Geopolitics: ತಾಲಿಬಾನ್ ಅಧಿಕಾರ ಸ್ವೀಕಾರ ಸಮಾರಂಭಕ್ಕೆ 6 ದೇಶಗಳಿಗೆ ಆಹ್ವಾನ, ಅಫ್ಘಾನಿಸ್ತಾನದ ಭವಿಷ್ಯದ ಮೇಲೆ ಪ್ರಭಾವಿ ದೇಶಗಳ ನೆರಳು

Ghanashyam D M | ಡಿ.ಎಂ.ಘನಶ್ಯಾಮ

|

Updated on:Sep 10, 2021 | 5:25 PM

Long Form Writing: ಅಫ್ಘಾನಿಸ್ತಾನದಿಂದ ಅಮೆರಿಕ ಏಕಾಏಕಿ ಹೊರ ನಡೆದಿರುವುದರಿಂದ ಉಂಟಾಗಿರುವ ನಿರ್ವಾತದ ಲಾಭ ಪಡೆಯಲು ಯತ್ನಿಸುತ್ತಿರುವ ಪ್ರಭಾವಿ ದೇಶಗಳು ಹಾಗೂ ಅದರಿಂದ ಜಾಗತಿಕ ವಿದ್ಯಮಾನದ ಮೇಲೆ ಆಗಲಿರುವ ಪರಿಣಾಮಗಳ ವಿಶ್ಲೇಷಣೆ ಈ ಸುದೀರ್ಘ ಬರಹದಲ್ಲಿದೆ.

Geopolitics: ತಾಲಿಬಾನ್ ಅಧಿಕಾರ ಸ್ವೀಕಾರ ಸಮಾರಂಭಕ್ಕೆ 6 ದೇಶಗಳಿಗೆ ಆಹ್ವಾನ, ಅಫ್ಘಾನಿಸ್ತಾನದ ಭವಿಷ್ಯದ ಮೇಲೆ ಪ್ರಭಾವಿ ದೇಶಗಳ ನೆರಳು
ಅಫ್ಘಾನಿಸ್ತಾನದ ಆಂತರಿಕ ವಿದ್ಯಮಾನವನ್ನು ವಿಶ್ವ ಕುತೂಹಲದಿಂದ ಗಮನಿಸುತ್ತಿದೆ


ಅಫ್ಘಾನಿಸ್ತಾನದಲ್ಲಿ ಹೊಸ ಸರ್ಕಾರ ರಚಿಸುವುದಾಗಿ ತಾಲಿಬಾನ್ ಘೋಷಿಸಿದ್ದು, ಸೆ.11ರಂದು ಅಧಿಕಾರ ಸ್ವೀಕಾರ ಸಮಾರಂಭ ನಡೆಯಲಿದೆ ಎಂದು ಹಲವು ಸುದ್ದಿಸಂಸ್ಥೆಗಳು ವರದಿ ಮಾಡಿವೆ. ಅಮೆರಿಕದ ವಿಶ್ವ ವಾಣಿಜ್ಯ ಕೇಂದ್ರದ ಅವಳಿ ಕಟ್ಟಡಗಳ ಮೇಲೆ ಅಲ್​ಖೈದಾ ಉಗ್ರರು ದಾಳಿ ನಡೆಸಿದ ಈ ದಿನಾಂಕಕ್ಕೆ ತನ್ನದೇ ಆದ ಮಹತ್ವವಿದೆ. ಅದೇ ದಿನದಂದು ತಾಲಿಬಾನ್​ನ ಹೊಸ ಸರ್ಕಾರ ಅಸ್ತಿತ್ವಕ್ಕೆ ಬರುವುದು ಕೇವಲ ಕಾಕತಾಳೀಯವಲ್ಲ.

ಅಧಿಕಾರ ಸ್ವೀಕಾರ ಸಮಾರಂಭಕ್ಕೆ ತಮ್ಮ ಪರ ಸಹಾನುಭೂತಿ ಹೊಂದಿರುವ ಆರು ಪ್ರಮುಖ ದೇಶಗಳಿಗೆ ತಾಲಿಬಾನ್ ಆಹ್ವಾನ ನೀಡಿದೆ. ವರದಿಗಳ ಪ್ರಕಾರ ರಷ್ಯಾ, ಚೀನಾ, ಟರ್ಕಿ, ಇರಾನ್, ಪಾಕಿಸ್ತಾನ ಮತ್ತು ಕತಾರ್ ದೇಶಗಳಿಗೆ ತಾಲಿಬಾನ್ ಆಹ್ವಾನ ಕಳುಹಿಸಿದೆ. ವಿದೇಶಾಂಗ ವ್ಯವಹಾರದಲ್ಲಿ ಈ ಮೂಲಕ ತನ್ನ ಹೆಜ್ಜೆಯನ್ನು ದೃಢಪಡಿಸಿಕೊಳ್ಳಲು ತಾಲಿಬಾನ್ ಯತ್ನಿಸುತ್ತಿದೆ.

1990ರಲ್ಲಿ ಪಾಕಿಸ್ತಾನ, ಸೌದಿ ಅರೇಬಿಯಾ ಮತ್ತು ಯುಎಇ ಮಾತ್ರ ತಾಲಿಬಾನ್ ಆಡಳಿತಕ್ಕೆ ಮಾನ್ಯತೆ ನೀಡಿದ್ದವು. ಈ ಬಾರಿಯೂ ಈ ದೇಶಗಳು ತಾಲಿಬಾನ್ ಆಡಳಿತದ ಪರ ಸಹಾನುಭೂತಿ ತೋರಿವೆ. ಹಲವು ಪ್ರಮುಖ ದೇಶಗಳು ತಾಲಿಬಾನ್ ಆಡಳಿತಕ್ಕೆ ಮಾನ್ಯತೆ ನೀಡುವ ಕುರಿತು ಕಾದುನೋಡುವ ತಂತ್ರ ಅನುಸರಿಸುತ್ತಿವೆ. ಅಫ್ಘಾನಿಸ್ತಾನದಿಂದ ಅಮೆರಿಕ ಏಕಾಏಕಿ ಹೊರ ನಡೆದಿರುವುದರಿಂದ ಉಂಟಾಗಿರುವ ನಿರ್ವಾತದ ಲಾಭ ಪಡೆಯಲು ಇರಾನ್, ಟರ್ಕಿ, ರಷ್ಯಾ ಮತ್ತು ಚೀನಾ ತುದಿಗಾಲಲ್ಲಿ ನಿಂತಿವೆ. ಯಾವ ದೇಶದ ಲೆಕ್ಕಾಚಾರ ಏನಿರಬಹುದು ಎಂಬ ವಿಶ್ಲೇಷಣೆ ಇಲ್ಲಿದೆ.

ಇದನ್ನೂ ಓದಿ: ಸೆ 11ರಂದೇ ಅಫ್ಘಾನಿಸ್ತಾನದಲ್ಲಿ ಹೊಸ ಸರ್ಕಾರ ಕಾರ್ಯಾರಂಭ: ಈ ದಿನಾಂಕದ ಮೂಲಕ ಅಮೆರಿಕವನ್ನು ಲೇವಡಿ ಮಾಡಿದ ತಾಲಿಬಾನ್

ಪಾಕಿಸ್ತಾನ ಮತ್ತು ತಾಲಿಬಾನ್ ಬಾವುಟ

ಪಾಕಿಸ್ತಾನ: ತಾಲಿಬಾನ್​ಗೆ ಅಭಯ ಕೊಡುವ ಶಕ್ತಿ
ಅಫ್ಘಾನಿಸ್ತಾನದ ವಿದ್ಯಮಾನಗಳಲ್ಲಿ ಹಲವು ವರ್ಷಗಳಿಂದ ಸಕ್ರಿಯ ಪಾತ್ರ ವಹಿಸುತ್ತಿರುವ ಪಾಕಿಸ್ತಾನವು ಪಾಶ್ಚಿಮಾತ್ಯ ದೇಶಗಳು ತಾಲಿಬಾನ್ ವಿರುದ್ಧ ನಡೆಸಿದ ಯುದ್ಧದಲ್ಲಿ ಹತ್ತಾರು ವೇಷಗಳನ್ನು ಹಾಕಿಕೊಂಡಿತ್ತು. ತಾಲಿಬಾನ್​ಗೆ ಪಾಕಿಸ್ತಾನದ ನೆರವು ಅಷ್ಟುದೊಡ್ಡ ಪ್ರಮಾಣದಲ್ಲಿ ಸಿಗದಿದ್ದರೆ ವಿದೇಶಿ ಪಡೆಗಳು ಅಫ್ಘಾನಿಸ್ತಾನದಲ್ಲಿ ಇಂಥ ಸೋಲು ಅನುಭವಿಸಬೇಕಿರಲಿಲ್ಲ ಎಂದು ಅಮೆರಿಕ ಇದೀಗ ಹೇಳುತ್ತಿದೆ.

ಪಾಕಿಸ್ತಾನವನ್ನು ತಾಲಿಬಾನಿಗಳು ತಮ್ಮ ಎರಡನೇ ಮನೆ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ. ಹಲವು ಪ್ರಮುಖ ತಾಲಿಬಾನ್ ನಾಯಕರ ಕುಟುಂಬಗಳು ಪಾಕಿಸ್ತಾನದಲ್ಲಿವೆ. ಅವರ ಮಕ್ಕಳು ಅಲ್ಲಿಯೇ ಶಾಲೆಗೆ ಹೋಗುತ್ತಿದ್ದಾರೆ. ಅಫ್ಘಾನಿಸ್ತಾನದ ಆಡಳಿತದಲ್ಲಿ ಪಾಕಿಸ್ತಾನವು ಸಕ್ರಿಯ ಪಾತ್ರ ನಿರ್ವಹಿಸಲಿದೆ ಎಂದು ತಾಲಿಬಾನ್ ವಕ್ತಾರ ಸುಹೇಲ್ ಶಾಹೀನ್ ಈಚೆಗೆ ಹೇಳಿದ್ದರು.

ತಾಲಿಬಾನ್ ನಾಯಕರ ಪಾಲಿಗೆ ಪಾಕಿಸ್ತಾನವು ರಕ್ಷಕನಂತೆ ವರ್ತಿಸಿದೆ ಎಂದು ಪಾಕಿಸ್ತಾನದ ಸಚಿವ ಶೇಖ್ ರಶೀದ್ ಟಿವಿ ಕಾರ್ಯಕ್ರಮವೊಂದರಲ್ಲಿ ಹೇಳಿದ್ದರು. ಪಾಕ್ ಸೇನೆಯೊಂದಿಗೆ ತಾಲಿಬಾನ್ ಹೊಂದಿರುವ ಸಂಬಂಧವು ಹಲವು ಸಲ ಬೆಳಕಿಗೆ ಬಂದಿದೆ. ತಾಲಿಬಾನ್ ನಾಯಕರ ಸುರಕ್ಷೆಯ ಹೊಣೆಯನ್ನು ನಾವು ಹೊತ್ತುಕೊಂಡಿದ್ದೇವೆ. ನಾವು ಅವರ ಬಗ್ಗೆ ಬಹುಕಾಲದಿಂದ ಕಾಳಜಿ ವಹಿಸಿದ್ದೆವು. ಪಾಕಿಸ್ತಾನದಲ್ಲಿ ಅವರು ಆಶ್ರಯ, ಶಿಕ್ಷಣ ಮತ್ತು ಮನೆಗಳನ್ನು ಹೊಂದಿದ್ದಾರೆ. ನಾವು ಅವರಿಗಾಗಿ ಎಲ್ಲವನ್ನೂ ಮಾಡಿದ್ದೇವೆ ಎಂದು ರಶೀದ್ ಪಾಕಿಸ್ತಾನದ ಸುದ್ದಿವಾಹಿನಿಯೊಂದಕ್ಕೆ ಸಂದರ್ಶನ ನೀಡುವಾಗ ಹೇಳಿದ್ದರು.

ಪಾಕಿಸ್ತಾನದ ಸೇನೆ ಮತ್ತು ತಾಲಿಬಾನ್ ನಡುವೆ ಉತ್ತಮ ಹೊಂದಾಣಿಕೆ ಇರುವುದು ಹಲವು ಸಂದರ್ಭಗಳಲ್ಲಿ ಸಾಬೀತಾಗಿದೆ. ತಾಲಿಬಾನ್ ಸರ್ಕಾರಕ್ಕೆ ಮಾನ್ಯತೆ ನೀಡಲಿರುವ ಕೆಲವೇ ದೇಶಗಳ ಸಾಲಿನಲ್ಲಿಯೂ ಪಾಕಿಸ್ತಾನ ಮುಂಚೂಣಿಯಲ್ಲಿದೆ. ಮುಂದಿನ ದಿನಗಳಲ್ಲಿಯೂ ಇದೇ ಪ್ರವೃತ್ತಿ ಪುನರಾವರ್ತನೆಯಾಗಲಿದೆ.

ಇದನ್ನೂ ಓದಿ: ಅಫ್ಘಾನಿಸ್ತಾನ ಅಕ್ಕಪಕ್ಕದ ದೇಶಗಳಿಗೆ ಆತಂಕ ತರಬಾರದು: ಬ್ರಿಕ್ಸ್​ ಶೃಂಗಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ

ಅಫ್ಘಾನಿಸ್ತಾನ ಮತ್ತು ಚೀನಾ ನಕಾಶೆ

ಚೀನಾ: ತನ್ನ ಹಿತಕ್ಕಾಗಿ ತಾಲಿಬಾನ್ ಬಳಕೆ
ಅಫ್ಘಾನಿಸ್ತಾನದಿಂದ ಅಮೆರಿಕ ಸೇನಾಪಡೆಗಳು ಹಿಂದೆ ಸರಿದ ವಿದ್ಯಮಾನವನ್ನು ಚೀನಾ ಸಂಭ್ರಮಿಸಿದ್ದು ಗುಟ್ಟಾಗಿಲ್ಲ. ಆದರೆ ಕಾಬೂಲ್​ನಲ್ಲಿ ಸ್ಥಾಪನೆಯಾಗಲಿರುವ ತಾಲಿಬಾನ್ ಸರ್ಕಾರಕ್ಕೆ ತಕ್ಷಣಕ್ಕೆ ಚೀನಾ ಮಾನ್ಯತೆ ನೀಡಲಿದೆ ಎಂದು ಹೇಳಲು ಆಗುವುದಿಲ್ಲ. ಇತರ ದೇಶಗಳಂತೆ ಚೀನಾ ಸಹ ಕಾದುನೋಡುವ ತಂತ್ರದ ಮೊರೆ ಹೋಗಬಹುದು.

ಚೀನಾದ ಮಹತ್ವಾಕಾಂಕ್ಷೆ ಯೋಜನೆ ಬೆಲ್ಟ್​ ಅಂಡ್ ರೋಡ್ ಇನ್​ಷಿಯೇಟಿವ್ (Belt and Road Initiative – BRI) ಜಾರಿಗೆ ಬರಲು ಅಫ್ಘಾನಿಸ್ತಾನದ ಸಹಕಾರ ಚೀನಾಕ್ಕೆ ಬೇಕೇಬೇಕು. ಮುಂದಿನ ದಿನಗಳಲ್ಲಿ ಅಫ್ಘಾನಿಸ್ತಾನದ ಜೊತೆಗೆ ಚೀನಾ ಎಂಥ ಸಂಬಂಧ ಹೊಂದುತ್ತಿರುತ್ತದೆ ಎಂಬುದನ್ನು ಅಮೆರಿಕ ಸೇರಿದಂತೆ ವಿಶ್ವದ ಹಲವು ದೇಶಗಳು ಸೂಕ್ಷ್ಮವಾಗಿ ಗಮನಿಸುತ್ತಿರುತ್ತವೆ.

ಅಫ್ಘಾನಿಸ್ತಾನದಲ್ಲಿ ನೂತನ ಸರ್ಕಾರ ಅಧಿಕಾರಕ್ಕೆ ಬರುವ ಸಮಾರಂಭದಲ್ಲಿ ಪಾಲ್ಗೊಳ್ಳಲು ಚೀನಾಕ್ಕೆ ತಾಲಿಬಾನ್​ನಿಂದ ಆಹ್ವಾನ ಬಂದಿರುವ ಮಾಧ್ಯಮ ವರದಿಗಳಿಗೂ ಈವರೆಗೆ ಚೀನಾ ಸರ್ಕಾರ ಪ್ರತಿಕ್ರಿಯಿಸಿಲ್ಲ. ಈ ಕುರಿತು ಮಾಧ್ಯಮ ಪ್ರತಿನಿಧಿಗಳು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಚೀನಾದ ವಿದೇಶಾಂಗ ಇಲಾಖೆ ವಕ್ತಾರ ವಾಂಗ್ ವೆನ್​ಬಿನ್, ‘ಈ ಬಗ್ಗೆ ನನಗೆ ಯಾವುದೇ ಮಾಹಿತಿಯಿಲ್ಲ’ ಎಂದಷ್ಟೇ ಹೇಳಿದ್ದರು.

‘ಅಕ್ಕಪಕ್ಕದ ದೇಶಗಳೊಂದಿಗೆ ಅಫ್ಘಾನಿಸ್ತಾನವು ಶಾಂತಿಯುತ ಸಂಬಂಧ ಹೊಂದುವುದನ್ನು ನಾವು ಪ್ರೋತ್ಸಾಹಿಸುತ್ತೇವೆ. ಮುಕ್ತ, ಎಲ್ಲರನ್ನೂ ಒಳಗೊಳ್ಳುವ, ವಿವಿಧ ಸಮುದಾಯಗಳಿಗೆ ಅಧಿಕಾರ ನೀಡುವ ಸರ್ಕಾರ ಅಫ್ಘಾನ್​ನಲ್ಲಿ ಅಧಿಕಾರಕ್ಕೆ ಬರಬೇಕಿದೆ’ ಎಂದು ಅವರು ಚೀನಾದ ನಿಲುವನ್ನು ಸ್ಪಷ್ಟಪಡಿಸಿದ್ದರು.

ಕಳೆದ ಕೆಲ ದಿನಗಳಿಂದ ಚೀನಾ ಸರ್ಕಾರವು ತಾಲಿಬಾನ್​ನೊಂದಿಗೆ ಸಂವಾದ ನಡೆಸುತ್ತಿದೆ. ಕಾಬೂಲ್​ ವಶಪಡಿಸಿಕೊಳ್ಳುವ ಮೊದಲೂ ತಾಲಿಬಾನ್​ನ ಉನ್ನತ ನಾಯಕರು ಚೀನಾಕ್ಕೆ ನಿಯಮಿತವಾಗಿ ಭೇಟಿ ನೀಡುತ್ತಿದ್ದರು. ತಾಲಿಬಾನ್ ಪರ ನಿಲುವು ಇದ್ದರೂ ಚೀನಾ ಕುರುಡಾಗಿ ಬೆಂಬಲಿಸುವಂತಿಲ್ಲ. ಏಕೆಂದರೆ ಅಫ್ಘಾನಿಸ್ತಾನದಲ್ಲಿ ಚೀನಾದ ಪ್ರತಿ ನಡೆಯನ್ನೂ ಅಮೆರಿಕ ಅತ್ಯಂತ ಸೂಕ್ಷ್ಮವಾಗಿ ಗಮನಿಸುತ್ತಿದೆ. ಅಫ್ಘಾನಿಸ್ತಾನದ ಬೆಳವಣಿಗೆಗೆ ಬೇರೆಡೆ ಚೀನಾ ಬೆಲೆ ತೆರುವ ಪರಿಸ್ಥಿತಿ ಬಂದೀತು ಎಂಬ ಆತಂಕ ಚೀನಾದ ನಾಯಕರಲ್ಲಿದೆ.

ಇದನ್ನೂ ಓದಿ: Opinion: ತಾಲಿಬಾನ್​ ರಾಷ್ಟ್ರಕ್ಕೆ ಜಗತ್ತಿನ ಮನ್ನಣೆ; ಮಕ್ಕಳಿಗೆ ತೋರಿಸಲು ಒಳ್ಳೆಯದು-ಕೆಟ್ಟದು ಪರಿಕಲ್ಪನೆಗಳೇ ಇನ್ನಿಲ್ಲ!

Afghanistan-Putin

ತಾಲಿಬಾನ್ ಹೋರಾಟಗಾರ ಮತ್ತು ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್

ರಷ್ಯಾ: ತಾಲಿಬಾನ್ ಪ್ರಭಾವ ಹರಡೀತೆಂಬ ಆತಂಕ
ಮಾಸ್ಕೊ ತನ್ನದೇ ಆದ ಶೈಲಿಯೊಂದಿಗೆ ತಾಲಿಬಾನ್ ಜೊತೆಗೆ ಮಾತುಕತೆ ನಡೆಸುತ್ತಿದೆ. ‘ಮಾಸ್ಕೊ ಫಾರ್ಮಾಟ್’ ಎನ್ನಲಾಗುವ ಈ ಶೈಲಿಯ ವಿದೇಶಾಂಗ ವ್ಯವಹಾರವನ್ನು ರಷ್ಯಾ 2017ರಿಂದಲೂ ಅನುಸರಿಸುತ್ತಿದೆ. ರಷ್ಯಾ, ಅಫ್ಘಾನಿಸ್ತಾನ, ಚೀನಾ, ಪಾಕಿಸ್ತಾನ, ಇರಾನ್ ಮತ್ತು ಭಾರತದ ಪ್ರತಿನಿಧಿಗಳು ಒಂದು ವಿಚಾರದ ಬಗ್ಗೆ ನಿಯಮಿತವಾಗಿ ಚರ್ಚಿಸುವ ಕ್ರಮವನ್ನು ರಷ್ಯಾ ಆಚರಣೆಗೆ ತಂದಿದೆ.

ನವೆಂಬರ್ 2018ರಲ್ಲಿ ರಷ್ಯಾ ಸರ್ಕಾರವು ತಾಲಿಬಾನ್​ನ ಉನ್ನತ ನಿಯೋಗ ಮತ್ತು ಶಾಂತಿ ಸ್ಥಾಪನೆ ಪ್ರಯತ್ನಕ್ಕೆ ಶ್ರಮಿಸುವ 12 ದೇಶಗಳ ಪ್ರತಿನಿಧಿಗಳ ಸಭೆಯೊಂದನ್ನು ನಡೆಸಿತ್ತು. ದೇಶದ ಪುನರ್​ನಿರ್ಮಾಣ ಕಾರ್ಯಕ್ಕೆ ಸಹಕರಿಸುವುದು ಮತ್ತು ಶಾಂತಿ ಸ್ಥಾಪನೆಗೆ ಒತ್ತು ನೀಡುವುದು ಈ ಸಭೆಯ ಮುಖ್ಯ ಉದ್ದೇಶವಾಗಿತ್ತು. ರಷ್ಯಾ ಮತ್ತು ಅಫ್ಘಾನಿಸ್ತಾನಗಳು ಜಂಟಿ ಅಧ್ಯಕ್ಷತೆ ವಹಿಸಿದ್ದ 2ನೇ ಸಭೆ ಇದಾಗಿತ್ತು.

ಚೀನಾದಂತೆ ರಷ್ಯಾಕ್ಕೂ ಅಫ್ಘಾನಿಸ್ತಾನದಿಂದ ಹತ್ತಾರು ಅನುಕೂಲಗಳಿವೆ. ಅಫ್ಘಾನ್​ನಿಂದ ಅಮೆರಿಕ ಹೊರನಡೆದ ವಿದ್ಯಮಾನವನ್ನು ‘ಯಾವುದೇ ದೇಶವನ್ನು ವಿದೇಶಿಯರು ಆಕ್ರಮಿಸಿಕೊಳ್ಳಬಾರದು’ ಎಂದು ಹೇಳುವ ಮೂಲಕ ಅತ್ಯಂತ ಎಚ್ಚರಿಕೆಯಿಂದ ಸ್ವಾಗತಿಸಿದೆ. ಆದರೆ ಭದ್ರತೆಗೆ ಸಂಬಂಧಿಸಿದಂತೆಯೂ ಹಲವು ಸಮಸ್ಯೆಗಳು ರಷ್ಯಾಗೆ ಇದೆ. ಹೀಗಾಗಿಯೇ ಅದು ಅಫ್ಘಾನಿಸ್ತಾನದ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದು, ತಾಲಿಬಾನ್​ಗೆ ಮಾನ್ಯತೆ ನೀಡುವ ವಿಚಾರದ ಬಗ್ಗೆಯೂ ಪರಿಶೀಲನೆ ನಡೆಸುತ್ತಿದೆ.

ಇದನ್ನೂ ಓದಿ: ಆಳುವವರಿದ್ದಾರೆ, ಆಡಳಿತ ನಡೆಸೋರು ಯಾರು? ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಆಡಳಿತಕ್ಕೆ ಪ್ರತಿಭಾ ಪಲಾಯನವೇ ದೊಡ್ಡ ಸವಾಲು

Iran-Afghanistan-Flags

ತಾಲಿಬಾನ್ ಮತ್ತು ಅಫ್ಘಾನಿಸ್ತಾನ ಬಾವುಟ

ಇರಾನ್: ಮುನಿಸು-ಮುಗುಳ್ನಗೆಯ ಸಂಬಂಧ
ಅಮೆರಿಕದ ಸೇನಾಪಡೆಗಳು ಅಫ್ಘಾನಿಸ್ತಾನದಿಂದ ಹಿಮ್ಮೆಟ್ಟಿದ್ದನ್ನು ಇರಾನ್ ಸ್ವಾಗತಿಸಿದೆ. ಮುಂದಿನ ದಿನಗಳಲ್ಲಿ ತಾಲಿಬಾನ್ ಆಡಳಿತದೊಂದಿಗೆ ಸಹಕರಿಸುವುದಾಗಿ ಭರವಸೆ ನೀಡಿದೆ. ಅಮೆರಿಕದ ಸೋಲು ಅಫ್ಘಾನಿಸ್ತಾನದಲ್ಲಿ ಶಾಂತಿ, ಭದ್ರತೆ ಮತ್ತು ನೆಮ್ಮದಿಯ ಬದುಕಿನ ಸ್ಥಾಪನೆಗೆ ಅವಕಾಶವಾಗಿ ಒದಗಿಬರಬೇಕು ಎಂದು ಇರಾನ್​ನ ಹೊಸ ಅಧ್ಯಕ್ಷ ಇಬ್ರಾಹಿಂ ರೈಸಿ ಆಶಯ ವ್ಯಕ್ತಪಡಿಸಿದ್ದರು. ಇರಾನ್ ಈ ಹಿಂದೆ ತಾಲಿಬಾನ್​ನೊಂದಿಗೆ ಅಷ್ಟೇನು ಒಳ್ಳೆಯ ಸಂಬಂಧ ಹೊಂದಿರಲಿಲ್ಲ. ಇರಾನ್ ವಿರುದ್ಧ ಅಮೆರಿಕ ನಾನಾ ನಿರ್ಬಂಧಗಳನ್ನು ಹೇರಿದ ನಂತರ ಅಮೆರಿಕ ಮೇಲೆ ಸಿಟ್ಟು ಸಾಧಿಸಲು ಇರಾನ್ ತಾಲಿಬಾನ್​ನೊಂದಿಗೆ ಸಂಬಂಧ ಸುಧಾರಿಸಿಕೊಂಡಿತು.

ಇದೀಗ ಅಫ್ಘಾನಿಸ್ತಾನದಲ್ಲಿ ಅಧಿಕಾರ ಹಿಡಿದಿರುವ ತಾಲಿಬಾನಿಗಳು ಕಟ್ಟರ್ ಸುನ್ನಿ ಪಂಥಕ್ಕೆ ಸೇರಿದವರು. ಇರಾನ್​ ದೇಶದಲ್ಲಿ ಷಿಯಾಗಳು ಬಹುಸಂಖ್ಯಾತರು. ಈ ಹಿಂದಿನ ತಾಲಿಬಾನ್ ಆಡಳಿತದಲ್ಲಿ ಅಂದರೆ, 1998ರಲ್ಲಿ ಇರಾನಿ ರಾಜತಾಂತ್ರಿಕರ ಕೊಲೆಯಿಂದಾಗಿ ಎರಡೂ ದೇಶಗಳ ನಡುವೆ ಯುದ್ಧ ನಡೆಯುವ ಪರಿಸ್ಥಿತಿ ನಿರ್ಮಾಣವಾಗಿತ್ತು.

ಆದರೆ 9/11ರ ಘಟನೆಯ ನಂತರ ಅಫ್ಘಾನಿಸ್ತಾನಕ್ಕೆ ಅಮೆರಿಕ ಪ್ರವೇಶಿಸಿದ್ದು ಇರಾನ್-ತಾಲಿಬಾನ್ ಸಂಬಂಧದಲ್ಲಿ ಮಹತ್ವದ ಬದಲಾವಣೆಗೆ ಕಾರಣವಾಯಿತು. ಇರಾನ್ ವಿಚಾರದಲ್ಲಿ ಸತತ ಕಠಿಣ ನಿಲುವು ತಳೆಯುತ್ತಾ ಬಂದ ಅಮೆರಿಕ ಸರ್ಕಾರಗಳ ಧೋರಣೆಯಿಂದ ನಿಧಾನವಾಗಿ ಇರಾನ್​ನ ನಿಲುವು ಬದಲಾಯಿತು. ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಬೆಂಬಲಿಸುವ ಮೂಲಕ ಅಮೆರಿಕಕ್ಕೆ ಈ ಹಿಂದೆಯೂ ಇರಾನ್ ಕಾಟ ಕೊಡುತ್ತಿತ್ತು, ಈಗ ತಾಲಿಬಾನ್​ಗೆ ಹತ್ತಿರವಾಗುವ ಮೂಲಕ ಇದೇ ನೀತಿಯನ್ನು ಮುಂದುವರಿಸುವ ಸಾಧ್ಯತೆಯಿದೆ.

ತಾಲಿಬಾನ್-ಅಮೆರಿಕ ನಡುವೆ ದೋಹಾದಲ್ಲಿ ಮಾತುಕತೆ ನಡೆಯುತ್ತಿದ್ದಾಗಲೂ ಇರಾನ್ ಮತ್ತೊಂದು ಬಾಗಿಲಿನಿಂದ ತಾನೂ ಶಾಂತಿ ಮಾತುಕತೆಯ ಪಾಲುದಾರನಾಗಲು ಅವಕಾಶ ಸೃಷ್ಟಿಸಿಕೊಂಡಿತ್ತು. ನೆರೆದೇಶ ಎನ್ನುವ ಕಾರಣಕ್ಕೆ ವಾಣಿಜ್ಯ ಹಿತಾಸಕ್ತಿಯ ದೃಷ್ಟಿಯಿಂದ ಇರಾನ್​ಗೆ ಅಫ್ಘಾನಿಸ್ತಾನ ಮುಖ್ಯ ದೇಶ. ಸಮುದ್ರದ ಸಂಪರ್ಕವೇ ಇಲ್ಲದ ಅಫ್ಘಾನಿಸ್ತಾನಕ್ಕೆ ಬಂದರು ಸಂಪರ್ಕ ಕಲ್ಪಿಸಲು ಇರಾನ್ ನೆರವಿಗೆ ಬರುತ್ತದೆ ಎನ್ನುವ ಕಾರಣಕ್ಕೆ ಅಫ್ಘಾನ್​ಗೆ ಇರಾನ್ ಮೇಲೆ ಅವಲಂಬನೆಯಿದೆ.

ಇದನ್ನೂ ಓದಿ: ಹಳ್ಳಿಗಳನ್ನು ನಿರ್ಲಕ್ಷಿಸಿದ್ದು ದೊಡ್ಡ ತಪ್ಪಾಯ್ತು: ತಾಲಿಬಾನ್​ಗೆ ಶಕ್ತಿ ತುಂಬಿದ್ದು ಅಫ್ಘಾನ್ ಸರ್ಕಾರದ ತಪ್ಪು ಕೃಷಿ ನೀತಿಗಳು

Turkey-Afghanistan

ಟರ್ಕಿ ಅಧ್ಯಕ್ಷ ಎರ್ಡೊಗನ್ ಮತ್ತು ಅಫ್ಘಾನಿಸ್ತಾನದ ತಾಲಿಬಾನ್ ಹೋರಾಟಗಾರರು

ಟರ್ಕಿ: ರಾಜಕೀಯ, ಆರ್ಥಿಕ ಲಾಭದ ನಿರೀಕ್ಷೆ
ಟರ್ಕಿ ಸಹ 2001ರಿಂದ ನ್ಯಾಟೊ ಒಪ್ಪಂದದ ಭಾಗವಾಗಿದೆ. ಅಮೆರಿಕ ಮತ್ತು ನ್ಯಾಟೊ ಪಡೆಗಳು ಅಫ್ಘಾನಿಸ್ತಾನದಿಂದ ಹೊರನಡೆದ ನಂತರ ಉಂಟಾದ ನಿರ್ವಾತದಲ್ಲಿ ತನಗೆ ಲಾಭ ಸಿಗಬಹುದು ಎಂದು ಟರ್ಕಿ ಅಂದುಕೊಂಡಿದೆ. ಈ ಮೊದಲು ತಾಲಿಬಾನ್​ ಸಂಘಟನೆಯನ್ನು ಟೀಕಿಸಿದ್ದು ಟರ್ಕಿ ಅಧ್ಯಕ್ಷ ರೆಕೆಪ್ ತಯ್ಯೆಪ್ ಎರ್ಡೊನ್ ನಿಲುವು ಈಚೆಗೆ ಬದಲಾಗಿದೆ. ತಾಲಿಬಾನ್ ಆಡಳಿತದೊಂದಿಗೆ ಸಹಕರಿಸಲು ಸಿದ್ಧ ಎಂದು ಪರೋಕ್ಷವಾಗಿ ಹೇಳಿದ್ದಾರೆ.

ಕಳೆದ ಹಲವು ವರ್ಷಗಳಿಂದ ಟರ್ಕಿ ತಾಲಿಬಾನ್ ಜೊತೆಗೆ ಸಂಬಂಧ ಇರಿಸಿಕೊಂಡಿದೆ. ಕಾಬೂಲ್ ವಿಮಾನ ನಿಲ್ದಾಣದ ಭದ್ರತೆಯ ಉಸ್ತುವಾರಿ ಹೊರುವುದರೊಂದಿಗೆ, ವಿಮಾನ ನಿಲ್ದಾಣವನ್ನು ಕಾರ್ಯಾಚರಣೆಗೆ ಸನ್ನದ್ಧ ಸ್ಥಿತಿಯಲ್ಲಿ ಇರಿಸುವ ಬಗ್ಗೆಯೂ ಟರ್ಕಿಯು ಆಸಕ್ತಿ ತೋರಿದೆ. ತಾಲಿಬಾನ್​ನಿಂದ ಟರ್ಕಿಗೆ ಲಾಭವಿರುವಂತೆ, ಟರ್ಕಿಗೂ ತಾಲಿಬಾನ್​ನಿಂದ ಹಲವು ಲಾಭಗಳಿವೆ. ಅಫ್ಘಾನ್ ಆಡಳಿತದಲ್ಲಿ ಟರ್ಕಿ ಆಸಕ್ತಿ ತೋರಿದರೆ ಒಳ್ಳೆಯದು ಎಂಬ ಅಭಿಪ್ರಾಯ ಜಾಗತಿಕ ವಲಯದಲ್ಲಿಯೂ ವ್ಯಕ್ತವಾಗುತ್ತಿದೆ. ಭದ್ರತೆ, ಸ್ಥಿರತೆ, ನಿರಾಶ್ರಿತರ ಸಂಕಷ್ಟದ ಸಮಸ್ಯೆಗಳನ್ನು ಸಿರಿಯಾ ಗಡಿಯಲ್ಲಿ ನಿರ್ವಹಿಸಿ ಅನುಭವವಿರುವ ಟರ್ಕಿಯ ಅನುಭವದಿಂದ ಅಫ್ಘಾನಿಸ್ತಾನಕ್ಕೆ ಲಾಭವಿದೆ ಎಂದು ಹೇಳಲಾಗುತ್ತದೆ.

ಟರ್ಕಿ ದೇಶದಲ್ಲಿರುವ ಬಹುತೇಕ ಶ್ರೀಮಂತ ಗುತ್ತಿಗೆದಾರರಿಗೆ ನಿರ್ಮಾಣ ಚಟುವಟಿಕೆಗಳನ್ನು ನಿರ್ವಹಿಸುವ ಕಂಪನಿಗಳಿವೆ. ಈ ಕಂಪನಿಗಳು ಅಲ್ಲಿನ ಆಡಳಿತಾರೂಢ ಎಕೆಪಿ ಪಕ್ಷದೊಂದಿಗೆ ನಿಕಟ ಸಂಬಂಧ ಹೊಂದಿದ್ದಾರೆ. ಅಫ್ಘಾನಿಸ್ತಾನದಲ್ಲಿ ಸ್ಥಿರತೆ ಸಾಧಿಸಲು ಸಾಧ್ಯವಾದರೆ ವಿದೇಶದ ದೇಣಿಗೆಯೂ ಸಾಕಷ್ಟು ದೊಡ್ಡ ಪ್ರಮಾಣದಲ್ಲಿ ಹರಿದುಬರುತ್ತದೆ. ಇಂಥ ಸಂದರ್ಭದಲ್ಲಿ ಎರ್ಡೊಗನ್ ತಮ್ಮ ಬೆಂಬಲಿಗರಿಗೆ ಲಾಭ ಮಾಡಿಕೊಡಲು ಅಫ್ಘಾನಿಸ್ತಾನದ ಗುತ್ತಿಗೆಗಳನ್ನು ದಕ್ಕಿಸಿಕೊಡಬಹುದು. ಅಫ್ಘಾನಿಸ್ತಾನದಲ್ಲಿ ಟರ್ಕಿಯ ಆಸಕ್ತಿ, ಹಿತಾಸಕ್ತಿಯ ಹಿಂದೆ ಇರುವ ಬಹುಮುಖ್ಯ ಲೆಕ್ಕಾಚಾರ ಇದು.

ಇದನ್ನೂ ಓದಿ: Afghan Government ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಆಡಳಿತ:  ನೂತನ ಅಫ್ಘಾನ್ ಸರ್ಕಾರದ ಬಗ್ಗೆ ಏಳು ಪ್ರಮುಖ ಸಂಗತಿಗಳು

Qatar-Afghanistan

ಕತಾರ್​ನ ಉಪ ಪ್ರಧಾನಿ ಮತ್ತು ವಿದೇಶಾಂಗ ವ್ಯವಹಾರ ಸಚಿವ ಶೇಖರ್ ಮೊಹಮದ್ ಮತ್ತು ತಾಲಿಬಾನ್ ನಾಯಕ ಮುಲ್ಲಾ ಅಬ್ದುಲ್ ಘನಿ ಬಾರದಾರ್

ಕತಾರ್: ಅಫ್ಘಾನಿಸ್ತಾನದ ರಾಜತಾಂತ್ರಿಕ ಆಸರೆ
ತಾಲಿಬಾನ್​ನ ಮೊದಲ ಅವಧಿಯ ಆಡಳಿತದಲ್ಲಿ ಅಂದರೆ 1996-2001ರಲ್ಲಿ ಕತಾರ್ ದೇಶವು ತಾಲಿಬಾನ್​ ಸರ್ಕಾರಕ್ಕೆ ಮಾನ್ಯತೆ ನೀಡಿರಲಿಲ್ಲ. ಆದರೂ ಉಗ್ರಗಾಮಿ ಸಂಘಟನೆಯೊಂದಿಗೆ ಸೌಹಾರ್ದ ಸಂಬಂಧ ಕಾಪಾಡಿಕೊಂಡಿತ್ತು. ಸೌದಿ ಅರೇಬಿಯಾ ಮತ್ತು ಟರ್ಕಿ ದೇಶಗಳು ಸಹ ಅಫ್ಘಾನ್ ಸರ್ಕಾರದೊಂದಿಗೆ ಸೌಹಾರ್ದ ಸಂಬಂಧ ಹೊಂದಲು ಮತ್ತು ನಿಷ್ಪಕ್ಷಪಾತವಾಗಿ ವರ್ತಿಸಲು ಆಸಕ್ತಿ ತೋರಿವೆ. ಹೀಗಾಗಿಯೇ ಕತಾರ್​ ದೇಶವನ್ನು ತಾಲಿಬಾನ್​ನೊಂದಿಗೆ ಮಾತುಕತೆ ನಡೆಸುವ ಸ್ಥಳವಾಗಿ ಬೆಳೆಸಲು ಅಮೆರಿಕ ಒಪ್ಪಿಕೊಂಡಿದ್ದು.

2011ರಲ್ಲಿ ಬರಾಕ್ ಒಬಾಮ ಆಡಳಿತವು ಯುದ್ಧವನ್ನು ಕೊನೆಗಾಣಿಸಲು ನಿರ್ಧರಿಸಿದಾಗ ಕತಾರ್ ರಾಜಧಾನಿ ದೋಹಾದಲ್ಲಿ ಹಲವು ಸುತ್ತಿನ ಮಾತುಕತೆಗಳು ನಡೆದವು. ಇದೀಗ ಆಗಸ್ಟ್ 15ರಂದು ಕಾಬೂಲ್ ತಾಲಿಬಾನ್ ಕೈವಶವಾದ ನಂತರವೂ ಇದೇ ದೋಹಾದಲ್ಲಿಯೇ ರಾಜತಾಂತ್ರಿಕ ಚಟುವಟಿಕೆಗಳು ಗರಿಗೆದರಿವೆ.

ಕತಾರ್​ನಲ್ಲಿ ತಾಲಿಬಾನ್ ಶಾಶ್ವತ ರಾಜತಾಂತ್ರಿಕ ಕಚೇರಿಯನ್ನು 2013ರಲ್ಲಿ ಸ್ಥಾಪಿಸಿತು. ಡೊನಾಲ್ಡ್ ಟ್ರಂಪ್ ಆಡಳಿತವು 2020ರಲ್ಲಿ ಅಫ್ಘಾನಿಸ್ತಾನದಿಂದ ಸೇನೆಯನ್ನು ಹಿಂಪಡೆಯುವುದಾಗಿ ಘೋಷಿಸುವವರೆಗೆ ಈ ಕಚೇರಿ ಕಾರ್ಯನಿರ್ವಹಿಸುತ್ತಿತ್ತು. ಇಂದಿಗೂ ಕಾಬೂಲ್​ನ ಹಮೀದ್ ಕರ್ಜೈ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಕಾರ್ಯಾಚರಣೆಗೆ ಬೇಕಾದ ತಾಂತ್ರಿಕ ನೆರವನ್ನು ಕತಾರ್ ಒದಗಿಸುತ್ತಿದೆ. ಆರ್ಥಿಕವಾಗಿ ಸಬಲವಾಗಿರುವ ಕತಾರ್​ಗೆ ಭದ್ರತೆಯ ವಿಚಾರದಲ್ಲಿ ಅಮೆರಿಕವನ್ನೇ ನೆಚ್ಚಬೇಕಾದ ಅಸಹಾಯಕತೆ. ತಾನು ಪರಾವಲಂಬಿಯಲ್ಲ ಎಂಬ, ನಿಮಗೂ ನಮ್ಮಿಂದ ಲಾಭವಿದೆ ಎಂಬ ಸಂದೇಶವನ್ನು ನೀಡಲು ಕತಾರ್​ಗೆ ತಾಲಿಬಾನ್ ಒಡನಾಟ ಅವಕಾಶ ಮಾಡಿಕೊಟ್ಟಿದೆ.

(Geo Politics Analysis on Taliban inviting 6 nations for Afghanistan government formation event China Pakistan Qatar Turkey Russia)

ಇದನ್ನೂ ಓದಿ: ಅಫ್ಘಾನಿಸ್ತಾನದಲ್ಲಿ ನೂತನ ತಾಲಿಬಾನ್ ಸರ್ಕಾರದ ಚುಕ್ಕಾಣಿ ಹಿಡಿಯಲಿರುವ ಪ್ರಮುಖ ನಾಯಕರು ಯಾರೆಲ್ಲ?

ಇದನ್ನೂ ಓದಿ: ಪಂಜ್​ಶಿರ್​ ಕಣಿವೆಯಲ್ಲಿ ತಾಲಿಬಾನ್ ಗೆಲುವಿಗೆ ಕಾರಣವಾಗಿದ್ದು ಈ 5 ಸಂಗತಿಗಳು; ಇದರಲ್ಲಿ ಭಾರತದ ಪಾತ್ರವೇನು?


ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada