ವಾಷಿಂಗ್ಟನ್: ಕಾಬೂಲ್ ವಿಮಾನ ನಿಲ್ದಾಣದಿಂದ ಸೋಮವಾರ ಒಂದೇ ದಿನ 12,700 ಜನರನ್ನು ಅಮೆರಿಕ ಏರ್ಲಿಫ್ಟ್ ಮಾಡಿದೆ. 37 ಮಿಲಿಟರಿ ವಿಮಾನಗಳು ಕಾರ್ಯಾಚರಣೆ ನಡೆಸಿವೆ. ಅಮೆರಿಕ ಮಿತ್ರಪಡೆಗಳು 57 ವಿಮಾನಗಳ ಮೂಲಕ 8,900 ಮಂದಿಯನ್ನು ಸ್ಥಳಾಂತರಿಸಿದೆ. ಆಗಸ್ಟ್ 14ರಿಂದ ಈವರೆಗೆ ಒಟ್ಟು 63,900 ಮಂದಿಯನ್ನು ಸ್ಥಳಾಂತರಿಸಲಾಗಿದೆ ಎಂದು ಅಮೆರಿಕ ಶ್ವೇತ ಭವನದ ಅಧಿಕಾರಿಗಳು ಹೇಳಿದ್ದಾರೆ. ಕಾಬೂಲ್ನಿಂದ ಮಂಗಳವಾರ 6,273 ಮಂದಿಯನ್ನು ಸ್ಥಳಾಂತರಿಸಲಾಗಿದೆ ಎಂದು ಕಾಬೂಲ್ನಲ್ಲಿರುವ ಅಮೆರಿಕ ವಕ್ತಾರರು ತಿಳಿಸಿದ್ದಾರೆ.
ಅಫ್ಘಾನಿಸ್ತಾನದ ಮಹಿಳಾ ಹಕ್ಕು ಹೋರಾಟಗಾರ್ತಿ ಝಾರಿಫಾ ಘಫಾರಿ ತಮ್ಮ ಕುಟುಂಬದೊಂದಿಗೆ ಜರ್ಮನಿಗೆ ಪಲಾಯನ ಮಾಡಿದ್ದು, ಅಲ್ಲಿಯೇ ಅಶ್ರಯ ಪಡೆದಿದ್ದಾರೆ.
ಸ್ಥಳಾಂತರ ಬೇಡ: ತಾಲಿಬಾನ್
ಅಫ್ಘಾನಿಸ್ತಾನ ನಿವಾಸಿಗಳ ಸ್ಥಳಾಂತರಕ್ಕೆ ಅಮೆರಿಕ ಪ್ರೋತ್ಸಾಹಿಸಬಾರದು ಎಂದು ತಾಲಿಬಾನ್ ವಕ್ತಾರ ಜಬೀವುಲ್ಲಾ ಮುಜಾಹಿದ್ ಹೇಳಿದ್ದಾರೆ. ಪಂಜ್‌ಶಿರ್ ಪ್ರದೇಶದ ಸಮಸ್ಯೆಯನ್ನು ಶಾಂತಿಯುತವಾಗಿ ಪರಿಹರಿಸಿಕೊಳ್ಳಲು ತಾಲಿಬಾನ್ ಬದ್ಧವಾಗಿದೆ ಎಂದು ಹೇಳಿದ್ದಾರೆ.
ಪಂಜ್‌ಶಿರ್ ಪ್ರಾಂತ್ಯದಲ್ಲಿ ಮುಂದುವರಿದ ಹೋರಾಟ
ಅಫ್ಘಾನಿಸ್ತಾನದ ಪಂಜ್‌ಶಿರ್ ಪ್ರಾಂತ್ಯದಲ್ಲಿ ತಾಲಿಬಾನ್ ಮತ್ತು ನಾರ್ದರ್ನ್ ಅಲಯನ್ಸ್ ಮೈತ್ರಿಪಡೆಗಳ ನಡುವೆ ಗುಂಡಿನ ಚಕಮಕಿ ಮುಂದುವರಿದಿದೆ. ನೆರೆಯ ತಜಕಿಸ್ತಾನದಿಂದ ಹೆಲಿಕಾಪ್ಟರ್ಗಳಲ್ಲಿ ಹೋರಾಟಗಾರರು ಪಂಜ್ಶಿರ್ಗೆ ಬಂದಿದ್ದಾರೆ. ತಾಲಿಬಾನ್ ಉಗ್ರರು ಮತ್ತಷ್ಟು ಪಡೆಗಳನ್ನು ರವಾನಿಸಿದ್ದು ಹೋರಾಟ ತೀವ್ರವಾಗುತ್ತಿದೆ.
(America Evacuates 21600 people from Kabul helps coalition to evacuate their citizens)
ಇದನ್ನೂ ಓದಿ: ಅಫ್ಘಾನಿಸ್ತಾನದಲ್ಲಿ ಹಂಗಾಮಿ ಸರ್ಕಾರ ರಚಿಸಿದ ತಾಲಿಬಾನ್: ಆಹಾರ ಧಾನ್ಯದ ಬೆಲೆ ಏರಿಕೆ
ಇದನ್ನೂ ಓದಿ: ತಾಲಿಬಾನ್ ವಿರುದ್ಧ ಸೆಟೆದು ನಿಲ್ಲಲು ಹೆಲಿಕಾಪ್ಟರ್ ಸಮೇತ ಮರಳಿ ಬಂದ ಯೋಧರು; ಪಂಜ್ಶೀರ್ ಪ್ರಾಂತ್ಯಕ್ಕೆ ಆಗಮನ