
ನವದೆಹಲಿ, ಡಿಸೆಂಬರ್ 22: ಕಾಶ್ಮೀರದ ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ಭಾರತ ಅದಕ್ಕೆ ಪ್ರತೀಕಾರವಾಗಿ ಆಪರೇಷನ್ ಸಿಂಧೂರ್ (Operation Sindoor) ಕಾರ್ಯಾಚರಣೆ ಆರಂಭಿಸಿತ್ತು. ಆ ದಾಳಿಯ ವೇಳೆ ಪಾಕಿಸ್ತಾನಕ್ಕೆ ದೇವರೇ ಸಹಾಯ ಮಾಡಿದ್ದನಂತೆ. ಈ ರೀತಿಯ ಹೇಳಿಕೆಯನ್ನು ಪಾಕಿಸ್ತಾನದ ಸೇನಾ ಮುಖ್ಯಸ್ಥ ಅಸಿಮ್ ಮುನೀರ್ ನೀಡಿದ್ದಾರೆ. ಉರ್ದು ಭಾಷೆಯಲ್ಲಿ ಮಾತನಾಡಿರುವ ಅಸಿಮ್ ಮುನೀರ್ ಅವರ ಭಾಷಣದ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಆದರೆ, ಯಾವಾಗ ಅವರು ಈ ಹೇಳಿಕೆ ನೀಡಿದ್ದು ಎಂಬ ದಿನಾಂಕ ಗೊತ್ತಾಗಿಲ್ಲ.
ಈ ವಿಡಿಯೋದಲ್ಲಿ ಉರ್ದು ಭಾಷೆಯಲ್ಲಿ ಮಾತನಾಡುತ್ತಾ, ಅಸಿಮ್ ಮುನೀರ್ “ಅಲ್ಲಾಹ್ ನಿಮಗೆ ಸಹಾಯ ಮಾಡಿದರೆ ಯಾರೂ ನಿಮ್ಮನ್ನು ಸೋಲಿಸಲು ಸಾಧ್ಯವಿಲ್ಲ” ಎಂಬ ಕುರಾನ್ ಪದ್ಯವನ್ನು ಉಲ್ಲೇಖಿಸಿದ್ದಾರೆ. ಭಾರತದ ಯುದ್ಧದ ಸಮಯದಲ್ಲಿ ಪಾಕಿಸ್ತಾನಕ್ಕೆ ದೈವಿಕ ಬೆಂಬಲ ಸಿಕ್ಕಿತ್ತು. ದೇವರು ನಮ್ಮ ಜೊತೆಗೇ ಇದ್ದ. ಅಲ್ಲಾಹ್ ನಮ್ಮ ಪರವಾಗಿ ಇದ್ದ ಅನುಭೂತಿಯನ್ನು ನಾವು ಅನುಭವಿಸಿದ್ದೆವು ಎಂದು ಹೇಳಿದ್ದಾರೆ.
ಇದನ್ನೂ ಓದಿ: ಭಾರತಕ್ಕೆ ಮತ್ತೊಮ್ಮೆ ಪರಮಾಣು ಬೆದರಿಕೆ ಹಾಕಿದ ಪಾಕಿಸ್ತಾನದ ಸೇನಾ ಮುಖ್ಯಸ್ಥ ಅಸಿಮ್ ಮುನೀರ್
26 ನಾಗರಿಕರ ಸಾವಿಗೆ ಕಾರಣವಾದ ಪಹಲ್ಗಾಮ್ ದಾಳಿಗೆ ಪ್ರತೀಕಾರವಾಗಿ ಭಾರತ ಮೇ ಆರಂಭದಲ್ಲಿ ಆಪರೇಷನ್ ಸಿಂಧೂರ್ ಅನ್ನು ಪ್ರಾರಂಭಿಸಿತು. ಈ ಕಾರ್ಯಾಚರಣೆಯ ಸಮಯದಲ್ಲಿ ಭಾರತೀಯ ವಾಯುಪಡೆಯು ಪಾಕಿಸ್ತಾನ ಮತ್ತು ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿನ (ಪಿಒಕೆ) ಅನೇಕ ಭಯೋತ್ಪಾದಕ ಶಿಬಿರಗಳ ಮೇಲೆ ದಾಳಿ ಮಾಡಿತು. ಇದರಲ್ಲಿ ಪಂಜಾಬ್ ಪ್ರಾಂತ್ಯದ ಬಹಾವಲ್ಪುರ್ ಮತ್ತು ಮುರಿಯ್ಕೆಯಲ್ಲಿನ ಗುರಿಗಳು ಹಾಗೂ ಪಿಒಕೆಯ ಮುಜಫರಾಬಾದ್ ಮತ್ತು ಕೋಟ್ಲಿ ಕೂಡ ಸೇರಿವೆ.
“It was ‘divine intervention’ that helped the country during the May conflict with India… we felt it”, says Pakistan Field Marshal Asim Munir pic.twitter.com/IkwUHM6R9E
— The Armoury Brief (@TheArmouryBrief) December 21, 2025
ಇದನ್ನೂ ಓದಿ: ಆಪರೇಷನ್ ಸಿಂಧೂರ್ ವೇಳೆ ಪಾಕಿಸ್ತಾನದ 5 ಯುದ್ಧ ವಿಮಾನ ಪತನ; ಐಎಎಫ್ ಮುಖ್ಯಸ್ಥ ಮಹತ್ವದ ಮಾಹಿತಿ
ಈ ಕಾರ್ಯಾಚರಣೆಯು ಹಲವಾರು ಪಾಕಿಸ್ತಾನಿ ವಾಯು ನೆಲೆಗಳಲ್ಲಿನ ರನ್‌ವೇಗಳನ್ನು ಹಾನಿಗೊಳಿಸಿತು ಮತ್ತು ವಾಯು ರಕ್ಷಣಾ ಸ್ವತ್ತುಗಳನ್ನು ತಟಸ್ಥಗೊಳಿಸಿತು. ಈ ಕಾರ್ಯಾಚರಣೆಯು ಸುಮಾರು 30 ನಿಮಿಷ ನಡೆಯಿತು. ಕೊನೆಗೆ ಮೇ 10ರಂದು ಕದನವಿರಾಮ ಘೋಷಿಸಲಾಗಿತ್ತು. ಈ ದಾಳಿಯಲ್ಲಿ ಭಾರತ ತನ್ನ ಗುರಿಯನ್ನು ಮುಟ್ಟಿದೆ ಮತ್ತು ಅನೇಕ ಉಗ್ರರ ನೆಲೆಗಳನ್ನು ಧ್ವಂಸ ಮಾಡಲಾಗಿದೆ ಎಂದು ಭಾರತೀಯ ವಾಯುಪಡೆ ಹೇಳಿಕೊಂಡಿದೆ. ಆದರೆ, ಪಾಕಿಸ್ತಾನ ಮಾತ್ರ ಇನ್ನೂ ತನ್ನ ದೇಶಕ್ಕೆ ಯಾವುದೇ ಹಾನಿಯಾಗಿಲ್ಲ ಎಂದು ಹೇಳಿಕೊಳ್ಳುವುದನ್ನು ನಿಲ್ಲಿಸಿಲ್ಲ.
ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ