40 ನಿಮಿಷ ಕಾದರೂ ಬಾರದ ಪುಟಿನ್; ತಾಳ್ಮೆಗೆಟ್ಟು ರಷ್ಯಾ ಅಧ್ಯಕ್ಷರ ರೂಂಗೇ ನುಗ್ಗಿದ ಪಾಕ್ ಪ್ರಧಾನಿ
ಪಾಕಿಸ್ತಾನದ ಪ್ರಧಾನಮಂತ್ರಿ ಶೆಹಬಾಜ್ ಷರೀಫ್ ಅವರು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರನ್ನು ಭೇಟಿಯಾಗಲು 40 ನಿಮಿಷ ಕಾದರೂ ಪುಟಿನ್ ಬರಲಿಲ್ಲ. ಇದರಿಂದ ತಾಳ್ಮೆ ಕಳೆದುಕೊಂಡ ಅವರು ಆಹ್ವಾನ ಇಲ್ಲದಿದ್ದರೂ ಪುಟಿನ್ ಅವರ ಮೀಟಿಂಗ್ ನಡೆಯುತ್ತಿದ್ದ ಕೊಠಡಿಯೊಳಗೆ ನುಗ್ಗಿದ್ದಾರೆ. ಬಳಿಕ 10 ನಿಮಿಷ ಪುಟಿನ್ ಜೊತೆ ಮಾತುಕತೆ ನಡೆಸಿ ಅಲ್ಲಿಂದ ವಾಪಾಸ್ ಬಂದಿದ್ದಾರೆ. ಹಾಗಂತ, ಪುಟಿನ್ ಪಾಕ್ ಪ್ರಧಾನಿಯನ್ನು ನಿರ್ಲಕ್ಷ್ಯ ಮಾಡುತ್ತಿರುವುದು ಇದೇ ಮೊದಲೇನಲ್ಲ.

ನವದೆಹಲಿ, ಡಿಸೆಂಬರ್ 12: ಟುರ್ಕಮೆನಿಸ್ತಾನದಲ್ಲಿ ನಡೆದ ಅಂತಾರಾಷ್ಟ್ರೀಯ ಸಮಾರಂಭದಲ್ಲಿ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ (Russia President Putin) ಅವರೊಂದಿಗಿನ ಸಭೆಗಾಗಿ ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ 40 ನಿಮಿಷಗಳ ಕಾಲ ಕಾಯುತ್ತಾ ಕುಳಿತಿದ್ದರು. ಆದರೂ ಪುಟಿನ್ ತಮ್ಮ ಮೀಟಿಂಗ್ ಕೊಠಡಿಯಿಂದ ಹೊರಗೆ ಬರಲಿಲ್ಲ, ಪಾಕ್ ಪ್ರಧಾನಿಗೂ ಒಳಗೆ ಬರಲು ಸೂಚಿಸಲಿಲ್ಲ. ಚಡಪಡಿಕೆಯಿಂದ ಕುಳಿತಿದ್ದ ಪಾಕಿಸ್ತಾನದ ಪ್ರಧಾನಿ ಕೊನೆಗೆ ತಾಳ್ಮೆಗೆಟ್ಟು ತಾವೇ ಖುದ್ದಾಗಿ ಎದ್ದು ರಷ್ಯಾ ಅಧ್ಯಕ್ಷ ಪುಟಿನ್ ಅವರಿದ್ದ ರೂಂನೊಳಗೆ ಹೋಗಿದ್ದಾರೆ.
ಹಿಂದಿನ ಸೋವಿಯತ್ ರಾಷ್ಟ್ರದ ತಟಸ್ಥತೆಯ ಘೋಷಣೆಯ 30ನೇ ವಾರ್ಷಿಕೋತ್ಸವದ ಗೌರವಾರ್ಥವಾಗಿ ಈ ಕಾರ್ಯಕ್ರಮವನ್ನು ನಡೆಸಲಾಗಿತ್ತು. ಇದರಲ್ಲಿ ಭಾಗವಹಿಸಲು ರಷ್ಯಾ, ಟರ್ಕಿ, ಇರಾನ್ ಮತ್ತು ಪಾಕಿಸ್ತಾನದ ನಾಯಕರನ್ನು ಆಹ್ವಾನಿಸಲಾಗಿತ್ತು. ಈ ವೇಳೆ ರಷ್ಯಾ ಅಧ್ಯಕ್ಷ ಪುಟಿನ್ ಅವರ ಜೊತೆ ಮಾತನಾಡಲು ಪಾಕ್ ಪ್ರಧಾನಿ ಶೆಹಬಾಜ್ ಷರೀಫ್ ಕಾಯುತ್ತಿದ್ದರು. ಪುಟಿನ್ ಅವರೊಂದಿಗಿನ ನಿಗದಿತ ಮಾತುಕತೆಗೆ ಮುಂಚಿತವಾಗಿ ಪಕ್ಕದ ಕೋಣೆಯಲ್ಲಿ ಶೆಹಬಾಜ್ ಶರೀಫ್ ಅಸಹನೆಯಿಂದ ಕಾಯುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದು.
🚩Bhikaristan Beizzati! 🚩
PM Sharif waited 40+ mins for Putin, barged into Putin-Erdogan meet, left after 10 mins
World stage meme, diplomatic blunder, and a viral lesson in patience#Pakistan #DiplomacyFail pic.twitter.com/R00ogWdz3X
— 2 Foreigners In Bollywood (@2_F_I_B) December 12, 2025
ಇದನ್ನೂ ಓದಿ: ಪ್ರಧಾನಿ ಮೋದಿಯಿಂದ ಪುಟಿನ್ಗೆ ಚಹಾ, ಬೆಳ್ಳಿ ಕುಸುರಿ, ಕಾಶ್ಮೀರಿ ಕೇಸರಿ, ಭಗವದ್ಗೀತೆ ಉಡುಗೊರೆ
ಪಾಕಿಸ್ತಾನದ ವಿದೇಶಾಂಗ ಸಚಿವ ಇಶಾಕ್ ದಾರ್ ಅವರೊಂದಿಗೆ ಸುಮಾರು 40 ನಿಮಿಷಗಳ ಕಾಲ ಕಾಯುತ್ತಿದ್ದ ಶೆಹಬಾಜ್ ಷರೀಫ್ ತಾಳ್ಮೆ ಕಳೆದುಕೊಂಡು ಪುಟಿನ್ ಅವರ ಮೀಟಿಂಗ್ ನಡೆಯುತ್ತಿದ್ದ ರೂಂನೊಳಗೆ ಹೋಗಲು ನಿರ್ಧರಿಸಿದರು. ಒಳಗೆ ಹೋದ ಅವರು 10 ನಿಮಿಷಗಳ ನಂತರ ಆ ರೂಂನಿಂದ ವಾಪಾಸ್ ಬಂದಿದ್ದಾರೆ.
ಈ ವೈರಲ್ ವಿಡಿಯೋ ಆನ್‌ಲೈನ್‌ನಲ್ಲಿ ಅಪಹಾಸ್ಯಕ್ಕೆ ಗುರಿಯಾಗಿದೆ. ಸಾಮಾಜಿಕ ಮಾಧ್ಯಮ ಬಳಕೆದಾರರು ಇದನ್ನು ಪಾಕಿಸ್ತಾನಕ್ಕಾದ ರಾಜತಾಂತ್ರಿಕ ಮುಜುಗರ ಎಂದು ಲೇವಡಿ ಮಾಡಿದ್ದಾರೆ.
ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




