ಕದನ ವಿರಾಮಕ್ಕೆ ಒಪ್ಪದ ತಾಲಿಬಾನಿಗಳು; ಪಂಜಶಿರ್​ ಗವರ್ನರ್​ ಕಚೇರಿ ಮೇಲೆ ಧ್ವಜಾರೋಹಣ

| Updated By: Lakshmi Hegde

Updated on: Sep 06, 2021 | 11:56 AM

ತಾಲಿಬಾನ್​ ಅದಾಗಲೇ ತಾವು ಪಂಜಶಿರ್ ಪ್ರಾಂತ್ಯವನ್ನು ಸಂಪೂರ್ಣವಾಗಿ ವಶಕ್ಕೆ ಪಡಿಸಿಕೊಂಡಿದ್ದೇವೆ ಎಂದು ಪ್ರತಿಪಾದಿಸಿದೆ. ಆದರೆ ಸ್ಥಳೀಯ ಹೋರಾಟಗಾರರು ಇದನ್ನು ಸುತಾರಾಂ ಒಪ್ಪುತ್ತಿಲ್ಲ.

ಕದನ ವಿರಾಮಕ್ಕೆ ಒಪ್ಪದ ತಾಲಿಬಾನಿಗಳು; ಪಂಜಶಿರ್​ ಗವರ್ನರ್​ ಕಚೇರಿ ಮೇಲೆ ಧ್ವಜಾರೋಹಣ
ಪಂಜಶಿರ್​ ಗವರ್ನರ್​ ಕಚೇರಿ ಮೇಲೆ ತಾಲಿಬಾನಿಗಳ ಧ್ವಜ
Follow us on

ಪಂಜಶಿರ್​ (Panjshir) ಪ್ರಾಂತ್ಯದ ಹೋರಾಟಗಾರರ ನ್ಯಾಶನಲ್​ ರೆಸಿಸ್ಟೆನ್ಸ್​ ಫ್ರಂಟ್​ ಆಫ್​ ಅಫ್ಘಾನಿಸ್ತಾನ (National Resistance Front Of Afghanistan)ಪಡೆ ನೀಡಿದ್ದ ಕದನ ವಿರಾಮ (Ceasefire) ಕರೆಯನ್ನು ತಾಲಿಬಾನ್​ ತಿರಸ್ಕರಿಸಿದೆ ಎಂದು ವರದಿಯಾಗಿದೆ. ಹೋರಾಟ ನಿಲ್ಲಿಸುವುದಿಲ್ಲ ಮತ್ತು ನಮ್ಮ ಸೈನ್ಯವನ್ನು ಪಂಜಶಿರ್​ ಕಣಿವೆಯಿಂದ ವಾಪಸ್​ ಪಡೆಯುವುದಿಲ್ಲ ಎಂದು ತಾಲಿಬಾನಿ (Taliban Terrorists)ಗಳು ಹೇಳಿದ್ದಾರೆ. ಪಂಜಶಿರ್​ ಉಳಿಸಿಕೊಳ್ಳುವ ಹೋರಾಟದಲ್ಲಿ ಎನ್​ಆರ್​ಎಫ್​ ಪಡೆ ನಿನ್ನೆ ರಾತ್ರಿ ವಕ್ತಾರ ಫಾಹಿಮ್​ ದಷ್ಟಿ ಸೇರಿ ಮೂವರು ಪ್ರಮುಖ ನಾಯಕರನ್ನು ಕಳೆದುಕೊಂಡಿದೆ. ಅದರ ಬೆನ್ನಲ್ಲೇ ಸಂಘಟನೆ ಮುಖ್ಯಸ್ಥ ಅಹ್ಮದ್ ಮಸೂದ್​ ಕದನ ವಿರಾಮಕ್ಕೆ ಕರೆ ನೀಡಿದ್ದರು. ಶಾಂತಿಯುತ ಮಾತುಕತೆಗೆ ನಾವು ಸಿದ್ಧರಿದ್ದೇವೆ, ತಾಲಿಬಾನ್​ ತನ್ನ ಸೈನಿಕರನ್ನು ಹಿಂಪಡೆದರೆ ನಾವೂ ಸುಮ್ಮನಾಗುತ್ತೇವೆ ಎಂದು ಹೇಳಿದ್ದರು.
ಆದರೆ ಅಹ್ಮದ್ ಮಸೂದ್​ ಮನವಿಯನ್ನು ತಾಲಿಬಾನಿಗಳು ಸಾರಾಸಗಾಟವಾಗಿ ತಿರಸ್ಕರಿಸಿದ್ದಾರೆ.

ನಾವು ನಮ್ಮ ಕಡೆಯಿಂದ ಶಾಂತಿ ಮಾತುಕತೆಗೆ ಮುಂದಾದಾಗ ಅಹ್ಮದ್​ ಮಸೂದ್​ ಅದನ್ನು ಒಪ್ಪದೆ, ಹೋರಾಟ ಮುಂದುವರಿಸಿದ್ದರು. ಈಗ ನಾವ್ಯಾಕೆ ಅವರ ಕದನ ವಿರಾಮ ಮನವಿ ಒಪ್ಪಬೇಕು. ನಮಗೆ ಅಹ್ಮದ್​ ಜತೆ ಮಾತನಾಡಲು ಏನೂ ಇಲ್ಲ ಎಂದು ತಾಲಿಬಾನಿಗಳು ಸ್ಪಷ್ಟಪಡಿಸಿದ್ದಾಗಿ ಅಲ್​ ಜಜೀರಾ ಮಾಧ್ಯಮ ವರದಿ ಮಾಡಿದೆ.

ಧ್ವಜ ಹಾರಿಸಿದ ತಾಲಿಬಾನಿಗಳು
ತಾಲಿಬಾನ್​ ಅದಾಗಲೇ ತಾವು ಪಂಜಶಿರ್ ಪ್ರಾಂತ್ಯವನ್ನು ಸಂಪೂರ್ಣವಾಗಿ ವಶಕ್ಕೆ ಪಡಿಸಿಕೊಂಡಿದ್ದೇವೆ ಎಂದು ಪ್ರತಿಪಾದಿಸಿದೆ. ಇನ್ನು ಯುದ್ಧ ಮಾಡುವುದೇನೂ ಇಲ್ಲ. ಪಂಜಶಿರ್​ ನಮ್ಮ ನಿಯಂತ್ರಣಕ್ಕೆ ಬಂದಿದೆ ಎಂದು ಹೇಳಿದ್ದಲ್ಲದೆ, ಪಂಜಶಿರ್ ಪ್ರಾಂತ್ಯದ ಗವರ್ನರ್ ಕಚೇರಿ ಮೇಲೆ ತಾಲಿಬಾನ್​ ಧ್ವಜ ಹಾರಿಸಿದ್ದಾಗಿ ಸ್ಥಳೀಯ ಅಸ್ವಾಕಾ ನ್ಯೂಸ್​ ವರದಿ ಮಾಡಿದೆ.  ಆದರೆ ತಾಲಿಬಾನಿಗಳ ಹೇಳಿಕೆಯನ್ನು ಸ್ಥಳೀಯ ಹೋರಾಟ ಪಡೆಗಳು ಅಲ್ಲಗಳೆದಿದ್ದವು. ಹಂಗಾಮಿ ಅಧ್ಯಕ್ಷ ಅಮರುಲ್ಲಾ ಸಾಲೇಹ್​ ಆಪ್ತವಲಯದ ಪ್ರತಿನಿಧಿಯೊಬ್ಬರು ಮಾತನಾಡಿ, ಪಂಜಶಿರ್​ ನಮ್ಮ ವಶದಲ್ಲೇ ಇದೆ. ಇಲ್ಲಿನ ಗುಡ್ಡಗಾಡುಗಳೆಲ್ಲ ನಮ್ಮ ಜನರೇ ಇದ್ದಾರೆ. ಆದರೆ ತಾಲಿಬಾನ್​ ಪಾಕಿಸ್ತಾನದ ಡ್ರೋನ್​ ನೆರವಿನಿಂದ ಬಾಂಬ್​ ದಾಳಿ ನಡೆಸುತ್ತಿದೆ ಎಂದು ಹೇಳಿದ್ದರು.

ಇದನ್ನೂ ಓದಿ: Bhabanipur bypoll ಭವಾನಿಪುರ ಉಪಚುನಾವಣೆಯಲ್ಲಿ ಮಮತಾ ಬ್ಯಾನರ್ಜಿ ಸ್ಪರ್ಧೆ; ಅಭ್ಯರ್ಥಿ ಆಯ್ಕೆಗೆ ಬಿಜೆಪಿ ಸಭೆ ನಾಳೆ

ಯೋಗಿ ಆದಿತ್ಯನಾಥ್​​ ವಿರುದ್ಧ ಮಾತನಾಡಿದ್ದ ಮಾಜಿ ರಾಜ್ಯಪಾಲ ಅಜೀಜ್​ ಖುರೇಷಿ ವಿರುದ್ಧ ದೇಶದ್ರೋಹ ಪ್ರಕರಣ ದಾಖಲು