​ಗಳು ಎನ್ನುವುದನ್ನೂ ಮರೆಯುವಂತಿಲ್ಲ.

ಇದನ್ನೂ ಓದಿ: Tv9 Exclusive: ಭಾರತ, ಕಾಶ್ಮೀರದ ಬಗ್ಗೆ ನಮ್ಮ ನಿಲುವು ಸ್ಪಷ್ಟವಾಗಿದೆ: ತಾಲಿಬಾನ್ ವಕ್ತಾರ ಸುಹೇಲ್ ಶಾಹಿನ್ ಸಂದರ್ಶನ

ಆಹಾರಕ್ಕಾಗಿ ಅಫ್ಘಾನಿಸ್ತಾನದಲ್ಲಿ ಪರದಾಟ ಮುಂದುವರಿದಿದೆ.

ಸಿಗಲಿಲ್ಲ ಸರ್ಕಾರದ ಆಸರೆ
‘ರೈತರು ಬೆಳೆ ಕಳೆದುಕೊಂಡಾಗ, ಅವರ ಜಮೀನು ನಿರುಪಯುಕ್ತ ಸ್ಥಿತಿ ತಲುಪಿದಾಗಲೂ ಅಫ್ಘಾನ್ ಸರ್ಕಾರ ಗಮನ ಕೊಡಲೇ ಇಲ್ಲ. ಈ ಸಂದರ್ಭವನ್ನು ತಾಲಿಬಾನಿಗಳು ತಮ್ಮ ಅನುಕೂಲಕ್ಕೆ ತಕ್ಕಂತೆ ಬಳಸಿಕೊಂಡರು’ ಎನ್ನುತ್ತಾರೆ ಅಟ್ಲಾಂಟಿಕ್ ಕೌನ್ಸಿಲ್​ನ ದಕ್ಷಿಣ ಏಷ್ಯಾ ಕೇಂದ್ರದ ಹಿರಿಯ ಸಂಶೋಧಕ ಕಮಲ್ ಅಲಂ.

‘ಭ್ರಷ್ಟಾಚಾರ ಮತ್ತಿತರ ಕಾರಣಗಳಿಂದಾಗಿ ಜನರ ನಂಬಿಕೆಯನ್ನು ಅಫ್ಘಾನ್ ಸರ್ಕಾರ ಕಳೆದುಕೊಂಡಿತ್ತು. ಅಫ್ಘಾನಿಸ್ತಾನದ ಗ್ರಾಮೀಣ ಪ್ರದೇಶಗಳು ಅನುಭವಿಸುತ್ತಿದ್ದ ಕೃಷಿ ಸಂಕಷ್ಟ ಮತ್ತು ದುರಾಡಳಿತದ ಲಾಭವನ್ನು ತಾಲಿಬಾನಿಗಳು ತಮ್ಮ ಅನುಕೂಲಕ್ಕೆ ಬಳಸಿಕೊಂಡರು. ಮೊದಲೇ ನೊಂದಿದ್ದ ಜನರ ಬಳಿಗೆ ಹೋಗಿ ಹಿತೋಪದೇಶದ ನಾಟಕವಾಡಿ ತಮ್ಮ ಪರವಾಗಿ ಒಲಿಸಿಕೊಂಡರು. ದಿನಕ್ಕೆ 5ರಿಂದ 10 ಡಾಲರ್​ (₹ 400ರಿಂದ 750) ಕೂಲಿ ನೀಡಿ ಬಂದೂಕು ಹಿಡಿಯಲು ಕಲಿಸಿದರು. ಹೋರಾಟದ ತರಬೇತಿ ಕೊಟ್ಟು, ಸರ್ಕಾರಿ ಸೇನೆಯ ವಿರುದ್ಧ ಬಂಡೇಳಲು ಪ್ರೇರೇಪಿಸಿದರು.

‘ಬೆಳೆ ಕಳೆದುಕೊಂಡು ಸಂಕಷ್ಟ ಅನುಭವಿಸುತ್ತಿರುವ ರೈತರ ಅಸಹಾಯಕತೆಯ ಲಾಭ ಪಡೆಯುವುದು ಸುಲಭ. ಅವರಿಗೆ ಆಸರೆಯಾಗಿ ನಿಲ್ಲುವ ಭರವಸೆ ಕೊಟ್ಟು ಏನು ಹೇಳಿದರೂ ಕೇಳುವ ಸ್ಥಿತಿಯಲ್ಲಿ ಅವರಿರುತ್ತಾರೆ. ಇಂಥವರ ಕೈಗೆ ಕಾಸುಕೊಟ್ಟು, ನಿಮ್ಮ ಸರ್ಕಾರವು ನಿಮಗಾಗಿ ಏನನ್ನೂ ಮಾಡುತ್ತಿಲ್ಲ. ನಿಮ್ಮ ಕೃಷಿಭೂಮಿ ಸತ್ವ ಕಳೆದುಕೊಳ್ಳುತ್ತಿದೆ. ನಿಮ್ಮ ಕಷ್ಟಕ್ಕೆ ಸ್ಪಂದಿಸದ ಸರ್ಕಾರದ ಪರವಾಗಿ ಏಕೆ ನಿಲ್ಲುತ್ತೀರಿ. ಅದರ ಬದಲು ನಮ್ಮನ್ನು ಬೆಂಬಲಿಸಿ. ಈ ಸರ್ಕಾರವನ್ನು ಉರುಳಿಸಿಬಿಡೋಣ’ ಎಂದರೆ ಅವರು ಪಕ್ಷ ಬದಲಿಸದೇ ಇರುತ್ತಾರೆಯೇ ಎಂದು ಪ್ರಶ್ನಿಸುತ್ತಾರೆ ಲೆಬನಾನ್​ನ ಬೈರುತ್​ನಲ್ಲಿರುವ ಅಮೆರಿಕ ವಿಶ್ವವಿದ್ಯಾಲಯದ ಹವಾಮಾನ ಬದಲಾವಣೆ ಮತ್ತು ಪರಿಸರ ವಿಭಾಗ ಅಧ್ಯಯನ ಪೀಠದ ನಿರ್ದೇಶಕಿ ನದೀಮ್ ಫರಜಲ್ಲಾ.

ಹಸಿವು ಅಫ್ಘಾನಿಸ್ತಾನದ ದೊಡ್ಡ ಸಮಸ್ಯೆ
ಬೆಟ್ಟಗುಡ್ಡಗಳೇ ಆವೃತ್ತವಾಗಿರುವ ಉತ್ತರ ಅಫ್ಘಾನಿಸ್ತಾನದಲ್ಲಿ ಮಂಜು ಮತ್ತು ಹಿಮನದಿಗಳು ಮೊದಲಿಗಿಂತಲೂ ವೇಗವಾಗಿ ಕರಗುತ್ತಿವೆ. ಕೃಷಿ ಭೂಮಿಯ ಮೇಲೆ ಪ್ರವಾಹದ ನೀರು ಹರಿಯುತ್ತಿದೆ. ಚಳಿಗಾಲದಲ್ಲಿಯೇ ಹಿಮ ಕರಗುತ್ತಿದೆ. ಅಫ್ಘಾನಿಸ್ತಾನದ ದಕ್ಷಿಣ ಮತ್ತು ಪಶ್ಚಿಮ ಭಾಗದಲ್ಲಿ ಏಕಾಏಕಿ ಮಳೆ ಸುರಿಯುವ ವಿದ್ಯಮಾನ ಶೇ 10ರಿಂದ 25ರಷ್ಟು ಹೆಚ್ಚಾಗಿದೆ. ಕಳೆದ 30 ವರ್ಷಗಳಿಂದ ಮಳೆ ದತ್ತಾಂಶ ವಿಶ್ಲೇಷಿಸಿರುವ ಹಲವು ತಜ್ಞರು ಈ ನಿರ್ಣಯಕ್ಕೆ ಬಂದಿದ್ದಾರೆ. ಈ ಪರಿಸ್ಥಿತಿಗಳನ್ನು ಹೇಗೆ ನಿರ್ವಹಿಸಬೇಕು ಎಂಬುದು ಪರಂಪರಾಗತ ಕೃಷಿ ಪದ್ಧತಿಯನ್ನೇ ಅವಲಂಬಿಸಿದ್ದವರಿಗೆ ಅರ್ಥವಾಗುತ್ತಿಲ್ಲ.

ಗ್ರಾಮೀಣ ಪ್ರದೇಶಗಳನ್ನು ಹಿಂದಿನ ಸರ್ಕಾರ ಅನಾಥ ಸ್ಥಿತಿಯಲ್ಲಿ ಬಿಟ್ಟುಬಿಟ್ಟಿತ್ತು. ಅಫ್ಘಾನಿಸ್ತಾನ ಎಂದಾಕ್ಷಣ ಕಣ್ಣೆದುರು ಬರುತ್ತಿದ್ದುದು ಬಡತನ, ಯುದ್ಧ, ಇನ್ನಿತರ ಸಂಕಷ್ಟಗಳು ಮಾತ್ರ. ಇಂಥ ಹೊತ್ತಿನಲ್ಲಿ ಹವಾಮಾನ ಬದಲಾವಣೆಯ ವಿದ್ಯಮಾನದ ಬಗ್ಗೆ ತಲೆಕೆಡಿಸಿಕೊಳ್ಳಲು ಯಾರಿಗೆ ಬಿಡುವಿತ್ತು ಹೇಳಿ ಎಂದು ಪ್ರಶ್ನಿಸುತ್ತಾರೆ ಅಲಮ್.

ಅಫ್ಘಾನಿಸ್ತಾನದ ಮೂರನೇ ಒಂದಷ್ಟು ಪ್ರದೇಶ ಸಂಕಷ್ಟ ಅಥವಾ ತುರ್ತು ಪರಿಸ್ಥಿತಿಯಲ್ಲಿದೆ. ಸತತ ಬರಗಾಲಗಳಿಂದಾಗಿ ಬೆಳೆಗಳು ವಿಫಲವಾಗಿವೆ. ಹಸಿವು ಅಲ್ಲಿನ ಜನರು ಈಗ ಎದುರಿಸುತ್ತಿರುವ ದೊಡ್ಡ ಸಮಸ್ಯೆ. 2018ರಲ್ಲಿಯೂ ಅಫ್ಘಾನಿಸ್ತಾನದಲ್ಲಿ ಈಗ ಇದ್ದಂಥದ್ದೇ ಪರಿಸ್ಥಿತಿ ನಿರ್ಮಾಣವಾಗಿತ್ತು. ಸಾವಿರಾರು ಜನರು ಹಸಿವಿನಿಂದ ಬಳಲಿ ಜೀವಬಿಟ್ಟಿದ್ದರು.

ಇದನ್ನೂ ಓದಿ: ಭಾರತ- ಪಾಕಿಸ್ತಾನದ ಜಗಳದಲ್ಲಿ ಅಫ್ಘಾನಿಸ್ತಾನವನ್ನು ಎಳೆದು ತರಬೇಡಿ; ತಾಲಿಬಾನ್ ಸೂಚನೆ

ಹವಾಮಾನ ವೈಪರಿತ್ಯದಿಂದಾಗಿ ಕುಡಿಯುವ ನೀರಿಗೂ ಅಫ್ಘಾನಿಗಳು ತತ್ವಾರ ಅನುಭವಿಸುವಂತಾಗಿದೆ.

ಕಾಸು ಕೊಟ್ಟವರ ಪರ ಬಂದೂಕು ಹಿಡಿದರು
ಹಳ್ಳಿಗಳಲ್ಲಿ ಇರುವ ಸಂಕಷ್ಟಗಳ ಸರಮಾಲೆಗಳಿಂದ ಪಾರಾಗಲು ನಗರ ಪ್ರದೇಶಗಳಿಗೆ ವಲಸೆ ಹೋದ ಆಫ್ಘಾನ್ನರ ಪರಿಸ್ಥಿತಿಯೂ ಸುಧಾರಿಸಲಿಲ್ಲ. ‘ಕಾಸು ಕೊಟ್ಟವರ ಪರವಾಗಿ ಬಂದೂಕು ಹಿಡಿಯುವ ದರಿದ್ರವರು’ ಎನಿಸಿಕೊಂಡ ಗ್ರಾಮೀಣ ಅಫ್ಘಾನಿಗಳು ಅಲ್ಲಿಯೂ ಪ್ರಬಲರ ಕೈಗೊಂಬೆಗಳಾದರು. ಹಣಕ್ಕಾಗಿ ರಾಜಕೀಯ ಪಕ್ಷಗಳು ಹಾಗೂ ಯುದ್ಧದಾಹಿ ವಾರ್​ಲಾರ್ಡ್​ಗಳ ಅಧೀನದಲ್ಲಿ ಅವರು ನಡೆಸುವ ದಾಳಗಳಾದರು.

ಕೃಷಿ ಭೂಮಿ ನಿರುಪಯುಕ್ತವಾಯಿತು ಎನ್ನುವ ಕಾರಣಕ್ಕೆ ಬೇಸಾಯ ತ್ಯಜಿಸಿ ಕೆಲಸ ಹುಡುಕಿಕೊಂಡು ದುಡಿಯುವ ಸಾಮರ್ಥ್ಯವಿರುವ ಪುರುಷರು ಗುಳೆ ಹೊರಟರು. ಗುಳೆ ಹೊರಟವರು ತಲುಪಿದ ನಗರಗಳಲ್ಲಿಯೂ ತಕ್ಕ ಕೆಲಸ ಸಿಕ್ಕು, ಹಳ್ಳಿಗಳಲ್ಲಿರುವ ಕುಟುಂಬ ಪೊರೆಯಲು ಸಾಧ್ಯವಾಗಲಿಲ್ಲ. ಹಳ್ಳಿಗಳನ್ನು ಬಿಟ್ಟು ಕೆಲಸ ಹುಡುಕಿಕೊಂಡು ನಗರಗಳಿಗೆ ಹೋದ ಎಷ್ಟೋ ಜನರು ವಾಪಸ್ ಬರಲೇ ಇಲ್ಲ. ಇಂಥವರ ಕುಟುಂಬಗಳಲ್ಲಿದ್ದ ಮಕ್ಕಳ ಮೇಲೆ ಕಣ್ಣಿಟ್ಟ ತಾಲಿಬಾನ್, ಪುಸಲಾಯಿಸಿಯೋ ಅಥವಾ ಅಪಹರಿಸಿಯೋ ಅಂಥವರನ್ನು ತಮ್ಮೊಡನೆ ಕರೆದೊಯ್ದು ಉಗ್ರರನ್ನಾಗಿಸಿತು.

ಗೋಧಿ ಹೊಲದಲ್ಲಿ ಅಕ್ಕಡಿಯಂತೆ ಗಾಂಜಾ ಬೆಳೆಯುವುದು ಅಫ್ಘಾನಿಸ್ತಾನದಲ್ಲಿ ಸಾಮಾನ್ಯ ಎನಿಸಿದೆ. ಹೀಗೆ ಮಾಡುವಂತೆ ತಾಲಿಬಾನಿಗಳು ಒತ್ತಾಯಿಸುತ್ತಾರೆ. ಮಳೆ ಕೊರತೆಯಿಂದ ಧಾನ್ಯ ಕೈಗೆ ಸಿಗದಿದ್ದರೂ ಒಣಹವೆಯಲ್ಲಿಯೂ ಗಾಂಜಾ ಬೆಳೆ ಕೈಗೆ ಬರುತ್ತದೆ. ಗಾಂಜಾ ಮಾರಾಟಕ್ಕೆಂದು ರೂಪುಗೊಂಡಿರುವ ಪರ್ಯಾಯ ವ್ಯವಸ್ಥೆಗಳನ್ನು ನಿಯಂತ್ರಿಸುವ ತಾಲಿಬಾನಿಗಳು ತಮ್ಮ ಸಂಘಟನೆಗೆ ಅದನ್ನು ಪ್ರಮುಖ ಆದಾಯ ಮೂಲವಾಗಿಸಿಕೊಂಡಿದ್ದಾರೆ.

ಹಲವು ದೇಶಗಳಲ್ಲಿ ಇದೇ ಸಂಕಷ್ಟ
ಹವಾಮಾನ ವೈಪರಿತ್ಯ ಮತ್ತು ಭಯೋತ್ಪಾದನೆಯ ನಡುವೆ ನೇರ ಸಂಬಂಧವಿರುವುದು ಅಫ್ಘಾನಿಸ್ತಾನದಲ್ಲಿ ಮಾತ್ರವಲ್ಲ ಇತರ ದೇಶಗಳಲ್ಲಿಯೂ ನಿರೂಪಿತವಾಗಿದೆ. 2017ರಲ್ಲಿ ಮಧ್ಯ ಆಫ್ರಿಕಾ ಬರಗಾಲ ಅನುಭವಿಸುತ್ತಿದ್ದಾಗ ಅಲ್ಲಿನ ಪ್ರಮುಖ ನೀರಿನ ಮೂಲ ಎನಿಸಿದ ಛಾದ್ ಸರೋವರದ ಆಸುಪಾಸಿನಲ್ಲಿ ಹಿಡಿತ ಬಿಗಿಗೊಳಿಸಿತು. ಇರಾಕ್ ಮತ್ತು ಸಿರಿಯಾದ ರೈತರು ಅನುಭವಿಸುತ್ತಿದ್ದ ಸಂಕಷ್ಟವನ್ನು ಐಸಿಸ್ ಉಗ್ರರು ಬಳಸಿಕೊಂಡರು.

(Climate Change Agrarian Crisis Helped Taliban to Gain Power in Afghanistan)

ಇದನ್ನೂ ಓದಿ: ಅಫ್ಘಾನಿಸ್ತಾನದಲ್ಲಿ ಅಮೆರಿಕ ಬಿಟ್ಟುಹೋದ 200ಕ್ಕೂ ಹೆಚ್ಚು ವಿಮಾನ, ಹೆಲಿಕಾಪ್ಟರ್​ಗಳು ತಾಲಿಬಾನ್ ವಶಕ್ಕೆ

ಇದನ್ನೂ ಓದಿ: ಹುಡುಗ, ಹುಡುಗಿ ಒಟ್ಟಿಗೆ ಓದುವಂತಿಲ್ಲ; ಶಿಕ್ಷಕ, ಶಿಕ್ಷಕಿ ಒಂದೆಡೆ ಕೆಲಸ ಮಾಡುವಂತಿಲ್ಲ: ಶಿಕ್ಷಣ ಪದ್ಧತಿ ಬದಲಿಸಿ ಫತ್ವಾ ಹೊರಡಿಸಿದ ತಾಲಿಬಾನ್

Published On - 6:00 pm, Mon, 30 August 21