
ಢಾಕಾ, ಜನವರಿ 13: ಬಾಂಗ್ಲಾದೇಶದಲ್ಲಿ ಹಿಂದೂ(Hindu)ಗಳ ಮುಂದುವರೆದಿದೆ. ದಕ್ಷಿಣ ಬಾಂಗ್ಲದ ಫೆನಿ ಜಿಲ್ಲೆಯ ಧಗನ್ಭುಯಾನ್ನಲ್ಲಿ ಅಪರಿಚಿತ ದುಷ್ಕರ್ಮಿಗಳು 28 ವರ್ಷದ ಆಟೋ ಚಾಲಕನನ್ನು ಇರಿದು ಹತ್ಯೆ ಮಾಡಿದ್ದಾರೆ.ಸಮೀರ್ ಕುಮಾರ್ ದಾಸ್ ಮೃತ ವ್ಯಕ್ತಿ. ಆಟೋ ಚಾಲಕನನ್ನು ಕೊಂದು ಆಟೋವನ್ನು ಕೂಡ ಕಳವು ಮಾಡಲಾಗಿದೆ. ಕುಟುಂಬದವರ ಪ್ರಕಾರ, ಸಮೀರ್ ಭಾನುವಾರ ಸಂಜೆ 7 ಗಂಟೆ ಸುಮಾರಿಗೆ ಆಟೋರಿಕ್ಷಾದಲ್ಲಿ ಮನೆಯಿಂದ ಹೊರಟಿದ್ದರು, ತಡರಾತ್ರಿಯಾದರೂ ಅವನು ಹಿಂತಿರುಗದಿದ್ದಾಗ, ಕುಟುಂಬದವರು ಅವರನ್ನು ಹುಡುಕಲು ಪ್ರಾರಂಭಿಸಿದ್ದರು.
ಬೆಳಗಿನ ಜಾವ 2 ಗಂಟೆ ಸುಮಾರಿಗೆ, ಜಗತ್ಪುರ ಗ್ರಾಮದ ಹೊಲವೊಂದರಲ್ಲಿ ಸ್ಥಳೀಯರು ಅವರ ಶವವನ್ನು ಪತ್ತೆ ಮಾಡಿದ್ದಾರೆ. ದಗನ್ಭುಯಾನ್ ಪೊಲೀಸ್ ಠಾಣೆಯ ಪೊಲೀಸ್ ಅಧಿಕಾರಿಯೊಬ್ಬರು ನೀಡಿರುವ ಮಾಹಿತಿಯ ಪ್ರಕಾರ, ಸಮೀರ್ ಹತ್ಯೆಗೆ ಮನೆಯಲ್ಲಿ ತಯಾರಿಸಿದ ಆಯುಧಗಳನ್ನು ಬಳಸಲಾಗಿದೆ.
ಪ್ರಾಥಮಿಕ ತನಿಖೆಗಳು ಕೊಲೆ ಪೂರ್ವ ಯೋಜಿತ ಎಂದು ಕಂಡುಬರುತ್ತಿದೆ. ತನಿಖೆ ಮುಂದುವರೆದಿದ್ದು, ಇನ್ನೂ ಯಾರನ್ನೂ ಬಂಧಿಸಿಲ್ಲ. ಬಾಂಗ್ಲಾದೇಶದಲ್ಲಿ 23 ದಿನಗಳಲ್ಲಿ ನಡೆದ ಏಳನೇ ಹಿಂದೂ ಹತ್ಯೆ ಇದಾಗಿದೆ. ಇದಕ್ಕೂ ಮೊದಲು, ಜನವರಿ 5 ರಂದು, ಬಾಂಗ್ಲಾದೇಶದ ನರಸಿಂಗ್ಡಿ ಜಿಲ್ಲೆಯಲ್ಲಿ ಹಿಂದೂ ವ್ಯಕ್ತಿಯನ್ನು ಹರಿತವಾದ ಆಯುಧಗಳಿಂದ ಇರಿದು ಹತ್ಯೆ ಮಾಡಲಾಗಿತ್ತು. ಮೃತ ವ್ಯಕ್ತಿ 40 ವರ್ಷದ ಶರತ್ ಚಕ್ರವರ್ತಿ ಮಣಿ.
ಜನವರಿ 6 ರಂದು ಬಾಂಗ್ಲಾದೇಶದ ನೌಗಾಂವ್ ಜಿಲ್ಲೆಯಲ್ಲಿ 25 ವರ್ಷದ ಹಿಂದೂ ವ್ಯಕ್ತಿಯೊಬ್ಬ ಕಾಲುವೆಗೆ ಹಾರಿ ಸಾವನ್ನಪ್ಪಿದ್ದ. ಮೃತನನ್ನು ಭಂಡಾರ್‌ಪುರ ಗ್ರಾಮದ ನಿವಾಸಿ ಮಿಥುನ್ ಸರ್ಕಾರ್ ಎಂದು ಗುರುತಿಸಲಾಗಿದ್ದು, ಕಳ್ಳತನದ ಆರೋಪ ಹೊರಿಸಿ ಸ್ಥಳೀಯರು ಆತನನ್ನು ಬೆನ್ನಟ್ಟಿದ್ದರು.
ಮತ್ತಷ್ಟು ಓದಿ: ಬಾಂಗ್ಲಾದೇಶದಲ್ಲಿ 18 ದಿನಗಳಲ್ಲಿ 6 ಹಿಂದೂಗಳ ಹತ್ಯೆ
ಸುಮಾರು 170 ಮಿಲಿಯನ್ ಜನಸಂಖ್ಯೆಯನ್ನು ಹೊಂದಿರುವ ಮುಸ್ಲಿಂ ಬಹುಸಂಖ್ಯಾತ ಬಾಂಗ್ಲಾದೇಶದಲ್ಲಿ 2024 ರ ದಂಗೆಯ ನಂತರ ಪರಿಸ್ಥಿತಿ ಅಸ್ಥಿರವಾಗಿದೆ. ಇಸ್ಲಾಮಿಸ್ಟ್ ಗುಂಪುಗಳ ಹೆಚ್ಚಿದ ಚಟುವಟಿಕೆಯು ಅಲ್ಪಸಂಖ್ಯಾತರ ಮೇಲಿನ ದಾಳಿಗಳಿಗೆ ಕಾರಣವಾಗಿದೆ. ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತರನ್ನು, ವಿಶೇಷವಾಗಿ ಹಿಂದೂಗಳನ್ನು ನಡೆಸಿಕೊಳ್ಳುತ್ತಿರುವ ಬಗ್ಗೆ ಭಾರತ ಕಳವಳ ವ್ಯಕ್ತಪಡಿಸಿದೆ. ಕಳೆದ ವಾರ, ಭಾರತದ ವಿದೇಶಾಂಗ ಸಚಿವಾಲಯವು ಬಾಂಗ್ಲಾದೇಶದ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ ಎಂದು ಹೇಳಿದೆ.
ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತರು ಮತ್ತು ಅವರ ಆಸ್ತಿಗಳ ಮೇಲೆ ಪದೇ ಪದೇ ದಾಳಿಗಳು ನಡೆಯುತ್ತಿರುವುದು ಆತಂಕಕಾರಿಯಾಗಿದೆ. ಬಾಂಗ್ಲಾದೇಶದ ಮಧ್ಯಂತರ ನಾಯಕ ಮತ್ತು ನೊಬೆಲ್ ಶಾಂತಿ ಪ್ರಶಸ್ತಿ ವಿಜೇತ ಮುಹಮ್ಮದ್ ಯೂನಸ್, ಭಾರತದ ಆರೋಪಗಳನ್ನು ಉತ್ಪ್ರೇಕ್ಷೆ ಎಂದು ಕರೆದಿದ್ದಾರೆ.
ಬಾಂಗ್ಲಾದೇಶದಲ್ಲಿ ಹಿಂದೂ ವ್ಯಕ್ತಿಯೊಬ್ಬರನ್ನು ಜೀವಂತವಾಗಿ ಸುಟ್ಟು ಹಾಕಲಾಗಿದೆ. ದಾಳಿಕೋರರು ಆತನ ಮೇಲೆ ಹರಿತವಾದ ಆಯುಧಗಳಿಂದ ಹಲ್ಲೆ ನಡೆಸಿ, ನಂತರ ಆತನ ತಲೆಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 8:12 am, Tue, 13 January 26