ದೇಹ ಇಲ್ಲೇ ಮಣ್ಣಾದರೂ ಸೈ, ಅಫ್ಘಾನಿಸ್ತಾನವನ್ನು ಬಿಟ್ಟು ಹೋಗುವುದಿಲ್ಲ: ಹಂಗಾಮಿ ಅಧ್ಯಕ್ಷ ಅಮರುಲ್ಲಾ ಸಲೇಹ್

| Updated By: Skanda

Updated on: Aug 24, 2021 | 7:48 AM

ಅಂದ್ರಾಬ್ ಪ್ರಾಂತ್ಯದಲ್ಲಿ ಉಗ್ರರಿಂದ ಮನೆ ಮನೆ ಶೋಧವಾಗುತ್ತಿರುವ ಹೊತ್ತಿನಲ್ಲೇ ಆಫ್ಘನ್‌ನ ಮಾಜಿ ಉಪಾಧ್ಯಕ್ಷ, ಹಂಗಾಮಿ ಅಧ್ಯಕ್ಷ  ಅಮರುಲ್ಲಾ ಸಲೇಹ್​ ಟ್ವೀಟ್​ ಮಾಡಿ, ದೇವರಿಗೆ ಮಾತ್ರ ನನ್ನನ್ನು ಇಲ್ಲಿಂದ ತೆರವುಗೊಳಿಸಲು ಸಾಧ್ಯ. ಆದರೆ ನನ್ನ ದೇಹ ಈ ಮಣ್ಣಿನಲ್ಲಿ ಐಕ್ಯವಾಗುತ್ತೆ ಎಂದು ಹೇಳಿದ್ದಾರೆ.

ದೇಹ ಇಲ್ಲೇ ಮಣ್ಣಾದರೂ ಸೈ, ಅಫ್ಘಾನಿಸ್ತಾನವನ್ನು ಬಿಟ್ಟು ಹೋಗುವುದಿಲ್ಲ: ಹಂಗಾಮಿ ಅಧ್ಯಕ್ಷ ಅಮರುಲ್ಲಾ ಸಲೇಹ್
ಅಮರುಲ್ಲಾ ಸಲೇಹ್​
Follow us on

ಅಫ್ಘಾನಿಸ್ತಾನದಲ್ಲಿ ಪ್ರಾಬಲ್ಯ ಸಾಧಿಸಿರುವ ತಾಲಿಬಾನ್​ ಉಗ್ರರು ದಿನೇ ದಿನೇ ಅಟ್ಟಹಾಸ ಮೆರೆಯುತ್ತಿದ್ದು ಇದೀಗ ಆಫ್ಘನ್‌ನ ಅಂದ್ರಾಬ್ ಕಣಿವೆಗೆ ಅಗತ್ಯ ಸಾಮಗ್ರಿ ಪೂರೈಕೆಯನ್ನೇ ಬಂದ್ ಮಾಡಿದ್ದಾರೆ. ಅಂದ್ರಾಬ್ ಕಣಿವೆಗೆ ಆಹಾರ ಸಾಮಗ್ರಿ, ಇಂಧನ ಪೂರೈಕೆ ಸ್ಥಗಿತವಾಗಿದ್ದು ಅಲ್ಲಿನ ಪ್ರತಿ ಮನೆಯನ್ನೂ ಶೋಧಿಸುತ್ತಿರುವ ತಾಲಿಬಾನಿಗಳು ಮಕ್ಕಳು, ವೃದ್ಧರನ್ನು ಕಿಡ್ನ್ಯಾಪ್ ಮಾಡುತ್ತಿದ್ದಾರೆ. ಉಗ್ರರ ಭಯದಿಂದ ಸಾವಿರಾರು ಮಹಿಳೆಯರು, ಮಕ್ಕಳು ಬೆಟ್ಟಗುಡ್ಡಗಳತ್ತ ಓಡಿಹೋಗುತ್ತಿದ್ದು, ಜೀವ ಉಳಿಸಿಕೊಳ್ಳುವುದೇ ಹರಸಾಹಸವಾಗಿದೆ.

ಅಂದ್ರಾಬ್ ಪ್ರಾಂತ್ಯದಲ್ಲಿ ಉಗ್ರರಿಂದ ಮನೆ ಮನೆ ಶೋಧವಾಗುತ್ತಿರುವ ಹೊತ್ತಿನಲ್ಲೇ ಆಫ್ಘನ್‌ನ ಮಾಜಿ ಉಪಾಧ್ಯಕ್ಷ, ಹಂಗಾಮಿ ಅಧ್ಯಕ್ಷ  ಅಮರುಲ್ಲಾ ಸಲೇಹ್​ ಟ್ವೀಟ್​ ಮಾಡಿ, ದೇವರಿಗೆ ಮಾತ್ರ ನನ್ನನ್ನು ಇಲ್ಲಿಂದ ತೆರವುಗೊಳಿಸಲು ಸಾಧ್ಯ. ಆದರೆ ನನ್ನ ದೇಹ ಈ ಮಣ್ಣಿನಲ್ಲಿ ಐಕ್ಯವಾಗುತ್ತೆ ಎಂದು ಹೇಳಿದ್ದಾರೆ. ಅಫ್ಘಾನಿಸ್ತಾನ ಮತ್ತು ನಾನು ಒಂದೇ . ಇಲ್ಲಿಂದ ಹೊರದಬ್ಬಲು ಯಾರಿಂದಲೂ ಆಗದು, ನಾನು ಕೂಡಾ ಹೊರಗೆ ಹೋಗಲಾರೆ. ಈ ಮಣ್ಣಿನಲ್ಲೇ ನನ್ನ ದೇಹ ಮಣ್ಣಾಗಿ ಹೋಗಲಿ ಎನ್ನುವ ಮೂಲಕ ಉಗ್ರರಿಗೆ ಹೆದರುವುದಿಲ್ಲ ಎಂಬ ಸಂದೇಶ ರವಾನಿಸಿದ್ದಾರೆ. ಅಫ್ಘಾನಿಸ್ತಾನದ ಉಪಾಧ್ಯಕ್ಷರಾಗಿದ್ದ ಅಮರುಲ್ಲಾ ಸಲೇಹ್ ಕೆಲ ದಿನಗಳ ಹಿಂದಷ್ಟೇ ನಾನೀಗ ಅಮೆರಿಕಾದ ಹಂಗಾಮಿ ಅಧ್ಯಕ್ಷ ಎಂದು ಘೋಷಿಸಿಕೊಂಡಿದ್ದರು.

ಅಮೆರಿಕದ ಕೊನೆಯ ಸೈನಿಕ ಅಫ್ಘಾನ್ ನೆಲದಲ್ಲಿ ಇರುವವರೆಗೂ ಸರ್ಕಾರ ರಚಿಸುವುದಿಲ್ಲ: ತಾಲಿಬಾನ್
ಅಫ್ಘಾನಿಸ್ತಾನದಿಂದ ಅಮೆರಿಕ ಸೇನೆಯನ್ನು ಹಿಂದಕ್ಕೆ ಕರೆಸಿಕೊಳ್ಳುವ ಅವಧಿಯನ್ನು ವಿಸ್ತರಿಸಬೇಕು ಎಂಬ ಪ್ರಸ್ತಾವವನ್ನು ತಾಲಿಬಾನ್ ಸಾರಾಸಗಟಾಗಿ ತಿರಸ್ಕರಿಸಿದೆ. ಈ ನಡುವೆ ಕಾಬೂಲ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ದೇಶ ಬಿಟ್ಟು ಹೊರಗೆ ಹೋಗಲು ಬಯಸುವವರು ಕಿಕ್ಕಿರಿದು ತುಂಬಿದ್ದಾರೆ. ಹೇಗಾದರೂ ಸರಿ ತಾಲಿಬಾನ್ ಆಡಳಿತದಿಂದ ತಪ್ಪಿಸಿಕೊಳ್ಳಬೇಕು ಎಂದು ಸಾವಿರಾರು ಜನರು ಹಾತೊರೆಯುತ್ತಿದ್ದಾರೆ. ವಿದೇಶಿ ಪ್ರಜೆಗಳನ್ನು ಸ್ಥಳಾಂತರಿಸುವ ಪ್ರಕ್ರಿಯೆಯ ಉಸ್ತುವಾರಿ ನೋಡಿಕೊಳ್ಳಲು ಅಮೆರಿಕ ಸೇರಿದಂತೆ ಹಲವು ದೇಶಗಳು ಮತ್ತೆ ಸೇನೆಯನ್ನು ಕಳುಹಿಸಿಕೊಟ್ಟಿವೆ. ಅಮೆರಿಕ ಯೋಧರು ನೆಲೆ ನಿಲ್ಲುವ ಅವಧಿಯನ್ನು ಆಗಸ್ಟ್​ 31ರವರೆಗೂ ವಿಸ್ತರಿಸಬೇಕು ಎಂಬ ಒತ್ತಾಯವೂ ಪ್ರಬಲವಾಗುತ್ತಿದೆ.

ಆದರೆ ತಾಲಿಬಾನ್ ಈ ಪ್ರಸ್ತಾವವನ್ನು ಸಾರಾಸಗಟಾಗಿ ತಿರಸ್ಕರಿಸಿದೆ. ಈ ಕುರಿತು ಸ್ಕೈ ನ್ಯೂಸ್ ಸುದ್ದಿವಾಹಿನಿಗೆ ಪ್ರತಿಕ್ರಿಯಿಸಿರುವ ತಾಲಿಬಾನ್ ವಕ್ತಾರ ಸುಹೈಲ್ ಶಾಹೀನ್, ಒಪ್ಪಿತ ಅವಧಿಯಿಂದಾಚೆಗೂ ಅಫ್ಘಾನಿಸ್ತಾನದ ನೆಲದಲ್ಲಿ ಉಳಿಯುವುದನ್ನು ಸಹಿಸಲು ಆಗುವುದಿಲ್ಲ. ಇದು ಆಕ್ರಮಣವನ್ನು ಮುಂದುವರಿಸಿದಂತೆ ಎಂದು ಹೇಳಿದ್ದಾರೆ. ಜನರನ್ನು ಸ್ಥಳಾಂತರಿಸಲು ಅಮೆರಿಕ ಅಥವಾ ಬ್ರಿಟನ್​ಗೆ ಹೆಚ್ಚುವರಿ ಸಮಯ ಬೇಕು ಎಂದಾದರೆ ನಮ್ಮ ಉತ್ತರ ಇಲ್ಲ ಎಂದಾಗಿರುತ್ತದೆ. ನಿಗದಿತ ಅವಧಿಗಿಂತಲೂ ಹೆಚ್ಚು ಸಮಯ ಅವರು ಇಲ್ಲಿ ಉಳಿದರೆ ಅದರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ತಾಲಿಬಾನ್ ಎಚ್ಚರಿಸಿದೆ. ಅಮೆರಿಕದ ಕಟ್ಟಕಡೆಯ ಯೋಧ ಅಫ್ಘಾನಿಸ್ತಾನ ನೆಲದಿಂದ ಹೊರಗೆ ಹೋಗುವವರೆಗೂ ಹೊಸ ಸರ್ಕಾರದ ರೂಪುರೇಷೆಯನ್ನಾಗಲಿ, ಸಚಿವ ಸಂಪುಟವನ್ನಾಗಲಿ ರೂಪಿಸುವುದಿಲ್ಲ ಎಂದು ತಾಲಿಬಾನ್ ಮೂಲಗಳನ್ನು ಉಲ್ಲೇಖಿಸಿ ಎಎಫ್​ಪಿ ಸುದ್ದಿಸಂಸ್ಥೆ ವರದಿ ಮಾಡಿದೆ.

ಇದನ್ನೂ ಓದಿ:
ಆ. 31ರೊಳಗೆ ಅಫ್ಘಾನ್​ನಿಂದ ಸೇನೆ ಹಿಂಪಡೆಯದಿದ್ದರೆ ಅಪಾಯ ಎದುರಿಸಬೇಕಾದೀತು; ಅಮೆರಿಕಕ್ಕೆ ತಾಲಿಬಾನ್ ಎಚ್ಚರಿಕೆ 

Afghanistan: ತಾಲಿಬಾನಿಗಳಿಗೆ ತಲೆಬಾಗಲ್ಲ; ಈಗ ನಾನೇ ನಿಮ್ಮ ಅಧ್ಯಕ್ಷ: ಆಫ್ಘನ್ ಮೊದಲ ಉಪಾಧ್ಯಕ್ಷ ಅಮ್ರುಲ್ಲಾ ಸಲೇಹ್ ಘೋಷಣೆ

(Caretaker president Amrullah Saleh says he will not leave Afghanistan)

Published On - 7:48 am, Tue, 24 August 21