ಅಫ್ಘಾನಿಸ್ತಾನದಲ್ಲಿ ಅಮೆರಿಕ ಬಿಟ್ಟುಹೋದ 200ಕ್ಕೂ ಹೆಚ್ಚು ವಿಮಾನ, ಹೆಲಿಕಾಪ್ಟರ್ಗಳು ತಾಲಿಬಾನ್ ವಶಕ್ಕೆ
ಕಳೆದ 20 ವರ್ಷಗಳಿಂದ ಅಫ್ಘಾನಿಸ್ತಾನದಲ್ಲಿ ಬಳಸಿದ್ದ ಎಲ್ಲ ಯುದ್ಧೋಪಕರಣಗಳು ಮತ್ತು ವೈಮಾನಿಕ ವಾಹನಗಳನ್ನು ವಾಪಸ್ ಕೊಂಡೊಯ್ಯಲು ಅಮೆರಿಕಕ್ಕೆ ಸಾಧ್ಯವಾಗುತ್ತಿಲ್ಲ.
ಕಾಬೂಲ್: ಅಮೆರಿಕ ಸೇನೆಯು ಅಫ್ಘಾನಿಸ್ತಾನದಿಂದ ಹಿಂದೆ ಸರಿಯಲು ತಾಲಿಬಾನ್ ನೀಡಿರುವ ಗಡುವು ಇನ್ನೊಂದು ದಿನ ಮಾತ್ರ ಬಾಕಿಯಿದೆ. ಹೀಗಾಗಿ ಅಮೆರಿಕ ತರಾತುರಿಯಲ್ಲಿ ತನ್ನ ಸೈನಿಕರು ಮತ್ತು ಜನರನ್ನು ಹಿಂದಕ್ಕೆ ಕರೆಸಿಕೊಳ್ಳುತ್ತಿದೆ. ಕಳೆದ 20 ವರ್ಷಗಳಿಂದ ಅಫ್ಘಾನಿಸ್ತಾನದಲ್ಲಿ ಬಳಸಿದ್ದ ಎಲ್ಲ ಯುದ್ಧೋಪಕರಣಗಳು ಮತ್ತು ವೈಮಾನಿಕ ವಾಹನಗಳನ್ನು ವಾಪಸ್ ಕೊಂಡೊಯ್ಯಲು ಅಮೆರಿಕಕ್ಕೆ ಸಾಧ್ಯವಾಗುತ್ತಿಲ್ಲ. ಹೀಗಾಗಿ ಬೃಹತ್ ಪ್ರಮಾಣದ ಯುದ್ಧೋಪಕರಣಗಳು ಅಫ್ಘಾನಿಸ್ತಾನದ ತಾಲಿಬಾನಿಯರ ವಶಕ್ಕೆ ಸಿಕ್ಕಿವೆ.
ಕಾಬೂಲ್ ವಿಮಾನ ನಿಲ್ದಾಣದಲ್ಲಿ ಅಮೆರಿಕ ಬಿಟ್ಟು ಹೋಗಿರುವ ಸುಮಾರು 200 ವಿಮಾನ, ಹೆಲಿಕಾಪ್ಟರ್ಗಳು ಹಾಗೂ 85 ಶತಕೋಟಿ ಡಾಲರ್ ಮೌಲ್ಯದ ಯುದ್ಧೋಪಕರಣಗಳು ತಾಲಿಬಾನ್ ವಶಕ್ಕೆ ಬಂದಿವೆ ಎಂದು ಹೇಳಲಾಗಿದೆ. ತಾಲಿಬಾನ್ ಕೈಸೇರಿರುವ ಅತ್ಯಾಧುನಿಕ ಶಸ್ತ್ರಾಸ್ತ್ರಗಳ ಪೂರ್ಣ ವಿವರ ಇನ್ನೂ ಸಿಕ್ಕಿಲ್ಲ.
ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್ ತಾಲಿಬಾನ್ ಕೈವಶವಾಗಿ 15 ದಿನ ಕಳೆದರೂ ತಾಲಿಬಾನ್ ಸಂಘಟನೆಯ ಪರಮೋಚ್ಛ ನಾಯಕ ಹೇಬಿತುಲ್ಲಾ ಅಖುಂದಾಜಾ ಈವರೆಗೆ ಸಾರ್ವಜನಿಕವಾಗಿ ಕಾಣಿಸಿಕೊಂಡಿಲ್ಲ. ಹೇಬಿತುಲ್ಲಾ ಅಖುಂದಾಜಾ ಕಂದಹಾರ್ ನಗರದಲ್ಲಿದ್ದಾರೆ. ಶೀಘ್ರದಲ್ಲೇ ಸಾರ್ವಜನಿಕವಾಗಿ ಕಾಣಿಸಿಕೊಳ್ಳುತ್ತಾರೆ ಎಂದು ತಾಲಿಬಾನ್ ವಕ್ತಾರ ಹೇಳಿದ್ದಾನೆ.
ನಾಯಿ ಬೆಕ್ಕುಗಳು ಏರ್ಲಿಫ್ಟ್ ಅಫ್ಘಾನಿಸ್ತಾನದಲ್ಲಿದ್ದ ಬ್ರಿಟನ್ ನಾಗರಿಕ ಪೆನ್ ಫಾರ್ಥಿಂಗ್ ಸಾಕಿಕೊಂಡಿದ್ದ 170 ನಾಯಿ, ಬೆಕ್ಕುಗಳನ್ನು ಏರ್ಲಿಫ್ಟ್ ಮಾಡಲಾಗಿದೆ. ಏರ್ಲಿಫ್ಟ್ಗಾಗಿ ದೇಣಿಗೆ ಮೂಲಕ ಹಣ ಸಂಗ್ರಹಿಸಲಾಗಿತ್ತು. ಆಫ್ಘನ್‌ನಲ್ಲಿ ಬ್ರಿಟನ್ ಸೇನೆ ಯೋಧನಾಗಿದ್ದ ಫಾರ್ಥಿಂಗ್ಗೆ ನಾಯಿ-ಬೆಕ್ಕುಗಳ ಬಗ್ಗೆ ಪ್ರೀತಿಯಿತ್ತು.
ಬೈಡೆನ್ಗೆ ಅಫ್ಘಾನ್ ಭದ್ರತೆಯ ಮಾಹಿತಿ ಕಾಬೂಲ್ ವಿಮಾನ ನಿಲ್ದಾಣ ಭದ್ರತೆ ಕುರಿತು ಅಮೆರಿಕ ಅಧ್ಯಕ್ಷ ಜೋ ಬೈಡೆನ್ಗೆ ಅಮೆರಿಕ ರಾಷ್ಟ್ರೀಯ ಭದ್ರತಾ ಸಲಹೆಗಾರ ಜಾಕ್ ಸುಲೀವನ್ ಮಾಹಿತಿ ನೀಡಿದರು. ಅಮೆರಿಕ ಸೇನೆ ಮತ್ತು ನಾಗರಿಕರ ರಕ್ಷಣೆಗೆ ದುಪ್ಪಟ್ಟು ಶ್ರಮವಹಿಸಬೇಕು ಎಂದು ಅಧ್ಯಕ್ಷರು ಸೂಚಿಸಿದ್ದಾಗಿ, ಶ್ವೇತ ಭವನದ ಮಾಧ್ಯಮ ಪ್ರಕಟಣೆ ತಿಳಿಸಿದೆ.
(Taliban Got More than 200 Aerial Vehicles in Afghanistan Kabul Airport)
ಇದನ್ನೂ ಓದಿ: ತಾಲಿಬಾನ್ ಪ್ರತಿನಿಧಿಯನ್ನು ಸಂದರ್ಶನ ಮಾಡಿ, ಭೇಷ್ ಎನ್ನಿಸಿಕೊಂಡಿದ್ದ ಪತ್ರಕರ್ತೆ ಈಗ ದೇಶವನ್ನೇ ಬಿಟ್ಟು ಹೋದರು !
ಇದನ್ನೂ ಓದಿ: Tv9 Exclusive: ಭಾರತ, ಕಾಶ್ಮೀರದ ಬಗ್ಗೆ ನಮ್ಮ ನಿಲುವು ಸ್ಪಷ್ಟವಾಗಿದೆ: ತಾಲಿಬಾನ್ ವಕ್ತಾರ ಸುಹೇಲ್ ಶಾಹಿನ್ ಸಂದರ್ಶನ