ಅಫ್ಘಾನಿಸ್ತಾನದ ಪಶ್ಚಿಮ ಬದ್ಘಿಸ್ ಪ್ರಾಂತ್ಯದ ತುರ್ಕಮೆನಿಸ್ತಾನದ ಗಡಿಭಾಗದಲ್ಲಿ ಎರಡು ಭೂಕಂಪವಾಗಿ, 26 ಜನರು ಮೃತಪಟ್ಟಿದ್ದಾರೆ. ಈ ಬಗ್ಗೆ ಬಾದ್ಘಿಸ್ ಪ್ರಾಂತ್ಯಾಡಳಿತದ ಮಾಹಿತಿ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕ ಬಾಜ್ ಮೊಹಮ್ಮದ್ ಸರ್ವಾರಿ ಪ್ರತಿಕ್ರಿಯೆ ನೀಡಿದ್ದು, ಭೂಕಂಪದಿಂದ ಮನೆಯ ಮೇಲ್ಛಾವಣಿಗಳೆಲ್ಲ ಕುಸಿದು ಬಿದ್ದು ಜನರು ಸಾವನ್ನಪ್ಪಿದ್ದಾರೆ ಎಂದು ಹೇಳಿದ್ದಾರೆ. ಅದೂ ಕೂಡ ಹೆಚ್ಚಿನ ಹಾನಿಯಾಗಿದ್ದು ಖಾದಿಸ್ ಜಿಲ್ಲೆಯಲ್ಲಿ ಎಂದು ಮಾಹಿತಿ ನೀಡಿದ್ದಾರೆ.
ನಿನ್ನೆ ಮಧ್ಯಾಹ್ನ 2ಗಂಟೆ ಹೊತ್ತಿಗೆ ಒಂದು ಬಾರಿ 5.3 ಮ್ಯಾಗ್ನಿಟ್ಯೂಡ್ ತೀವ್ರತೆಯಲ್ಲಿ ಭೂಕಂಪನವಾಗಿದ್ದರೆ, ಸಂಜೆ 4ಗಂಟೆ ಹೊತ್ತಿಗೆ ಇನ್ನೊಮ್ಮೆ 4.9 ತೀವ್ರತೆಯಲ್ಲಿ ಭೂಮಿ ನಡುಗಿದೆ ಎಂದು ಯುಎಸ್ ಭೌಗೋಳಿಕ ಸಮೀಕ್ಷೆ ಸಂಸ್ಥೆ ತಿಳಿಸಿದೆ. ಪ್ರಾಂತೀಯ ರಾಜಧಾನಿಯಾದ ಕ್ವಾಲಾ-ಇ-ನಾವ್‌ನ ಪೂರ್ವಕ್ಕೆ 41 ಕಿಲೋಮೀಟರ್ (25 ಮೈಲುಗಳು) ಮತ್ತು ಆಗ್ನೇಯಕ್ಕೆ 50 ಕಿಲೋಮೀಟರ್ (31 ಮೈಲುಗಳು)ದೂರದಲ್ಲಿ ಭೂಕಂಪನ ಉಂಟಾಗಿದ್ದಾಗಿ ಹೇಳಿದೆ.
ಮೃತ 26 ಜನರಲ್ಲಿ ಐವರು ಮಹಿಳೆಯರು ಮತ್ತು ನಾಲ್ವರು ಮಕ್ಕಳು ಸೇರಿದ್ದಾರೆ. ಖಾದಿಸ್ ಜಿಲ್ಲೆಯಲ್ಲಿ ಅಪಾರ ಹಾನಿಯಾಗಿರುವ ಜತೆಗೆ ಮುಖರ್ ಜಿಲ್ಲೆಯಲ್ಲಿಯೂ ಕೂಡ ಸ್ವಲ್ಪ ಮಟ್ಟಿಗೆ ಹಾನಿಯುಂಟಾಗಿದೆ. ಆದರೆ ಇಲ್ಲಿ ಯಾರಾದರೂ ಮೃತಪಟ್ಟ ಬಗ್ಗೆ ವರದಿ ಲಭ್ಯವಾಗಿಲ್ಲ ಎಂದು ಸರ್ವಾರಿ ಮಾಹಿತಿ ನೀಡಿದ್ದಾರೆ. ಖಾದಿಸ್ ಜಿಲ್ಲೆಯ ನಾಲ್ಕು ಹಳ್ಳಿಗಳು ಭೂಕಂಪದಿಂದ ಹೆಚ್ಚಿನ ಪ್ರಭಾವಕ್ಕೆ ಒಳಗಾಗಿವೆ. ಅಲ್ಲೆಲ್ಲ ಇಂದು ರಕ್ಷಣಾ ತಂಡಗಳನ್ನು ಕಳಿಸಬೇಕು. ಪರಿಸ್ಥಿತಿ ಅವಲೋಕನ ಮಾಡಬೇಕು ಎಂದೂ ಹೇಳಿದ್ದಾರೆ. ಇದೀಗ ಭೂಕಂಪದಿಂದ ಅಪಾರ ಹಾನಿಗೆ ಒಳಗಾಗಿರುವ ಜಿಲ್ಲೆ ಖಾದಿಸ್ ಮೊದಲೇ ಬರಗಾಲಪೀಡಿತವಾಗಿದೆ. ಈಗ ತಾಲಿಬಾನಿಗಳು ಅಫ್ಘಾನಿಸ್ತಾನವನ್ನು ಹಿಡಿತಕ್ಕೆ ತೆಗೆದುಕೊಂಡ ಮೇಲೆ ಆ ದೇಶಕ್ಕೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಯಾವುದೇ ಆರ್ಥಿಕ ನೆರವೂ ಕೂಡ ಸಿಗುತ್ತಿಲ್ಲ. ಹೀಗಿರುವಾಗ ಭೂಕಂಪ, ಮತ್ತಿತರ ಪ್ರಾಕೃತಿಕ ವಿಪತ್ತಿನ ಸಂದರ್ಭದಲ್ಲಿ ನಿರ್ವಹಣೆ ತುಸು ಕಷ್ಟವೇ ಆಗಿದೆ. ಅಫ್ಘಾನಿಸ್ತಾನದ ಹಲವು ಬಡ ಜನರ ಮನೆಗಳು, ಹಳೇ ಮನೆಗಳೆಲ್ಲ ಇಂಥ ಭೂಕಂಪದಿಂದ ನೆಲಸಮ ಆಗುತ್ತಿದೆ.
ಇದನ್ನೂ ಓದಿ: ರಜೆ ಮುಗಿಸಿ ಕರ್ತವ್ಯಕ್ಕೆ ವಾಪಸ್ ಆಗಿದ್ದ ಯೋಧ ಪಂಜಾಬ್ನಲ್ಲಿ ಹೃದಯಾಘಾತದಿಂದ ಸಾವು