ಮುಂದಿನ 3 ತಿಂಗಳೊಳಗೆ ಟಿಕ್‌ಟಾಕ್, ಪಬ್‌ಜಿ ನಿಷೇಧಿಸಲಿದೆ ತಾಲಿಬಾನ್: ವರದಿ

ಭದ್ರತಾ ವಲಯದ ಪ್ರತಿನಿಧಿಗಳು ಮತ್ತು ಷರಿಯಾ ಕಾನೂನು ಜಾರಿ ಆಡಳಿತದ ಪ್ರತಿನಿಧಿಯೊಂದಿಗಿನ ಸಭೆಯಲ್ಲಿ 90 ದಿನಗಳ ಅವಧಿಯಲ್ಲಿ ಅಫ್ಘಾನಿಸ್ತಾನದಲ್ಲಿ ಟಿಕ್‌ಟಾಕ್ ಮತ್ತು ಪಬ್‌ಜಿ ಅಪ್ಲಿಕೇಶನ್‌ಗಳನ್ನು ನಿಷೇಧಿಸಲು ನಿರ್ಧರಿಲಾಗಿದೆ...

ಮುಂದಿನ 3 ತಿಂಗಳೊಳಗೆ ಟಿಕ್‌ಟಾಕ್, ಪಬ್‌ಜಿ ನಿಷೇಧಿಸಲಿದೆ ತಾಲಿಬಾನ್: ವರದಿ
ಪ್ರಾತಿನಿಧಿಕ ಚಿತ್ರ
TV9kannada Web Team

| Edited By: Rashmi Kallakatta

Sep 19, 2022 | 1:03 PM

ಮುಂದಿನ 3 ತಿಂಗಳ ಅವಧಿಯಲ್ಲಿ ತಾಲಿಬಾನ್ (Taliban )ನೇತೃತ್ವದ ಸರ್ಕಾರ ಅಫ್ಘಾನಿಸ್ತಾನದಲ್ಲಿ (Afghanistan) ಟಿಕ್‌ಟಾಕ್ ಮತ್ತು ಪಬ್‌ಜಿ ಅಪ್ಲಿಕೇಶನ್‌ಗಳನ್ನು ನಿಷೇಧಿಸಲಿದೆ ಎಂದು ತಾಲಿಬಾನ್ ನೇತೃತ್ವದ ದೂರಸಂಪರ್ಕ ಇಲಾಖೆಯ ಪ್ರಕಟಣೆಯನ್ನು ಉಲ್ಲೇಖಿಸಿ ಮಾಧ್ಯಮಗಳು  ವರದಿ ಮಾಡಿವೆ. ಭದ್ರತಾ ವಲಯದ ಪ್ರತಿನಿಧಿಗಳು ಮತ್ತು ಷರಿಯಾ ಕಾನೂನು ಜಾರಿ ಆಡಳಿತದ ಪ್ರತಿನಿಧಿಯೊಂದಿಗಿನ ಸಭೆಯಲ್ಲಿ 90 ದಿನಗಳ ಅವಧಿಯಲ್ಲಿ ಅಫ್ಘಾನಿಸ್ತಾನದಲ್ಲಿ ಟಿಕ್‌ಟಾಕ್ ಮತ್ತು ಪಬ್‌ಜಿ ಅಪ್ಲಿಕೇಶನ್‌ಗಳನ್ನು ನಿಷೇಧಿಸಲು ನಿರ್ಧರಿಲಾಗಿದೆ ಎಂದು ಖಾಮಾ ಪ್ರೆಸ್ ವರದಿ ಮಾಡಿದೆ. ಟಿಕ್‌ಟಾಕ್ ಮತ್ತು ಪಬ್‌ಜಿ ಅನ್ನು ಕ್ರಮವಾಗಿ ಒಂದು ತಿಂಗಳೊಳಗೆ ಮತ್ತು ಮುಂದಿನ 90 ದಿನಗಳಲ್ಲಿ ನಿಷೇಧಿಸಲಾಗುವುದು ಎಂದು ಖಾಮಾ ಪ್ರೆಸ್ ವರದಿ ಮಾಡಿದೆ. ಅಫ್ಘಾನಿಸ್ತಾನದ ದೂರಸಂಪರ್ಕ ಮತ್ತು ಇಂಟರ್ನೆಟ್ ಸೇವಾ ಪೂರೈಕೆದಾರರು ನಿಷೇಧದ ಬಗ್ಗೆ ಮಾಹಿತಿ ನೀಡಿದ್ದು ನಿಗದಿತ ಸಮಯದೊಳಗೆ ಮಾರ್ಗಸೂಚಿಗಳನ್ನು ಅನುಸರಿಸಲು ಕೇಳಲಾಗಿದೆ. ಇದಕ್ಕೂ ಮೊದಲು ತಾಲಿಬಾನ್ ನೇತೃತ್ವದ ಅಫ್ಘಾನಿಸ್ತಾನದ ಮಧ್ಯಂತರ ಸರ್ಕಾರವು ದೇಶದಲ್ಲಿ ತಾಲಿಬಾನ್ ಅಧಿಕಾರವನ್ನು ವಹಿಸಿಕೊಂಡ ನಂತರದ ವರ್ಷದಲ್ಲಿ ಅನೈತಿಕ ವಿಷಯವನ್ನು ಪ್ರದರ್ಶಿಸಿದ 23 ಮಿಲಿಯನ್‌ಗಿಂತಲೂ ಹೆಚ್ಚು ವೆಬ್‌ಸೈಟ್‌ಗಳನ್ನು ನಿರ್ಬಂಧಿಸಿದೆ ಎಂದು ತಾಲಿಬಾನ್ ಆಡಳಿತದ ಸಂವಹನ ಸಚಿವ ನಜಿಬುಲ್ಲಾ ಹಕ್ಕಾನಿ ಹೇಳಿದ್ದಾರೆ.

ನಾವು 23.4 ಮಿಲಿಯನ್ ವೆಬ್‌ಸೈಟ್‌ಗಳನ್ನು ನಿರ್ಬಂಧಿಸಿದ್ದೇವೆ. ಅವರು ಪ್ರತಿ ಬಾರಿಯೂ ತಮ್ಮ ಪುಟಗಳನ್ನು ಬದಲಾಯಿಸುತ್ತಿದ್ದಾರೆ. ಆದ್ದರಿಂದ ನೀವು ಒಂದು ವೆಬ್‌ಸೈಟ್ ಅನ್ನು ನಿರ್ಬಂಧಿಸಿದಾಗ ಇನ್ನೊಂದು ವೆಬ್‌ಸೈಟ್ ಸಕ್ರಿಯವಾಗಿರುತ್ತದೆ ಎಂದು ಹಂಗಾಮಿ ಸಚಿವ ನಜಿಬುಲ್ಲಾ ಹಕ್ಕಾನಿ ಸಮ್ಮೇಳನದಲ್ಲಿ ಹೇಳಿರುವುದಾಗಿ TOLOnews ಉಲ್ಲೇಖಿಸಿದೆ.

ಅದೇ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಧ್ಯಂತರ ಸರ್ಕಾರದ ಉಪ ಸಂಪರ್ಕ ಸಚಿವ ಅಹ್ಮದ್ ಮಸೂದ್ ಲತೀಫ್ ರೈ ಅವರು ಕಂಟೆಂಟ್ ಮಾಡರೇಶನ್‌ನಲ್ಲಿ ತಾಲಿಬಾನ್ ಅಧಿಕಾರಿಗಳೊಂದಿಗೆ ಸಹಕರಿಸಲು ಫೇಸ್‌ಬುಕ್ ಹಿಂಜರಿಯುತ್ತಿದೆ ಎಂದು ಟೀಕಿಸಿದರು.

ಯುಎಸ್ ಬೆಂಬಲಿತ ಸರ್ಕಾರದ ಪತನದ ನಂತರ ಮತ್ತು ದೇಶದಿಂದ  ಅಮೆರಿಕ ಪಡೆಗಳನ್ನು ಹಿಂತೆಗೆದುಕೊಂಡ ನಂತರ, ಕಳೆದ ವರ್ಷ ಆಗಸ್ಟ್ 15 ರಂದು ತಾಲಿಬಾನ್ ನೇತೃತ್ವದ ಮಧ್ಯಂತರ ಅಫ್ಘಾನ್ ಸರ್ಕಾರ ಅಧಿಕಾರಕ್ಕೆ ಬಂದಿತು. ತಾಲಿಬಾನ್ ಸ್ವಾಧೀನವು ಇಲ್ಲಿ  ಆರ್ಥಿಕ ಬಿಕ್ಕಟ್ಟನ್ನು ಉಂಟುಮಾಡಿದ್ದು, ಆಹಾರದ ಕೊರತೆಯು ದೇಶವನ್ನು ಮಾನವೀಯ ಬಿಕ್ಕಟ್ಟಿನ ಅಂಚಿಗೆ ತಳ್ಳಿತು. ಸಾವಿರಾರು ಆಫ್ಘನ್ನರು ತಾಲಿಬಾನ್ ಸರ್ಕಾರದ ಮಾನವ ಹಕ್ಕುಗಳ ವ್ಯಾಪಕ ಉಲ್ಲಂಘನೆ ಮತ್ತು ಮಹಿಳೆಯರು ಮತ್ತು ಹುಡುಗಿಯರ ಸ್ವಾತಂತ್ರ್ಯದ ಹರಣಕ್ಕೆ ಹೆದರಿ ದೇಶವನ್ನು ತೊರೆದಿದ್ದಾರೆ.

ಯುಎನ್ಎಎಂಎ (UNAMA) ಪ್ರಕಾರ, ದೇಶದ ಮಾಧ್ಯಮ ಕ್ಷೇತ್ರದಲ್ಲಿ ಗಮನಾರ್ಹ ಬದಲಾವಣೆಗಳಿವೆ, ಇದರಲ್ಲಿ ಅರ್ಧಕ್ಕಿಂತ ಹೆಚ್ಚು ಮುಕ್ತ ಮಾಧ್ಯಮಗಳನ್ನು ಮುಚ್ಚಲಾಗಿದೆ. ಹಲವಾರು ಚಾನೆಲ್‌ಗಳು ಮತ್ತು ವೆಬ್‌ಸೈಟ್‌ಗಳ ಮೇಲಿನ ನಿಷೇಧ ಮತ್ತು ಕೆಲಸದ ನಿರ್ಬಂಧಗಳು, ಹಿಂಸಾಚಾರ ಮತ್ತು ಪತ್ರಕರ್ತರ ವಿರುದ್ಧ ಬೆದರಿಕೆಗಳು ಹೆಚ್ಚಿವೆ. ಮೇ ತಿಂಗಳಲ್ಲಿ, ಮಹಿಳಾ ಪ್ರತಿಭಟನೆ ಮಾಡಿ ವರದಿ ಮಾಡುವಾಗ, ಪತ್ರಕರ್ತ ರೋಮನ್ ಕರಿಮಿ ಮತ್ತು ಅವರ ಚಾಲಕನನ್ನು ಬಂಧಿಸಿ ತಾಲಿಬಾನ್ ಚಿತ್ರಹಿಂಸೆ ನೀಡಿತ್ತು.

ತಾಲಿಬಾನ್ ಅಧಿಕಾರಕ್ಕೆ ಬಂದ ನಂತರ 45 ಪ್ರತಿಶತದಷ್ಟು ಪತ್ರಕರ್ತರು ಕೆಲಸ ತೊರೆದಿದ್ದಾರೆ. ಅಫ್ಘಾನಿಸ್ತಾನದಲ್ಲಿ ಮಾಧ್ಯಮದ ವಿರುದ್ಧ ನಿರಂತರವಾಗಿ ಹೆಚ್ಚುತ್ತಿರುವ ನಿರ್ಬಂಧಗಳು ವಿಶ್ವಸಂಸ್ಥೆ (UN) ಮತ್ತು ಪತ್ರಕರ್ತರನ್ನು ರಕ್ಷಿಸುವ ಸಮಿತಿ (CPJ) ಬಂಧನಗಳನ್ನು ಖಂಡಿಸುವುದರೊಂದಿಗೆ ಜಾಗತಿಕವಾಗಿ ವ್ಯಾಪಕ ಟೀಕೆಗೆ ಗುರಿಯಾಗಿವೆ, ಭಯೋತ್ಪಾದಕ ಸಂಘಟನೆಯು ಸ್ಥಳೀಯ ಪತ್ರಕರ್ತರಿಗೆ ಕಿರುಕುಳ ನೀಡುವುದನ್ನು ನಿಲ್ಲಿಸಲು ಮತ್ತು ವಾಕ್ ಸ್ವಾತಂತ್ರ್ಯವನ್ನು ಮುಂದುವರೆಸಲು ಸಿಪಿಜೆ ಹೇಳಿದೆ.

ಆಗಸ್ಟ್‌ನಲ್ಲಿ ಸ್ವಾಧೀನಪಡಿಸಿಕೊಂಡ ನಂತರ ಮೊದಲಬಾರಿ ಸುದ್ದಿಗೋಷ್ಠಿ ನಡೆಸಿದ ತಾಲಿಬಾನ್, ಮಹಿಳಾ ಹಕ್ಕುಗಳು, ಮಾಧ್ಯಮ ಸ್ವಾತಂತ್ರ್ಯ ಮತ್ತು ಸರ್ಕಾರಿ ಅಧಿಕಾರಿಗಳಿಗೆ ಕೆಲಸ ಮಾಡಲು ಅವಕಾಶ ನೀಡುವಭರವಸೆ ನೀಡಿತ್ತು. ಆದಾಗ್ಯೂ, ಕಾರ್ಯಕರ್ತರು, ಮಾಜಿ ಸರ್ಕಾರಿ ನೌಕರರು ಮತ್ತು ಇತರ ಪತ್ರಕರ್ತರು ಪ್ರತೀಕಾರವನ್ನು ಎದುರಿಸುತ್ತಲೇ ಇದ್ದಾರೆ.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada