ಪಂಜ್​ಶಿರ್​ ಹೋರಾಟಕ್ಕೆ ತಜಕಿಸ್ತಾನ್ ಬೆಂಬಲ: ಮತ್ತೊಂದು ಮಜಲಿಗೆ ಅಫ್ಘಾನಿಸ್ತಾನ ಯುದ್ಧ

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Aug 23, 2021 | 9:51 PM

ಅಫ್ಘಾನಿಸ್ತಾನದೊಂದಿಗೆ ಗಡಿ ಹಂಚಿಕೊಂಡಿರುವ ತಜಕಿಸ್ತಾನದಿಂದಲೂ ಪಂಜ್​ಶಿರ್ ಪ್ರಾಂತ್ಯಕ್ಕೆ ಯುದ್ಧೋಪಕರಣಗಳು ಸೇರಿದಂತೆ ಅಗತ್ಯ ಸಾಮಗ್ರಿಗಳು ಪೂರೈಕೆಯಾಗುತ್ತಿವೆ.

ಪಂಜ್​ಶಿರ್​ ಹೋರಾಟಕ್ಕೆ ತಜಕಿಸ್ತಾನ್ ಬೆಂಬಲ: ಮತ್ತೊಂದು ಮಜಲಿಗೆ ಅಫ್ಘಾನಿಸ್ತಾನ ಯುದ್ಧ
ತಾಲಿಬಾನ್​ ವಿರೋಧಿ ಹೋರಾಟಕ್ಕೆಂದು ತಜಕಿಸ್ತಾನದಿಂದ ಬಂದಿರುವ ಅಫ್ಘಾನಿಸ್ತಾನ್ ಯೋಧರು
Follow us on

ಕಾಬೂಲ್: ಅಫ್ಘಾನಿಸ್ತಾನದ ಈಶಾನ್ಯಕ್ಕಿರುವ ಪಂಜ್​ಶಿರ್ ಪ್ರಾಂತ್ಯದಲ್ಲಿ ತಾಲಿಬಾನ್​ಗೆ ಮಸೂದ್ ನೇತೃತ್ವದ ನಾರ್ದರ್ನ್ ಅಲಯನ್ಸ್​ ಪಡೆಗಳಿಂದ ಪ್ರಬಲ ಪ್ರತಿರೋಧ ವ್ಯಕ್ತವಾಗಿದೆ. ಅಫ್ಘಾನಿಸ್ತಾನದಲ್ಲಿ ಈ ಹಿಂದೆ ಕಾರ್ಯನಿರ್ವಹಿಸುತ್ತಿದ್ದ ಸರ್ಕಾರಿ ಪಡೆಗಳು ಇದೀಗ ಪಂಜ್​ಶಿರ್​ನಲ್ಲಿ ಒಗ್ಗೂಡಿದ್ದು, ತಾಲಿಬಾನ್​ನೊಂದಿಗೆ ಪ್ರಬಲ ಹೋರಾಟ ನಡೆಸಲು ಸಜ್ಜಾಗಿವೆ. ಅಫ್ಘಾನಿಸ್ತಾನದೊಂದಿಗೆ ಗಡಿ ಹಂಚಿಕೊಂಡಿರುವ ತಜಕಿಸ್ತಾನದಿಂದಲೂ ಪಂಜ್​ಶಿರ್ ಪ್ರಾಂತ್ಯಕ್ಕೆ ಯುದ್ಧೋಪಕರಣಗಳು ಸೇರಿದಂತೆ ಅಗತ್ಯ ಸಾಮಗ್ರಿಗಳು ಪೂರೈಕೆಯಾಗುತ್ತಿವೆ.

ತಾಲಿಬಾನ್ ದಾಳಿಯ ವೇಳೆ ಅಫ್ಘಾನಿಸ್ತಾನದಿಂದ ತಜಕಿಸ್ತಾನಕ್ಕೆ ಪರಾರಿಯಾಗಿದ್ದ ಅಫ್ಘಾನಿಸ್ತಾನದ ಯೋಧರು
3 ಹೆಲಿಕಾಪ್ಟರ್‌ಗಳಲ್ಲಿ ಪಂಜ್​ಶಿರ್​ ಪ್ರದೇಶಕ್ಕೆ ಬಂದಿದ್ದಾರೆ. ತಾಲಿಬಾನಿಗಳಿಗೆ ಸೆಡ್ಡು ಹೊಡೆದು ನಿಂತಿರುವ ಪಂಜ್​ಶಿರ್ ಪ್ರಾಂತ್ಯದ ಶಕ್ತಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ.

ತಾಲಿಬಾನ್​ ಭಾನುವಾರ ರಾತ್ರಿ ಸಂಘಟಿಸಿದ್ದ ದಾಳಿಯನ್ನು ವಿಫಲಗೊಳಿಸಿದ್ದ ನಾರ್ದರ್ನ್ ಅಲಯನ್ಸ್​ ಹಲವು ವಿಡಿಯೊ ಮತ್ತು ಛಾಯಾಚಿತ್ರಗಳನ್ನು ಟ್ವೀಟ್ ಮಾಡಿದೆ. ಬೆನೊ ಜಿಲ್ಲೆಯ ತಾಲಿಬಾನ್ ಗವರ್ನರ್ ಮತ್ತು ಅವರ ಮೂವರು ಅಂಗರಕ್ಷಕರು ಸಂಘರ್ಷದಲ್ಲಿ ಮೃತಪಟ್ಟಿದ್ದಾರೆ ಎಂದು ತಿಳಿಸಿದೆ.

ತಾಲಿಬಾನ್ ಹೋರಾಟಗಾರರೊಂದಿಗೆ ಪಾಕಿಸ್ತಾನದ ಸೇನೆ ಮತ್ತು ನಾಗರಿಕರು ಇದ್ದಾರೆ ಎಂಬ ಆರೋಪಕ್ಕೆ ಪುಷ್ಟಿ ನೀಡುವ ಪುರಾವೆಗಳನ್ನೂ ನಾರ್ದರ್ನ್ ಅಲಯನ್ಸ್​ ಟ್ವೀಟ್ ಮಾಡಿದೆ. ‘ಪ್ರಿಯ ಪಾಕಿಸ್ತಾನೀಯರೇ ನಮ್ಮ ದೇಶಕ್ಕೆ ಬಂದರೆ ನಿಮ್ಮನ್ನು ನರಕಕ್ಕೆ ಕಳಿಸುತ್ತೇವೆ’ ಎಂದು ಅಫ್ಘಾನಿಸ್ತಾನದ ವಿದ್ಯಮಾನಗಳಲ್ಲಿ ಪದೇಪದೆ ಮೂಗು ತೂರಿಸುವ ಪಾಕಿಸ್ತಾನವನ್ನು ಎಚ್ಚರಿಸಿದೆ.

(Tajikistan support Northern Alliance in their fight against Taliban)

ಇದನ್ನೂ ಓದಿ: ತಾಲಿಬಾನ್​ಗೆ ಪಂಜ್​ಶಿರ್ ಪ್ರಾಂತ್ಯದ ಸವಾಲು: ಫಲಿತಾಂಶದ ಬಗ್ಗೆ ವಿಶ್ವ ಸಮುದಾಯದಲ್ಲಿ ಕುತೂಹಲ

ಇದನ್ನೂ ಓದಿ: ಮತ್ತೊಂದು ರಕ್ತಸಿಕ್ತ ಅಧ್ಯಾಯ: ತಾಲಿಬಾನ್ ವಿರೋಧಿಗಳ ಹಿಡಿತದಲ್ಲಿರುವ ಪಂಜ್​ಶಿರ್​ ಕಣಿವೆಯತ್ತ ಧಾವಿಸಿದ ಉಗ್ರರು

Published On - 9:45 pm, Mon, 23 August 21