ಆಳುವವರಿದ್ದಾರೆ, ಆಡಳಿತ ನಡೆಸೋರು ಯಾರು? ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಆಡಳಿತಕ್ಕೆ ಪ್ರತಿಭಾ ಪಲಾಯನವೇ ದೊಡ್ಡ ಸವಾಲು

ಯಾವುದೇ ದೇಶಕ್ಕೆ ಪ್ರತಿಭಾ ಪಲಾಯನ ಎನ್ನುವುದು ಅತ್ಯಂತ ಗಂಭೀರ ಸಮಸ್ಯೆ. ಅದರಲ್ಲೂ ಅಫ್ಘಾನಿಸ್ತಾನದಂಥ ಬಡತನವನ್ನೇ ಹಾಸಿಹೊದ್ದ ದೇಶಕ್ಕೆ ಇದರ ಬಿಸಿ ಮತ್ತಷ್ಟು ತೀವ್ರವಾಗಿ ತಟ್ಟುತ್ತದೆ.

ಆಳುವವರಿದ್ದಾರೆ, ಆಡಳಿತ ನಡೆಸೋರು ಯಾರು? ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಆಡಳಿತಕ್ಕೆ ಪ್ರತಿಭಾ ಪಲಾಯನವೇ ದೊಡ್ಡ ಸವಾಲು
ಅಫ್ಘಾನಿಸ್ತಾನದಿಂದ ಹೊರ ನಡೆದ ವಲಸಿಗರ ಕುಟುಂಬ
Follow us
|

Updated on:Sep 03, 2021 | 4:49 PM

ಕಾಬೂಲ್​ನಿಂದ ಅಮೆರಿಕ ಸೇನೆಯನ್ನು ಓಡಿಸಿ ಬೀಗುತ್ತಿರುವ ತಾಲಿಬಾನಿಗಳಿಗೆ ಆಡಳಿತ ನಡೆಸುವ ಸವಾಲು ಎದುರಾಗಿದೆ. ತಾಲಿಬಾನ್​ನಿಂದ ಈಚಿನ ದಿನಗಳಲ್ಲಿ ಇತರ ದೇಶಗಳಿಗೆ ಓಡಿ ಹೋಗಿರುವವರ ಸಂಖ್ಯೆ 1.20 ಲಕ್ಷ ಎಂದು ಅಂದಾಜಿಸಲಾಗಿದೆ. ಹಿಂದಿನ ಸರ್ಕಾರದ ಆಡಳಿತ ಚಕ್ರಗಳಾಗಿದ್ದವರೇ ಇವರಲ್ಲಿ ಬಹುಸಂಖ್ಯಾತರು ಎಂದು ಅಂತರರಾಷ್ಟ್ರೀಯ ಮಾಧ್ಯಮಗಳು ಅಂದಾಜಿಸಿವೆ. ವಿಸಾಗೆ ಅಪ್ಲೈ ಮಾಡುವಷ್ಟು ಬುದ್ಧಿಯಿರುವ ಯಾರೊಬ್ಬರೂ ಅಫ್ಘಾನಿಸ್ತಾನದಲ್ಲಿ ಉಳಿಯಲು ಇಷ್ಟಪಡುತ್ತಿಲ್ಲ. ಬುದ್ಧಿವಂತರೆಲ್ಲರೂ ದೇಶ ಬಿಟ್ಟು ಹೋದರೆ ಅಧಿಕಾರ ಹಿಡಿದವರು ಆಡಳಿತ ನಡೆಸುವುದಾದರೂ ಹೇಗೆ? ತಾಲಿಬಾನಿಗಳು ಮುಂದಿನ ದಿನಗಳಲ್ಲಿ ಎದುರಿಸಬೇಕಾದ ಸವಾಲು ಇದು.

ಅಮೆರಿಕ ಮತ್ತು ಇತರ ಪಾಶ್ಚಿಮಾತ್ಯ ದೇಶಗಳೊಂದಿಗೆ ಕೆಲಸ ಮಾಡಿದ್ದ, ವಿವಿಧ ಹಂತಗಳಲ್ಲಿ ಸಹಕರಿಸಿದ್ದ ಅಫ್ಘಾನ್ ಪ್ರಜೆಗಳನ್ನು ಆ ದೇಶಗಳು ತಮ್ಮ ಸೇನೆ ಮತ್ತು ನಾಗರಿಕರನ್ನು ಹಿಂದಕ್ಕೆ ಕರೆದೊಯ್ದಿವೆ. ಅಮೆರಿಕ ಬೆಂಬಲಿತ ಅಫ್ಘಾನ್ ಸರ್ಕಾರದ ವಿರುದ್ಧ ಗೆಲುವು ಸಾಧಿಸಿದ ತಾಲಿಬಾನಿಗಳು ಇಂಥವರ ಮೇಲೆ ಪ್ರತೀಕಾರ ತೀರಿಸಿಕೊಳ್ಳಬಹುದು ಎಂದು ಪಾಶ್ಚಿಮಾತ್ಯ ದೇಶಗಳು ಹೆದರಿದ್ದವು.

ಹೀಗೆ ಪಲಾಯನ ಮಾಡಿದವರಲ್ಲಿ ಸರ್ಕಾರದ ದೈನಂದಿನ ಆಡಳಿತ ನಿರ್ವಹಿಸುತ್ತಿದ್ದ ಅಧಿಕಾರಶಾಹಿ, ಆರ್ಥಿಕ ವ್ಯವಹಾರದ ಆಧಾರವಾಗಿದ್ದ ಬ್ಯಾಂಕ್​ ಸಿಬ್ಬಂದಿ, ಸೇವಾ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದ ಎನ್​ಜಿಒ ಸಿಬ್ಬಂದಿ, ನಾಗರಿಕ ಸೇವಾ ಚಳವಳಿಕಾರರು, ಪತ್ರಕರ್ತರು, ಪದವೀಧರರ, ವೃತ್ತಿಪರರು ಸೇರಿದ್ದಾರೆ. ಅಫ್ಘಾನಿಸ್ತಾನ ಸಮಾಜದ ಬೆನ್ನೆಲುಬು ಎನಿಸಿದ್ದ ಈ ವರ್ಗವನ್ನು ತಾಲಿಬಾನಿಗಳು ಅತಿಯಾಗಿ ದ್ವೇಷಿಸುತ್ತಿದ್ದರು. ಇವರನ್ನೆಲ್ಲ ಪಾಶ್ಚಿಮಾತ್ಯ ದೇಶಗಳ ಪ್ರಲೋಭನೆ ಭ್ರಷ್ಟರನ್ನಾಗಿಸಿದೆ ಎಂದು ದೂರಿತ್ತು.

‘ದೇಶ ಬಿಟ್ಟು ಹೋಗಬೇಕು ಎಂದು ನಾನು ಎಂದಿಗೂ ಅಂದುಕೊಂಡಿರಲಿಲ್ಲ. ನನ್ನದೆಲ್ಲವನ್ನೂ ಬಿಟ್ಟು ಮತ್ತೊಂದು ದೇಶದಲ್ಲಿ ಬದುಕು ಕಟ್ಟಿಕೊಳ್ಳುವುದು ಯಾವತ್ತಿದ್ದರೂ ಹಿಂಸೆಯೇ ಅಲ್ಲವೇ’ ಎಂದು ಪ್ರಶ್ನಿಸುತ್ತಾರೆ ರಾಚಿಡ್. ಇದೀಗ ಫ್ರಾನ್ಸ್​ನವಲ್ಲಿರುವ ರಾಚಿಡ್, ಕೆಲವೇ ವಾರಗಳ ಮೊದಲು ಕಾಬೂಲ್​ನಲ್ಲಿ ಅಫ್ಗಾನ್ ಸರ್ಕಾರದ ಆಡಳಿತದಲ್ಲಿ ಉನ್ನತ ಹುದ್ದೆಯಲ್ಲಿದ್ದರು.

‘ಅಫ್ಘಾನಿಸ್ತಾನದಲ್ಲಿದ್ದಾಗ ನನಗೆ ಎಲ್ಲವೂ ಇತ್ತು. ಮುಖ್ಯವಾಗಿ ವೃತ್ತಿಯಲ್ಲಿ ತೃಪ್ತಿಯಿತ್ತು. ನನ್ನ ಕೈಕೆಳಗೆ 50 ಮಂದಿ ಕೆಲಸ ಮಾಡುತ್ತಿದ್ದರು. ಸಮಾಜದಲ್ಲಿ ಉನ್ನತ ಸ್ಥಾನಮಾನವಿತ್ತು. ಎಲ್ಲಕ್ಕಿಂತ ಮುಖ್ಯವಾಗಿ ನಾನು ಮಾಡುತ್ತಿದ್ದ ಕೆಲಸವು ಅಫ್ಘಾನಿಸ್ತಾನದ ಜನರಿಗೆ ಉಪಯುಕ್ತವಾಗಿತ್ತು ಎನ್ನುತ್ತಾರೆ ಅವರು. ಯೂರೋಪ್ ವಿಶ್ವವಿದ್ಯಾಲಯವೊಂದರಿಂದ ಸ್ನಾತಕೋತ್ತರ ಪದವೀಧರರಾಗಿರುವ ರಾಚಿಡ್ ಅವರ ಕುಟುಂಬದ ಹಲವು ಸದಸ್ಯರು ಇಂದಿಗೂ ಅಫ್ಘಾನಿಸ್ತಾನದಲ್ಲಿಯೇ ಇದ್ದಾರೆ.

ತಮ್ಮ ಪೂರ್ಣ ಹೆಸರು ಅಥವಾ ಯಾವ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ ಪಡೆದಿದ್ದಾರೆ ಎಂದು ನಮೂದಿಸುವುದು ಬೇಡ ಎಂದು ಎಎಫ್​ಪಿ ಸುದ್ದಿಸಂಸ್ಥೆಯ ವರದಿಗಾರನಿಗೆ ರಾಚಿಡ್ ಮನವಿ ಮಾಡಿದರು. ಅವರು ದೇಶಬಿಟ್ಟು ಹೊರಗೆ ಬಂದಿದ್ದರೂ, ದೇಶದಲ್ಲಿಯೇ ಉಳಿದಿರುವ ಅವರ ಕುಟುಂಬದ ಇತರ ಸದಸ್ಯರ ಮೇಲೆ ತಾಲಿಬಾನಿಗಳು ಸೇಡು ತೀರಿಸಿಕೊಳ್ಳಬಹುದು ಎಂಬ ಭಯ ಅವರನ್ನು ಇಂದಿಗೂ ಕಾಡುತ್ತಿದೆ.

‘ನನ್ನ ಜೊತೆಗೆ ಓದುತ್ತಿದ್ದ 30ರಿಂದ 40 ಜನರು ಈಗ ದೇಶ ಬಿಟ್ಟು ಹೊರಗೆ ಬಂದಿದ್ದಾರೆ. ಅಫ್ಘಾನಿಸ್ತಾನಕ್ಕೆ ಇದು ದೊಡ್ಡ ನಷ್ಟ’ ಎನ್ನುತ್ತಾರೆ ರಾಚಿಡ್. ಆತ್ಮಹತ್ಯೆ ದಾಳಿಗಳು ಮತ್ತು ಮನುಷ್ಯರನ್ನು ಬೇಟೆಯಾಡಿ ಕೊಲ್ಲುವ ವಿದ್ಯಮಾನಗಳನ್ನೇ ಯುದ್ಧತಂತ್ರವಾಗಿಸಿಕೊಂಡವರ ಕೈಗೆ ದೇಶದ ಆಡಳಿತ ಚುಕ್ಕಾಣಿ ಬಂದ ವಿದ್ಯಮಾನದಿಂದ ಕಂಗಾಲಾದ ರಾಚಿಡ್​ರಂಥ ಎಷ್ಟೋ ಜನರು ಇದೀಗ ಒಲ್ಲದ ಮನಃಸ್ಥಿತಿಯಲ್ಲಿ ಅಫ್ಘಾನಿಸ್ತಾನ ಬಿಟ್ಟು ಹೊರನಡೆದಿದ್ದಾರೆ. ಪ್ರತೀಕಾರ ತೀರಿಸಿಕೊಳ್ಳುವುದಿಲ್ಲ, ಭದ್ರತೆ ಒದಗಿಸುತ್ತೇವೆ ಎಂಬ ತಾಲಿಬಾನಿಗಳ ಭರವಸೆ ನಂಬುವ ಮನಃಸ್ಥಿತಿಯೂ ಅವರಿಗಿಲ್ಲ.

ಆಡಳಿತ ನಡೆಸುವ ಸವಾಲು ಯಾವುದೇ ದೇಶಕ್ಕೆ ಪ್ರತಿಭಾ ಪಲಾಯನ ಎನ್ನುವುದು ಅತ್ಯಂತ ಗಂಭೀರ ಸಮಸ್ಯೆ. ಅದರಲ್ಲೂ ಅಫ್ಘಾನಿಸ್ತಾನದಂಥ ಬಡತನವನ್ನೇ ಹಾಸಿಹೊದ್ದ ದೇಶಕ್ಕೆ ಇದರ ಬಿಸಿ ಮತ್ತಷ್ಟು ತೀವ್ರವಾಗಿ ತಟ್ಟುತ್ತದೆ. ಇದರ ಬಿಸಿ ಅಫ್ಘಾನಿಸ್ತಾನಕ್ಕೆ ಈಗಾಗಲೇ ತಟ್ಟಿದೆ. ಬಹುಶಃ ಇದಕ್ಕೇ ಇರಬಹುದು, ‘ಅಫ್ಘಾನಿಸ್ತಾನದ ಬುದ್ಧಿವಂತರನ್ನೆಲ್ಲಾ ಅಮೆರಿಕ ದೂರ ಮಾಡುತ್ತಿದೆ’ ಎಂದು ತಾಲಿಬಾನ್ ವಕ್ತಾರ ಆಗಸ್ಟ್ 24ರಂದು ಹೇಳಿಕೆ ನೀಡಿದ್ದು. ಏರ್​ಲಿಫ್ಟ್​ಗೆ ಒಂದು ವಾರ ಬಾಕಿಯಿರುವಂತೆಯೇ ಈ ಹೇಳಿಕೆ ತಾಲಿಬಾನ್​ನಿಂದ ಹೊರಬಿದ್ದಿತ್ತು ಎನ್ನುವುದು ಗಮನಾರ್ಹ.

‘ನಮ್ಮ ದೇಶದ ಜನರನ್ನು ಹೊರಗೆ ಕೊಂಡೊಯ್ಯಬೇಡಿ’ ಎಂದು ಅಫ್ಘಾನ್ ವಕ್ತಾರ ಝಬಿವುಲ್ಲಾ ಮುಜಾಹಿದ್ ಕಾಬೂಲ್​ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಅಮೆರಿಕಕ್ಕೆ ತಾಕೀತು ಮಾಡಿದ್ದ. ‘ನಮ್ಮ ದೇಶದ ಬುದ್ಧಿವಂತರು, ಅವರ ಕೌಶಲಗಳು ನಮಗೆ ಬೇಕು. ಅವರನ್ನು ನಿಮ್ಮ ದೇಶಕ್ಕೆ ಕೊಂಡೊಯ್ಯಬೇಡಿ’ ಎಂದು ಮುಜಾಹಿದ್ ಹೇಳಿದ್ದ.

ಸಿರಿಯಾ ದೇಶದಿಂದ 2015ರಲ್ಲಿ ಹೊರನಡೆದ ನಿರಾಶ್ರಿತರ ಸಾಮಾಜಿಕ ಸ್ಥಿತಿಗತಿಯ ವಿಶ್ಲೇಷಣೆ ಮಾಡಿರುವ ಲಕ್ಸಂಬರ್ಗ್​ ಇನ್​ಸ್ಟಿಟ್ಯೂಟ್​ನ ವಲಸೆ ತಜ್ಞ ಫ್ರೆಡರಿಇಕ್ ಡಾಕ್ವಿಯರ್ ಒಂದು ಗಮನಾರ್ಹ ಸಂಗತಿಯನ್ನು ಪ್ರಸ್ತಾಪಿಸಿದರು. ಯಾವುದೇ ದೇಶವು ಸಂಕಷ್ಟಕ್ಕೆ ಸಿಲುಕಿದಾಗ ಅಲ್ಲಿಂದ ಹೊರ ನಡೆಯುವವರಲ್ಲಿ ಮೊದಲ ಸ್ಥಾನದಲ್ಲಿರುವವರು ಆ ದೇಶದ ಕುಶಲ ಕಾರ್ಮಿಕರು. ಹೆಚ್ಚು ಓದಿದವವರಿಗೇ ದೇಶ ಬಿಡಲು ಮೊದಲ ಅವಕಾಶ ಸಿಗುತ್ತದೆ ಎನ್ನುತ್ತಾರೆ ಅವರು.

ಕಾಬೂಲ್​ನಲ್ಲಿರುವ ಅಮೆರಿಕ ವಿಶ್ವವಿದ್ಯಾಲಯದಲ್ಲಿರುವ ಅಫ್ಘಾನಿಸ್ತಾನದ ವಿದ್ಯಮಾನಗಳ ತಜ್ಞ ಮೈಕೆಲ್ ಬೇರಿ ಮತ್ತೊಂದು ವಿಷಯವನ್ನು ಮುಂದಿಡುತ್ತಾರೆ. ‘ತಾಲಿಬಾನ್ ಹೋರಾಟಗಾರರ ಪೈಕಿ ಬಹುತೇಕರು ಹಳ್ಳಿಗಳಿಂದ ಬಂದವರು. ಶಿಕ್ಷಣವೂ ಇಲ್ಲ. ಒಂದು ದೇಶದ ಆಡಳಿತಶಾಹಿ ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬ ಅವರಿಗೆ ಅವರಿಗಿಲ್ಲ’ ಎನ್ನುತ್ತಾರೆ ಅವರು. ಆಡಳಿತದ ಚಕ್ರ ತಿರುಗಲು ವಿದ್ಯಾವಂತರು ಬೇಕು. ವಿದೇಶಗಳಿಂದ ನೆರವು ಪಡೆದುಕೊಳ್ಳಲು ಮನವೊಲಿಸುವ ಕಲೆ ಅರಿತ ರಾಜತಾಂತ್ರಿಕರು ಬೇಕು. ಕೇವಲ ಚೀನಾ, ಪಾಕಿಸ್ತಾನ ಅಥವಾ ಕತಾರ್​ನಿಂದ ನೆರವು ಪಡೆಯುತ್ತೇವೆ ಎಂದರೂ ವಿದ್ಯಾವಂತರು ಸರ್ಕಾರದ ಭಾಗವಾಗಿರಬೇಕಾಗುತ್ತದೆ ಎಂದು ಅವರು ಹೇಳುತ್ತಾರೆ.

‘ದೇಶದ ಆಡಳಿತ ವ್ಯವಸ್ಥೆಯನ್ನು ಹಾಳುಮಾಡುವುದನ್ನೇ ತಮ್ಮ ಜವಾಬ್ದಾರಿ ಎಂದುಕೊಂಡಿದ್ದವರು ಅವರು. ಇಂಥ ಕೆಲಸ ಮಾಡಲೆಂದೇ ಅವರಿಗೆ ಪಾಕಿಸ್ತಾನ ಹಣಕಾಸು ನೆರವು ಒದಗಿಸಿದ್ದು. ಈಗ ದೇಶದ ಆಡಳಿತ ಚುಕ್ಕಾಣಿಯೇ ಅವರ ಕೈಗೆ ಸಿಕ್ಕಿದೆ’ ಎಂದು ಅವರು ತಿಳಿಸಿದರು.

ಪಲಾಯನಕ್ಕೆ ಅವಕಾಶ ಕೊಡುವುದೂ ಒಂದು ತಂತ್ರ ವಿದ್ಯಾವಂತರು ದೇಶ ಬಿಟ್ಟರೆ ಆಡಳಿತ ನಡೆಸಲು ಕಷ್ಟವಾಗುತ್ತದೆ ಎಂದು ತಿಳಿದಿದ್ದರೆ ಅಷ್ಟೊಂದು ಜನರು ದೇಶ ಬಿಡಲು ತಾಲಿಬಾನ್ ಏಕೆ ಅವಕಾಶ ಮಾಡಿಕೊಟ್ಟಿತು ಎಂಬ ಬಗ್ಗೆ ಹಲವು ವಿಶ್ಲೇಷಣೆಗಳು ಚಾಲ್ತಿಗೆ ಬಂದಿವೆ.

ಯಾವುದೇ ಆಡಳಿತಕ್ಕೆ ಸಲಹೆ ನೀಡುವುದು, ತಪ್ಪು ಮಾಡಿದಾಗ ಟೀಕಿಸುವುದು ವಿದ್ಯಾವಂತರ ವರ್ಗ. ತಾಲಿಬಾನ್ ಆಡಳಿತಕ್ಕೆ ಬೌದ್ಧಿಕ ಮಟ್ಟದಲ್ಲಿ ಸವಾಲೊಡ್ಡುವ ಸ್ಥಿತಿಯಲ್ಲಿದ್ದವರು, ಸ್ವತಂತ್ರವಾಗಿ ಯೊಚನೆ ಮಾಡುವ ಸಾಮರ್ಥ್ಯ ಇರುವವರು ದೇಶ ಬಿಟ್ಟು ಹೋಗಲು ಮುಂದಾದರೆ ಅದು ತಾಲಿಬಾನಿಗಳಿಗೆ ಒಳಿತು. ಹೀಗಾಗಿಯೇ ಅವರು ಜನರು ದೇಶಬಿಟ್ಟು ಹೋಗುತ್ತಿದ್ದರೂ ತಡೆಯಲು ಮುಂದಾಗಲಿಲ್ಲ. ಮುಂದೆ ಎದುರಾಗಬಹುದಾದ ವಿರೋಧವನ್ನು ತಾಲಿಬಾನ್ ಈ ಮೂಲಕ ನಿವಾರಿಸಿಕೊಂಡಿತು ಎನ್ನುತ್ತಾರೆ ಬಾರೆ.

ತಾಲಿಬಾನ್ ಕ್ರಮವನ್ನು ಪಾಸಿಟಿವ್ ಆಯಾಮದಿಂದ ನೋಡುವ ವಿಶ್ಲೇಷಣೆಯೂ ಇದೆ. ಅಂಥವರು ಹೇಳುವ ಪ್ರಕಾರ, ಯಾವುದೇ ದೇಶದಿಂದ ಹೊರಗೆ ಹೋಗುವವರು ತಮ್ಮ ಕುಟುಂಬದ ಸಂಪರ್ಕವನ್ನು ಪೂರ್ಣ ರೀತಿಯಲ್ಲಿ ಕಳೆದುಕೊಳ್ಳುವುದಿಲ್ಲ. ಅಲ್ಲಿರುವ ಕುಟುಂಬಸ್ಥರಿಗಾಗಿ ವಿದೇಶದಲ್ಲಿ ದುಡಿದು ಗಳಿಸುವ ಒಂದಿಷ್ಟು ಹಣವನ್ನು ವ್ಯಯಿಸುತ್ತಾರೆ. ಇದು ದೇಶದ ಆರ್ಥಿಕತೆಗೆ ಅನುಕೂಲ ಕಲ್ಪಿಸಿಕೊಡುತ್ತದೆ. ಈ ಅಂಶವನ್ನು ಮನದಲ್ಲಿಟ್ಟುಕೊಂಡೇ ತಾಲಿಬಾನ್ ಪ್ರತಿಭಾ ಪಲಾಯನಕ್ಕೆ ಅವಕಾಶ ಮಾಡಿಕೊಟ್ಟಿತು ಎಂಂದು ಕೆಲವರು ಹೇಳುತ್ತಾರೆ.

ಅಫ್ಘಾನಿಸ್ತಾನದಿಂದ ಅಮೆರಿಕ ಸೇನೆ ಹಿಂದೆ ಸರಿದ ನಂತರ ತಾಲಿಬಾನಿಗಳು ಮಾಡಿರುವ ಪೆರೇಡ್​ನಲ್ಲಿ ಅವರು ಝಳಪಿಸಿದ ಆತ್ಮಘಾತುಕ ಆಯುಧಗಳು ಮತ್ತು ಹೊರಬಿದ್ದ ಘೋಷಣೆಗಳನ್ನು ಗಮನಿಸಿದ ಯಾರಿಗೇ ಆದರೂ ಅವರು ಬದಲಾಗಿದ್ದಾರೆ ಎನಿಸುವುದಿಲ್ಲ. ಹೀಗಾಗಿ ಒಮ್ಮೆ ದೇಶಬಿಟ್ಟು ಹೋದವರು ಮತ್ತೆ ಅಲ್ಲಿಗೆ ಹಿಂದಿರುತ್ತಾರೆ ಎಂದು ನಂಬಲು ಸದ್ಯಕ್ಕಂತೂ ಯಾವುದೇ ಆಧಾರಗಳು ಇಲ್ಲ.

(New Challenge for Taliban in Afghanistan is brain drain it complicates the administration)

ಇದನ್ನೂ ಓದಿ: Afghanistan: ಅಫ್ಘಾನಿಸ್ತಾನದಲ್ಲಿ ವಶಪಡಿಸಿಕೊಂಡ ಮಿಲಿಟರಿ ಸಾಮಾಗ್ರಿಗಳನ್ನು ಕಂದಹಾರ್‌ನಲ್ಲಿ ಮೆರವಣಿಗೆ ನಡೆಸಿ ಪ್ರದರ್ಶಿಸಿದ ತಾಲಿಬಾನ್

ಇದನ್ನೂ ಓದಿ: ಎರಡು ದಶಕಗಳ ನಂತರ ಅಮೆರಿಕದ ಸೇನೆ ಅಫ್ಘಾನಿಸ್ತಾನದ ನೆಲ ಬಿಟ್ಟು ಸ್ವದೇಶಕ್ಕೆ ಮರಳಿತು, ಇನ್ನು ಅಲ್ಲಿ ತಾಲಿಬಾನ್ ಆಡಳಿತ

Published On - 6:55 am, Fri, 3 September 21