ಇರಾನ್ ಮೇಲೆ ದಾಳಿ ನಡೆಸಿ ಸುಮ್ಮನಾದ ಟ್ರಂಪ್, ರಷ್ಯಾಗೆ ಹೊರಟ ಇರಾನ್ ವಿದೇಶಾಂಗ ಸಚಿವ, ಒಂದು ದಿನದಲ್ಲಿ ಏನೆಲ್ಲಾ ನಡೀತು

Iran-US Conflict: ಅಮೆರಿಕವು ಇರಾನ್ ಮೇಲೆ ದಾಳಿ ನಡೆಸಿದೆ, ಅಮೆರಿಕದ ಬಗ್ಗೆ ಇರಾನ್​ಗೆ ಕೋಪವಿದ್ದರೂ ಅಮೆರಿಕದ ತಂಟೆಗೆ ಬಾರದೆ, ಇಸ್ರೇಲ್ ಮೇಲೆ ನಿರಂತರ ದಾಳಿ ನಡೆಸುತ್ತಿದೆ. ಹಲವು ದೇಶಗಳು ಇರಾನ್​ ಬೆಂಬಲಕ್ಕೆ ನಿಂತಿವೆ. ಪ್ರಧಾನಿ ನರೇಂದ್ರ ಮೋದಿ ಕೂಡ ಇರಾನ್ ಅಧ್ಯಕ್ಷ ಬಳಿ ಮಾತನಾಡಿದ್ದಾರೆ. ಇಸ್ರೇಲ್ ಹಾಗೂ ಅಮೆರಿಕದೊಂದಿಗಿನ ಉದ್ವಿಗ್ನತೆ ಕುರಿತು ಚರ್ಚಿಸಲು ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಮಾಸ್ಕೋಗೆ ತೆರಳಿದ್ದಾರೆ. ಇಂದು ಪುಟಿನ್ ಜತೆ ಮಾತನಾಡಿ ಯಾವ ನಿರ್ಧಾರಕ್ಕೆ ಬರಲಿದ್ದಾರೆ ಎಂದು ಕಾದುನೋಡಬೇಕಿದೆ.

ಇರಾನ್ ಮೇಲೆ ದಾಳಿ ನಡೆಸಿ ಸುಮ್ಮನಾದ ಟ್ರಂಪ್, ರಷ್ಯಾಗೆ ಹೊರಟ ಇರಾನ್ ವಿದೇಶಾಂಗ ಸಚಿವ, ಒಂದು ದಿನದಲ್ಲಿ ಏನೆಲ್ಲಾ ನಡೀತು
ಬಿ2

Updated on: Jun 23, 2025 | 10:37 AM

ಇರಾನ್, ಜೂನ್ 23: ಒಂದೆಡೆ ಇರಾನ್(Iran) ಮೇಲೆ ಒಮ್ಮೆ ದಾಳಿ ನಡೆಸಿ ಅಮೆರಿಕ ಸುಮ್ಮನಾಗಿದ್ದರೂ ಕೂಡ ಇರಾನ್ ಸುಮ್ಮನೆ ಕುಳಿತಿಲ್ಲ, ಅಮೆರಿಕದ ಮೇಲಿರುವ ಸಿಟ್ಟನ್ನು ಇಸ್ರೇಲ್ ಮೇಲೆ ತೀರಿಸಿಕೊಳ್ಳುತ್ತಿದೆ. ಇಸ್ರೇಲ್ ಹಾಗೂ ಇರಾನ್ ದಾಳಿ ಪ್ರತಿದಾಳಿ ನಡೆಸುತ್ತಲೇ ಇದೆ. ಇಸ್ರೇಲ್ ಹಾಗೂ ಅಮೆರಿಕದೊಂದಿಗಿನ ಉದ್ವಿಗ್ನತೆ ಕುರಿತು ಚರ್ಚಿಸಲು ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಮಾಸ್ಕೋಗೆ ತೆರಳಿದ್ದಾರೆ. ಇಂದು ಪುಟಿನ್ ಜತೆ ಮಾತನಾಡಿ ಯಾವ ನಿರ್ಧಾರಕ್ಕೆ ಬರಲಿದ್ದಾರೆ ಎಂದು ಕಾದುನೋಡಬೇಕಿದೆ.ಮಧ್ಯಪ್ರಾಚ್ಯದಲ್ಲಿ ವಿಶ್ವದ ಮೂರು ಶಕ್ತಿಶಾಲಿ ರಾಷ್ಟ್ರಗಳ ಕಾರ್ಯಾಚರಣೆ ನಡೆಯುತ್ತಿದೆ. ಟೆಲ್ ಅವೀವ್‌ನಿಂದ ಟೆಹ್ರಾನ್‌ವರೆಗೆ ವಿನಾಶ ಸಂಭವಿಸುತ್ತಿದೆ. ಮುಂದೆ ಏನಾಗುತ್ತದೆ ಎಂಬುದು ಪ್ರಶ್ನೆ? ಈಗ ಇಸ್ರೇಲ್ ಮತ್ತು ಇರಾನ್‌ನ ಮುಂದೆ ಇರುವ ಆಯ್ಕೆಗಳೇನು? ಎಂಬುವ ವಿಷಯ ಎಲ್ಲರನ್ನೂ ಕಾಡುತ್ತಿದೆ. ಮತ್ತೊಂದೆಡೆ ಅಮೆರಿಕದಲ್ಲಿ ದಾಳಿಯ ಸಾಧ್ಯತೆ ತಳ್ಳಿ ಹಾಕುವಂತಿಲ್ಲ, ತೀವ್ರ ಕಟ್ಟೆಚ್ಚೆರವಹಿಸಲಾಗಿದೆ.

ತೈಲ ವ್ಯಾಪಾರ: ಜಲಸಂಧಿ ಬಂದ್,  ಇರಾನ್ ನಿರ್ಧಾರದಿಂದ ಬೆಚ್ಚಿದ ಅಮೆರಿಕ
ಇಸ್ರೇಲ್ ಮತ್ತು ಇರಾನ್ ನಡುವಿನ ಯುದ್ಧಕ್ಕೆ ಅಮೆರಿಕ ಪ್ರವೇಶಿಸಿದ ನಂತರ ಈ ಪ್ರದೇಶದಲ್ಲಿ ಪರಿಸ್ಥಿತಿ ಹದಗೆಟ್ಟಿದೆ. ಅಮೆರಿಕದ ದಾಳಿಯ ನಂತರ ಇರಾನ್ ಭೀಕರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಬೆದರಿಕೆ ಹಾಕಿದೆ. ಏತನ್ಮಧ್ಯೆ, ಪರ್ಷಿಯನ್ ಕೊಲ್ಲಿಯನ್ನು ಅರೇಬಿಯನ್ ಸಮುದ್ರಕ್ಕೆ ಸಂಪರ್ಕಿಸುವ ಕಿರಿದಾದ ಜಲಮಾರ್ಗವಾದ ಹಾರ್ಮುಜ್ ಜಲಸಂಧಿಯನ್ನು ಮುಚ್ಚುವುದಾಗಿ ಇರಾನ್ ಬೆದರಿಕೆ ಹಾಕಿದೆ.

ಆದರೆ ಈ ಬೆದರಿಕೆ ಅಮೆರಿಕ ಸೇರಿದಂತೆ ವಿಶ್ವದ ಹಲವು ದೇಶಗಳನ್ನು ಒತ್ತಡಕ್ಕೆ ಸಿಲುಕಿಸಿದೆ. ಅಮೆರಿಕ ಇದಕ್ಕಾಗಿ ಚೀನಾಕ್ಕೆ ಮನವಿ ಮಾಡಿದೆ.ಹಾರ್ಮುಜ್ ಜಲಸಂಧಿಯನ್ನು ಮುಚ್ಚದಂತೆ ಇರಾನ್ ಅನ್ನು ಪ್ರೋತ್ಸಾಹಿಸುವಂತೆ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊ ಭಾನುವಾರ ಚೀನಾಕ್ಕೆ ಕರೆ ನೀಡಿದ್ದಾರೆ.  ಇರಾನ್‌ನ ಮೂರು ಪರಮಾಣು ತಾಣಗಳ ಮೇಲೆ ಅಮೆರಿಕ ನಡೆಸಿದ ದಾಳಿಯಿಂದ ಇರಾನ್ ತೀವ್ರ ಕೋಪಗೊಂಡಿದೆ ಮತ್ತು ಈ ಪ್ರದೇಶದ ಅಮೆರಿಕನ್ನರನ್ನು ಗುರಿಯಾಗಿಸಿಕೊಂಡಿದೆ ಮತ್ತು ಹಾರ್ಮುಜ್ ಜಲಸಂಧಿಯನ್ನು ಮುಚ್ಚುವುದಾಗಿ ಬೆದರಿಕೆ ಹಾಕಿದೆ.

ಇದನ್ನೂ ಓದಿ
ಇರಾನ್ ಅಧ್ಯಕ್ಷ ಮಸೂದ್ ಜತೆ ಪ್ರಧಾನಿ ಮೋದಿ ಮಾತುಕತೆ
ಇರಾನ್​ನಿಂದ ಪ್ರತಿದಾಳಿಯ ಆತಂಕ, ಅಮೆರಿಕದ ಪ್ರಮುಖ ನಗರಗಳಲ್ಲಿ ಕಟ್ಟೆಚ್ಚರ
ಅಮೆರಿಕದ ದಾಳಿಗೆ ಬಗ್ಗದ ಇರಾನ್, ಇಸ್ರೇಲ್ ಮೇಲೆ ಮತ್ತೆ ಕ್ಷಿಪಣಿ ದಾಳಿ
ನೀವು ಆರಂಭಿಸಿದ್ದೀರಿ ನಾವು ಕೊನೆಗೊಳಿಸುತ್ತೇವೆ ಎಂದ ಇರಾನ್

ಇರಾನ್ ಮೇಲೆ ದಾಳಿ ಮಾಡಲು ಅಮೆರಿಕ ಯಾವಾಗ ನಿರ್ಧರಿಸಿತ್ತು?
ಇರಾನ್ ಮೇಲೆ ಅಮೆರಿಕ ದಾಳಿ ಮಾಡಿದ ನಂತರ, ಜಾಗತಿಕ ಪರಿಸ್ಥಿತಿ ಸಂಪೂರ್ಣವಾಗಿ ಬದಲಾಗಿದೆ.ಈ ಯುದ್ಧದಲ್ಲಿನ ವಿನಾಶವು ಮೊದಲ ಮತ್ತು ಎರಡನೆಯ ಮಹಾಯುದ್ಧಗಳಿಗಿಂತ ಹೆಚ್ಚಾಗಿರುತ್ತದೆ ಎಂಬ ಭಯವೂ ಇದೆ. ಜೂನ್ 17 ರಂದು, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇದ್ದಕ್ಕಿದ್ದಂತೆ ಜಿ -7 ಸಭೆಯನ್ನು ಅರ್ಧದಲ್ಲೇ ಬಿಟ್ಟು ಕೆನಡಾದಿಂದ ಅಮೆರಿಕಕ್ಕೆ ಮರಳಿದರು, ಹಿಂದಿರುಗುವಾಗ, ಟ್ರಂಪ್ ಇಸ್ರೇಲ್ ಮತ್ತು ಇರಾನ್ ನಡುವೆ ಕದನ ವಿರಾಮ ಇರುವುದಿಲ್ಲ, ಆದರೆ ದೊಡ್ಡ ಘಟನೆಯೊಂದು ನಡೆಯಲಿದೆ ಎಂದಿದ್ದರು. ಒಂದು ವರ್ಷದ ಹಿಂದಿನಿಂದಲೇ ಇರಾನ್​​ನ ಪರಮಾಣು ಘಟಕಗಳ ಮೇಲೆ ದಾಳಿ ನಡೆಸಲು ಅಮೆರಿಕ ಸಜ್ಜಾಗುತ್ತಿತ್ತು.

ಮತ್ತಷ್ಟು ಓದಿ: US-Iran Conflict: ಅಮೆರಿಕ-ಇರಾನ್ ನಡುವೆ ಹೆಚ್ಚಿದ ಉದ್ವಿಗ್ನತೆ, ರಷ್ಯಾದ ಮೊರೆ ಹೋದ ಇರಾನ್

ಆಪರೇಷನ್ ರೈಸಿಂಗ್ ಲಯನ್ ಆರಂಭಿಸಿದ್ದ ಇಸ್ರೇಲ್

ಮೊದಲು ಇಸ್ರೇಲ್ ‘ಆಪರೇಷನ್ ರೈಸಿಂಗ್ ಲಯನ್’ ಅನ್ನು ಪ್ರಾರಂಭಿಸಿತು. ಇಸ್ರೇಲ್‌ನ ಫೈಟರ್ ಜೆಟ್‌ಗಳು ಬಾಂಬ್ ದಾಳಿ ಮಾಡಿದಾಗ, ಟೆಹ್ರಾನ್‌ನಲ್ಲಿ ವಿನಾಶ ಪ್ರಾರಂಭವಾಯಿತು. ಇರಾನ್ ಇದಕ್ಕೆ ‘ಆಪರೇಷನ್ ಟ್ರೂ ಪ್ರಾಮಿಸ್ 3’ ಮೂಲಕ ಪ್ರತಿಕ್ರಿಯಿಸಿತು.ಇರಾನ್‌ನ ಬ್ಯಾಲಿಸ್ಟಿಕ್ ಮತ್ತು ಹೈಪರ್‌ಸಾನಿಕ್ ಕ್ಷಿಪಣಿಗಳು ಹೈಫಾದಿಂದ ಟೆಲ್ ಅವೀವ್‌ವರೆಗಿನ ಎಲ್ಲವನ್ನೂ ನಾಶಮಾಡಲು ಪ್ರಾರಂಭಿಸಿದವು. ಈಗ ಅಮೆರಿಕ ಆಪರೇಷನ್ ಮಿಡ್‌ನೈಟ್ ಹ್ಯಾಮರ್ ಪ್ರಾರಂಭಿಸುವ ಮೂಲಕ ಇರಾನ್-ಇಸ್ರೇಲ್ ಯುದ್ಧಕ್ಕೆ ಹೊಡೆತ ನೀಡಿದೆ.

ಇರಾನ್ ಮೇಲೆ ದಾಳಿ ನಡೆಸಿ, ನೀವೀಗ ಶಾಂತವಾಗಿರಬೇಕೆಂದ ಟ್ರಂಪ್
ಇರಾನ್​ನ ಪರಮಾಣು ಘಟಕಗಳ ಮೇಲೆ ಅಮೆರಿಕ ದಾಳಿ ನಡೆಸಿ ಬಳಿಕ ನೀವೀಗ ಶಾಂತವಾಗಿರದಿದ್ದರೆ ಇನ್ನಷ್ಟು ಕಡೆ ದೊಡ್ಡ ಪ್ರಮಾಣದ ದಾಳಿಯನ್ನೇ ನಡೆಸುವುದಾಗಿ ಟ್ರಂಪ್ ಎಚ್ಚರಿಕೆ ನೀಡಿದ್ದರು. ಈಗ ಪ್ರತಿಕ್ರಿಯೆ ನೀಡಬೇಕೆಂದು ಕನಸಿನಲ್ಲೂ ಆಲೋಚಿಸಬೇಡಿ ಎಂದಿದ್ದರು.

ಹತ್ಯೆಯ ಭಯದಿಂದ ಅಡಗಿಕೊಂಡಿದ್ದ ಖಮೇನಿ
ಅಮೆರಿಕವು ತನ್ನನ್ನು ಕೊಲ್ಲಬಹುದು ಎಂಬ ಭಯದಿಂದ ಇರಾನ್ ಸುಪ್ರೀಂ ನಾಯಕ ಆಯತೊಲ್ಲಾ ಖಮೇನಿ ಬಂಕರ್​​ನಲ್ಲಿ ಅಡಗಿಕೊಂಡಿದ್ದರು. ಅಮೆರಿಕ ದೊಡ್ಡ ತಪ್ಪು ಮಾಡಿದೆ. ತಕ್ಕ ಶಿಕ್ಷೆ ಅನುಭವಿಸುತ್ತದೆ ಎಂದು ಹೇಳಿದ್ದರು.

ನಮಗೆ ಯುದ್ಧ ಬೇಡ ಎಂದ ಅಮೆರಿಕ
ಇರಾನ್ ಮತ್ತು ಇಸ್ರೇಲ್ ನಡುವಿನ ಇಲ್ಲಿಯವರೆಗೆ ನಡೆದ ಯುದ್ಧದಲ್ಲಿ, ಎರಡೂ ದೇಶಗಳು ಭಾರಿ ನಷ್ಟವನ್ನು ಅನುಭವಿಸಿವೆ. ಆದರೆ ಈ ಯುದ್ಧದ 10 ನೇ ದಿನದಂದು, ಅಮೆರಿಕ ಬಹಿರಂಗವಾಗಿ ಈ ಯುದ್ಧಕ್ಕೆ ಧುಮುಕಿದಾಗ ಹೊಸ ತಿರುವು ಮೂಡಿದೆ. ಇರಾನ್ ಮೇಲೆ ದಾಳಿ ಮಾಡಿ ಅದರ ಮೂರು ಪರಮಾಣು ತಾಣಗಳನ್ನು ಗುರಿಯಾಗಿಸಿಕೊಂಡಿತು. ಇದೆಲ್ಲಾ ನಡೆದ ಬಳಿಕ ಅಮೆರಿಕವು ಇರಾನ್ ಜೊತೆ ಯುದ್ಧವನ್ನು ಬಯಸುವುದಿಲ್ಲ ಎಂದು ಹೇಳಿದೆ. ಅಮೆರಿಕ ಇರಾನ್ ಜೊತೆ ಯುದ್ಧ ಮಾಡುತ್ತಿಲ್ಲ, ಆದರೆ ನಾವು ಇರಾನ್ ನ ಪರಮಾಣು ಕಾರ್ಯವನ್ನು ವಿರೋಧಿಸುತ್ತೇವೆ ಎಂದು ಉಪಾಧ್ಯಕ್ಷ ವ್ಯಾನ್ಸ್ ಹೇಳಿದರು.

ರಾಷ್ಟ್ರೀಯ ಭದ್ರತಾ ತಂಡದೊಂದಿಗೆ ಟ್ರಂಪ್ ಸಭೆ
ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್ ಇಂದು ಓವಲ್ ಕಚೇರಿಯಲ್ಲಿ ತಮ್ಮ ರಾಷ್ಟ್ರೀಯ ಭದ್ರತಾ ತಂಡದೊಂದಿಗೆ ಸಭೆ ನಡೆಸಲಿದ್ದಾರೆ. ಈ ವರ್ಷ ಹೇಗ್‌ನಲ್ಲಿ ನಡೆದ ವಾರ್ಷಿಕ ನ್ಯಾಟೋ ಶೃಂಗಸಭೆಗೆ ಸೋಮವಾರ ಟ್ರಂಪ್ ಪ್ರಯಾಣಿಸಬೇಕಿತ್ತು. ಆದರೆ ಈಗ ಅವರು ಮಂಗಳವಾರ ಸಭೆಗೆ ತೆರಳಲಿದ್ದಾರೆ.

ಬಿ2 ಬಾಂಬರ್ ತೂಕ, ಅಗಲ

ಬಿ-2 ವಿಮಾನವು 69 ಅಡಿ ಉದ್ದ, 172 ಅಡಿ ರೆಕ್ಕೆಗಳ ಅಗಲ ಮತ್ತು 17 ಅಡಿ ಎತ್ತರವನ್ನು ಹೊಂದಿದೆ. ಇದರ ತೂಕ 71,700 ಕೆಜಿ, ಆದರೆ ಪೂರ್ಣ ಶಸ್ತ್ರಾಸ್ತ್ರಗಳೊಂದಿಗೆ ಇದು 1.70 ಲಕ್ಷ ಕೆಜಿ ವರೆಗೆ ಭಾರವನ್ನು ಹೊತ್ತುಕೊಂಡು ಹಾರಬಲ್ಲದು. ವೇಗ ಮತ್ತು ಎತ್ತರ: ಇದರ ಗರಿಷ್ಠ ವೇಗ ಗಂಟೆಗೆ 1010 ಕಿಲೋಮೀಟರ್. ಇದು ಸಾಮಾನ್ಯವಾಗಿ ಗಂಟೆಗೆ 900 ಕಿಲೋಮೀಟರ್ ಕ್ರೂಸಿಂಗ್ ವೇಗದಲ್ಲಿ ಹಾರುತ್ತದೆ. ಇದು 50,000 ಅಡಿ (ಸುಮಾರು 15 ಕಿಲೋಮೀಟರ್) ಎತ್ತರಕ್ಕೆ ಹಾರಬಲ್ಲದು, ಇದು ಶತ್ರು ರಾಡಾರ್‌ಗಳು ಮತ್ತು ಕ್ಷಿಪಣಿಗಳಿಂದ ತಪ್ಪಿಸಿಕೊಳ್ಳುವಂತೆ ಮಾಡುತ್ತದೆ. ಇದನ್ನು ಕೇವಲ ಇಬ್ಬರು ನಿರ್ವಹಿಸುತ್ತಾರೆ – ಒಬ್ಬ ಪೈಲಟ್ ಮತ್ತು ಒಬ್ಬ ಮಿಷನ್ ಕಮಾಂಡರ್. ಇದರ ವ್ಯಾಪ್ತಿ 11000 ಕಿ.ಮೀ. ಗಾಳಿಯಲ್ಲಿ ಇಂಧನ ತುಂಬಿಸುವ ಸೌಲಭ್ಯದೊಂದಿಗೆ, ಇದು ಇನ್ನೂ ಹೆಚ್ಚಿನ ದೂರವನ್ನು ಕ್ರಮಿಸಬಹುದು.

ಇರಾನ್-ಇಸ್ರೇಲ್ ಯುದ್ಧ ಮತ್ತು ಅಮೆರಿಕದ ಪಾತ್ರ
2025 ರಲ್ಲಿ ಇಸ್ರೇಲ್ ಮತ್ತು ಇರಾನ್ ನಡುವಿನ ಉದ್ವಿಗ್ನತೆಗಳು ಉತ್ತುಂಗಕ್ಕೇರಿವೆ. ಇಸ್ರೇಲ್ ಇರಾನ್‌ನ ಪರಮಾಣು ಘಟಕಗಳು ತನಗೆ ಬೆದರಿಕೆ ಎಂದು ಪರಿಗಣಿಸಿದೆ. ಇರಾನ್ ಇಸ್ರೇಲ್ ಮೇಲೆ ಕ್ಷಿಪಣಿ ದಾಳಿ ನಡೆಸಿದೆ. ಏತನ್ಮಧ್ಯೆ, ಇಸ್ರೇಲ್ ಅನ್ನು ಬೆಂಬಲಿಸುವ ಅಮೆರಿಕವು ಬಿ -2 ಬಾಂಬರ್‌ಗಳನ್ನು ಬಳಸಿಕೊಂಡು ಇರಾನಿನ ಮೂರು ಪರಮಾಣು ತಾಣಗಳಾದ ಫೋರ್ಡೊ, ನಟಾಂಜ್ ಮತ್ತು ಇಸ್ಫಹಾನ್ ಮೇಲೆ ದಾಳಿ ಮಾಡಿತು. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈ ದಾಳಿಗಳನ್ನು ಘೋಷಿಸಿದರು, ಅಮೆರಿಕದ ವಿಮಾನಗಳು ಇರಾನಿನ ವಾಯುಪ್ರದೇಶವನ್ನು ಸುರಕ್ಷಿತವಾಗಿ ತೊರೆದಿವೆ ಎಂದು ಹೇಳಿದರು.

ಫೋರ್ಡೊ ಪರಮಾಣು ಘಟಕ: ಕಠಿಣ ಗುರಿ
ಇರಾನ್‌ನ ಫೋರ್ಡೊ ಪರಮಾಣು ಘಟಕವನ್ನು ಪರ್ವತಗಳ ಕೆಳಗೆ 80 ಮೀಟರ್ ಆಳದಲ್ಲಿ ನಿರ್ಮಿಸಲಾಗಿದ್ದು, ಇದನ್ನು ಸಾಮಾನ್ಯ ಬಾಂಬ್‌ಗಳಿಂದ ನಾಶಮಾಡುವುದು ಅಸಾಧ್ಯ. ಬಂಕರ್ ಬಸ್ಟರ್ ಎಂದು ಕರೆಯಲ್ಪಡುವ GBU-57 MOP ಬಾಂಬ್ ಅನ್ನು ಅಂತಹ ಗುರಿಗಳಿಗಾಗಿ ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ. ಈ ಬಾಂಬ್ 60 ಅಡಿ ಕಾಂಕ್ರೀಟ್ ಅಥವಾ 200 ಅಡಿ ಮಣ್ಣಿನೊಳಗೆ ಭೇದಿಸಬಹುದು. ಈ ಭಾರವಾದ ಬಾಂಬ್ ಅನ್ನು ಹೊತ್ತೊಯ್ಯಬಲ್ಲ ಏಕೈಕ ವಿಮಾನವೆಂದರೆ B-2 ಬಾಂಬರ್.

 

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

 

 

 

Published On - 10:27 am, Mon, 23 June 25