ಮಹಿಳೆಯರಿಗೆ ಸಂವಹನದ ಹೊಣೆ ಒಪ್ಪಿಸಿದ ಅಮೆರಿಕ ನಿಯೋಜಿತ ಅಧ್ಯಕ್ಷ ಜೋ ಬಿಡೆನ್
ಅಮೆರಿಕಾದ ಅಧ್ಯಕ್ಷ ಜೋ ಬಿಡೆನ್ ಮಹಿಳಾ ಸಿಬ್ಬಂದಿಯನ್ನು ಸಂವಹನ ಕಾರ್ಯಕ್ಕೆ ನೇಮಿಸಿಕೊಳ್ಳುತ್ತಿದ್ದಾರೆ. ಪುರುಷರಷ್ಟೇ ಮಹಿಳೆಯರಿಗೂ ಅವಕಾಶವನ್ನು ನೀಡುತ್ತಿದ್ದು, ಉನ್ನತ ಹಂತದ ಜವಾಬ್ದಾರಿಯ ಹೊಣೆಯನ್ನು ಮಹಿಳಾ ಅಧಿಕಾರಿಗಳಿಗೂ ನೀಡಿದ್ದಾರೆ.
ವಾಷಿಂಗ್ಟನ್: ಅಮೆರಿಕದ ನಿಯೋಜಿತ ಅಧ್ಯಕ್ಷ ಜೋ ಬಿಡೆನ್ ಅಮೆರಿಕ ಸಂಸ್ಕೃತಿಯನ್ನು ಪ್ರತಿನಿಧಿಸುವ ವೈವಿದ್ಯಮಯ ಕ್ಯಾಬಿನೆಟ್ ರೂಪಿಸುವ ಭರವಸೆ ನೀಡಿದ್ದರು. ಇದೀಗ ಜೆನ್ ಸಕಿ ಅವರನ್ನು ಪತ್ರಿಕಾ ಕಾರ್ಯದರ್ಶಿ ಸ್ಥಾನಕ್ಕೆ ನೇಮಿಸಿಕೊಳ್ಳುವುದೂ ಸೇರಿದಂತೆ ಹಲವು ಮಹಿಳೆಯರನ್ನು ಪ್ರಮುಖ ಸ್ಥಾನಗಳಿಗೆ ತರುವ ಮೂಲಕ ತಮ್ಮ ಭರವಸೆಯನ್ನು ಸಾಕಾರಗೊಳಿಸಲು ಹೆಜ್ಜೆ ಮುಂದಿಟ್ಟಿದ್ದಾರೆ. ಶ್ವೇತಭವನದ ಉನ್ನತ ಹಂತದ ಪ್ರಮುಖ ಜವಾಬ್ದಾರಿಗಳನ್ನು ಮಹಿಳಾ ಅಧಿಕಾರಿಗಳಿಗೇ ನೀಡಿದ್ದಾರೆ.
ಮಹಿಳಾ ಸಂವಹನ ಸಿಬ್ಬಂದಿ
ಬಿಡೆನ್ ಸರ್ಕಾರದ ಪ್ರಚಾರ ವಿಭಾಗದ ಸಹಾಯಕರಾಗಿ ಸಿಮೋನ್ ಸ್ಯಾಂಡರ್ಸ್ ನೇಮಕವಾಗಿದ್ದಾರೆ. ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ರ ಹಿರಿಯ ಸಲಹೆಗಾರ್ತಿ ಮತ್ತು ವಕ್ತಾರರಾಗಿಯೂ ಅವರು ಕಾರ್ಯನಿರ್ವಹಿಸಲಿದ್ದಾರೆ. ಪ್ರಚಾರ ವಿಭಾಗದ ನಿರ್ದೇಶಕರಾದ ಕೇಟ್ ಬೆಡಿಂಗ್ ಫೀಲ್ಡ್ ಶ್ವೇತಭವನದಲ್ಲಿ ಮಾಧ್ಯಮ ಸಂಯೋಜನೆಯ ಜವಾಬ್ದಾರಿಯನ್ನೂ ಹೊತ್ತುಕೊಂಡಿದ್ದಾರೆ.
ಅಧ್ಯಕ್ಷೀಯ ಚುನಾವಣೆಯಲ್ಲಿ ಬಿಡೆನ್ ಪರ ನಡೆದ ಅಭಿಯಾನದಲ್ಲಿ ಸಕ್ರಿಯರಾಗಿದ್ದ ಆಶ್ಲೇ ಎಟಿಯೆನ್ ಅಮೆರಿಕ ಉಪಾಧ್ಯಕ್ಷರಾದ ಕಮಲಾ ಹ್ಯಾರಿಸ್ರ ಸಂವಹನ ನಿರ್ದೇಶಕರಾಗಿ ಕಾರ್ಯನಿರ್ವಹಿಸಲಿದ್ದಾರೆ. ಶ್ವೇತ ಭವನ ಸಂವಹನ ವಿಭಾಗದ ಉಪ ನಿರ್ದೇಶಕಿಯಾಗಿ ಪಿಲಿ ಟೋಬರ್ ಕಾರ್ಯನಿರ್ವಹಿಸಲಿದ್ದಾರೆ.
ಬಿಡೆನ್ ಅಭಿಯಾನದ ಹಿರಿಯ ಸಲಹೆಗಾರ್ತಿ ಕರೀನೆ ಜೀನ್ ಪಿಯರೆ ಉಪ ಪತ್ರಿಕಾ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಲಿದ್ದಾರೆ. ಮಾಜಿ ಪ್ರಚಾರ ಸಲಹೆಗಾರ್ತಿ ಎಲಿಜಬೆತ್ ಅಲೆಗ್ಸಾಂಡರ್ ಪ್ರಥಮ ಮಹಿಳೆ ಜಿಲ್ ಬಿಡೆನ್ರೊಂದಿಗೆ ಸಂವಹನ ನಿರ್ದೇಶಕಿಯಾಗಿ ಕಾರ್ಯನಿರ್ವಹಿಸಲಿದ್ದಾರೆ.
ಅಧ್ಯಕ್ಷರ ಸಂವಹನ ತಂಡದ ಸಂಪೂರ್ಣ ಜವಾಬ್ದಾರಿಯನ್ನು ಮಹಿಳೆಯರೇ ಹೊತ್ತುಕೊಂಡಿರುವುದು ಅಮೆರಿಕ ಇತಿಹಾಸದಲ್ಲಿ ಇದೇ ಮೊದಲು. ವಾಪಿಂಗ್ಟನ್ ಪೋಸ್ಟ್ ಮತ್ತು ಬಿಡೆನ್ ಪರಿವರ್ತನಾ ತಂಡದ ಪ್ರಕಾರ, ಭಾನುವಾರ ಜವಾಬ್ದಾರಿ ಘೋಷಣೆಯಾದ ಬಹುತೇಕ ಎಲ್ಲಾ ಸಿಬ್ಬಂದಿ ಈ ಹಿಂದೆ ಬಿಡೆನ್ ಪರ ಪ್ರಚಾರದಲ್ಲಿ ಪಾಲ್ಗೊಂಡವರು ಅಥವಾ ಒಬಮಾ ಆಡಳಿತದಲ್ಲಿ ಸಕ್ರಿಯರಾಗಿದ್ದವರು.
ವಾಲ್ ಸ್ಟ್ರೀಟ್ ಜರ್ನಲ್ ದಿನಪತ್ರಿಕೆಯಲ್ಲಿ ಪ್ರಕಟವಾಗಿರುವ ವರದಿಯ ಪ್ರಕಾರ, ನೀರಾ ಟಂಡೆನ್ ಅವರನ್ನು ಬಜೆಟ್ ಮತ್ತು ಮ್ಯಾನೇಜ್ಮೆಂಟ್ ಕಚೇರಿಯ ನಿರ್ದೇಶಕಿಯಾಗಿ, ಸಿಸಿಲಿಯಾ ರೋಸ್ ಅವರನ್ನು ಆರ್ಥಿಕ ಸಲಹಾ ಸಮಿತಿ ಮುಖ್ಯಸ್ಥರಿಗಾಗಿ ನೇಮಿಸುವ ಸಾಧ್ಯತೆಯಿದೆ. ಈ ಎರಡೂ ಹುದ್ದೆಗಳನ್ನು ಮಹಿಳೆಯರಿಗೆ ನೀಡಿರುವುದು ಇದೇ ಮೊದಲು.
‘ಅಮೆರಿಕದಂತೆ ಕಾಣುವ’ (ಅಮೆರಿಕದ ವೈವಿಧ್ಯತೆ ಪ್ರತಿಬಿಂಬಿಸುವ) ಆಡಳಿತ ವ್ಯವಸ್ಥೆ ರೂಪಿಸುವುದಾಗಿ ಬಿಡೆನ್ ಈ ಹಿಂದೆ ಭರವಸೆ ನೀಡಿದ್ದರು.
ಕೇಯ್ಲೀ ಮೆಕ್ ಟ್ವೀಟ್
ಬಿಡೆನ್ ಅವರದು ಸಂಪೂರ್ಣ ಮಹಿಳೆಯರೇ ಇರುವ ಅಧ್ಯಕ್ಷರ ಮೊದಲ ಸಂವಹನ ತಂಡ ಎಂಬ ಶ್ಲಾಘನೆಗೆ ಶ್ವೇತ ಭವನದ ಪತ್ರಿಕಾ ಕಾರ್ಯದರ್ಶಿ ಕೇಯ್ಲಿ ಮೆಕ್ ಎನಾನಿ ಆಕ್ಷೇಪಿಸಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಅವರು, ‘ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈಗಾಗಲೇ ಸಂಪೂರ್ಣ ಮಹಿಳೆಯರೇ ಇರುವ ಸಂವಹನ ತಂಡವನ್ನು ಹೊಂದಿದ್ದಾರೆ’ ಎಂದು ಹೇಳಿದ್ದಾರೆ.
ಮೆಕ್ ಎನಾನಿ ಟ್ವೀಟ್ನಲ್ಲಿ ಇರುವ ದೋಷಗಳನ್ನು ಹಲವು ಪತ್ರಕರ್ತರು ಎತ್ತಿತೋರಿಸಿದ್ದು, ಟ್ರಂಪ್ ಸಂವಹನ ತಂಡದಲ್ಲಿ ಇಬ್ಬರು ಪುರುಷರು ಇರುವ ಮಾಹಿತಿ ಬಹಿರಂಗಪಡಿಸಿದ್ದಾರೆ.
ಇದನ್ನೂ ಓದಿ: ಜನವರಿ 20ರೊಳಗಾಗಿ ಟ್ರಂಪ್ಗೆ ಜ್ಞಾನೋದಯವಾಗುವ ನಿರೀಕ್ಷೆಯಿದೆ: ಬೈಡೆನ್