Updated on:Aug 28, 2021 | 5:58 PM
ಹಲವರ ಪಾಲಿಗೆ ಅದು ಸ್ಮಶಾನಗಳ ಮೇಲೆ ಕಟ್ಟಿದ ಸಾಮ್ರಾಜ್ಯ ಅಫ್ಘಾನಿಸ್ತಾನ. ಆದರೆ ಅಲ್ಲಿನ ಖನಿಜ ಸಂಪತ್ತಿನ ಬಗ್ಗೆ ಪಟ್ಟಿ ಮಾಡುತ್ತಾ ಹೋದರೆ ಬೆರಗಾಗುವ ಮಟ್ಟಿಗೆ ಬೆಳೆಯುತ್ತಾ ಹೋಗುತ್ತದೆ. ಈಗ ಹೇಳ ಹೊರಟಿರುವುದು ರಕ್ತಪಿಪಾಸುಗಳ ಕೈಲಿ ಸಿಕ್ಕು ನರಳುತ್ತಿರುವ ಅದೇ ಅಫ್ಘಾನಿಸ್ತಾನದ ಬಗ್ಗೆ. ಭೂಮಿ ಆಳದ ಅಲ್ಲಿನ ಖನಿಜಗಳು ಮತ್ತು ಲಿಥಿಯಂನಿಂದಾಗಿ ಅತ್ಯಾಧುನಿಕ ತಂತ್ರಜ್ಞಾನ ಹೊಂದಿದ ದೇಶಗಳ ಗಮನ ಅತ್ತ ಸೆಳೆಯುವಂತೆ ಮಾಡುತ್ತಿದೆ ಅನ್ನೋದು ಸದ್ಯದ ಮಾತು. ಆದರೆ ಹಲವರು ಹೇಳುತ್ತಿರುವಂತೆ ಖನಿಜ ಭಾಂಡಾರದ ಆರ್ಥಿಕತೆ ಸುತ್ತಲೂ ಹಬ್ಬಿ ನಿಂತಿರುವ ಅಫ್ಘಾನಿಸ್ತಾನದ ಇಂದಿನ ಸನ್ನಿವೇಶವು ಅಂದುಕೊಂಡಷ್ಟು ಸರಳವಾಗಿಲ್ಲ ಹಾಗೂ ಅರ್ಥ ಮಾಡಿಕೊಳ್ಳುವಷ್ಟು ಸುಲಭವಾಗಿಯೂ ಇಲ್ಲ. ಅದನ್ನೇ ಎಷ್ಟು ಸಾಧ್ಯವೋ ಅಷ್ಟು ಸರಳವಾಗಿ ವಿವರಿಸಲು ಇಲ್ಲಿ ಪ್ರಯತ್ನಿಸಲಾಗುತ್ತಿದೆ.
ಆರಂಭದಲ್ಲೇ ಪ್ರಸ್ತಾವ ಮಾಡಿದಂತೆ ಅಫ್ಘಾನಿಸ್ತಾನವು ಗಮನ ಸೆಳೆಯುತ್ತಿರುವುದು ಅಗಾಧ ಖನಿಜ ಸಂಪತ್ತಿನ ಕಾರಣಕ್ಕೆ. ಈ ದೇಶವು ಇರುವುದೇ ಟೆಥ್ಯಾನ್ ಮೆಟಲರ್ಜಿಕ್ ಬೆಲ್ಟ್ (TMB) ಮೇಲೆ. ಅದು ಯುರೋಪ್ನಿಂದ ಶುರುವಾಗಿ ಟರ್ಕಿ, ಅಫ್ಘಾನಿಸ್ತಾನ ಮತ್ತು ಇರಾನ್ ತನಕ ವ್ಯಾಪಿಸಿದೆ. ತಜ್ಞರು ಹೇಳುವಂತೆ, ವಿಶ್ವದಲ್ಲೇ ಅತಿ ಹೆಚ್ಚಿನ ಪ್ರಮಾಣದ ಲೋಹಗಳು ಮತ್ತು ಖನಿಜಗಳು ಇರುವಂಥ ಪ್ರದೇಶಗಳಿವು. ಲಿಥಿಯಂ, ಚಿನ್ನ, ಕಬ್ಬಿಣ, ತಾಮ್ರ ಮತ್ತು ರತ್ನಗಳಿಂದ ಕೂಡಿವೆ. ಅದರಲ್ಲೂ ಗ್ರಾಹಕ ತಂತ್ರಜ್ಞಾನ ಉತ್ಪನ್ನಗಳು, ಅತ್ಯುತ್ತಮ ಬ್ಯಾಟರಿ, ಆಧುನಿಕ ಮಿಲಿಟರಿ ಹಾರ್ಡ್ವೇರ್ ಹಾಗೂ ಅತ್ಯಾಧುನಿಕ ಕಂಪ್ಯೂಟರ್ ಚಿಪ್ಸೆಟ್ಗಳನ್ನು ತಯಾರಿಸಲು ಬೇಕಾದ ಅತಿ ವಿರಳ ಲೋಹವು ಅಫ್ಘಾನಿಸ್ತಾನದ ಭೂಮಿಯೊಳಗಿರುವುದರಿಂದ ಜಾಗತಿಕ ಆರ್ಥಿಕ ಕೇಂದ್ರವಾಗಿ ಗಮನ ಸೆಳೆಯುತ್ತಿದೆ. ಅಷ್ಟೇ ಅಲ್ಲ, ಇದರ ಜತೆಗೆ ತೈಲ, ನೈಸರ್ಗಿಕ ಅನಿಲ, ಯುರೇನಿಯಂ, ಬಾಕ್ಸೈಟ್, ಕಲ್ಲಿದ್ದಲು, ವಿರಳ ಧಾತುಗಳು, ಕ್ರೋಮಿಯಂ, ಲೀಡ್, ಝಿಂಕ್, ಟಾಲ್ಕ್, ಸಲ್ಫರ್, ಟ್ರಾವಂಟೈನ್, ಜಿಪ್ಸಂ, ಮಾರ್ಬಲ್ ಇವೆಲ್ಲವೂ ದೊರೆಯುತ್ತವೆ.
ಯಾವ ತಜ್ಞರು ಇವುಗಳ ಇರುವಿಕೆಯ ಅಂದಾಜು ಪ್ರಮಾಣ ಮಾಡಿದ್ದಾರೋ ಅವರೇ ಅದರ ಮೌಲ್ಯವನ್ನೂ ಅಳತೆಗೋಲಿನಲ್ಲಿ ತಿಳಿಸಿದ್ದಾರೆ. ಆ ಪ್ರಕಾರ ಹೇಳುವುದಾದರೆ, ಕನಿಷ್ಠ 1 ಲಕ್ಷ ಕೋಟಿ ಅಮೆರಿಕನ್ ಡಾಲರ್ ಆಗುತ್ತದೆ. ಭಾರತದ ರೂಪಾಯಿಗಳಲ್ಲಿ ಇಂದಿನ ಲೆಕ್ಕಕ್ಕೆ 73.50 ಲಕ್ಷ ಕೋಟಿ ರೂಪಾಯಿ ಆಗುತ್ತದೆ. ನಿಮಗೆ ಗೊತ್ತಿರಲಿ, ಅಫ್ಘಾನಿಸ್ತಾನದ ಬಜೆಟ್ ಗಾತ್ರವೇ 45 ಸಾವಿರ ಕೋಟಿ ರೂಪಾಯಿ. ಈಗ ಅಲ್ಲಿರುವ ಖನಿಜ ಸಂಪತ್ತನ್ನು ಸ್ವಲ್ಪ ಬುದ್ಧಿವಂತಿಕೆಯಿಂದ ಬಳಸಿದರೂ ಒಟ್ಟಾರೆ ಪ್ರಮಾಣದ ಶೇ 10ರಷ್ಟು ಮೊತ್ತ ಕೂಡ ದೇಶವನ್ನು ಒಂದು ಹಂತಕ್ಕೆ ನೆಮ್ಮದಿಯಾಗಿ ಇಡಬಲ್ಲದು. ಇನ್ನು ಅಫ್ಘಾನಿಸ್ತಾನದಲ್ಲಿ ಇರುವುದು ವಿಶ್ವದಲ್ಲೇ ಅತಿ ದೊಡ್ಡ ಲಿಥಿಯಂ ನಿಕ್ಷೇಪ. ಈ ಬಗ್ಗೆ ಪ್ರಶ್ನೆಗಳು ಇವೆಯಾದರೂ 2010ರಲ್ಲಿ ಒಮ್ಮೆ ಮೌಲ್ಯ ಮಾಡಿದಾಗ ಹುಬ್ಬೇರುವಂತೆ ಆಗಿತ್ತು.
2010ರಲ್ಲಿ ಇನ್ನೊಂದು ಅಂದಾಜು ಮಾಡಲಾಗಿತ್ತು. ಆಗಿನ ಗಣಿಗಾರಿಕೆ ಸಚಿವರು ಹೇಳಿದ್ದ ಅಂದಾಜಿನಂತೆ, ಅಫ್ಘಾನಿಸ್ತಾನದ ಖನಿಜ ಸಂಪತ್ತಿನ ಮೌಲ್ಯ ಅವತ್ತಿಗೆ 3 ಲಕ್ಷ ಕೋಟಿ ಅಮೆರಿಕನ್ ಡಾಲರ್. ಒಂದು ವೇಳೆ ಆಗಿನ ಸಂಖ್ಯೆ ನಿಜ ಎಂದಾದರೆ ಜಾಗತಿಕ ಆರ್ಥಿಕ ಸ್ಥಿತಿ ಚೇತರಿಕೆ ಕಂಡ ಮೇಲೆ ಆ ಮೌಲ್ಯ ಮತ್ತೂ ಹೆಚ್ಚಾಗುತ್ತದೆ. ಈಗ ಹೇಳಿದ್ದೆಲ್ಲ ಕಾಗದದ ಮೇಲಿನ ಲೆಕ್ಕಾಚಾರ ಆಯಿತು. ಆದರೆ ಅವುಗಳನ್ನು ಭೂಮಿಯಿಂದ ಹೊರತೆಗೆಯುವುದು ಅಷ್ಟು ಸಲೀಸಲ್ಲ. ಏಕೆಂದರೆ, ಈ ಅಂಕಿ-ಅಂಶಗಳ ಪೈಕಿ ಬಹುತೇಕವನ್ನು ಮಾಡಿರುವುದು 1980ರ ದಶಕದಲ್ಲಿ; ಗೊತ್ತಾಗಿರುವುದು ರಷ್ಯನ್ ಭೂವೈಜ್ಞಾನಿಕ ಸಮೀಕ್ಷೆಯಲ್ಲಿ. ಹಾಗಂತ ರಷ್ಯಾದವರನ್ನು ನಂಬೋದಿಕ್ಕೆ ಆಗಲ್ಲ ಅಂತಲ್ಲ. ಈ 40 ವರ್ಷದಲ್ಲಿ ಸಮೀಕ್ಷೆ ವಿಧಾನ ಬಹಳ ಮುಂದೆ ಸಾಗಿಬಂದಿದೆ.
ಹಾಗಂತ ಅಫ್ಘಾನಿಸ್ತಾನ ದೇಶ ಏನೂ ಸುಮ್ಮನೆ ಕೂತಿಲ್ಲ. ಈ ಹಿಂದೆ ಸರ್ಕಾರದಿಂದ ಹಲವು ಬಾರಿ ಟೆಂಡರ್ ಕರೆಯಲಾಗಿದೆ. ಅದರಲ್ಲಿ ಪ್ರಮುಖ ಬಿಡ್ಡರ್ ಆಗಿ ಇದ್ದದ್ದು ಜೆಪಿ ಮೊರ್ಗನ್ ಬ್ಯಾಂಕರ್ ಇಯಾನ್ ಹನ್ನಮ್. ಆದರೆ ಭದ್ರತಾ ಸನ್ನಿವೇಶದ ಕಾರಣಕ್ಕೆ ಹಲವು ಮುಂದುವರಿಯಲೇ ಇಲ್ಲ. 2018ರಲ್ಲಿ ಏನಾಗಿತ್ತು ಅಂದರೆ, ಚೀನಾದ ಸರ್ಕಾರಿ ಸ್ವಾಮ್ಯದ ಮೆಟಲರ್ಜಿಕಲ್ ಗ್ರೂಪ್ ಮತ್ತು ಜಿಯಾಂಗ್ಸಿ ಕಾಪರ್ ಕಂಪೆನಿಯಿಂದ ಅಫ್ಘಾನಿಸ್ತಾನದ ಮೆಸ್ ಅಯ್ನಾಕ್ನಲ್ಲಿ ಗಣಿಗಾರಿಕೆಗೆ ಹಕ್ಕು ಪಡೆಯಲಾಯಿತು. ಅದು ವಿಶ್ವದಲ್ಲೇ ಅತಿ ದೊಡ್ಡ ತಾಮ್ರ ನಿಕ್ಷೇಪ ಇದ್ದ ಸ್ಥಳವಾಗಿತ್ತು. ಆದರೆ ತಾಮ್ರವು ಇದ್ದದ್ದು ಯುನೆಸ್ಕೋ ಸಂರಕ್ಷಿತ ಪಾರಂಪರಿಕ ಸ್ಥಳದಲ್ಲಿ ಎಂಬುದು ಗೊತ್ತಾದ ತಕ್ಷಣ ಕೆಲಸ ನಿಲ್ಲಿಸಲಾಯಿತು. ಅಲ್ಲಿಂದ ಆಚೆಗೆ ಇವತ್ತಿಗೂ ಅದೇನೂ ಮತ್ತೆ ಶುರು ಆಗಲಿಲ್ಲ.
ಸವರನ್ ಗೋಲ್ಡ್ ಬಾಂಡ್ (Sovereign Gold Bond) ಸ್ಕೀಮ್ ಆಗಸ್ಟ್ 30, 2021ರಿಂದ ಐದು ದಿನಗಳವರೆಗೆ ಸಬ್ಸ್ಕ್ರಿಪ್ಷನ್ಗಾಗಿ ಮುಕ್ತವಾಗಿ ಇರುತ್ತದೆ ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ಘೋಷಿಸಿದೆ. ಸವರನ್ ಗೋಲ್ಡ್ ಬಾಂಡ್ ಸ್ಕೀಮ್ 2021-2022, ಸರಣಿ 6ರ ವಿತರಣಾ ಬೆಲೆಯನ್ನು ಪ್ರತಿ ಗ್ರಾಂ ಚಿನ್ನಕ್ಕೆ 4,732 ರೂಪಾಯಿಯಂತೆ ಭಾರತ ಸರ್ಕಾರದ ಪರವಾಗಿ ಆರ್‌ಬಿಐ ಬಾಂಡ್‌ಗಳನ್ನು ಬಿಡುಗಡೆ ಮಾಡುತ್ತದೆ. ಭಾರತದ ಅತಿದೊಡ್ಡ ಬ್ಯಾಂಕ್ ಆದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ತನ್ನ ಅಧಿಕೃತ ಹ್ಯಾಂಡಲ್‌ನಿಂದ ಟ್ವೀಟ್ ಮಾಡಿ, "ಚಿನ್ನದಲ್ಲಿ ಹೂಡಿಕೆ ಮಾಡಲು ಯೋಜನೆ ರೂಪಿಸುತ್ತಿದ್ದೀರಾ? ಸವರನ್ ಗೋಲ್ಡ್ ಬಾಂಡ್‌ಗಳಲ್ಲಿ ಹೂಡಿಕೆ ಮಾಡಲು 6 ಚಿನ್ನದಂಥ ಕಾರಣಗಳು ಇಲ್ಲಿವೆ. ಎಸ್‌ಬಿಐ ಗ್ರಾಹಕರು ಈ ಬಾಂಡ್‌ಗಳಲ್ಲಿ http://onlinesbi.comನ ಇ-ಸೇವೆಗಳ ಅಡಿಯಲ್ಲಿ ಹೂಡಿಕೆ ಮಾಡಬಹುದು".
ಈಚೆಗೆ ಎಲೆಕ್ಟ್ರಿಕ್ ಕಾರುಗಳ ಬಳಕೆ ಹೆಚ್ಚಾಗುತ್ತಿರುವಂತೆ ಜಾಗತಿಕ ಮಟ್ಟದಲ್ಲೇ ಲಿಥಿಯಂಗೆ ಕೊರತೆ ಕಾಣಿಸುತ್ತಿದೆ. ಎಲೆಕ್ಟ್ರಿಕ್ ಕಾರುಗಳ ಬ್ಯಾಟರಿಗೆ ಬಳಸುವುದು ಹೈ- ಗ್ರೇಡ್ ಲಿಥಿಯಂ ಎಂಬುದನ್ನು ನೆನಪಿನಲ್ಲಿ ಇಟ್ಟುಕೊಳ್ಳಿ. ತೀರಾ ಇತ್ತೀಚಿನ ವರದಿಯಲ್ಲಿ, ಅಫ್ಘಾನಿಸ್ತಾನದಲ್ಲಿ ಎಷ್ಟು ಲಿಥಿಯಂ ಇದೆ ಎಂಬ ಸ್ಪಷ್ಟತೆ ಇಲ್ಲ. 2018ರಲ್ಲಿ ಅಮೆರಿಕದ ಭೂ ಸರ್ವೇಕ್ಷಣಾ ಇಲಾಖೆ ಮಾಡಿದ ವರದಿಯಲ್ಲಿ ಅಫ್ಘಾನಿಸ್ತಾನದಲ್ಲಿ ಭಾರೀ ಪ್ರಮಾಣದಲ್ಲಿ ಲಿಥಿಯಂ ಇದೆ ಎಂದಿತ್ತೇ ವಿನಾ ಅದೆಷ್ಟು ಎಂಬುದನ್ನು ತಿಳಿಸಿರಲಿಲ್ಲ. 2019ರಲ್ಲಿ ಅಮೆರಿಕ- ಆಫ್ಘನ್ನಿಂದ ಜಂಟಿ ಮೌಲ್ಯಮಾಪನ ಆಗಿತ್ತು. ತಮಾಷೆ ಅಂದರೆ, ಆಗ ಲಿಥಿಯಂ ಪ್ರಸ್ತಾವವೇ ಇರಲಿಲ್ಲ. ಆದರೆ ಆ ವರದಿಯಲ್ಲಿ, ಅಪರೂಪದ 1.4 ಮಿಲಿಯನ್ ಟನ್ ಧಾತುಗಳು ಅಂತ ಮಾತ್ರ ಇತ್ತು. ಅದೇ ವರದಿಯಲ್ಲಿ ತಿಳಿಸಿದಂತೆ, 220 ಟನ್ ಕಚ್ಚಾ ಕಬ್ಬಿಣದ ಅದಿರು, ಉಕ್ಕಿನ ಮುಂಚಿನ ಹಂತದ್ದು 350 ಬಿಲಿಯನ್ ಅಮೆರಿಕನ್ ಡಾಲರ್ಗೂ ಹೆಚ್ಚು ಮೌಲ್ಯದ್ದು, 170 ಮಿಲಿಯನ್ ಡಾಲರ್ ಮೌಲ್ಯದ ಅಂದಾಜು 2700 ಕೇಜಿಯಷ್ಟು ಚಿನ್ನ ಇರುವುದಾಗಿ ಅಂದಾಜಿಸಲಾಗಿತ್ತು.
ಇದೇ ರೀತಿ ಇರಾನ್ ಮತ್ತು ತುರ್ಕ್ಮೇನಿಸ್ತಾನ್ ಕೂಡ ಒಂದು ಅಂದಾಜು ಮಾಡಿವೆ. ಆ ಪ್ರಕಾರವಾಗಿ, ಅಫ್ಘಾನಿಸ್ತಾನದಲ್ಲಿ 1.6 ಬಿಲಿಯನ್ ಬ್ಯಾರೆಲ್ ಕಚ್ಚಾ ಪೆಟ್ರೋಲಿಯಂ ಮತ್ತು 16 ಟ್ರಿಲಿಯನ್ ಕ್ಯೂಬಿಕ್ ಫೀಟ್ (ಸಿಎಫ್ಟಿ) ನೈಸರ್ಗಿಕ ಅನಿಲ ಹೊಂದಿದೆ. ಆಧುನಿಕ ಹಸಿರು ತಂತ್ರಜ್ಞಾನದ ಮಧ್ಯೆ ಈ ಎಲ್ಲ ಖನಿಜ ಮತ್ತು ತೈಲ ಸಂಪತ್ತಿಗೆ ಬೇಡಿಕೆ ಇದ್ದೇ ಇದೆ. ಚೀನಾದ ವಿರಳ ಧಾತುಗಳಿಗೆ ಇಷ್ಟು ಕಾಲ ಅಮೆರಿಕ, ಯುರೋಪ್ ಮತ್ತು ಜಪಾನ್ ಅವಲಂಬಿತವಾಗುತ್ತಿದ್ದವು ಈಗ ಅಫ್ಘಾನಿಸ್ತಾನದತ್ತ ನೋಡುತ್ತಿದ್ದವು. ಆದರೆ ಇವುಗಳ ಬಳಕೆಗೆ ವರ್ಷಗಟ್ಟಲೆ ಸಮಯ ಬೇಕು ಹಾಗೂ ಮಿಲಿಯನ್ ಡಾಲರ್ಗಟ್ಟಲೆ ಖರ್ಚು ಮಾಡಬೇಕಾಗುತ್ತದೆ. ಅಫ್ಘಾನಿಸ್ತಾನದಲ್ಲಿ ಭಾರೀ ಖನಿಜ ನಿಕ್ಷೇಪ ಇದ್ದರೂ ಅದರ ಉತ್ಖನನ, ಉತ್ಪಾದನೆ ಮತ್ತು ರವಾನೆ ಅಪರೂಪವಾಗಿ ಕಂಡುಬರುತ್ತದೆ. ಆದ್ದರಿಂದ ಅಫ್ಘಾನಿಸ್ತಾನದ ಖನಿಜ ಸಂಪತ್ತಿನ ಬಗ್ಗೆ ಅಸ್ಪಷ್ಟ ಚಿತ್ರಣವೇ ಇದೆ. ಮಾಹಿತಿ ಕೃಪೆ: ಟಿಆರ್ಟಿ ವರ್ಲ್ಡ್
Published On - 5:56 pm, Sat, 28 August 21