ಪಂಜ್​ಶಿರ್​ ಕಣಿವೆಯಲ್ಲಿ ತಾಲಿಬಾನ್ ಗೆಲುವಿಗೆ ಕಾರಣವಾಗಿದ್ದು ಈ 5 ಸಂಗತಿಗಳು; ಇದರಲ್ಲಿ ಭಾರತದ ಪಾತ್ರವೇನು?

ತಾಲಿಬಾನ್ ಹೋರಾಟಗಾರರ ವಿರುದ್ಧ ಶಸ್ತ್ರ ಝಳಪಿಸುವ ಯಾವುದೇ ಹೋರಾಟ ಸದ್ಯಕ್ಕೆ ಅಫ್ಘಾನಿಸ್ತಾನದಲ್ಲಿ ಇಲ್ಲ. ಪಂಜ್​ಶಿರ್ ಕಣಿವೆಯಲ್ಲಿ ನಾರ್ದರ್ನ್ ಅಲಯನ್ಸ್​ ಸೋಲಿಗೆ ಕಾರಣವಾಗಿದ್ದು ಈ ಐದು ಅಂಶಗಳು.

ಪಂಜ್​ಶಿರ್​ ಕಣಿವೆಯಲ್ಲಿ ತಾಲಿಬಾನ್ ಗೆಲುವಿಗೆ ಕಾರಣವಾಗಿದ್ದು ಈ 5 ಸಂಗತಿಗಳು; ಇದರಲ್ಲಿ ಭಾರತದ ಪಾತ್ರವೇನು?
ಮಸೂದ್​ಗೆ ನಿಷ್ಠೆ ತೋರಿದ್ದ ನಾರ್ದರ್ನ್ ಅಲಯನ್ಸ್ ಹೋರಾಟಗಾರರು
Follow us
Ghanashyam D M | ಡಿ.ಎಂ.ಘನಶ್ಯಾಮ
|

Updated on:Sep 07, 2021 | 9:43 PM

ಅಫ್ಘಾನಿಸ್ತಾನದಲ್ಲಿ ಪ್ರತಿರೋಧದ ಕಿಡಿಯನ್ನು ಜೀವಂತವಾಗಿರಿಸಿದ್ದ ಪಂಜ್​ಶಿರ್​ ಕಣಿವೆಯೂ ಇದೀಗ ನಾರ್ದರ್ನ್ ಅಲಯನ್ಸ್​ ಕೈತಪ್ಪಿದೆ. ಈ ಬೆಳವಣಿಗೆಯೊಂದಿಗೆ ಇಡೀ ಅಫ್ಘಾನಿಸ್ತಾನ ಇದೀಗ ತಾಲಿಬಾನ್​ ಅಧೀನಕ್ಕೆ ಬಂದಿದೆ. ತಾಲಿಬಾನ್ ಹೋರಾಟಗಾರರ ವಿರುದ್ಧ ಶಸ್ತ್ರ ಝಳಪಿಸುವ ಯಾವುದೇ ಹೋರಾಟ ಸದ್ಯಕ್ಕೆ ಅಫ್ಘಾನಿಸ್ತಾನದಲ್ಲಿ ಇಲ್ಲ. ಪಂಜ್​ಶಿರ್ ಕಣಿವೆಯಲ್ಲಿ ನಾರ್ದರ್ನ್ ಅಲಯನ್ಸ್​ ಸೋಲಿಗೆ ಕಾರಣವಾಗಿದ್ದು ಈ ಐದು ಅಂಶಗಳು.

1) ತಾಲಿಬಾನ್ ಯಶಸ್ವಿ ತಂತ್ರಗಾರಿಕೆ 1990ರಂತೆ ಈ ಬಾರಿ ನಾರ್ದರ್ನ್​ ಅಲಯನ್ಸ್​ಗೆ ತಜಕಿಸ್ತಾನದಿಂದ ಹೆಚ್ಚು ನೆರವು ಸಿಗಲಿಲ್ಲ. ಪಂಜ್​ಶಿರ್ ಕಣಿವೆಯನ್ನು ತಜಕಿಸ್ತಾನದೊಂದಿಗೆ ಸಂಪರ್ಕಿಸುವ ಎಲ್ಲ ಭೂಮಾರ್ಗಗಳನ್ನು ತಾಲಿಬಾನ್ ಬಂದ್ ಮಾಡಿತ್ತು. ಇಡೀ ಕಣಿವೆಯನ್ನು ತಾಲಿಬಾನ್ ಪಡೆಗಳು ಸುತ್ತುವರಿದಿದ್ದ ಕಾರಣ ಶಸ್ತ್ರಾಸ್ತ್ರಗಳು, ಹೋರಾಟಗಾರರು, ಆಹಾರ, ಇಂಧನ ಮತ್ತು ಇತರ ನೆರವು ನಾರ್ದರ್ನ್ ಅಲಯನ್ಸ್​ ಪಡೆಗಳಿಗೆ ಸಿಗಲಿಲ್ಲ.

2) ಪಾಕಿಸ್ತಾನದ ನೆರವು ಪಂಜ್​ಶಿರ್ ಪ್ರಾಂತ್ಯದಲ್ಲಿ ನಾರ್ದರ್ನ್ ಅಲಯನ್ಸ್​ ಪಡೆಗಳು ಮೇಲುಗೈ ಸಾಧಿಸುವಲ್ಲಿ ಪಾಕಿಸ್ತಾನವು ತಾಲಿಬಾನ್​ಗೆ ನೆರವಾಗಿದ್ದು ಪ್ರಮುಖ ಕಾರಣ ಎನಿಸಿದೆ. ಈ ಬಾರಿ ತಾಲಿಬಾನ್​ಗೆ ಶಸ್ತ್ರಾಸ್ತ್ರಗಳು, ಮದ್ದುಗುಂಡುಗಳ ಜೊತೆಗೆ ಪಾಕ್​ ಸೇನಾಪಡೆಯ ವಿಶೇಷ ಘಟಕದ ಸಿಬ್ಬಂದಿಯೂ ತಾಲಿಬಾನ್​ಗೆ ನೆರವಾದರು.

ಪಾಕಿಸ್ತಾನ್ ವಾಯುಪಡೆಯು ಯುದ್ಧವಿಮಾನಗಳು, ಹೆಲಿಕಾಪ್ಟರ್​ ಮತ್ತು ಡ್ರೋಣ್​ಗಳು ಪಂಜ್​ಶಿರ್ ಕಣಿವೆಯಲ್ಲಿ ಹೋರಾಟಗಾರರ ಮೆಲೆ ಬಾಂಬ್​ಗಳ ಮಳೆಗರೆದವು. ಇದು ತಾಲಿಬಾನ್ ಹೋರಾಟಗಾರರ ಪರವಾಗಿ ಇಡೀ ಕದನವನ್ನು ತಿರುಗಿಸಿದ ವಿದ್ಯಮಾನವಿದು. ಪಾಕಿಸ್ತಾನ ಗುಪ್ತಚರ ಸಂಸ್ಥೆ ಐಎಸ್​ಐನ ಮುಖ್ಯಸ್ಥರು ಕಾಬೂಲ್​ನಲ್ಲಿ ಇಳಿದಿದ್ದು, ಒಟ್ಟಾರೆ ವಿದ್ಯಮಾನದಲ್ಲಿ ರಾವಲ್ಪಿಂಡಿಯ (ಪಾಕ್​ ಸೇನೆ) ಹಸ್ತಕ್ಷೇಪಕ್ಕೆ ಸಾಕ್ಷ್ಯ ಒದಗಿಸಿತು. ಅಫ್ಘಾನಿಸ್ತಾನದ ವಿದ್ಯಮಾನಗಳಲ್ಲಿ ಪಾಕಿಸ್ತಾನದ ಹಸ್ತಕ್ಷೇಪವನ್ನು ಇರಾನ್ ಸಹ ಪರೋಕ್ಷವಾಗಿ ಪ್ರಸ್ತಾಪಿಸಿ, ತನಿಖೆ ನಡೆಸುವುದಾಗಿ ಟೀಕಿಸಿದೆ.

3) ಅನಾಥವಾಯ್ತು ನಾರ್ದರ್ನ್ ಅಲಯನ್ಸ್ ಪಂಜ್​ಶಿರ್​ನ ಖ್ಯಾತ ಹೋರಾಟಗಾರ ಅಹ್ಮದ್ ಶಾ ಮಸೂದ್ ಜೀವಂತವಿದ್ದಾಗ ನಡೆಯುತ್ತಿದ್ದ ಕದನಗಳಲ್ಲಿ ಅಮೆರಿಕ ಮತ್ತು ಅದರ ನ್ಯಾಟೊ ಮಿತ್ರಪಡೆಗಳ ನೆರವು ನಾರ್ದರ್ನ್ ಅಲಯನ್ಸ್​ಗೆ ಸತತವಾಗಿ ಸಿಗುತ್ತಿತ್ತು. ಹೋರಾಟಗಾರರು, ಶಸ್ತ್ರಾಸ್ತ್ರಗಳ ನೆರವು ಸಹ ಅವರ ಪಾಲಿಗೆ ಒದಗಿ ಬರುತ್ತಿತ್ತು. ಇದೀಗ ಪಂಜ್​ಶಿರ್ ಕಣಿವೆಯಲ್ಲಿ ಹೋರಾಟ ಮುನ್ನಡೆಸುತ್ತಿರುವ ಅಹ್ಮದ್ ಶಾ ಮಸೂದ್ ಅವರ ಪುತ್ರ, ಅಹ್ಮದ್ ಸಹ ಈಚೆಗಷ್ಟೇ ‘ವಾಷಿಂಗ್​ಟನ್​ ಪೋಸ್ಟ್​’ ದಿನಪತ್ರಿಕೆಗೆ ಲೇಖನ ಬರೆದು ಅಮೆರಿಕ, ಬ್ರಿಟನ್ ಮತ್ತು ಫ್ರಾನ್ಸ್​ ದೇಶಗಳ ನೆರವು ಯಾಚಿಸಿದ್ದರು. ಆದರೆ ಯಾವ ದೇಶಗಳೂ ಅವರ ಸಹಾಯಕ್ಕೆ ಬರಲಿಲ್ಲ.

4) ಅಪ್ಪನಷ್ಟು ಯಶಸ್ಸು ಮಗನಿಗೆ ಸಿಗಲಿಲ್ಲ ನಾರ್ದರ್ನ್ ಅಲಯನ್ಸ್​ ಹೋರಾಟವನ್ನು ಅಹ್ಮದ್ ಶಾ ಮಸೂದ್​ ಮುನ್ನಡೆಸುತ್ತಿದ್ದಾಗ ಸೋವಿಯತ್ ಒಕ್ಕೂಟಕ್ಕಾಗಲೀ, ತಾಲಿಬಾನ್​ಗಾಗಲೀ ಪಂಜ್​ಶಿರ್ ಕಣಿವೆ ಎಂದಿಗೂ ತಲೆಬಾಗಲಿಲ್ಲ. ಬ್ರಿಟನ್​ನ ರಾಯಲ್​ ಮಿಲಿಟರಿ ಕಾಲೇಜಿನಲ್ಲಿ ಯುದ್ಧಶಾಸ್ತ್ರವನ್ನೇ ಓದಿಕೊಂಡ ಮಗ ಮಸೂದ್​ಗೆ ಮಾತ್ರ ಈ ಕಣಿವೆಯಲ್ಲಿ ಯಶಸ್ಸು ಸಿಗಲಿಲ್ಲ. ಇದೀಗ ಮಸೂದ್ ತಾಲಿಬಾನ್ ಹಿಡಿತದಿಂದ ಪಾರಾಗಿ ತಜಕಿಸ್ತಾನಕ್ಕೆ ಓಡಿ ಹೋಗಿದ್ದಾರೆ ಎನ್ನಲಾಗಿದೆ.

ಮಸೂದ್ ಜೊತೆಗೆ ಕಣಿವೆಯಲ್ಲಿ ಹೋರಾಡುತ್ತಿದ್ದ ಅಫ್ಘಾನಿಸ್ತಾನದ ಸ್ವಯಂ ಘೋಷಿಸ ಅಧ್ಯಕ್ಷ ಅಮರುಲ್ಲಾ ಸಲೇಹ್ ಸಹ ಸಾಮಾನ್ಯದವರಲ್ಲ. ಸ್ವತಃ ಅಫ್ಘಾನಿಸ್ತಾನ ಗುಪ್ತಚರ ವಿಭಾಗದ ಮುಖ್ಯಸ್ಥರಾಗಿದ್ದ ಸಲೇಹ್​ಗೆ ಅಮೆರಿಕದ ಸಿಐಎ ಸೇರಿದಂತೆ ಹಲವು ದೇಶಗಳ ಗುಪ್ತಚರ ದಳಗಳ ಪ್ರಭಾವಿ ಅಧಿಕಾರಿಗಳೊಂದಿಗೆ ನಿಕಟ ಸಂಪರ್ಕವಿತ್ತು. ಆದರೆ ಈ ಬಾರಿ ಅವರಿಗೆ ಯಾರ ನೆರವೂ ಸಿಗಲಿಲ್ಲ. ಅವರೂ ಸಹ ಮುಂದೊಂದು ದಿನ ಹೋರಾಟ ಮುಂದುವರಿಸುವ ಉದ್ದೇಶದಿಂದ ತಜಕಿಸ್ತಾನಕ್ಕೆ ಪಲಾಯನ ಮಾಡಿದ್ದಾರೆ ಎಂದು ಹೇಳಲಾಗಿದೆ.

5) ಇದು ಭಾರತಕ್ಕೆ ಆದ ಹಿನ್ನಡೆ ನಾರ್ದರ್ನ್ ಅಲಯನ್ಸ್​ ಬಹುಕಾಲದಿಂದ ಭಾರತದೊಂದಿಗೆ ಮಿತ್ರತ್ವ ಭಾವದೊಂದಿಗೆ ನಡೆದುಕೊಂಡಿತ್ತು. ಆದರೆ ಈ ಬಾರಿ ತಾಲಿಬಾನ್ ಪರ ಪಾಕಿಸ್ತಾನ ಸಕ್ರಿಯವಾಗಿ ನಿಂತಿದ್ದಾಗಲೂ ಭಾರತಕ್ಕೆ ನಾರ್ದರ್ನ್ ಅಲಯನ್ಸ್​ ಬೆಂಬಲಕ್ಕೆ ನಿಲ್ಲಲು ಆಗಲಿಲ್ಲ. ಅಷ್ಟರಮಟ್ಟಿಗೆ ಇದು ಭಾರತಕ್ಕೂ ಅದ ಹಿನ್ನಡೆ ಎಂದು ಇಂಡಿಯನ್ ಎಕ್ಸ್​ಪ್ರೆಸ್​ ಸೇರಿದಂತೆ ಹಲವು ಜಾಲತಾಣಗಳಲ್ಲಿ ವಿಶ್ಲೇಷಣೆಗಳು ಪ್ರಕಟವಾಗಿವೆ. ಭಾರತವು ಸಹ ಬಹುಕಾಲದಿಂದ ನಾರ್ದರ್ನ್ ಅಲಯನ್ಸ್​ಗೆ ಬಹುಕಾಲದಿಂದ ಹಣ ಮತ್ತು ಶಸ್ತ್ರಾಸ್ತ್ರಗಳ ನೆರವು ಒದಗಿಸುತ್ತಿತ್ತು. ಈ ವಿಷಯವನ್ನು ಸ್ಟೀವ್ ಕಾಲ್ ತಮ್ಮ ಪುಸ್ತಕವೊಂದರಲ್ಲಿ ದಾಖಲಿಸಿದ್ದಾರೆ. ಆದರೆ ಈ ಬಾರಿ ಅಮೆರಿಕದ ಸೂಚನೆ ಮೇರೆಗೆ ಭಾರತವೂ ಹಿಂದೆ ಸರಿಯಿತು ಎನ್ನಲಾಗಿದೆ.

ಆಗಸ್ಟ್ 13, 2001ರಲ್ಲಿ ಟಿವಿ ಸಂದರ್ಶನವೊಂದರಲ್ಲಿ ಮಾತನಾಡುವಾಗ ಅಹ್ಮದ್ ಶಾ ಮಸೂದ್ ಅವರಿಗೆ ಭಾರತ ಸರ್ಕಾರದ ನೆರವು ನಿಮಗೆ ಸಿಗುತ್ತಿದೆಯೇ ಎಂಬ ಪ್ರಶ್ನೆ ಕೇಳಲಾಗಿತ್ತು. ‘ಭಾರತದೊಂದಿಗೆ ನಾವು ಸೌಹಾರ್ದ ಸಂಬಂಧ ಹೊಂದಿದ್ದೇವೆ. ಅಫ್ಘಾನಿಸ್ತಾನದ ನಿರಾಶ್ರಿತರಿಗೆ ಭಾರತ ಸರ್ಕಾರವು ಮಾನವೀಯ ದೃಷ್ಟಿಯಿಂದ ನೀಡುತ್ತಿರುವ ನೆರವಿಗೆ ನಾವು ಅಭಾರಿಗಳಾಗಿದ್ದೇವೆ. ಅಫ್ಘಾನಿಸ್ತಾನದಲ್ಲಿ ಶಾಂತಿ ಮತ್ತು ಸ್ಥಿರತೆ ನೆಲೆಸಬೇಕೆಂದು ಎರಡೂ ದೇಶಗಳು ಬಯಸುತ್ತವೆ’ ಎಂದು ಅಹ್ಮದ್ ಶಾ ಮಸೂದ್ ಹೇಳಿದ್ದರು.

(Afghanistan Northern Alliance Defeat Five Reasons What is the Role of India)

ಇದನ್ನೂ ಓದಿ: ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಸರ್ಕಾರ ರಚನೆ; ಮೊಹಮ್ಮದ್ ಹಸನ್ ಅಕುಂದ್ ನೂತನ ಪ್ರಧಾನ ಮಂತ್ರಿ

ಇದನ್ನೂ ಓದಿ: ಅಮೆರಿಕದಿಂದ ತರಬೇತಿ ಪಡೆದ ಅಫ್ಘಾನ್ ಸೈನಿಕರನ್ನು ಕೆಲಸಕ್ಕೆ ಕರೆದ ತಾಲಿಬಾನ್

Published On - 9:42 pm, Tue, 7 September 21

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್