ಹುಡುಗ, ಹುಡುಗಿ ಒಟ್ಟಿಗೆ ಓದುವಂತಿಲ್ಲ; ಶಿಕ್ಷಕ, ಶಿಕ್ಷಕಿ ಒಂದೆಡೆ ಕೆಲಸ ಮಾಡುವಂತಿಲ್ಲ: ಶಿಕ್ಷಣ ಪದ್ಧತಿ ಬದಲಿಸಿ ಫತ್ವಾ ಹೊರಡಿಸಿದ ತಾಲಿಬಾನ್
ಫತ್ವಾ ಹೊರಡಿಸುವ ಮೂಲಕ ತಾಲಿಬಾನಿಗಳು ತಮ್ಮ ಅಸಲಿ ಸ್ವರೂಪ ಬದಲಾಗಲಾರದು ಎಂಬುದನ್ನು ಸಾಬೀತುಪಡಿಸಿದ್ದಾರೆ. ಅಲ್ಲದೇ, ಹೆಣ್ಣು ಮಕ್ಕಳಿಗೆ ಪುರುಷ ಶಿಕ್ಷಕರು, ಗಂಡು ಮಕ್ಕಳಿಗೆ ಮಹಿಳಾ ಶಿಕ್ಷಕರು ಭೋದನೆ ಮಾಡುವಂತಿಲ್ಲ ಎಂಬ ಫತ್ವಾ ಕೂಡಾ ಹೊರಡಿಸಿದ್ದಾರೆ.
ಅಫ್ಘಾನಿಸ್ತಾನದಲ್ಲಿ ಪ್ರಜಾಪ್ರಭುತ್ವ ಸರ್ಕಾರವನ್ನು ಹತ್ತಿಕ್ಕಿ ದೇಶದ ಬಹುಭಾಗವನ್ನು ತಮ್ಮ ನಿಯಂತ್ರಣಕ್ಕೆ ತೆಗೆದುಕೊಂಡಿರುವ ತಾಲಿಬಾನಿಗಳು ಇದೀಗ ತಮಗೆ ಬೇಕಾದಂತಹ ಕಾನೂನು ರೂಪಿಸುವಲ್ಲಿ ನಿರತರಾಗಿದ್ದಾರೆ. ಬಹುಮುಖ್ಯವಾಗಿ ಸ್ತ್ರೀ ಸ್ವಾತಂತ್ರ್ಯದ ವಿಚಾರದಲ್ಲಿ ಕಟುವಾಗಿ ವರ್ತಿಸುವ ತಾಲಿಬಾನ್ ಸಂಘಟನೆ ಇದೀಗ ಸಹ ಶಿಕ್ಷಣ ಪದ್ಧತಿಗೆ ಅಡ್ಡಗಾಲು ಹಾಕಿದ್ದು, ಇನ್ನುಮುಂದೆ ಅಫ್ಘಾನಿಸ್ತಾನದಲ್ಲಿ ಗಂಡು ಮಕ್ಕಳು ಹಾಗೂ ಹೆಣ್ಣು ಮಕ್ಕಳು ಒಟ್ಟಿಗೆ ಓದುವಂತಿಲ್ಲ ಎಂದು ಫತ್ವಾ ಹೊರಡಿಸಿದೆ. ಹೆಣ್ಣು ಮಕ್ಕಳ ಹಕ್ಕುಗಳನ್ನು ಗೌರವಿಸುತ್ತೇವೆ ಎಂದು ಹೇಳಿದ ಕೆಲವೇ ಕೆಲವು ದಿನಗಳಲ್ಲಿ ಇಂಥದ್ದೊಂದು ಫತ್ವಾ ಹೊರಡಿಸುವ ಮೂಲಕ ತಾಲಿಬಾನಿಗಳು ತಮ್ಮ ಅಸಲಿ ಸ್ವರೂಪ ಬದಲಾಗಲಾರದು ಎಂಬುದನ್ನು ಸಾಬೀತುಪಡಿಸಿದ್ದಾರೆ. ಅಲ್ಲದೇ, ಹೆಣ್ಣು ಮಕ್ಕಳಿಗೆ ಪುರುಷ ಶಿಕ್ಷಕರು, ಗಂಡು ಮಕ್ಕಳಿಗೆ ಮಹಿಳಾ ಶಿಕ್ಷಕರು ಭೋದನೆ ಮಾಡುವಂತಿಲ್ಲ ಎಂಬ ಫತ್ವಾ ಕೂಡಾ ಹೊರಡಿಸಿದ್ದಾರೆ.
ತಾಲಿಬಾನ್ ನೇಮಿಸಿರುವ ನೂತನ ಉನ್ನತ ಶಿಕ್ಷಣ ಸಚಿವ ಶೇಕ್ ಅಬ್ದುಲ್ ಬಕೀ ಹಕ್ಕಾನಿ ಈ ಆದೇಶ ಹೊರಡಿಸಿದ್ದು, ಶರಿಯಾ ಕಾನೂನಿನ ಪ್ರಕಾರವೇ ಶಿಕ್ಷಣ ಪದ್ಧತಿ ಸಾಗಬೇಕು. ಸಹ ಶಿಕ್ಷಣ ಪದ್ಧತಿಗೆ ಇನ್ನುಮುಂದೆ ಅವಕಾಶವಿಲ್ಲ. ಪುರುಷ ಶಿಕ್ಷಕರು ಯಾವ ಕಾರಣಕ್ಕೂ ಹೆಣ್ಣು ಮಕ್ಕಳಿಗೆ ಪಾಠ ಮಾಡುವಂತಿಲ್ಲ. ಅಂತೆಯೇ, ಶಿಕ್ಷಕಿಯರು ಗಂಡು ಮಕ್ಕಳಿಗೆ ಪಾಠ ಮಾಡುವುದಕ್ಕೂ ಅನುಮತಿ ಇಲ್ಲ. ಗಂಡು ಮಕ್ಕಳ ಶಾಲೆಯಲ್ಲಿ ಕೇವಲ ಶಿಕ್ಷಕರು ಹಾಗೂ ಹೆಣ್ಣು ಮಕ್ಕಳ ಶಾಲೆಯಲ್ಲಿ ಕೇವಲ ಶಿಕ್ಷಕಿಯರು ಕಾರ್ಯ ನಿರ್ವಹಿಸಬೇಕು ಎಂದು ಹೇಳಿದ್ದಾರೆ.
Taliban officially announce ban on coeducation. “Men not allowed to teach girls,” Taliban Higher Education Minister says. — This will effectively deprive girls from higher education because universities cannot afford it nor there are enough human resources.#Afghanishtan
— Bashir Ahmad Gwakh (@bashirgwakh) August 29, 2021
ಆದರೆ, ಈ ನಿಯಮದ ಕುರಿತು ತರ್ಕಬದ್ಧ ವಿಶ್ಲೇಷಣೆ ನೀಡಿರುವ ಅಫ್ಘಾನಿಸ್ತಾನದ ಪತ್ರಕರ್ತ ಬಶೀರ್ ಅಹ್ಮದ್ ಗ್ವಾಕ್, ಈ ತೆರನಾದ ನಿಯಮವು ಹೆಣ್ಣು ಮಕ್ಕಳನ್ನು ಉನ್ನತ ಶಿಕ್ಷಣದಿಂದ ವಂಚಿತರನ್ನಾಗಿಸಲಿದೆ. ಇದು ಶಿಕ್ಷಣ ಪದ್ಧತಿಗೆ ದೊಡ್ಡ ಹಿನ್ನೆಡೆಯಾಗಲಿದೆ. ವಿಶ್ವವಿದ್ಯಾಲಯಗಳಲ್ಲಿ ಗಂಡು ಮಕ್ಕಳಿಗೆ ಹಾಗೂ ಹೆಣ್ಣು ಮಕ್ಕಳಿಗೆ ಪ್ರತ್ಯೇಕ ಶಿಕ್ಷಣ ಒದಗಿಸುವ ಸೌಕರ್ಯ ಇಲ್ಲ. ಮೇಲಾಗಿ ಅದಕ್ಕೆ ತಕ್ಕುದಾದ ಮಾನವ ಸಂಪನ್ಮೂಲವೂ ಲಭ್ಯವಿಲ್ಲ ಎಂದು ಹೇಳಿದ್ದಾರೆ.
ಆದರೆ, ಇಂತಹ ನಿಯಮಗಳಿಂದ ಆಗಬಹುದಾದ ತೊಂದರೆಗಳ ಬಗ್ಗೆ ಚಿಂತಿಸದ ತಾಲಿಬಾನ್, ಶರಿಯಾ ಕಾನೂನಿನಂತೆಯೇ ಶಿಕ್ಷಣ ಪದ್ಧತಿ ಸಾಗಬೇಕು ಎಂದು ಹೇಳಿಕೆ ನೀಡಿದೆ. ಕಳೆದ ವಾರ ವಿಶ್ವವಿದ್ಯಾಲಯಗಳ ವಿಚಾರದಲ್ಲಿ ಮೂಗು ತೂರಿಸಿದ್ದ ತಾಲಿಬಾನ್ ಸಹ ಶಿಕ್ಷಣ ಪದ್ಧತಿಯೇ ಸಮಾಜದ ಎಲ್ಲಾ ದುಷ್ಕೃತ್ಯಗಳಿಗೆ ಮೂಲ ಎಂದು ಹೇಳಿತ್ತು. ಇದೀಗ ತಾಲಿಬಾನಿಗಳ ಆದೇಶವನ್ನು ಪರಿಪಾಲಿಸಲೇಬೇಕಾದ ಅನಿವಾರ್ಯತೆಯಲ್ಲಿರುವ ಅಧಿಕಾರಿಗಳು ಕೂಡಾ ಇದಕ್ಕೆ ಪರ್ಯಾಯ ಮಾರ್ಗ ನಮ್ಮ ಮುಂದಿಲ್ಲ ಎಂದು ಅಸಹಾಯಕತೆಯನ್ನು ವ್ಯಕ್ತಪಡಿಸಿದ್ದಾರೆ.
During a speech at Loya Jirga Tent, the Taliban higher education minister Molvi Abdul Baqi Haqqani added that all ecuation activities to take according to Sharia Law.
Reference: Higher Education Ministry Page
https://t.co/t9Uo839QOc pic.twitter.com/OMtos3p5KE
— Bashir Ahmad Gwakh (@bashirgwakh) August 29, 2021
ಅಫ್ಘಾನಿಸ್ತಾನವನ್ನು ನಿಯಂತ್ರಣಕ್ಕೆ ತೆಗೆದುಕೊಂಡ ಮೇಲೆ ತಾಲಿಬಾನ್ ಸಂಘಟನೆ ಹೊರಡಿಸಿರುವ ಮೊದಲ ಫತ್ವಾ ಇದಾಗಿದ್ದು, ನೂತನ ಉನ್ನತ ಶಿಕ್ಷಣ ಸಚಿವ ಸ್ಥಾನಕ್ಕೆ ನೇಮಕಗೊಂಡ ಒಂದೇ ದಿನದಲ್ಲಿ ಶೇಕ್ ಅಬ್ದುಲ್ ಬಕೀ ಹಕ್ಕಾನಿ ಇದನ್ನು ಪ್ರಕಟಿಸಿದ್ದಾರೆ. ಆದರೆ, ಈ ಫತ್ವಾಕ್ಕೆ ಅಸಮಾಧಾನ ವ್ಯಕ್ತಪಡಿಸಿರುವ ಖಾಸಗಿ ಸಂಸ್ಥೆಗಳು ಈ ನಿಯಮ ಪರಿಪಾಲನೆಗೆ ಬೇಕಾದ ಮಾನವ ಸಂಪನ್ಮೂಲ ನಮ್ಮಲ್ಲಿ ಇಲ್ಲವೇ ಇಲ್ಲ ಎಂದು ಹೇಳಿಕೊಂಡಿವೆ.
ಇದನ್ನೂ ಓದಿ: Video: ಸುದ್ದಿ ಓದುತ್ತಿದ್ದ ನಿರೂಪಕನ ಹಿಂದೆ ಗನ್ ಹಿಡಿದು ನಿಂತ ತಾಲಿಬಾನಿಗಳು; ಆ ಒಂದು ಮಾತನ್ನು ಬಲವಂತಾಗಿ ಹೇಳಿಸಿದರು !
(Taliban Bans co education in Afghanistan Men not allowed to teach girls and Vice Versa Says Education Minister)