ನಾಲ್ಕು ಕಾರ್ ಹಾಗೂ ಹೆಲಿಕಾಪ್ಟರ್​ನಲ್ಲಿ ಕೊಂಡೊಯ್ದ ಅಫ್ಘಾನಿಸ್ತಾನದ ಹಣವನ್ನು ಹಿಂತಿರುಗಿಸಿ: ಅಶ್ರಫ್ ಘನಿಗೆ ತಾಲಿಬಾನ್ ಎಚ್ಚರಿಕೆ

| Updated By: guruganesh bhat

Updated on: Aug 29, 2021 | 5:25 PM

ಅಫ್ಘಾನಿಸ್ತಾನ ಬಹುತೇಕ ತಾಲಿಬಾನಿಗಳ ಕೈವಶವಾಗುತ್ತಿದ್ದಂತೆ ಅಶ್ರಫ್ ಘನಿ ದೇಶ ತೊರೆದಿದ್ದರು.

ನಾಲ್ಕು ಕಾರ್ ಹಾಗೂ ಹೆಲಿಕಾಪ್ಟರ್​ನಲ್ಲಿ ಕೊಂಡೊಯ್ದ ಅಫ್ಘಾನಿಸ್ತಾನದ ಹಣವನ್ನು ಹಿಂತಿರುಗಿಸಿ: ಅಶ್ರಫ್ ಘನಿಗೆ ತಾಲಿಬಾನ್ ಎಚ್ಚರಿಕೆ
ಅಶ್ರಫ್​ ಘನಿ
Follow us on

ಕಾಬೂಲ್: ಅಫ್ಘಾನಿಸ್ತಾನದ ಮಾಜಿ ಅಧ್ಯಕ್ಷ ಅಶ್ರಫ್ ಘನಿ(Ashraf Ghani), ದೇಶ ಬಿಟ್ಟು ಹೋಗುವಾಗ ಕೊಂಡೊಯ್ದ ಹಣವನ್ನು ಹಿಂತಿರುಗಿಸಬೇಕು ಎಂದು ತಾಲಿಬಾನ್ ಎಚ್ಚರಿಕೆ ನೀಡಿದೆ. ಅಫ್ಘಾನಿಸ್ತಾನದ ಹಣವನ್ನು ಅಶ್ರಫ್ ಘನಿ ದೋಚಿಕೊಂಡು ಹೋಗಿದ್ದಾರೆ. ಆಫ್ಘಣ್ನರ ಹಣವನ್ನು ದೋಚಿರುವುದು ಅವರು ಮಾಡಿದ ಘನಘೋರ ತಪ್ಪು. ಅಅವರು ಹಣವನ್ನು ಹಿಂತಿರುಗಿಸಲಬೇಕು ಎಂದು ತಾಲಿಬಾನ್ ರಾಜಕೀಯ ವಕ್ತಾರ ಸುಹೈಲ್ ಶಾಹೀನ್ ಎಚ್ಚರಿಕೆ ನೀಡಿದ್ದಾರೆ. ಅಫ್ಘಾನಿಸ್ತಾನ ಬಹುತೇಕ ತಾಲಿಬಾನಿಗಳ ಕೈವಶವಾಗುತ್ತಿದ್ದಂತೆ ಅಶ್ರಫ್ ಘನಿ ದೇಶ ತೊರೆದಿದ್ದರು. ಅವರಿಗೆ ಯುಎಇ ಆಶ್ರಯ ನೀಡಿತ್ತು. ಅಫ್ಘಾನಿಸ್ತಾನದಲ್ಲಿ ರಕ್ತಪಾತ ಆಗದಂತೆ ತಡೆಯಲೆಂದು ವಿದೇಶಕ್ಕೆ ತೆರಳಿದ್ದಾಗಿ ಅಶ್ರಫ್ ಘನಿ ತಿಳಿಸಿದ್ದರು.

ಅಫ್ಘಾನಿಸ್ತಾನ್ ಮಾಜಿ ಅಧ್ಯಕ್ಷ ಅಶ್ರಫ್ ಘನಿ  ನಾಲ್ಕು ಕಾರ್ ಹಾಗೂ ಹೆಲಿಕಾಪ್ಟರ್ ತುಂಬಾ ಹಣದೊಂದಿಗೆ  ರಾಜಧಾನಿ ಕಾಬೂಲ್​ನ್ನು ತೊರೆದಿದ್ದಾರೆ ಎಂದು ಸುದ್ದಿಸಂಸ್ಥೆ ರಾಯ್ಟರ್ಸ್ ವರದಿ ಮಾಡಿತ್ತು. ರಷ್ಯಾದ ಸುದ್ದಿಸಂಸ್ಥೆ ಆರ್​ಐಎ ವರದಿಯನ್ನು ಉಲ್ಲೇಖಿಸಿ ರಾಯ್ಟರ್ಸ್ ಸುದ್ದಿ ಬಿತ್ತರಿಸಿದೆ. ಅಶ್ರಫ್ ಘನಿ, ನಾಲ್ಕು ಕಾರ್ ಮತ್ತು ಹೆಲಿಕಾಪ್ಟರ್ ತುಂಬಾ ಹಣ ಕೊಂಡೊಯ್ದ ನಂತರವೂ ಒಂದಷ್ಟು ಹಣ ಮಿಕ್ಕಿ ಅಲ್ಲೇ ಉಳಿಸಿ ಹೋಗಿದ್ದಾರೆ ಎಂದು ಹೇಳಲಾಗಿತ್ತು.

ನಾಲ್ಕು ಕಾರ್​ಗಳಲ್ಲಿ ಕೂಡ ಹಣ ತುಂಬಲಾಗಿತ್ತು. ಮತ್ತೊಂದಷ್ಟು ಹಣವನ್ನು ಅವರು ಹೆಲಿಕಾಪ್ಟರ್​ನಲ್ಲಿ ಕೂಡ ತುಂಬಿದ್ದರು. ಆದರೂ ಸಂಪೂರ್ಣ ತುಂಬಿಸಿಕೊಳ್ಳಲು ಆಗಲಿಲ್ಲ ಎಂದು ಕಾಬೂಲ್​ನಲ್ಲಿರುವ ರಷ್ಯಾದ ರಾಯಭಾರ ಕಚೇರಿಯ ವಕ್ತಾರ ನಿಕಿತ ಇಚೆಂಕೊ ಹೇಳಿರುವ ಬಗ್ಗೆ ಆರ್​ಐಎ ವರದಿ ಮಾಡಿತ್ತು.

ಸಹೋದರ ತಾಲಿಬಾನ್ ಜೊತೆ ಕೈ ಜೋಡಿಸಿದ
ಅಶ್ರಫ್ ಘನಿಯ ಸಹೋದರ ಹಷ್ಮತ್ ಘನಿ ತಾಲಿಬಾನ್ ಜೊತೆ ಕೈ ಜೋಡಿಸಿದ್ದಾರೆ. ವೃತ್ತಿಯಲ್ಲಿ ಉದ್ಯಮಿಯಾಗಿರುವ ಹಷ್ಮತ್ ಘನಿ, ತಾಲಿಬಾನ್ ಸಂಘಟನೆಯನ್ನು ಸ್ವೀಕರಿಸಬೇಕು ಎಂದು ಜಗತ್ತಿಗೆ ಸಲಹೆ ನೀಡಿದ್ದಾರೆ. ನಾನು ತಾಲಿಬಾನ್ ಅನ್ನು ಒಪ್ಪಿಕೊಂಡಿದ್ದೇನೆ ಆದರೆ, ಅದನ್ನು ಬೆಂಬಲಿಸುವುದಿಲ್ಲ ಎಂದು ಹೇಳಿದ್ದಾರೆ ಎನ್ನುವುದು ಗಮನಾರ್ಹ. ಅಂತೆಯೇ, ಸಂದರ್ಶನವೊಂದರಲ್ಲಿ ಮಾತನಾಡುವಾಗ, ತಾಲಿಬಾನ್ ಜತೆ ರಾಜಕೀಯ ಸಂಬಂಧವನ್ನು ಬೆಳೆಸುವುದು ಬಿಟ್ಟು ಭಾರತಕ್ಕೆ ಬೇರೆ ದಾರಿಯಿಲ್ಲ ಎಂದು ಹಷ್ಮತ್ ಘನಿ ಅಭಿಪ್ರಾಯಪಟ್ಟಿದ್ದಾರೆ.

ಜತೆಗೆ, ಅದೇ ಸಂದರ್ಭದಲ್ಲಿ ತನ್ನನ್ನು ತಾನು  ಕಾರ್ಯನಿರತ ಅಧ್ಯಕ್ಷನೆಂದು ಘೋಷಿಸಿಕೊಂಡ ಉಪಾಧ್ಯಕ್ಷ ಅಮರುಲ್ಲಾ ಸಲೇಹ್ ಅವರನ್ನು ಈಡಿಯಟ್ ಎಂದು ಸಂಭೋದಿಸಿರುವ ಅವರು, ಪ್ರಸ್ತುತ ಪಂಜಶೀರ್‌ನಲ್ಲಿ ತಾಲಿಬಾನಿಗಳನ್ನು ವಿರೋಧಿಸುವ ಒಕ್ಕೂಟಕ್ಕೆ ಅಮರುಲ್ಲಾ ಸಲೇಹ್ ಬೆಂಬಲ ನೀಡಿರುವುದು ಸರಿಯಲ್ಲ ಎಂದಿದ್ದಾರೆ. ಈಗ ಈ ಎಲ್ಲಾ ಬೆಳವಣಿಗೆಗಳ ನಂತರ ಅಶ್ರಫ್​ ಘನಿ ಅಫ್ಘಾನಿಸ್ತಾನಕ್ಕೆ ಮರಳಲಿದ್ದಾರೆ ಹಾಗೂ ತಾಲಿಬಾನ್​ ಸರ್ಕಾರದಲ್ಲಿ ಕೈಜೋಡಿಸಲಿದ್ದಾರೆ ಎಂಬ ಗುಸುಗುಸು ಹರಿದಾಡಲಾರಂಭಿಸಿರುವುದು ಕುತೂಹಲ ಮೂಡಿಸಿದೆ.

ಇದನ್ನೂ ಓದಿ: 

Afghanistan: 4 ಕಾರ್ ಮತ್ತು ಹೆಲಿಕಾಪ್ಟರ್​ನಲ್ಲಿ ಭರ್ತಿ ಹಣ ತುಂಬಿಕೊಂಡು ಅಶ್ರಫ್ ಘನಿ ದೇಶ ತೊರೆದಿದ್ದಾರೆ!

Tokyo Paralympics: ತಾಲಿಬಾನಿಗಳ ಕಣ್ತಪ್ಪಿಸಿ ಪ್ಯಾರಾಲಿಂಪಿಕ್ಸ್​ಗೆ ಹಾಜರಾದ ಅಫ್ಘಾನಿಸ್ತಾನದ ಇಬ್ಬರು ಸ್ಪರ್ಧಿಗಳು!

(Ashraf Ghani must return money Taliban Spokesperson warns)