ನ್ಯೂಜಿಲೆಂಡ್​ನ ಹಲವಾರು ಶಾಲೆಗಳಿಗೆ ಬಾಂಬ್ ಬೆದರಿಕೆ ಕರೆ, ಮಕ್ಕಳು ಮತ್ತು ಶಾಲಾ ವ್ಯವಸ್ಥಾಪಕ ಮಂಡಳಿ ಕಂಗಾಲು

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Jul 29, 2022 | 8:03 AM

ಟಾಸ್ಮನ್ ಪ್ರದೇಶದ ಕಮಾಂಡರ್ ಸೈಮನ್ ಫೆಲ್ಟ್ ಹ್ಯಾಮ್, ಮಾಧ್ಯಮಗಳಿಗೆ ನೀಡಿರುವ ಹೇಳಿಕೆಯಲ್ಲಿ ಮಾರ್ಲ್ ಬೋರೋ ಗರ್ಲ್ಸ್ ಕಾಲೇಜು ಸ್ವೀಕರಿಸಿದ ಬೆದರಿಕೆ ಕರೆಗಳಿಗೆ ಸಂಬಂಧಿಸಿದಂತೆ ಇಬ್ಬರು ಯುವಕರನ್ನು ಪ್ರಶ್ನಿಸಲಾಗುತ್ತಿದೆ ಎಂದು ಹೇಳಿದ್ದಾರೆ.

ನ್ಯೂಜಿಲೆಂಡ್​ನ ಹಲವಾರು ಶಾಲೆಗಳಿಗೆ ಬಾಂಬ್ ಬೆದರಿಕೆ ಕರೆ, ಮಕ್ಕಳು ಮತ್ತು ಶಾಲಾ ವ್ಯವಸ್ಥಾಪಕ ಮಂಡಳಿ ಕಂಗಾಲು
ಸಾಂದರ್ಭಿಕ ಚಿತ್ರ
Follow us on

ವೆಲ್ಲಿಂಗ್ಟನ್ (ನ್ಯೂಜಿಲೆಂಡ್): ಗುರುವಾರ ಬೆಳಗ್ಗೆ ವೆಲ್ಲಿಂಗ್ಟನ್ (Wellington) ನಗರದ ಸುಮಾರು ಹನ್ನೆರಡಕ್ಕಿಂತ ಹೆಚ್ಚು ಶಾಲೆಗಳಿಗೆ ಬಾಂಬ್ ಬೆದರಿಕೆ (bomb threats) ಕರೆಗಳು ಹೋಗಿದ್ದರಿಂದ ಆ ಆ ಶಾಲೆಗಳಲ್ಲಿ ಅಲ್ಲೋಲ ಕಲ್ಲೋಲದ ಸ್ಥಿತಿ ಉಂಟಾಗಿತ್ತು. ಬೆದರಿಕೆ ಕರೆಗಳು ವಿದೇಶಿ ಸೈಬರ್ ಅಟ್ಯಾಕ್ ನ (cyberattack) ಒಂದು ಭಾಗವೆಂದು ಪರಿಗಣಿಸಲಾಗಿದೆ. ಬಾಂಬ್ ಬೆದರಿಕೆ ಸ್ವೀಕರಿಸಿದ ಶಾಲೆಗಳಿಂದ ಮಕ್ಕಳನ್ನು ಕೂಡಲೇ ಹೊರಗೆ ಕಳಿಸಿ ಶಾಲೆಗಳನ್ನು ಮುಚ್ಚಲಾಯಿತೆಂದು ವರದಿಯಾಗಿದೆ.

ಬುಧವಾರದಂದು ನಾರ್ಥ್ ಐಲ್ಯಾಂಡ್ ನಲ್ಲಿರುವ ವೈಕ್ಯಾಟೊ, ಥೇಮ್ಸ್ ಮತ್ತು ಗಿಸ್ಬೋನ್ ಪ್ರದೇಶಗಳ 4 ಶಾಲೆಗಳು ಬಾಂಬ್ ಬೆದರಿಕೆ ಕರೆಗಳನ್ನು ಸ್ವೀಕರಿಸಿ ಸರಿಯಾಗಿ 24 ಗಂಟೆಗಳ ಬಳಿಕ ವೆಲ್ಲಿಂಗ್ಟನ್ ನಗರದಲ್ಲಿರುವ ಶಾಲೆಗಳಿಗೆ ಬೆದರಿಕೆ ಕರೆ ಮಾಡಲಾಗಿದೆ.

ನ್ಯೂಜಿಲೆಂಡ್ ಶಾಲಾ ಪ್ರಿನ್ಸಿಪಾಲ್ ಗಳ ಒಕ್ಕೂಟದ ಅಧ್ಯಕ್ಷೆಯಾಗಿರುವ ಚೆರಿ ಟೇಲರ್-ಪಟೇಲ್ ಅರ್ ಎನ್ ಜಿ ಸುದ್ದಿಸಂಸ್ಥೆಗೆ ನೀಡಿದ ಹೇಳಿಕೆಯಲ್ಲಿ, ಬಾಂಬ್ ಬೆದರಿಕೆ ಕರೆಗಳ ವಿಷಯವನ್ನು ಶಿಕ್ಷಣ ಸಚಿವಾಲಯ ಜೊತೆ ಚರ್ಚಿಸಿದ್ದು, ಅದು ಅಸಲಿಗೆ ವಿದೇಶಗಳಿಂದ ಬರುತ್ತಿರುವ ಸೈಬರ್ ಬೋಟ್ ಆಗಿದೆ ಅಂತ ಅಧಿಕಾರಿಗಳು ಹೇಳಿದ್ದಾರೆಂದು ತಿಳಿಸಿದ್ದಾರೆ.

ನ್ಯೂಜಿಲೆಂಡ್ ಪೊಲೀಸ್ ಹೇಳಿಕೆಯೊಂದನ್ನು ಬಿಡುಗಡೆ ಮಾಡಿ, ‘ಭದ್ರತೆಗೆ ಯಾವುದೇ ರೀತಿಯ ಅಪಾಯವಿದೆ ಅಂತ ನಾವು ಭಾವಿಸುವುದಿಲ್ಲ’ ಎಂದು ಹೇಳಿದೆ.

ಹಾಗಂತ, ಶಿಕ್ಷಣ ಸಚಿವಾಲಯದ ಅಧಿಕಾರಿಗಳು ಪೊಲೀಸರ ಮಾತಿಗೆ ಮನ್ನಣೆ ನೀಡಿ ನಿರುಮ್ಮಳರಾಗಿಲ್ಲ. ಬಾಂಬ್ ಬೆದರಿಕೆ ಕರೆಗಳನ್ನು ಅವರು ಗಂಭೀರವಾಗಿ ಪರಿಗಣಿಸಿದ್ದಾರೆ. ಮಾರ್ಲ್ ಬೋರೋ, ಮಾಸ್ಟರ್ ಟನ್, ಕೈಕೌರ, ಗ್ರೇಮೌತ್, ಕ್ವೀನ್ಸ್ ಟೌನ್, ಲೆವಿನ್, ವ್ಹಾಂಗಾನ್ಯೂ, ರೊಲ್ಲೆಸ್ಟನ್, ತಕಾಕ, ಜೆರಾಲ್ಡೈನ್, ಆಶ್ ಬರ್ಟನ್ ಮತ್ತು ಪಾಮರ್ಸ್ಟನ್ ನಾರ್ಥ್ ಮೊದಲಾದ ಸ್ಥಳಗಳಲ್ಲಿರುವ ಶಾಲೆಗಳಿಗೆ ಭೇಟಿ ನೀಡಿ ವಿಚಾರಣೆ ನಡೆಸುತ್ತಿದ್ದಾರೆ.

ಟಾಸ್ಮನ್ ಪ್ರದೇಶದ ಕಮಾಂಡರ್ ಸೈಮನ್ ಫೆಲ್ಟ್ ಹ್ಯಾಮ್, ಮಾಧ್ಯಮಗಳಿಗೆ ನೀಡಿರುವ ಹೇಳಿಕೆಯಲ್ಲಿ ಮಾರ್ಲ್ ಬೋರೋ ಗರ್ಲ್ಸ್ ಕಾಲೇಜು ಸ್ವೀಕರಿಸಿದ ಬೆದರಿಕೆ ಕರೆಗಳಿಗೆ ಸಂಬಂಧಿಸಿದಂತೆ ಇಬ್ಬರು ಯುವಕರನ್ನು ಪ್ರಶ್ನಿಸಲಾಗುತ್ತಿದೆ ಎಂದು ಹೇಳಿದ್ದಾರೆ.

ಬೆದರಿಕೆ ಕರೆಗಳಿಗೆ ಈಡಾಗಿದ್ದ ಯಾವುದೇ ಶಾಲೆಯಲ್ಲಿ ಸ್ಪೋಟಕ ವಸ್ತು ಪತ್ತೆಯಾಗಿರುವ ಬಗ್ಗೆ ವರದಿಯಾಗಿಲ್ಲ.

ಸದರಿ ಘಟನೆಯು 2016 ರಲ್ಲಿ ನ್ಯೂಜಿಲೆಂಡ್ ಮತ್ತು ಆಸ್ಟ್ರೇಲಿಯದಲ್ಲಿನ ಹಲವಾರು ಶಾಲೆಗಳಿಗೆ ಹುಸಿ ಬಾಂಬ್ ಬೆದರಿಕೆ ಕರೆಗಳು ಹೋಗಿದ್ದ ಘಟನೆಯನ್ನು ನೆನಪಿಸುತ್ತದೆ. ಶಾಲಾ ಆವರಣಗಳಲ್ಲಿ ಬಾಂಬ್ಗಳನ್ನು ಇಡಲಾಗಿದೆ ಎಂದು ಶಾಲಾ ಪ್ರಿನ್ಸಿಪಾಲರಿಗೆ ಕರೆಮಾಡಲಾಗಿತ್ತು.

ಸುಮಾರು 4 ವರ್ಷಗಳ ಹಿಂದೆ 2018 ರಲ್ಲಿ ಉತ್ತರ ಅಮೆರಿಕ, ಬ್ರಿಟನ್, ಆಸ್ಟ್ರೇಲಿಯ, ನ್ಯೂಜಿಲೆಂಡ್, ನಾರ್ವೇ ಮತ್ತು ಡೆನ್ಮಾರ್ಕ್ ಮೊದಲಾದ ದೇಶಗಳಲ್ಲಿ ಸುಮಾರು 2000 ಕ್ಕೂ ಹೆಚ್ಚು ಹುಸಿ ಬೆದರಿಕೆ ಕರೆಗಳನ್ನು ಮಾಡಿದ್ದ ಇಸ್ರೇಲ್ ಮೂಲದ ಅಮೇರಿಕನನ್ನು ಇಸ್ರೇಲಿ ಕೋರ್ಟೊಂದು 10-ವರ್ಷ ಸೆರೆವಾಸದ ಶಿಕ್ಷೆಗೆ ಗುರಿಮಾಡಿತ್ತು.