Panjshir: ತಾಲಿಬಾನ್ ಪಾಲಿಗೆ ಈವರೆಗೆ ಸವಾಲಾಗಿಯೇ ಉಳಿದಿರುವ ಅಫ್ಘಾನಿಸ್ತಾನದ ಪ್ರತಿರೋಧದ ಕಣಿವೆ ಪಂಜ್ಶೀರ್
ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ವಿರೋಧಿ ಬಣದ ಬಹುತೇಕ ಹೋರಾಟಗಾರರು ಪಂಜ್ಶೀರ್ಗೆ ಧಾವಿಸಿದ್ದು, ಪ್ರಬಲ ಪ್ರತಿರೋಧ ತೋರಲು ಸಜ್ಜಾಗಿದ್ದಾರೆ.
ಅಫ್ಘಾನಿಸ್ತಾನದ ಪಂಜ್ಶೀರ್ ಕಣಿವೆಯಲ್ಲಿ ನಿರ್ಣಾಯಕ ಯುದ್ಧಕ್ಕೆ ಭೂಮಿಕೆ ಸಿದ್ಧವಾಗಿದೆ. ಈ ಕಣಿವೆಯು ಈ ಹಿಂದೆ ಎಂದಿಗೂ ತಾಲಿಬಾನ್ ಅಧೀನಕ್ಕೆ ಬಂದಿರಲಿಲ್ಲ. ಇದೀಗ ಕಣಿವೆಗೆ ತಾಲಿಬಾನ್ ನೂರಾರು ಹೋರಾಟಗಾರರನ್ನು ರವಾನಿಸಿದೆ. ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ವಿರೋಧಿ ಬಣದ ಬಹುತೇಕ ಹೋರಾಟಗಾರರು ಪಂಜ್ಶೀರ್ಗೆ ಧಾವಿಸಿದ್ದು, ಪ್ರಬಲ ಪ್ರತಿರೋಧ ತೋರಲು ಸಜ್ಜಾಗಿದ್ದಾರೆ.
ಕಾಬೂಲ್ಗೆ 150 ಕಿಮೀ ವಾಯವ್ಯಕ್ಕಿರುವ ಪಂಜ್ಶೀರ್ನಲ್ಲಿ ಪದಚ್ಯುತ ಸರ್ಕಾರದ ಉಪಾಧ್ಯಕ್ಷ ಅಮರುಲ್ಲಾ ಸಲೇಹ್, ಮಾಜಿ ರಕ್ಷಣಾ ಸಚಿವ ಬಿಸ್ಮಿಲ್ಲಾ ಮೊಹಮದಿ ಮತ್ತು ನ್ಯಾಷನಲ್ ರೆಸಿಸ್ಟೆನ್ಸ್ ಫ್ರಂಟ್ನ ಅಹ್ಮದ್ ಮಸೂದ್ ಸೇರಿದಂತೆ ಹಲವು ಹಿರಿಯ ಸದಸ್ಯರು ನೆರೆದಿದ್ದಾರೆ.
ತಾಲಿಬಾನ್ ಎದುರು ತಲೆತಗ್ಗಿಸುವುದಿಲ್ಲ ಎಂದು ಸಲೇಹ್ ಈಗಾಗಲೇ ಪ್ರತಿಜ್ಞೆ ಮಾಡಿದ್ದಾರೆ. ಅಶ್ರಫ್ ಘನಿ ಅಫ್ಘಾನಿಸ್ತಾನ ತೊರೆದ ನಂತರ ತಮ್ಮನ್ನು ತಾವು ಅಫ್ಘಾನಿಸ್ತಾನದ ಹಂಗಾಮಿ ಅಧ್ಯಕ್ಷ ಎಂದು ಘೋಷಿಸಿಕೊಂಡಿದ್ದಾರೆ. ಪಂಜ್ಶೀರ್ ಕಡೆಗೆ ತಾಲಿಬಾನಿಗಳು ಯೋಧರನ್ನು ರವಾನಿಸುತ್ತಿದ್ದಾರೆ. ಆದರೆ ಅಂದರಾಬ್ ಕಣಿವೆಯಿಂದಲೇ ಅವರು ಹಿಮ್ಮೆಟ್ಟಬೇಕಾಯಿತು. ಸಲಾಂಗ್ ಹೆದ್ದಾರಿಯನ್ನೂ ರೆಸಿಸ್ಟೆನ್ಸ್ ಫ್ರಂಟ್ ಮುಚ್ಚಿದೆ. ಈ ಪ್ರದೇಶವನ್ನು ತಾಲಿಬಾನಿಗಳು ಗೆಲ್ಲಲು ಆಗುವುದಿಲ್ಲ ಎಂದು ಸಲೇಹ್ ಸೋಮವಾರ ಟ್ವೀಟ್ ಮಾಡಿದ್ದರು.
ಪಂಜ್ಶೀರ್ ಕಣಿವೆಯ ಇತಿಹಾಸ ಪಂಜ್ಶೀರ್ ಎಂದರೆ ಐದು ಸಿಂಹಗಳು ಎಂದರ್ಥ. ಈ ಹೆಸರೇಕೆ ಬಂತು ಎಂದು ಹುಡುಕಿದರೆ 10ನೇ ಶತಮಾನದ ಕೆಲ ಘಟನೆಗಳನ್ನು ಉಲ್ಲೇಖಿಸಬೇಕಾಗುತ್ತದೆ. ಐವರು ಸೋದರರು ಪ್ರವಾಹದ ನೀರನ್ನು ನಿಯಂತ್ರಿಸಲು ಜಲಾಶಯವೊಂದನ್ನು ನಿರ್ಮಿಸಿದರು. ಅಂದು ಅಫ್ಘಾನಿಸ್ತಾನದ ಸುಲ್ತಾನನಾಗಿ ಮೊಹಮದ್ ಘಜ್ನಿ ಆಳ್ವಿಕೆ ನಡೆಸುತ್ತಿದ್ದ. ಈ ಕಣಿವೆಯಲ್ಲಿರುವ 1.50 ಲಕ್ಷ ನಿವಾಸಿಗಳು ತಜಿಕ್ ಬುಡಕಟ್ಟಿಗೆ ಸೇರಿದವರು. ತಾಲಿಬಾನಿಗಳಲ್ಲಿ ಬಹುತೇಕರು ಪಷ್ತೂನ್ ಬುಡಕಟ್ಟಿಗೆ ಸೇರಿದವರೇ ಇದ್ದಾರೆ. ಹೀಗಾಗಿ ಸಾಂಸ್ಕೃತಿಕವಾಗಿಯೂ ಈ ಎರಡು ಸಮುದಾಯಗಳ ನಡುವೆ ತಾಕಲಾಟ ನಡೆಯುತ್ತಲೇ ಇದೆ. ಪಂಜ್ಶೀರ್ ಪ್ರಾಂತ್ಯದಲ್ಲಿಯೇ ಜನಿಸಿದ ಸಲೇಹ್ ಇಲ್ಲಿಯೇ ತರಬೇತಿ ಪಡೆದವರು.
ಇಲ್ಲಿ ಎಂದೂ ತಾಲಿಬಾನ್ ಗೆದ್ದಿಲ್ಲ ಪಂಜ್ಶೀರ್ ಪ್ರಾಂತ್ಯದಲ್ಲಿ ಎಂದಿಗೂ ತಾಲಿಬಾನ್ ಗೆಲುವು ಸಾಧಿಸಿಲ್ಲ. 1990ರ ದಶಕದಲ್ಲಿಯೂ ತಾಲಿಬಾನಿಗಳಿಗೆ ಪಂಜ್ಶೀರ್ ಕೈವಶವಾಗಿರಲಿಲ್ಲ. ಅದಕ್ಕೂ ಮೊದಲು ಸೊವಿಯತ್ ರಷ್ಯಾಗೂ ಇಲ್ಲಿ ಜಯ ಸಿಕ್ಕಿರಲಿಲ್ಲ.
ಇದಕ್ಕೆ ಮುಖ್ಯಕಾರಣ ಪಂಜ್ಶೀರ್ ಇರುವ ಭೌಗೋಳಿಕ ಪ್ರದೇಶ. ಹಿಂದುಖುಷ್ ಪರ್ವತಶ್ರೇಣಿಯಲ್ಲಿ ಹರಡಿಕೊಂಡಿರುವ ಪಂಜ್ಶೀರ್ ಕಣಿವೆಗೆ ಇರುವ ಏಕೈಕ ಪ್ರವೇಶ ಸಾಧ್ಯತೆ ಪಂಜ್ಶೀರ್ ನದಿ ರೂಪಿಸಿರುವ ಕಿರಿದಾದ ಹಾದಿಗಳು ಮಾತ್ರ. ಹೀಗಾಗಿಯೇ ಇದು ದಾಳಿಕೋರರಿಗೆ ಗೆಲ್ಲಲು ದುಸ್ಸಾಧ್ಯವಾಗಿರುವ ಮತ್ತು ರಕ್ಷಣೆ ಮಾಡಿಕೊಳ್ಳುವವರಿಗೆ ವರದಾನವಾಗಿರುವ ಪ್ರದೇಶ ಎನಿಸಿದೆ. ಈ ಕಣಿವೆಯು ಪಚ್ಚೆಗೂ ಪ್ರಸಿದ್ಧವಾಗಿದೆ. ಈ ಹಿಂದೆ ಇಲ್ಲಿನ ಪಚ್ಚೆಗಳನ್ನು ಮಾರಿಯೇ ಪ್ರತಿರೋಧ ಚಳವಳಿಯನ್ನು ಸಂಘಟಿಸಲಾಗುತ್ತಿತ್ತು.
1989ರಲ್ಲಿ ಸೋವಿಯತ್ ಸೇನೆ ಹಿಂದೆ ಸರಿದ ನಂತರ ಏನಾಯಿತು? ಸೋವಿಯತ್ ಸೇನೆಯು ಅಫ್ಘಾನಿಸ್ತಾನದಿಂದ ಹಿಂದೆ ಸರಿದ ನಂತರ ಸ್ಫೋಟಗೊಂಡ ಅಂತರ್ಯುದ್ಧದಲ್ಲಿ ತಾಲಿಬಾನ್ ಜಯಗಳಿಸಿತು. ಆದರೆ ಅಫ್ಘಾನಿಸ್ತಾನದಲ್ಲಿ ಮನೆಮಾತಾಗಿರುವ ಅಹ್ಮದ್ ಶಾ ಮಸೂದ್ ಪಂಜ್ಶೀರ್ ಕಣಿವೆಯನ್ನು ಸುಪರ್ದಿಗೆ ತೆಗೆದುಕೊಂಡು ಸುನ್ನಿ ಪಷ್ತೂನ್ ತಾಲಿಬಾನಿಗಳ ವಿರುದ್ಧ ಪ್ರಬಲ ಪ್ರತಿರೋಧ ಒಡ್ಡಿದರು. ಪಂಜ್ಶೀರ್ ಕಣಿವೆಯನ್ನು ತಮ್ಮ ಸುಪರ್ದಿಯಲ್ಲಿಯೇ ಉಳಿಸಿಕೊಳ್ಳಲು ಯಶಸ್ವಿಯಾದರು. ಚೀನಾ ಮತ್ತು ತಜಕಿಸ್ತಾನದ ಗಡಿ ಸೇರಿದಂತೆ ಈಶಾನ್ಯ ಅಫ್ಘಾನಿಸ್ತಾನದ ಬಹುತೇಕ ಪ್ರದೇಶಗಳನ್ನು ಮಸೂದ್ ರಕ್ಷಿಸಿದ್ದರು. 2001ರಲ್ಲಿ ಅಮೆರಿಕ ಮೇಲೆ ದಾಳಿ ನಡೆಯುವ ಕೆಲವೇ ದಿನಗಳಿಗೆ ಮೊದಲ ಅಲ್ಖೈದಾ ಉಗ್ರಗಾಮಿಗಳು ಮಸೂದ್ನನ್ನು ಕೊಂದು ಹಾಕಿದ್ದರು.
ಹೋರಾಟದ ಜವಾಬ್ದಾರಿ ವಹಿಸಿಕೊಂಡ ಮಗ ಅಹ್ಮದ್ ಶಾ ಮಸೂದ್ನ ಮಗ ಅಹ್ಮದ್ ಮಸೂದ್ ಇದೀಗ ತಾಲಿಬಾನ್ ವಿರೋಧಿ ಹೋರಾಟವನ್ನು ಮುನ್ನಡೆಸುತ್ತಿದ್ದಾನೆ. ಹಿಂದಿನ ಸರ್ಕಾರದ ಭಾಗವಾಗಿದ್ದ ಸಲೇಹ್ ಮತ್ತು ಇತರ ಹೋರಾಟಗಾರರು ಇದೀಗ ಅಹ್ಮದ್ ಮಸೂದ್ ಜೊತೆಗೆ ಕೈಜೋಡಿಸಿದ್ದಾರೆ. ಸಲೇಹ್ ಮಸೂದ್ನ ಆತ್ಮ ಮತ್ತು ಹಿರಿಮೆಗೆ ಎಂದಿಗೂ ಮೋಸ ಮಾಡುವುದಿಲ್ಲ ಎಂದು ಸಲೇಹ್ ಪ್ರತಿಜ್ಞೆ ಮಾಡಿದ್ದಾರೆ. ಮತ್ತೊಂದೆಡೆ ಪಂಜ್ಶೀರ್ ಕಣಿವೆಯನ್ನು ಈ ಬಾರಿ ಗೆದ್ದು ತೀರಲೇಬೇಕೆಂದು ತಾಲಿಬಾನ್ ಹಟಕ್ಕೆ ಬಿದ್ದಿದೆ. ಹೀಗಾಗಿಯೇ ಮುಂದಿನ ಬೆಳವಣಿಗೆಗಳು ಕುತೂಹಲ ಕೆರಳಿಸಿವೆ.
(Afghanistans valley of resistance Panjshir remains a challenge for Taliban till today)
ಇದನ್ನೂ ಓದಿ: ಮತ್ತೊಂದು ರಕ್ತಸಿಕ್ತ ಅಧ್ಯಾಯ: ತಾಲಿಬಾನ್ ವಿರೋಧಿಗಳ ಹಿಡಿತದಲ್ಲಿರುವ ಪಂಜ್ಶಿರ್ ಕಣಿವೆಯತ್ತ ಧಾವಿಸಿದ ಉಗ್ರರು
ಇದನ್ನೂ ಓದಿ: ಅಫ್ಘಾನ್ ಕ್ರಿಕೆಟರ್ ಜತೆ ಮದುವೆಗೆ ಸಿದ್ಧವಾಗಿದ್ದ ಬಿಗ್ ಬಾಸ್ ಸ್ಪರ್ಧಿ; ತಾಲಿಬಾನ್ ಭಯದಿಂದ ಸಂಬಂಧಕ್ಕೆ ಎಳ್ಳು-ನೀರು
Published On - 5:11 pm, Mon, 23 August 21