ಉತ್ಖನನ ಕಾರ್ಯಕ್ಕೆ ಸ್ವಯಂಸೇವಕರಾಗಿ ಸೇರಿದ್ದ ಯುವಕರಿಗೆ ಪುರಾತನವಾದ ನೂರಾರು ಚಿನ್ನದ ನಾಣ್ಯಗಳು ದೊರೆತಿರುವ ಅಚ್ಚರಿಯ ಸಂಗತಿ ಇಸ್ರೇಲ್ನಲ್ಲಿ ವರದಿಯಾಗಿದೆ.
ಇದೇ ತಿಂಗಳ 18ರಂದು ಕೆಲ ಯುವಕರು ದೇಶದ ಪುರಾತತ್ವ ಇಲಾಖೆಯ ಅಧಿಕಾರಿಗಳೊಂದಿಗೆ ಕೈಜೋಡಿಸಿ ಪ್ರಾಚೀನ ಐತಿಹ್ಯಹೊಂದಿದ್ದ ಸ್ಥಳದಲ್ಲಿ ಉತ್ಖನನ ನಡೆಸುತ್ತಿದ್ದರು. ನೆಲ ಅಗೆಯುವ ವೇಳೆ ಯುವಕರಿಗೆ ಅಲ್ಲೇ ಅವಿತಿದ್ದ ಮಡಿಕೆಯೊಂದು ಸಿಕ್ಕಿದೆ. ಅದರ ಮುಚ್ಚಳವನ್ನು ತೆಗೆದ ಯುವಕರಿಗೆ ತಮ್ಮ ಕಣ್ಣುಗಳನ್ನು ತಾವೇ ನಂಬೋಕೆ ಆಗಲಿಲ್ಲ. ಮಡಿಕೆಯಲ್ಲಿ ಸುಮಾರು ಒಂದು ಸಾವಿರ ವರ್ಷಗಳ ಹಿಂದಿನಕಾಲದ ನೂರಾರು ಪ್ರಾಚೀನ ಚಿನ್ನದ ನಾಣ್ಯಗಳು ಇದ್ದವು.
ಈ ಶೋಧ ಬಹಳ ಪ್ರಮುಖವಾದುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಗತಕಾಲದ ಅರ್ಥವ್ಯವಸ್ಥೆ ಹಾಗೂ ಅಂದಿನ ಇತಿಹಾಸದ ಬಗ್ಗೆ ಈ ನಾಣ್ಯಗಳಿಂದ ಮಾಹಿತಿ ದೊರಕಲಿದೆ ಎಂದು ಹೇಳಿದ್ದಾರೆ. ಜೊತೆಗೆ, ಈ ನಿಧಿಯನ್ನು ಹೂತಿದ್ದ ವ್ಯಕ್ತಿಯು ಅದು ಸುರಕ್ಷಿತವಾಗಿರಲಿ ಎಂದು ಮಡಿಕೆಯ ಮುಚ್ಚಳಕ್ಕೆ ಮೊಳೆ ಸಹ ಜಡಿದಿದ್ದ ಎಂದು ತಿಳಿಸಿದ್ದಾರೆ.