ಪಂಜ್​ಶೀರ್​ ಪ್ರಾಂತ್ಯದ ಮೇಲೆ ಬೇರೆ ಬೇರೆ ದಿಕ್ಕುಗಳಿಂದ ದಾಳಿ ಮಾಡಿದ ತಾಲಿಬಾನ್​; ತಿರುಗಿಬಿದ್ದು ಹಿಮ್ಮೆಟ್ಟಿಸಿದ ಉತ್ತರ ಮೈತ್ರಿ ಪಡೆ

| Updated By: Skanda

Updated on: Aug 31, 2021 | 8:27 AM

ಉತ್ತರ ಮೈತ್ರಿ ಪಡೆ ಹಾಗೂ ತಾಲಿಬಾನ್‌ ಉಗ್ರರ ಮಧ್ಯೆ ಘರ್ಷಣೆ ನಡೆದಿರುವ ಬಗ್ಗೆ ಪಂಜ್​ಶೀರ್​ ಪ್ರಾಂತ್ಯದ ಅಹಮದ್ ಮಸೂದ್ ಆಪ್ತ ಮೂಲಗಳು ಮಾಹಿತಿ ನೀಡಿವೆಯಾದರೂ ತಾಲಿಬಾನ್ ಇದುವರೆಗೂ ಪ್ರತಿಕ್ರಿಯೆ ನೀಡಿಲ್ಲ.

ಪಂಜ್​ಶೀರ್​ ಪ್ರಾಂತ್ಯದ ಮೇಲೆ ಬೇರೆ ಬೇರೆ ದಿಕ್ಕುಗಳಿಂದ ದಾಳಿ ಮಾಡಿದ ತಾಲಿಬಾನ್​; ತಿರುಗಿಬಿದ್ದು ಹಿಮ್ಮೆಟ್ಟಿಸಿದ ಉತ್ತರ ಮೈತ್ರಿ ಪಡೆ
ಸಾಂಕೇತಿಕ ಚಿತ್ರ
Follow us on

ಅಫ್ಘಾನಿಸ್ತಾನದ ಕಾಬೂಲ್​ ವಿಮಾನ ನಿಲ್ದಾಣವನ್ನು ಸಂಪೂರ್ಣ ಹತೋಟಿಗೆ ತೆಗೆದುಕೊಂಡಿರುವ ತಾಲಿಬಾನ್​ ಉಗ್ರರು ಈಗ ಪಂಜ್​ಶೀರ್​ ಪ್ರಾಂತ್ಯವನ್ನು ಸುಪರ್ದಿಗೆ ತೆಗೆದುಕೊಳ್ಳಲು ಮುಂದಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಆಫ್ಘನ್‌ನ ಪಂಜ್‌ಶೀರ್ ಪ್ರಾಂತ್ಯದ ಮೇಲೆ ತಾಲಿಬಾನ್ ದಾಳಿ ನಡೆಸಿದ್ದು, ಬೇರೆ ಬೇರೆ ದಿಕ್ಕುಗಳಿಂದ ಪಂಜ್‌ಶೀರ್ ಮೇಲೆ ಮುಗಿಬಿದ್ದಿದೆ. ಆದರೆ, ತಾಲಿಬಾನ್ ದಾಳಿಗೆ ಪ್ರತ್ಯುತ್ತರ ನೀಡಿರುವ ಉತ್ತರ ಮೈತ್ರಿ ಪಡೆಯು ಉಗ್ರರನ್ನು ಹಿಮ್ಮೆಟ್ಟಿಸಿದೆ ಎಂದು ಪಂಜ್‌ಶೀರ್‌ನ ಅಹ್ಮದ್ ಮಸೂದ್ ಆಪ್ತ ಮೂಲಗಳು ಮಾಹಿತಿ ನೀಡಿವೆ.

ಉತ್ತರ ಮೈತ್ರಿ ಪಡೆ ಹಾಗೂ ತಾಲಿಬಾನ್‌ ಉಗ್ರರ ಮಧ್ಯೆ ಘರ್ಷಣೆ ನಡೆದಿರುವ ಬಗ್ಗೆ ಪಂಜ್​ಶೀರ್​ ಪ್ರಾಂತ್ಯದ ಅಹಮದ್ ಮಸೂದ್ ಆಪ್ತ ಮೂಲಗಳು ಮಾಹಿತಿ ನೀಡಿವೆಯಾದರೂ ತಾಲಿಬಾನ್ ಇದುವರೆಗೂ ಪ್ರತಿಕ್ರಿಯೆ ನೀಡಿಲ್ಲ. ಘರ್ಷಣೆ ಬಗ್ಗೆ ಮೌನವಹಿಸಿರುವ ತಾಲಿಬಾನ್​ ಯಾವ ತಂತ್ರವನ್ನು ಹೆಣೆಯುತ್ತಿರಬಹುದು? ಎನ್ನುವುದು ಸದ್ಯ ಕುತೂಹಲಕ್ಕೆ ಕಾರಣವಾಗಿದೆ.

ಏತನ್ಮಧ್ಯೆ, ಅಫ್ಘಾನಿಸ್ತಾನದಿಂದ ಅಮೆರಿಕಾ ಸೇನೆ ಕೂಡಾ ಜಾಗ ಖಾಲಿ ಮಾಡಿದೆ. ತಾಲಿಬಾನ್​ ಉಗ್ರರು ನೀಡಿದ್ದ ಗಡುವಿಗಿಂತ 24 ತಾಸು ಮುಂಚಿತವಾಗಿ ಅಮೆರಿಕಾ ಸೇನೆ ಕಾಬೂಲ್ ಏರ್‌ಪೋರ್ಟ್‌ನಿಂದ ತೆರಳಿದ್ದು, ನಿನ್ನೆ ರಾತ್ರಿ ಅಮೆರಿಕದ 3 ವಿಮಾನಗಳಲ್ಲಿ ಯೋಧರನ್ನು ಶಿಫ್ಟ್ ಮಾಡಲಾಗಿದೆ. ಅಮೆರಿಕಾ ಸೇನೆ ಹೊರಡುತ್ತಿದ್ದಂತೆಯೇ ತಾಲಿಬಾನಿಗಳು ಕಾಬೂಲ್ ವಿಮಾನ ನಿಲ್ದಾಣವನ್ನು ತಮ್ಮ ವಶಕ್ಕೆ ಪಡೆದಿದ್ದು, ಗಾಳಿಯಲ್ಲಿ ಗುಂಡು ಹಾರಿಸಿ ಸಂಭ್ರಮಿಸಿದ್ದಾರೆ.

ಕಳೆದ 20 ವರ್ಷಗಳಿಂದ ಅಫ್ಘಾನಿಸ್ತಾನದಲ್ಲಿ ಬಳಸಿದ್ದ ಎಲ್ಲ ಯುದ್ಧೋಪಕರಣಗಳು ಮತ್ತು ವೈಮಾನಿಕ ವಾಹನಗಳನ್ನು ವಾಪಸ್ ಕೊಂಡೊಯ್ಯಲು ಅಮೆರಿಕಕ್ಕೆ ಸಾಧ್ಯವಾಗುತ್ತಿಲ್ಲ. ಹೀಗಾಗಿ ಬೃಹತ್ ಪ್ರಮಾಣದ ಯುದ್ಧೋಪಕರಣಗಳು ಅಫ್ಘಾನಿಸ್ತಾನದ ತಾಲಿಬಾನಿಯರ ವಶಕ್ಕೆ ಸಿಕ್ಕಿವೆ. ಕಾಬೂಲ್ ವಿಮಾನ ನಿಲ್ದಾಣದಲ್ಲಿ ಅಮೆರಿಕ ಬಿಟ್ಟು ಹೋಗಿರುವ ಸುಮಾರು 200 ವಿಮಾನ, ಹೆಲಿಕಾಪ್ಟರ್​ಗಳು ಹಾಗೂ 85 ಶತಕೋಟಿ ಡಾಲರ್ ಮೌಲ್ಯದ ಯುದ್ಧೋಪಕರಣಗಳು ತಾಲಿಬಾನ್ ವಶಕ್ಕೆ ಬಂದಿವೆ ಎಂದು ಹೇಳಲಾಗಿದೆ. ತಾಲಿಬಾನ್ ಕೈಸೇರಿರುವ ಅತ್ಯಾಧುನಿಕ ಶಸ್ತ್ರಾಸ್ತ್ರಗಳ ಪೂರ್ಣ ವಿವರ ಇನ್ನೂ ಸಿಕ್ಕಿಲ್ಲ.

ಇದನ್ನೂ ಓದಿ:
Panjshir: ತಾಲಿಬಾನಿಗಳಿರಲಿ, ವಿದೇಶಿಗರೇ ಬರಲಿ, ಪಂಜ್‌ಶೀರ್ ಪತರಗುಟ್ಟಿಲ್ಲ; ರಷ್ಯಾ ದಾಳಿಗೂ ತಲೆಬಾಗಿಲ್ಲ- ಆದರೆ ಮುಂದೆ ಹೇಳೋಕೆ ಆಗಲ್ಲ! 

Panjshir: ತಾಲಿಬಾನ್ ಪಾಲಿಗೆ ಈವರೆಗೆ ಸವಾಲಾಗಿಯೇ ಉಳಿದಿರುವ ಅಫ್ಘಾನಿಸ್ತಾನದ ಪ್ರತಿರೋಧದ ಕಣಿವೆ ಪಂಜ್​ಶೀರ್​

(Taliban trying to attack Panjshir while Panjshir northern alliance fought back with terrorists)