ತಾಲಿಬಾನಿಗಳು ತಾವಾಡುವ ಮಾತಿಗೆ, ನೀಡುವ ಭರವಸೆಗೆ ಯಾವತ್ತೂ ಬದ್ಧರಾಗಿರುವುದಿಲ್ಲ ಅನ್ನೋದು ಮತ್ತೊಮ್ಮೆ ಪ್ರೂವ್ ಆಗಿದೆ. ಅಫ್ಘಘಾನಿಸ್ತಾನದ ಮಾಜಿ ಉಪಾಧ್ಯಕ್ಷ ಅಮ್ರುಲ್ಲಾಹ್ ಸಾಲೆಹ್ ಅವರ ಸಹೋದರರನ್ನು ತಾಲಿಬಾನಿಗಳು ಕೊಂದು ಹಾಕಿ ತಮ್ಮ ಪೈಶಾಚಿಕತನವನ್ನು ಪ್ರದರ್ಶಿಸಿದ್ದಾರೆ. ಸಾಲೆಹ್ ಅವರ ಮಗ ಶುಕ್ರವಾರ ನೀಡಿರುವ ಹೇಳಿಕೆಯೊಂದರಲ್ಲಿ ತಾಲಿಬಾನಿಗಳು ತನ್ನ ಅಂಕಲ್ ಅವರನ್ನು ಕೊಂದಿರುವುದಾಗಿ ತಿಳಿಸಿದ್ದಾರೆ. ಸಾಲೆಹ್ ಅವರು ತಾಲಿಬಾನಿಗಳನ್ನು ವಿರೋಧಿಸಿ ತಮ್ಮ ತವರು ನೆಲೆಯಾಗಿರುವ ಪಂಜಶೀರ್ ಕಣಿವೆಗೆ ಹೋಗಿ ಅವರಂತೆಯೇ ತಾಲಿಬಾನ್ ನಾಯಕರ ವಿರುದ್ಧ ಸೆಟೆದು ನಿಂತಿರುವ ಪಂಜಶೀರ್ ಪಡೆಗಳ ನೇತೃತ್ವವನ್ನು ವಹಿಸಿಕೊಂಡಿದ್ದಾರೆ.
ಸಾಲೆಹ್ ಅವರ ಸಹೋದರ ರೋಹುಲ್ಲಾಹ್ ಅಜೀಜಿ ಅವರನ್ನು ತಾಲಿಬಾನಿಗಳಿ ಕೊಂದಿರುವ ಸಂಗತಿ, ಉಗ್ರರು ತಮ್ಮನ್ನು ಉಗ್ರವಾಗಿ ವಿರೋಧಿಸಿ ಸಮರ ನಡೆಸಿದ ಪಂಜಶೀರ್ ಕಣಿವೆ ಪ್ರಾಂತ್ಯದ ಕೇಂದ್ರೀಯ ಭಾಗವನ್ನು ವಶಪಡಿಸಿಕೊಂಡ ನಂತರ ಬೆಳಕಿಗೆ ಬಂದಿದೆ.
‘ಅವರು ನನ್ನ ಅಂಕಲ್ ರನ್ನು ಕೊಂದೇ ಬಿಟ್ಟರು,’ ಅಂತ ರಾಯಿಟರ್ಸ್ ಸುದ್ದಿಸಂಸ್ಥೆಗೆ ಕಳಿಸಿದ ಟೆಕ್ಸ್ಟ್ ಮೆಸೇಜ್ನಲ್ಲಿ ಸಾಲೆಹ್ ಅವರ ಪುತ್ರ ಇಬಾದುಲ್ಲಾಹ್ ಸಾಲೆಹ್ ತಿಳಿಸಿದ್ದಾರೆ. ‘ತಾಲಿಬಾನಿಗಳು ಗುರುವಾರ ಅಂಕಲ್ ಅವರನ್ನು ಕೊಂದರು ಮತ್ತು ನಮಗೆ ಅವರ ಅಂತಿಮ ಸಂಸ್ಕಾರ ನಡೆಸುವುದಕ್ಕೂ ಬಿಡಲಿಲ್ಲ. ಅವರ ದೇಹ ಹಾಗೆಯೇ ಕೊಳೆತು ಹೋಗಬೇಕೆಂದು ಅವರು ಹೇಳುತ್ತಲೇ ಇದ್ದರು,’ ಎಂದು ಎಬಾದುಲ್ಲಾಹ್ ಮೆಸೇಜ್ನಲ್ಲಿ ತಿಳಿಸಿದ್ದಾರೆ.
ಉರ್ದು ಭಾಷೆಯ ತಾಲಿಬಾನ್ ಮಾಹಿತಿ ಸೇವೆ ಅಲೆಮಾರಾಹ್, ‘ಲಭ್ಯವಾಗಿರುವ ವರದಿಯೊಂದರ’ ಪ್ರಕಾರ ರೊಹುಲ್ಲಾಹ್ ಸಾಲೆಹ್ ಪಂಜಶೀರ್ ನಲ್ಲಿ ಜಾರಿಯಲ್ಲಿರುವ ಹೋರಾಟದಲ್ಲಿ ಮೃತರಾದರು ಎಂದು ಹೇಳಿದೆ.
ಪಾಶ್ಚಾತ್ಯ ರಾಷ್ಟ್ರಗಳ ಬೆಂಬಲದೊಂದಿಗೆ ರಚನೆಯಾಗಿ ಕಳೆದ ತಿಂಗಳಷ್ಟೇ ಪತನಗೊಂಡ ಅಫ್ಘಾನಿಸ್ತಾನ ಸರ್ಕಾರದ ಗುಪ್ತಚರ ಸೇವೆ, ರಾಷ್ಟ್ರೀಯ ಭದ್ರತಾ ನಿರ್ದೇಶನಾಲಯದ ಮಾಜಿ ಮುಖ್ಯಸ್ಥರಾಗಿದ್ದ ಅಮ್ರುಲ್ಲಾಹ್ ಸಾಲೆಹ್ ಅವರು ನಾಪತ್ತೆಯಾಗಿದ್ದು ಅವರು ಎಲ್ಲಿದ್ದಾರೆನ್ನುವ ಬಗ್ಗೆ ಮಾಹಿತಿ ಇಲ್ಲ.
ಪಂಜಶೀರ್ ಪ್ರಾಂತ್ಯದ ರಾಜಧಾನಿ ಬಜಾರಕ್ ಅನ್ನು ತಾಲಿಬಾನ್ ವಶಪಡಿಸಿಕೊಂಡಿದ್ದರೂ ಸ್ಥಳೀಯ ನಾಯಕ ಅಹ್ಮದ್ ಮಸೂದ್ ಅವರಿಗೆ ನಿಷ್ಠರಾಗಿರರುವ ಅಫ್ಘಾನಿಸ್ತಾನದ ರಾಷ್ಟ್ರೀಯ ಪ್ರತಿರೋಧ ದಳದ ಪಡೆಗಳು ತಾಲಿಬಾನಿಗಳ ವಿರುದ್ಧ ಹೋರಾಟ ಮುಂದುವರಿಸುವ ಪಣತೊಟ್ಟಿವೆ.
ಇದನ್ನೂ ಓದಿ: ಸೆ 11ರಂದೇ ಅಫ್ಘಾನಿಸ್ತಾನದಲ್ಲಿ ಹೊಸ ಸರ್ಕಾರ ಕಾರ್ಯಾರಂಭ: ಈ ದಿನಾಂಕದ ಮೂಲಕ ಅಮೆರಿಕವನ್ನು ಲೇವಡಿ ಮಾಡಿದ ತಾಲಿಬಾನ್