ತಾಲಿಬಾನಿಗಳ ಕೈವಶವಾಗಿರುವ ಅಫ್ಘಾನಿಸ್ತಾನದಲ್ಲಿ ಐಸಿಸ್-ಕೆ ಉಗ್ರರ ಉಪಟಳವೂ ಶುರುವಾಗಿರುವುದರಿಂದ ಪರಿಸ್ಥಿತಿ ಸಂಪೂರ್ಣ ಹದಗೆಟ್ಟಿದ್ದು, ಯಾವ ಕ್ಷಣದಲ್ಲಿ ಏನು ಅನಾಹುತ ಆಗುವುದೋ ಎಂದು ಭಯದಲ್ಲೇ ಸಮಯ ಕಳೆಯುವ ಪರಿಸ್ಥಿತಿ ಉದ್ಭವಿಸಿದೆ. ಈಗಾಗಲೇ ಕಾಬೂಲ್ ವಿಮಾನ ನಿಲ್ದಾಣದಲ್ಲಿ ಬಾಂಬ್ ಸ್ಫೋಟಿಸಿ ಹಲವರ ಸಾವಿಗೆ ಕಾರಣವಾಗಿರುವ ಉಗ್ರರು ಮುಂದಿನ 24 ರಿಂದ 36 ಗಂಟೆಯೊಳಗೆ ಮತ್ತೊಮ್ಮೆ ದಾಳಿ ನಡೆಸುವ ಸಾಧ್ಯತೆ ದಟ್ಟವಾಗಿದೆ. ಈ ಸೂಚನೆಯ ಬೆನ್ನಲ್ಲೇ ಅಮೆರಿಕ ರಾಯಭಾರ ಕಚೇರಿ ಬಳಿ ಯಾವ ಕಾರಣಕ್ಕೂ ತೆರಳಬೇಡಿ ಎಂದು ಅಮೆರಿಕ ಅಧ್ಯಕ್ಷ ಜೋ ಬೈಡನ್ ಎಚ್ಚರಿಕೆ ನೀಡಿದ್ದಾರೆ.
ಜತೆಗೆ, ಐಸಿಸ್ ಉಗ್ರರ ವಿರುದ್ಧ ಪ್ರತೀಕಾರ ಮುಂದುವರೆಸುವ ಸೂಚನೆ ನೀಡಿದ ಜೋ ಬೈಡನ್, ಘೋರ ದಾಳಿಯಲ್ಲಿ ಭಾಗಿಯಾಗಿರುವ ಯಾರನ್ನೂ ಬಿಡುವುದಿಲ್ಲ. ಉಗ್ರರ ಮೇಲಿನ ಡ್ರೋನ್ ಅಟ್ಯಾಕ್ ಇದೇ ಕೊನೆಯಲ್ಲ. ಇನ್ನೂ ಶಿಕ್ಷೆ ಎದುರಿಸುವುದು ಬಾಕಿ ಇದೆ. ಅಮೇರಿಕಾ ಸೇನೆಯನ್ನು ಟಾರ್ಗೆಟ್ ಮಾಡಿದವರು ತಕ್ಕ ಬೆಲೆ ತೆರಲೇಬೇಕು. ನಾವು ಉಗ್ರರ ಬೇಟೆಯಾಡುವುದನ್ನು ಮುಂದುವರಿಸುತ್ತೇವೆ ಎಂದು ಹೇಳಿಕೆ ನೀಡಿದ್ದಾರೆ.
ಇತ್ತ, ತಾಲಿಬಾನಿಗಳು ಅಮೆರಿಕಾ ಸೇನೆಗೆ ನೀಡಿರುವ ಗಡುವು ಮುಗಿಯುತ್ತಾ ಬಂದಿದ್ದು, ಆಗಸ್ಟ್ 31ರಂದು ಅಮೆರಿಕಾ ಅಫ್ಘಾನಿಸ್ತಾನ ತೊರೆಯಬೇಕಿದೆ. ಈ ವಿಚಾರದಲ್ಲಿ ಅತ್ಯಂಟ ಕಟು ಮಾತುಗಳನ್ನು ಹೇಳಿರುವ ತಾಲಿಬಾನ್, ನಿಗದಿತ ಅವಧಿಯಲ್ಲಿ ದೇಶ ಬಿಟ್ಟು ಹೊರಡದಿದ್ದರೆ ಪರಿಣಾಮ ಸರಿಯಿರುವುದಿಲ್ಲ ಎಂದು ಬೆದರಿಕೆ ಒಡ್ಡಿದೆ. ಮೇಲಾಗಿ, ಹಂತ ಹಂತವಾಗಿ ಕಾಬೂಲ್ ವಿಮಾನ ನಿಲ್ದಾಣವನ್ನು ನಿಯಂತ್ರಣಕ್ಕೆ ಪಡೆಯುತ್ತಿರುವ ತಾಲಿಬಾನ್, ಈಗಾಗಲೇ ಮೂರು ಗೇಟ್ಗಳನ್ನು ತನ್ನ ವಶಕ್ಕೆ ಪಡೆದಿದೆ. ಈ ಬೆಳವಣಿಗೆಗೆ ಅಮೆರಿಕಾ ಹೇಗೆ ಪ್ರತಿಕ್ರಿಯೆ ನೀಡಲಿದೆ ಎನ್ನುವುದು ಕೂಡಾ ಸದ್ಯಕ್ಕೆ ಕುತೂಹಲ ಮೂಡಿಸಿದೆ.
ಏತನ್ಮಧ್ಯೆ, ತಾಲಿಬಾನಿಗಳಿಗೆ ಪಂಜ್‌ಶೀರ್ ಪಡೆ ಕೂಡ ತಿರುಗೇಟು ನೀಡುತ್ತಿದ್ದು, ತಾಲಿಬಾನ್ ಉಗ್ರರು ಪಂಜ್‌ಶೀರ್ ಪ್ರದೇಶವನ್ನು ಪ್ರವೇಶಿಸಿಲ್ಲ. ಪಂಜ್‌ಶೀರ್ ಪ್ರದೇಶ ಪ್ರವೇಶಿಸಲು ನಾವು ಬಿಡುವುದೂ ಇಲ್ಲ ಎಂದಿದ್ದಾರೆ. ಆ ಮೂಲಕ ಪಂಜ್‌ಶೀರ್ ಪ್ರವೇಶಿಸಿದ್ದೇವೆ ಎಂದಿದ್ದ ತಾಲಿಬಾನ್ ಉಗ್ರರ ಹೇಳಿಕೆಯನ್ನು ಪಂಜ್‌ಶೀರ್ ಪಡೆ ಅಲ್ಲಗಳೆದಿದ್ದು ತಾಲಿಬಾನಿಗಳಿಗೆ ಮುಖಭಂಗವಾಗಿದೆ. ನಿನ್ನೆಯಷ್ಟೇ ಪಂಜ್‌ಶೀರ್ ಪ್ರಾಂತ್ಯವನ್ನು ಪ್ರವೇಶಿಸಿದ್ದೇವೆ ಎಂದು ಹೇಳಿದ್ದ ತಾಲಿಬಾನಿಗಳು, ಬಹುತೇಕ ದೇಶದ ಎಲ್ಲಾ ಭಾಗ ನಮ್ಮ ಕೈವಶವಾಗಿದೆ ಎಂಬ ಸಂದೇಶ ರವಾನಿಸಲು ಪ್ರಯತ್ನಿಸಿದ್ದರು.
ತಾಲಿಬಾನ್ ಭಯಕ್ಕೆ ಎಲ್ಲರೂ ದೇಶ ಬಿಡುತ್ತಿದ್ದರೆ ತಾಲಿಬಾನಿಗಳಿಗೆ ಈಗ ಐಸಿಸ್ ಭೀತಿ ಶುರು
(Terrorists planning for another attack in Kabul while America warns them about drone attack)