ತಾಲಿಬಾನ್ ಕೈವಶದಲ್ಲಿರುವ ಅಫ್ಘಾನಿಸ್ತಾನದಲ್ಲೀಗ ಐಸಿಸ್ ಕೆ ಉಗ್ರರ ಅಟ್ಟಹಾಸವೂ ಶುರುವಾಗಿದ್ದು, ಪರಿಸ್ಥಿತಿ ವಿಕೋಪಕ್ಕೆ ಹೋಗಿದೆ. ಒಂದೆಡೆ ತಾಲಿಬಾನಿಗಳಿಗೆ ಹೆದರಿ ಜನರು ದೇಶ ತೊರೆಯುತ್ತಿದ್ದರೆ ಇನ್ನೊಂದೆಡೆ ತಾಲಿಬಾನಿಗಳಿಗೇ ಬೆದರಿಸುವ ಮಟ್ಟದಲ್ಲಿ ಐಸಿಸ್ ಕೆ ಉಗ್ರರು ದಾಂಧಲೆ ನಡೆಸುತ್ತಿದ್ದಾರೆ. ಈ ಅವಾಂತರಗಳ ನಡುವೆಯೇ ಇನ್ನೊಂದು ವಿನಾಶಕಾರಿ ಹೆಜ್ಜೆ ಇಡಲು ಮುಂದಾಗಿರುವ ತಾಲಿಬಾನ್, ಅಫ್ಘಾನಿಸ್ತಾನದ ಸೈನಿಕರಿಗೆ ಸೇನೆಯ ವಾಹನ, ಶಸ್ತ್ರಾಸ್ತ್ರ, ಮದ್ದುಗುಂಡು ಹಸ್ತಾಂತರಿಸಲು ಸೂಚನೆ ನೀಡಿದೆ. ಅದಕ್ಕಾಗಿ ಒಂದು ವಾರದ ಗಡುವನ್ನೂ ನೀಡಿದ್ದು ಅಷ್ಟರಲ್ಲಿ ಹಸ್ತಾಂತರ ಮಾಡದಿದ್ದರೆ ಕಠಿಣ ಶಿಕ್ಷೆ ವಿಧಿಸುವುದಾಗಿ ಎಚ್ಚರಿಕೆಯನ್ನೂ ನೀಡಿದೆ.
ತಾಲಿಬಾನಿಗಳ ಈ ಎಚ್ಚರಿಕೆಯ ನಡುವೆಯೂ ಪಂಜ್‌ಶೀರ್ ಪ್ರಾಂತ್ಯಕ್ಕೆ ಆಫ್ಘನ್ ಸೇನೆಯ ವಾಹನ ಆಗಮಿಸಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಸೈನಿಕರೂ ಜಮಾಯಿಸುತ್ತಿದ್ದಾರೆ. ಒಂದುವೇಳೆ ವಾಹನ, ಶಸ್ತ್ರಾಸ್ತ್ರ, ಮದ್ದುಗುಂಡುಗಳನ್ನ ಹಸ್ತಾಂತರಿಸದೇ ಇದ್ದಲ್ಲಿ ಕಠಿಣ ಶಿಕ್ಷೆ ಎದುರಿಸಬೇಕಾಗುತ್ತದೆ ಎಂದು ತಾಲಿಬಾನ್ ಹೇಳಿದ ನಂತರವೂ ಸೈನಿಕರು ಯುದ್ಧೋನ್ಮಾದರಾಗಿ ಸೇರುತ್ತಿರುವುದು ಉಗ್ರರ ವಿರುದ್ಧ ಸೇನೆ ಸೆಟೆದು ನಿಲ್ಲುವ ಮುನ್ಸೂಚನೆಯನ್ನು ನೀಡುತ್ತಿದೆ.
ಇತ್ತ ತಾಲಿಬಾನ್, ಐಸಿಸ್ ಟ್ಟಹಾಸದ ನಡುವೆ ಅಫ್ಫನಿಸ್ತಾನದಲ್ಲಿ ಸಾಮಾನ್ಯ ಜನರ ಬದುಕು ದುರ್ಬರವಾಗಿದ್ದು, ಊಟಕ್ಕೂ ದುಡ್ಡಿಲ್ಲದೇ ಪರದಾಡುತ್ತಿದ್ದಾರೆ. ಊಟಕ್ಕಾಗಿ, ಜೀವ ಉಳಿಸಿಕೊಳ್ಳುವುದಕ್ಕಾಗಿ ಮನೆಯ ಸಾಮಗ್ರಿಗಳನ್ನು ಮಾರುತ್ತಿರುವ ಜನರು ರಸ್ತೆಯಲ್ಲಿ ಮನೆಯ ಪಾತ್ರೆ, ಪಗಡಗಳನ್ನು ಇಟ್ಟು ಮಾರಾಟ ಮಾಡುತ್ತಿದ್ದಾರೆ. ಅಲ್ಲದೇ, ಬ್ಯಾಂಕ್ನಿಂದ ಹಣ ಕೂಡ ವಾಪಸ್ ಸಿಗದ ಹಿನ್ನೆಲೆ ಜೀವ ಭಯದ ನಡುವೆಯೇ ಸರತಿ ಸಾಲಿನಲ್ಲಿ ನಿಲ್ಲಬೇಕಾದ ಅನಿವಾರ್ಯತೆಗೆ ಸಿಲುಕಿದ್ದಾರೆ.
ಆಫ್ಘನ್ ರಾಜಧಾನಿ ಕಾಬೂಲ್ನಲ್ಲಿ ಆತ್ಮಾಹುತಿ ದಾಳಿಯಲ್ಲಿ ಮೃತಪಟ್ಟವರ ಸಂಖ್ಯೆಯೂ ಏರುಗತಿಯಲ್ಲಿ ಸಾಗುತ್ತಿದ್ದು, ಗಂಭೀರವಾಗಿ ಗಾಯಗೊಂಡವರು ಚಿಕಿತ್ಸೆ ಫಲಕಾರಿಯಾಗದೇವ ಕೊನೆಯುಸಿರೆಳೆಯುತ್ತಿದ್ದಾರೆ. ಮೃತರ ಸಂಖ್ಯೆ 170ಕ್ಕೆ ಏರಿಕೆಯಾಗಿದ್ದು, ಗಾಯಗೊಂಡ 200ಕ್ಕೂ ಹೆಚ್ಚು ಜನರು ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಸದರಿ ಸ್ಫೋಟದಲ್ಲಿ ಅಮೆರಿಕಾ ಸೇನೆಯ ಯೋಧರು ಕೂಡಾ ದುರ್ಮರಣಕ್ಕೀಡಾಗಿದ್ದರಿಂದ ಕೋಪಗೊಂಡಿದ್ದ ಅಮೆರಿಕಾ ದಾಳಿ ನಡೆದ ಕೆಲವೇ ಕ್ಷಣಗಳಲ್ಲಿ ಉಗ್ರರಿಗೆ ಕಠಿಣ ಸಂದೇಶ ರವಾನಿಸಿತ್ತು. ಅದರಂತೆ ಇಂದು ಬೆಳಗ್ಗೆ ಉಗ್ರರ ಅಡಗುತಾಣಗಳ ಮೇಲೆ ಡ್ರೋನ್ ಮೂಲಕ ಏರ್ಸ್ಟ್ರೈಕ್ ದಾಳಿ ನಡೆಸಿದೆ. ದಾಳಿಯಲ್ಲಿ ಹಲವು ಉಗ್ರರು ಹತರಾಗಿದ್ದಾರೆ ಎಂದು ಅಮೆರಿಕಾ ಹೇಳಿಕೊಂಡಿದೆಯಾದರೂ ನಿಖರ ಅಂಕಿ ಅಂಶ ಲಭ್ಯವಾಗಿಲ್ಲ. ಆದರೆ, ದಾಳಿಗೆ ಸಾಕ್ಷಿಯೆಂಬಂತೆ ಅಮೆರಿಕಾದ ಡ್ರೋನ್ ವಿಡಿಯೋ ಬಿಡುಗಡೆಯಾಗಿದ್ದು, GBU-8 ಶಸ್ತ್ರಾಸ್ತ್ರ ಹೊಂದಿರುವ US MQ-9 REAPER ಡ್ರೋನ್ ಆಕಾಶಕ್ಕೆ ಹಾರುವ ಸಂದರ್ಭದ ವಿಡಿಯೋ ಲಭ್ಯವಾಗಿದೆ. ಮಾನವ ರಹಿತ ಹೈಟೆಕ್ ಡ್ರೋನ್ ಬಳಸಿ ಐಎಸ್ಐಎಸ್ ಖೋರಾಸನ ಉಗ್ರರ ಮೇಲೆ ದಾಳಿ ನಡೆಸಿರುವುದಾಗಿ ಅಮೆರಿಕಾ ಹೇಳಿಕೊಂಡಿದೆ.
ಇದನ್ನೂ ಓದಿ:
ಸೇಡು ತೀರಿಸಿಕೊಂಡ ಅಮೆರಿಕಾ; ಐಸಿಎಸ್ ಉಗ್ರರ ಮೇಲೆ ಡ್ರೋನ್ ಮೂಲಕ ಏರ್ಸ್ಟ್ರೈಕ್ ದಾಳಿ, ಹತರಾದವರ ಸಂಖ್ಯೆ ಅಲಭ್ಯ
ತಾಲಿಬಾನ್ ಭಯಕ್ಕೆ ಎಲ್ಲರೂ ದೇಶ ಬಿಡುತ್ತಿದ್ದರೆ ತಾಲಿಬಾನಿಗಳಿಗೆ ಈಗ ಐಸಿಸ್ ಭೀತಿ ಶುರು
(Taliban warns Afghan military forces to Handover weapons and military vehicles with in a week)