AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Al-Zawahiri: ಕರ್ನಾಟಕದ ಮೇಲೆ ಕಣ್ಣಿಟ್ಟಿದ್ದ ಅಲ್​ಖೈದಾ ಉಗ್ರರ ಮುಖ್ಯಸ್ಥ ಅಲ್​-ಜವಾಹಿರಿ ಹತ್ಯೆ

ನಮ್ಮವರಿಗೆ ಬೆದರಿಕೆ ಹಾಕುವವರು ಎಲ್ಲಿಯೇ ಇದ್ದರೂ, ಎಲ್ಲಿ ಕುಳಿತಿದ್ದರೂ ಅಂಥವರನ್ನು ಅಮೆರಿಕ ಬಿಡುವುದಿಲ್ಲ ಎಂದು ಟಿವಿಯಲ್ಲಿ ಮಾಡಿದ ಭಾಷಣದಲ್ಲಿ ಬೈಡೆನ್ ಹೇಳಿದ್ದಾರೆ.

Al-Zawahiri: ಕರ್ನಾಟಕದ ಮೇಲೆ ಕಣ್ಣಿಟ್ಟಿದ್ದ ಅಲ್​ಖೈದಾ ಉಗ್ರರ ಮುಖ್ಯಸ್ಥ ಅಲ್​-ಜವಾಹಿರಿ ಹತ್ಯೆ
ಅಲ್​ಖೈದಾ ಉಗ್ರಗಾಮಿ ಸಂಘಟನೆಯ ನಾಯಕ ಅಲ್​ ಜವಾಹರಿ
TV9 Web
| Edited By: |

Updated on:Aug 02, 2022 | 8:55 AM

Share

ವಾಷಿಂಗ್​ಟನ್: ಅಮೆರಿಕ ಭದ್ರತಾ ಪಡೆಗಳು ಅಫ್ಘಾನಿಸ್ತಾನ ರಾಜಧಾನಿ ಕಾಬೂಲ್​ನಲ್ಲಿ ವಾಯುದಾಳಿ ಕಾರ್ಯಾಚರಣೆ (Air Strike) ನಡೆಸಿ, ಅಲ್​ಖೈದಾ ಮುಖ್ಯಸ್ಥ ಅಯ್ಮಾನ್​ ಅಲ್​-ಜವಾಹಿರಿಯನ್ನು (Al-Qaeda Chief Ayman al-Zawahiri) ಹತ್ಯೆ ಮಾಡಿವೆ. ಈ ವಿಚಾರವನ್ನು ಸ್ವತಃ ಜೋ ಬೈಡೆನ್ ಮಾಧ್ಯಮಗಳಿಗೆ ಖಚಿತಪಡಿಸಿದ್ದಾರೆ. ‘ನಾವು ನ್ಯಾಯ ಕೊಟ್ಟಿದ್ದೇವೆ. ಉಗ್ರಗಾಮಿಗಳ ನಾಯಕ ಇನ್ನಿಲ್ಲ. ನಮ್ಮ ಜನರಿಗೆ ಬೆದರಿಕೆ ಹಾಕುವವರನ್ನು ನಾವು ಸುಮ್ಮನೆ ಬಿಡುವುದಿಲ್ಲ. ಎಷ್ಟೇ ಸಮಯವಾದರೂ, ಎಲ್ಲಿಯೇ ಇದ್ದರೂ, ಎಲ್ಲಿ ಅಡಗಿ ಕುಳಿತಿದ್ದರೂ ಅಂಥವರನ್ನು ಅಮೆರಿಕ ಕೊಲ್ಲುತ್ತದೆ’ ಎಂದು ಬೈಡೆನ್ ಟಿವಿಯಲ್ಲಿ ಮಾಡಿದ ಭಾಷಣದಲ್ಲಿ ಹೇಳಿದ್ದಾರೆ.

ಕರ್ನಾಟಕದಲ್ಲಿ ಹಿಜಾಬ್ ವಿವಾದ ಗರಿಗೆದರಿದ್ದಾಗ ಅಲ್​ಖೈದಾ ಉಗ್ರಗಾಮಿ ಸಂಘಟನೆ ಮುಖ್ಯಸ್ಥ ಅಲ್​-ಜವಾಹಿರಿ ವಿಡಿಯೊ ಸಂದೇಶ ಹರಿಬಿಟ್ಟು ಪ್ರತಿಭಟನೆಗಳನ್ನು ಬೆಂಬಲಿಸಿ, ಹೋರಾಟಕ್ಕೆ ಕರೆ ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು.

9/11 ಎಂದೇ ಕರೆಯುವ ಸೆಪ್ಟೆಂಬರ್ 11, 2001ರಲ್ಲಿ ಅಮೆರಿಕದ ವಿಶ್ವ ವಾಣಿಜ್ಯ ಕೇಂದ್ರ ಕಟ್ಟಡದ ಮೇಲೆ ನಡೆದಿದ್ದ ಉಗ್ರರ ದಾಳಿಯ ಮಾಸ್ಟರ್ ಮೈಂಡ್‌ ಈತನೇ ಎಂದು ಹೇಳಲಾಗಿತ್ತು. ಹತ್ತಾರು ವರ್ಷಗಳಿಂದ ಭಯೋತ್ಪಾದನಾ ಕೃತ್ಯಗಳಲ್ಲಿ ತೊಡಗಿಸಿಕೊಂಡಿದ್ದ ಜವಾಹಿರಿ, ಕೀನ್ಯಾ, ತಾಂಜೇನಿಯಾದ ಅಮೆರಿಕ ರಾಯಭಾರ ಕಚೇರಿಗಳ ಮೇಲೆಯೂ ದಾಳಿ ಸಂಘಟಿಸಿದ್ದ. ಜವಾಹಿರಿ ಹತ್ಯೆಗೆ ಕಳೆದ 6 ತಿಂಗಳುಗಳಿಂದ ಅಮೆರಿಕ ಗೌಪ್ಯವಾಗಿ ಯೋಜನೆ ರೂಪಿಸಿತ್ತು. ಜವಾಹಿರಿಗೆ ತಾಲಿಬಾನ್​ ನಾಯಕ ಸಿರಾಜುದ್ದೀನ್ ಹಕ್ಕಾನಿ ಕಾಬೂಲ್​ನಲ್ಲಿ ಆಶ್ರಯ ನೀಡಿದ್ದ. ಹಲವು ಮೂಲಗಳಿಂದ ಮಾಹಿತಿ ಕಲೆಹಾಕಿದ್ದ ಅಮೆರಿಕ ಡ್ರೋಣ್ ಮೂಲಕ ಸೋಮವಾರ ರಾತ್ರಿ ಕಾರ್ಯಾಚರಣೆ ನಡೆಸಿ, ಅಲ್​ ಜವಾಹಿರಿಯನ್ನು ಹತ್ಯೆ ಮಾಡಿದೆ.

ಅಲ್​ಖೈದಾ ನಾಯಕನಾಗಿದ್ದ ಒಸಾಮಾ ಬಿನ್ ಲಾಡೆನ್​ನನ್ನು ಅಮೆರಿಕ ಭದ್ರತಾಪಡೆಗಳು ಪಾಕಿಸ್ತಾನದಲ್ಲಿ 2011ರಲ್ಲಿ ಹತ್ಯೆ ಮಾಡಿದ ಬಳಿಕ ಜವಾಹಿರಿ ಉಗ್ರಗಾಮಿ ಸಂಘಟನೆಯ ಚುಕ್ಕಾಣಿ ಹಿಡಿದಿದ್ದ. ಆತನ ಸುಳಿವು ನೀಡಿದವರಿಗೆ 2.5 ಕೋಟಿ ಡಾಲರ್ ಬಹುಮಾನವನ್ನು ಅಮೆರಿಕ ಘೋಷಿಸಿತ್ತು. ಅಫ್ಘಾನಿಸ್ತಾನವನ್ನು ಸುದೀರ್ಘ 20 ವರ್ಷ ತನ್ನ ಅಧೀನದಲ್ಲಿ ಇರಿಸಿಕೊಂಡಿದ್ದ ಅಮೆರಿಕ ಆಗಸ್ಟ್ 31, 2021ರಂದು ಅಲ್ಲಿಂದ ಹೊರನಡೆದಿತ್ತು. ನಂತರದ ದಿನಗಳಲ್ಲಿ ಅಫ್ಘಾನಿಸ್ತಾನದಲ್ಲಿ ಬೇಹುಗಾರಿಕೆ ಚಟುವಟಿಕೆ ನಡೆಸುತ್ತಿದ್ದಾರೂ ಯಾವುದೇ ಮಿಲಿಟರಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿರಲಿಲ್ಲ. ಅಫ್ಘಾನಿಸ್ತಾನದಿಂದ ಹೊರ ನಡೆದ ಬಳಿಕ ಅಮೆರಿಕ ನಡೆಸಿರುವ ಮೊದಲ ಮಿಲಿಟರಿ ಕಾರ್ಯಾಚರಣೆ ಇದಾಗಿದೆ.

ಈಜಿಪ್ಟ್ ಮೂಲದ ಜವಾಹಿರಿ ಈಜಿಪ್ಟ್ ರಾಜಧಾನಿ ಕೈರೊದಲ್ಲಿಯೇ ಬಾಲ್ಯ ಕಳೆದಿದ್ದ. ವೃತ್ತಿಯಲ್ಲಿ ಶಸ್ತ್ರಚಿಕಿತ್ಸಕನಾಗಿದ್ದ ಅವನು, ನಂತರದ ದಿನಗಳಲ್ಲಿ ಹಿಂಸಾಚಾರದಲ್ಲಿ ತೊಡಗಿಸಿಕೊಂಡ. 9/11 ದಾಳಿಯ ನಂತರ ಈತ ಬಹಿರಂಗವಾಗಿ ಕಾಣಿಸಿಕೊಳ್ಳುತ್ತಿರಲಿಲ್ಲ. ಆಗಾಗ ವಿಡಿಯೊ ಸಂದೇಶಗಳನ್ನು ಹರಿಬಿಡುತ್ತಿದ್ದ.

Published On - 7:07 am, Tue, 2 August 22