ಮುಂದಿನ ವರ್ಷ ದೆಹಲಿಗೆ ಟ್ರಂಪ್ ಭೇಟಿ ಸಾಧ್ಯತೆ, ಭಾರತ ನಮ್ಮ ಅತ್ಯಗತ್ಯ ಪಾಲುದಾರ; ಅಮೆರಿಕದ ರಾಯಭಾರಿ ಹೇಳಿದ್ದೇನು?
ಅಮೆರಿಕ ಮತ್ತು ಭಾರತ ಬಹಳ ಆತ್ಮೀಯ ದೇಶಗಳಾಗಿದ್ದವು. ಪ್ರಧಾನಿ ಮೋದಿ ಮತ್ತು ಅಧ್ಯಕ್ಷ ಟ್ರಂಪ್ ನಡುವಿನ ಬಾಂಧವ್ಯ, ಸ್ನೇಹವನ್ನು ನೋಡಿ ಕರುಬಿದ ದೇಶಗಳೆಷ್ಟೋ. ಆದರೆ, ಇದ್ದಕ್ಕಿದ್ದಂತೆ ಅವರಿಬ್ಬರ ನಡುವೆ ಒಂದು ಸಣ್ಣ ಕಂದಕ ಸೃಷ್ಟಿಯಾಗಲು ಕಾರಣವಾದುದು ಅಮೆರಿಕ ಭಾರತದ ಮೇಲೆ ಹೇರಿದ ಅತಿಯಾದ ವ್ಯಾಪಾರ ಸುಂಕ. ಆದರೆ, ವ್ಯಾಪಾರ ಮತ್ತು ಸುಂಕದ ಉದ್ವಿಗ್ನತೆಯ ನಡುವೆಯೂ ಭಾರತದಲ್ಲಿರುವ ಅಮೆರಿಕದ ರಾಯಭಾರಿ ಸೆರ್ಗಿಯೊ ಗೋರ್ ನೀಡಿದ ಹೇಳಿಕೆ ಮತ್ತೊಮ್ಮೆ ಹುಬ್ಬೇರುವಂತೆ ಮಾಡಿದೆ.

ನವದೆಹಲಿ, ಜನವರಿ 12: ಭಾರತ ಮತ್ತು ಅಮೆರಿಕದ ನಡುವೆ ಭಾರತಕ್ಕೆ ನಿಯೋಜನೆಯಾಗಿರುವ ಅಮೆರಿಕದ ರಾಯಭಾರಿ ಸೆರ್ಗಿಯೊ ಗೋರ್ ನೀಡಿರುವ ಹೇಳಿಕೆ ಕುತೂಹಲಕ್ಕೆ ಕಾರಣವಾಗಿದೆ. “ಭಾರತ ಇಂದಿಗೂ ಅಮೆರಿಕಕ್ಕೆ ಅತ್ಯಗತ್ಯ ಪಾಲುದಾರನಾಗಿ ಉಳಿದಿದೆ. ಪ್ರಧಾನಿ ನರೇಂದ್ರ ಮೋದಿ (PM Modi) ಮತ್ತು ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ನಡುವಿನ ಸ್ನೇಹ ತುಂಬಾ ನೈಜವಾದುದು. ಭಾರತಕ್ಕಿಂತ ಹೆಚ್ಚು ಅಗತ್ಯ ಪಾಲುದಾರ ಅಮೆರಿಕಕ್ಕೆ ಬೇರಾವುದೂ ಇಲ್ಲ” ಎಂದು ಗೋರ್ ಹೇಳಿದ್ದಾರೆ.
“ಭಾರತದಂತೆ ಬೇರೆ ಯಾವುದೇ ರಾಷ್ಟ್ರ ಅಮೆರಿಕಕ್ಕೆ ಅತ್ಯಗತ್ಯವಾಗಿಲ್ಲ. ಇಂದಿನಿಂದ (ಜನವರಿ 12) ಅಮೆರಿಕ ಮತ್ತು ಭಾರತ ತಮ್ಮ ಮುಂದಿನ ಸುತ್ತಿನ ವ್ಯಾಪಾರ ಒಪ್ಪಂದದ ಮಾತುಕತೆಗಳನ್ನು ಪುನರಾರಂಭಿಸಲಿವೆ” ಎಂದು ಅವರು ಘೋಷಿಸಿದರು. ಅಮೆರಿಕ ರಾಯಭಾರ ಕಚೇರಿಯಲ್ಲಿ ದಕ್ಷಿಣ ಮತ್ತು ಮಧ್ಯ ಏಷ್ಯಾದ ವಿಶೇಷ ರಾಯಭಾರಿಯೂ ಆಗಿರುವ ಗೋರ್, ಮುಂದಿನ ವರ್ಷದ ವೇಳೆಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತಕ್ಕೆ ಭೇಟಿ ನೀಡಬಹುದು ಎಂದು ಹೇಳಿದ್ದಾರೆ.
ಇದನ್ನೂ ಓದಿ: ಅಮೆರಿಕದೊಂದಿಗೆ ಟ್ರೇಡ್ ಡೀಲ್, ಮುಗಿಯದ ತೊಡಕು; ದಕ್ಷಿಣ ಅಮೆರಿಕ ಸೇರಿದಂತೆ ಬೇರೆ ಬೇರೆ ಮಾರುಕಟ್ಟೆಗಳ ಮೇಲೆ ಭಾರತದ ಕಣ್ಣು
ದೆಹಲಿಯಲ್ಲಿರುವ ಅಮೆರಿಕ ರಾಯಭಾರ ಕಚೇರಿಯಲ್ಲಿ ಮಾತನಾಡಿದ ಗೋರ್, ಟ್ರಂಪ್ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ನಡುವಿನ ಸ್ನೇಹ ಅತ್ಯಂತ ಸತ್ಯವಾದುದು. ನಿಜವಾದ ಸ್ನೇಹಿತರು ತಮ್ಮ ಭಿನ್ನಾಭಿಪ್ರಾಯಗಳನ್ನು ಪರಿಹರಿಸಿಕೊಳ್ಳಬಹುದು ಎಂದು ಅವರು ಹೇಳಿದರು.
“ಭಾರತ ವಿಶ್ವದ ಅತಿದೊಡ್ಡ ರಾಷ್ಟ್ರ. ಆದ್ದರಿಂದ ಇದನ್ನು ಅಂತಿಮ ಗೆರೆಯನ್ನು ದಾಟಿಸುವುದು ಸುಲಭದ ಕೆಲಸವಲ್ಲ, ಆದರೆ ನಾವು ಅಲ್ಲಿಗೆ ತಲುಪಲು ನಿರ್ಧರಿಸಿದ್ದೇವೆ” ಎಂದು ಗೋರ್ ಹೇಳಿದ್ದಾರೆ. “ನಾನು ಅಧ್ಯಕ್ಷ ಟ್ರಂಪ್ ಅವರೊಂದಿಗೆ ಪ್ರಪಂಚದಾದ್ಯಂತ ಪ್ರಯಾಣಿಸಿದ್ದೇನೆ. ಪ್ರಧಾನಿ ಮೋದಿ ಅವರೊಂದಿಗಿನ ಟ್ರಂಪ್ ಸ್ನೇಹವು ಅತ್ಯಂತ ನಿಜವೆಂದು ನಾನು ದೃಢೀಕರಿಸಬಲ್ಲೆ” ಎಂದು ಗೋರ್ ಒತ್ತಿ ಹೇಳಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
