ಅಧಿಕಾರದಲ್ಲಿರುವಾಗಲೇ ಮದುವೆಯಾಗಿ ಹೊಸ ದಾಖಲೆ ಬರೆದ ಆಸ್ಟ್ರೇಲಿಯಾದ ಪ್ರಧಾನಿ ಆಲ್ಬನೀಸ್

ಆಸ್ಟ್ರೇಲಿಯಾ ಪ್ರಧಾನಮಂತ್ರಿ ಆಂಥೋನಿ ಆಲ್ಬನೀಸ್ ವಿವಾಹವಾಗಿದ್ದಾರೆ. ಆಸ್ಟ್ರೇಲಿಯಾದ ಪ್ರಧಾನಿ ಆಂಥೋನಿ ಅಲ್ಬನೀಸ್ ಕ್ಯಾನ್‌ಬೆರಾದಲ್ಲಿ ನಡೆದ ಖಾಸಗಿ ಸಮಾರಂಭದಲ್ಲಿ ತಮ್ಮ ಪ್ರೇಯಸಿ ಜೋಡಿ ಹೇಡನ್ ಅವರನ್ನು ವಿವಾಹವಾದರು. ಈ ಮೂಲಕ ಆಸ್ಟ್ರೇಲಿಯಾ ದೇಶದ 124 ವರ್ಷಗಳ ಫೆಡರಲ್ ಸರ್ಕಾರದ ಇತಿಹಾಸದಲ್ಲಿ ಅಧಿಕಾರದಲ್ಲಿದ್ದಾಗ ವಿವಾಹವಾದ ಮೊದಲ ಆಸ್ಟ್ರೇಲಿಯಾದ ಪ್ರಧಾನಿ ಎಂಬ ಹೆಗ್ಗಳಿಕೆಗೆ ಅವರು ಪಾತ್ರರಾಗಿದ್ದಾರೆ.

ಅಧಿಕಾರದಲ್ಲಿರುವಾಗಲೇ ಮದುವೆಯಾಗಿ ಹೊಸ ದಾಖಲೆ ಬರೆದ ಆಸ್ಟ್ರೇಲಿಯಾದ ಪ್ರಧಾನಿ ಆಲ್ಬನೀಸ್
Australian Prime Minister Wedding

Updated on: Nov 29, 2025 | 7:18 PM

ನವದೆಹಲಿ, ನವೆಂಬರ್ 29: ಆಸ್ಟ್ರೇಲಿಯಾದ (Australia) ಪ್ರಧಾನಿ ಆಂಥೋನಿ ಅಲ್ಬನೀಸ್ ಅವರು ಇಂದು ಕ್ಯಾನ್‌ಬೆರಾದ ತಮ್ಮ ಅಧಿಕೃತ ನಿವಾಸದಲ್ಲಿ ನಡೆದ ಖಾಸಗಿ ಸಮಾರಂಭದಲ್ಲಿ ತಮ್ಮ ಪ್ರೇಯಸಿ ಜೋಡಿ ಹೇಡನ್ ಅವರನ್ನು ವಿವಾಹವಾಗಿದ್ದಾರೆ. 124 ವರ್ಷಗಳ ಆಸ್ಟ್ರೇಲಿಯಾದ ಫೆಡರಲ್ ಸರ್ಕಾರದ ಇತಿಹಾಸದಲ್ಲಿ ಅಧಿಕಾರದಲ್ಲಿದ್ದಾಗ ಮದುವೆಯಾದ ಮೊದಲ ಆಸ್ಟ್ರೇಲಿಯಾದ ಪ್ರಧಾನಿ ಎಂಬ ಹೆಗ್ಗಳಿಕೆಗೆ ಆಲ್ಬನೀಸ್ ಪಾತ್ರರಾಗಿದ್ದಾರೆ.

ಇಂದು ಮಧ್ಯಾಹ್ನ ನಡೆದ ಸಮಾರಂಭದಲ್ಲಿ ಸಾಂಪ್ರದಾಯಿಕವಾಗಿ ಆಲ್ಬನೀಸ್ ದಂಪತಿ ವಿವಾಹವಾದರು. ಸುಮಾರು 60 ಅತಿಥಿಗಳು ಮಾತ್ರ ಈ ಸಮಾರಂಭದಲ್ಲಿ ಹಾಜರಿದ್ದರು. ಇದರಲ್ಲಿ ಆಸ್ಕರ್ ಪ್ರಶಸ್ತಿ ವಿಜೇತ ನಟ ರಸೆಲ್ ಕ್ರೋವ್ ಮತ್ತು ಹಲವಾರು ಕ್ಯಾಬಿನೆಟ್ ಮಂತ್ರಿಗಳು ಕೂಡ ಸೇರಿದ್ದಾರೆ. ಈ ಸಮಾರಂಭವು ಖಾಸಗಿಯಾಗಿದ್ದರಿಂದ ಯಾವುದೇ ಮಾಧ್ಯಮಗಳಿಗೂ ಒಳಗೆ ಪ್ರವೇಶಿಸಲು ಅನುಮತಿ ಇರಲಿಲ್ಲ.

ಇದನ್ನೂ ಓದಿ: ಪ್ರಧಾನಿ ಮೋದಿಯೇ ಬಾಸ್: ಆಸ್ಟ್ರೇಲಿಯಾದ ಪಿಎಂ ಆಂಥೋನಿ ಅಲ್ಬನೀಸ್ ಮೆಚ್ಚುಗೆ

“ನಮ್ಮ ಕುಟುಂಬ ಮತ್ತು ಹತ್ತಿರದ ಸ್ನೇಹಿತರ ಸಮ್ಮುಖದಲ್ಲಿ ನಮ್ಮ ಮುಂದಿನ ಜೀವನವನ್ನು ಒಟ್ಟಿಗೆ ಕಳೆಯಲು ನಮ್ಮ ಪ್ರೀತಿ ಮತ್ತು ಬದ್ಧತೆಯನ್ನು ಹಂಚಿಕೊಳ್ಳಲು ವಿವಾಹವಾಗಿದ್ದೇವೆ. ಈ ಮಾಹಿತಿಯನ್ನು ಹಂಚಿಕೊಳ್ಳಲು ನಾವು ಸಂತೋಷಪಡುತ್ತೇವೆ” ಎಂದು ಆಸ್ಟ್ರೇಲಿಯನ್ ಪ್ರಧಾನಿ ತಿಳಿಸಿದ್ದಾರೆ.


ವಿಚ್ಛೇದಿತರಾಗಿರುವ ಮತ್ತು ಮದುವೆ ವಯಸ್ಸಿನ ಮಗನನ್ನು ಹೊಂದಿರುವ 62 ವರ್ಷದ ಆಸ್ಟ್ರೇಲಿಯನ್ ಪ್ರಧಾನಿ ಆಲ್ಬನೀಸ್, ಕಳೆದ ವರ್ಷ ಪ್ರೇಮಿಗಳ ದಿನದಂದು ದಿ ಲಾಡ್ಜ್‌ನಲ್ಲಿ 46 ವರ್ಷದ ಹೇಡನ್‌ಗೆ ಪ್ರಪೋಸ್ ಮಾಡಿದ್ದರು. ಈ ವರ್ಷದ ಮೇನಲ್ಲಿ ಸಾರ್ವತ್ರಿಕ ಚುನಾವಣೆ ನಿಗದಿಯಾಗುವ ಮೊದಲೇ ಅವರು ಮದುವೆಯಾಗಲು ನಿರ್ಧರಿಸಿದ್ದರು. ಸಿಡ್ನಿ ರೇಡಿಯೋ ಕಾರ್ಯಕ್ರಮವೊಂದರಲ್ಲಿ ಆಲ್ಬನೀಸ್ ಅವರು ತಮ್ಮ ವಿವಾಹಕ್ಕೆ ಕೆನಡಾದ ಮಾಜಿ ಪ್ರಧಾನಿ ಜಸ್ಟಿನ್ ಟ್ರುಡೊ ಅವರನ್ನು ಆಹ್ವಾನಿಸುವ ಬಗ್ಗೆ ಯೋಚಿಸುತ್ತಿರುವುದಾಗಿಯೂ ಉಲ್ಲೇಖಿಸಿದ್ದರು, ಅವರನ್ನು ತಮ್ಮ ಆಪ್ತ ಸ್ನೇಹಿತ ಎಂದು ಹೇಳಿಕೊಂಡಿದ್ದರು.

ಇದನ್ನೂ ಓದಿ: ಚಂಡಮಾರುತ ಪೀಡಿತ ಶ್ರೀಲಂಕಾಕ್ಕೆ ಆಪರೇಷನ್ ಸಾಗರ್ ಬಂಧು ಅಡಿ ಭಾರತದಿಂದ ಸಹಾಯಹಸ್ತ

ಆದರೆ, ಇದೀಗ ಬಹಳ ಸರಳವಾಗಿ ಅವರು ವಿವಾಹವಾಗಿದ್ದಾರೆ. ಆಸ್ಟ್ರೇಲಿಯಾದ ಜೀವನ ವೆಚ್ಚದ ಬಿಕ್ಕಟ್ಟಿನ ಸಂದರ್ಭದಲ್ಲಿ ಅದ್ದೂರಿಯಾಗಿ ಮದುವೆಯಾಗುವುದು ಮುಂದಿನ ಬಾರಿ ಸರ್ಕಾರವು ಎರಡನೇ ಅವಧಿಗೆ ಗೆಲ್ಲುವ ಸಾಧ್ಯತೆಗಳಿಗೆ ತೊಂದರೆ ಉಂಟುಮಾಡಬಹುದು ಎಂದು ಸರಳವಾಗಿ ವಿವಾಹವಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ