ಇರಾನ್ ಜತೆಗೂಡಿ ಟ್ರಂಪ್, ಅಮೆರಿಕ ಅಧಿಕಾರಿಗಳ ಹತ್ಯೆಗೆ ಸಂಚು ರೂಪಿಸಿತ್ತಾ ಪಾಕ್? ಮಹತ್ವದ ಮಾಹಿತಿ ಬಯಲು

ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೇರಿ ಪ್ರಮುಖ ನಾಯಕರ ಹತ್ಯೆಗೆ ಸಂಚು ರೂಪಿಸಿದ್ದ ಪಾಕಿಸ್ತಾನಿ ಪ್ರಜೆ ಆಸಿಫ್ ರಾಜಾ ಮರ್ಚೆಂಟ್ ದೋಷಿ ಎಂದು ಬ್ರೂಕ್ಲಿನ್ ಫೆಡರಲ್ ನ್ಯಾಯಾಲಯ ತೀರ್ಪು ನೀಡಿದೆ. 2020ರಲ್ಲಿ ಹತ್ಯೆಯಾದ ಇರಾನ್ ಕಮಾಂಡರ್ ಖಾಸೆಮ್ ಸೊಲೈಮಾನಿ ಸಾವಿಗೆ ಸೇಡು ತೀರಿಸಿಕೊಳ್ಳಲು ಈ ಕೃತ್ಯ ನಡೆದಿತ್ತು. ಇದು ಅಮೆರಿಕ-ಇರಾನ್ ನಡುವಿನ ಉದ್ವಿಗ್ನತೆಯನ್ನು ಹೆಚ್ಚಿಸಿದ್ದು, ಜಾಗತಿಕ ರಾಜಕೀಯದಲ್ಲಿ ಸಂಚಲನ ಮೂಡಿಸಿದೆ.

ಇರಾನ್ ಜತೆಗೂಡಿ ಟ್ರಂಪ್, ಅಮೆರಿಕ ಅಧಿಕಾರಿಗಳ ಹತ್ಯೆಗೆ ಸಂಚು ರೂಪಿಸಿತ್ತಾ ಪಾಕ್? ಮಹತ್ವದ ಮಾಹಿತಿ ಬಯಲು
ಡೊನಾಲ್ಡ್ ಟ್ರಂಪ್

Updated on: Mar 07, 2026 | 10:34 AM

ಬ್ರೂಕ್ಲಿನ್: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೇರಿದಂತೆ ಅಮೆರಿಕದ ಪ್ರಮುಖ ನಾಯಕರ ಹತ್ಯೆಗೆ ಸಂಚು ರೂಪಿಸಿದ್ದ ಪ್ರಕರಣದಲ್ಲಿ, ಪಾಕಿಸ್ತಾನಿ ಪ್ರಜೆ ಆಸಿಫ್ ರಾಜಾ ಮರ್ಚೆಂಟ್ (47) ದೋಷಿ ಎಂದು ಬ್ರೂಕ್ಲಿನ್ ಫೆಡರಲ್ ನ್ಯಾಯಾಲಯ ತೀರ್ಪು ನೀಡಿದೆ. 2020ರಲ್ಲಿ ಅಮೆರಿಕ ನಡೆಸಿದ ಡ್ರೋನ್ ದಾಳಿಯಲ್ಲಿ ಹತ್ಯೆಯಾದ ಇರಾನ್‌ನ ಕಮಾಂಡರ್ ಖಾಸೆಮ್ ಸೊಲೈಮಾನಿಯ ಸಾವಿಗೆ ಸೇಡು ತೀರಿಸಿಕೊಳ್ಳುವ ಉದ್ದೇಶದಿಂದ ಈ ಕೃತ್ಯ ಎಸಗಲಾಗಿತ್ತು ಎಂದು ಪ್ರಾಸಿಕ್ಯೂಟರ್‌ಗಳು ತಿಳಿಸಿದ್ದಾರೆ.

ಗುರಿಯಲ್ಲಿದ್ದ ಪ್ರಮುಖ ನಾಯಕರು:

ವಿಚಾರಣೆಯ ಸಂದರ್ಭದಲ್ಲಿ ಮರ್ಚೆಂಟ್, ಟೆಹ್ರಾನ್‌ನಲ್ಲಿರುವ ತನ್ನ ಕುಟುಂಬವನ್ನು ಇರಾನಿನ ಕ್ರಾಂತಿಕಾರಿ ಪಡೆಗಳಿಂದ ರಕ್ಷಿಸಿಕೊಳ್ಳಲು ಅನಿವಾರ್ಯವಾಗಿ ಈ ಸಂಚಿನಲ್ಲಿ ಭಾಗಿಯಾಗಿದ್ದಾಗಿ ಹೇಳಿದ್ದಾನೆ. ಇದಲ್ಲದೇ ಸ್ಫೋಟಕ ಮಾಹಿತಿಯೊಂದನ್ನು ಬಿಚ್ಚಿಟ್ಟಿದ್ದಾನೆ. ತನಗೆ ನೇರವಾಗಿ ಯಾರನ್ನೂ ಕೊಲ್ಲುವ ಆದೇಶ ಇರಲಿಲ್ಲವಾದರೂ, ಇರಾನಿನ ಸಂಪರ್ಕಗಳು ಮೂವರು ಪ್ರಮುಖ ವ್ಯಕ್ತಿಗಳನ್ನು ಅಂದರೆ ಡೊನಾಲ್ಡ್ ಟ್ರಂಪ್, ಜೋ ಬಿಡೆನ್ ಮತ್ತು ನಿಕ್ಕಿ ಹ್ಯಾಲಿ ಹತ್ಯೆ ಮಾಡುವಂತೆ ಸೂಚಿಸಿದ್ದರು ಎಂದು ಆತ ತಿಳಿಸಿದ್ದಾನೆ. ಈ ಪಿತೂರಿಯು ಇರಾನ್ ಆಡಳಿತದ ತಂತ್ರಗಾರಿಕೆಯ ಭಾಗವಾಗಿದೆ ಎಂದು ಅಮೆರಿಕದ ಅಧಿಕಾರಿಗಳು ಬಣ್ಣಿಸಿದ್ದಾರೆ.

ಆಸಿಫ್ ರಾಜಾ ಮರ್ಚೆಂಟ್ ಯಾರು?

ಆಸಿಫ್ ರಾಜಾ ಮರ್ಚೆಂಟ್ ಪಾಕಿಸ್ತಾನದ ಉದ್ಯಮಿಯಾಗಿದ್ದು, ಇರಾನ್‌ನೊಂದಿಗೆ ನಿಕಟ ಸಂಪರ್ಕ ಹೊಂದಿದ್ದ ಎಂದು ಅಮೆರಿಕದ ತನಿಖಾ ಸಂಸ್ಥೆಗಳು ಮತ್ತು ಪ್ರಾಸಿಕ್ಯೂಟರ್‌ಗಳು ತಿಳಿಸಿದ್ದಾರೆ. 2024ರ ಜುಲೈ 12ರಂದು ಅಮೆರಿಕದಿಂದ ಪಲಾಯನ ಮಾಡಲು ಯತ್ನಿಸುತ್ತಿದ್ದಾಗ ಈತನನ್ನು ಅಮೆರಿಕದ ಅಧಿಕಾರಿಗಳು ಬಂಧಿಸಿದ್ದರು. ನಂತರ ಬ್ರೂಕ್ಲಿನ್‌ನ ಫೆಡರಲ್ ನ್ಯಾಯಾಲಯದಲ್ಲಿ ನಡೆದ ವಿಚಾರಣೆಯಲ್ಲಿ ಅಂತರರಾಷ್ಟ್ರೀಯ ಭಯೋತ್ಪಾದನೆ ಮತ್ತು ಹಣಕ್ಕಾಗಿ ಕೊಲೆ ಸಂಚು ರೂಪಿಸಿದ ಆರೋಪಗಳ ಮೇಲೆ ಈತ ದೋಷಿ ಎಂದು ಸಾಬೀತಾಗಿದೆ.

ಇದನ್ನೂ ಓದಿ: ಇರಾನ್ ಹಾರ್ಮುಜ್ ಜಲಸಂಧಿ ಬಂದ್: ತೈಲ ಕೊರತೆ ಆತಂಕದಲ್ಲಿದ್ದ ಭಾರತಕ್ಕೆ ರಷ್ಯಾ ಮತ್ತೆ ಆಪತ್ಭಾಂಧವ!

ಪ್ರಸ್ತುತ ಮಧ್ಯಪ್ರಾಚ್ಯದಲ್ಲಿ ಇರಾನ್, ಇಸ್ರೇಲ್ ಮತ್ತು ಅಮೆರಿಕದ ನಡುವೆ ತೀವ್ರ ಉದ್ವಿಗ್ನತೆ ಉಂಟಾಗಿದ್ದು, ಇತ್ತೀಚೆಗಷ್ಟೇ ಅಮೆರಿಕ ಮತ್ತು ಇಸ್ರೇಲ್ ನಡೆಸಿದ ಜಂಟಿ ದಾಳಿಯಲ್ಲಿ ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಮೃತಪಟ್ಟಿರುವ ಬೆನ್ನಲ್ಲೇ ಈ ತೀರ್ಪು ಹೊರಬಿದ್ದಿರುವುದು ಭಾರಿ ಸಂಚಲನ ಮೂಡಿಸಿದೆ. ಮಧ್ಯಪ್ರಾಚ್ಯದಲ್ಲಿ ಯುದ್ಧದ ಕಾರ್ಮೋಡಗಳು ಕವಿದಿರುವ ಹೊತ್ತಿನಲ್ಲೇ ಈ ಪ್ರಕರಣದಲ್ಲಿ ತೀರ್ಪು ಬಂದಿರುವುದು ಅಂತಾರಾಷ್ಟ್ರೀಯ ರಾಜಕೀಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Published On - 10:27 am, Sat, 7 March 26

ಅಕ್ಷತಾ ವರ್ಕಾಡಿ

ಅಕ್ಷತಾ ವರ್ಕಾಡಿ – ಮೂಲತಃ ಕಾಸರಗೋಡು ಜಿಲ್ಲೆಯ ಮಂಜೇಶ್ವರದ ವರ್ಕಾಡಿಯವರು. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ (M.C.J) ಎಂ.ಎ ಮಾಡಿದ್ದು, ಟಿವಿ9 ಡಿಜಿಟಲ್​ ಮೂಲಕ ವೃತ್ತಿ ಜೀವನವನ್ನು ಆರಂಭಿಸಿದ್ದಾರೆ. ಸುದ್ದಿ ಮಾಧ್ಯಮದಲ್ಲಿ​ 3 ವರ್ಷಗಳ ಅನುಭವ ಇವರಿಗಿದೆ. ಆಧ್ಯಾತ್ಮ, ಶಿಕ್ಷಣ, ಉದ್ಯೋಗವಕಾಶ, ಆರೋಗ್ಯ ಮತ್ತು ವೈರಲ್ ಸುದ್ದಿಗಳ ಬಗ್ಗೆ ಬರೆಯುವುದರಲ್ಲಿ ಆಸಕ್ತಿಹೊಂದಿದ್ದು, ಇವರು ಓದುಗರಿಗೆ ಉತ್ತಮ ಹಾಗೂ ಆಸಕ್ತಿದಾಯಕ ಲೇಖನಗಳನ್ನು ಒದಗಿಸುತ್ತಿದ್ದಾರೆ.

Read More
Loading...
Unable to load recommendations.
Follow Us