
ಪಾಕಿಸ್ತಾನದಲ್ಲಿ ಯಾತ್ರಾತ್ರಿಗಳನ್ನು ಕರೆದೊಯ್ಯುತ್ತಿದ್ದ ಬಸ್ ಪಲ್ಟಿ ಹೊಡೆದು 20 ಕ್ಕೂ ಹೆಚ್ಚು ಮಂದಿ ಕೊನೆಯುಸಿರೆಳೆದಿದ್ದಾರೆ. 50 ಕ್ಕೂ ಹೆಚ್ಚು ಪ್ರವಾಸಿಗರು ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಸಿಂಧ್ ಪ್ರಾಂತ್ಯದ ವಾಯವ್ಯ ಪ್ರದೇಶದ ಹೆದ್ದಾರಿಯಲ್ಲಿ ಈ ಘಟನೆ ನಡೆದಿದೆ. ಪ್ರಯಾಣಿಕರಿಂದ ತುಂಬಿತುಳುಕುತ್ತಿತ್ತು. ಬಸ್ ಮೇಲ್ಭಾಗದಲ್ಲೂ ಜನ ಹತ್ತಿ ಕುಳಿತಿದ್ದರು. ನತದೃಷ್ಟ ಬಸ್ನಲ್ಲಿ ಪ್ರಯಾಣ ಮಾಡುತ್ತಿದ್ದ ಎಲ್ಲರಿಗೂ ಗಾಯಗಳಾಗಿವೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಸೂಫಿ ಸಂತನ ಕ್ಷೇತ್ರ ದರ್ಶನ (Sufi saint shrine) ಮುಗಿಸಿಕೊಂಡು ಬಸ್ ವಾಪಸಾಗುತ್ತಿತ್ತು. ಬಲೂಚಿಸ್ತಾನದ (Balochistan province) ಖಜ್ದರ್ ಬಳಿ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಬಸ್ ಪಲ್ಟಿ ಹೊಡೆದಿದೆ. ಬಸ್ ಅತಿ ವೇಗವಾಗಿ ಚಲಿಸುತ್ತಾ ಇದ್ದುದ್ದೇ ಅಪಘಾತಕ್ಕೆ ಕಾರಣ ಎಂದು ತಿಳಿದುಬಂದಿದೆ. ಬಸ್ ಚಾಲಕನ ಅಜಾಗರೂಕತೆ ಮಿತಿ ಮೀರಿತ್ತು. ಅನೇಕ ಬಾರಿ ಎಚ್ಚರಿಸಿದ್ದೆವು. ಆದರೂ ಆತ ಜೋರಾಗಿ ಸಂಗೀತ ಹಾಕಿಕೊಂಡು ಬಸ್ ಚಲಾಯಿಸುತ್ತಿದ್ದ ಎಂದು ಬದುಕುಳಿದ ಪ್ರಯಾಣಿಕರೊಬ್ಬರು ಸ್ಥಳಕ್ಕೆ ದೌಡಾಯಿಸಿದ ಪೊಲೀಸರಿಗೆ ತಿಳಿಸಿದ್ದಾರೆ.
ಶುಭ ಶುಕ್ರವಾರದ ಈ ದುರ್ಘಟನೆಗೂ ಮುನ್ನ ಇತ್ತೀಚೆಗೆ ಎರಡು ಎಕ್ಸ್ಪ್ರೆಸ್ ಟ್ರೈನ್ಗಳು ಅಪಘಾತಕ್ಕೆ ತುತ್ತಾಗಿದ್ದವು. ಅದರಲ್ಲಿ 63 ಮಂದಿ ಅಸುನೀಗಿದ್ದರು. ದುರಾದೃಷ್ಟಕರ ಘಟನೆಯಲ್ಲಿ ಮೊನ್ನೆ ಸೋಮವಾರ ಬೆಳಗ್ಗೆ ಪಾಕಿಸ್ತಾನದಲ್ಲಿ ಒಂದು ರೈಲು ಹಳಿ ತಪ್ಪಿ ಎದುರುಗಡೆಯಿಂದ ಬರುತ್ತಿದ್ದ ಎಕ್ಸ್ಪ್ರೆಸ್ ಟ್ರೈನ್ಗೆ ಡಿಕ್ಕಿ ಹೊಡೆದ ಪರಿಣಾಮ ಕನಿಷ್ಠ 63 ಮಂದಿ ಮೃತಪಟ್ಟಿದ್ದರು. ಲಾಹೋರ್ ಕಡೆಗೆ ಹೊರಟಿದ್ದ ಸರ್ ಸಯ್ಯದ್ ಎಕ್ಸ್ಪ್ರೆಸ್ ಟ್ರೈನ್ (Sir Syed Express), ಮಿಲಾತ್ ಎಕ್ಸ್ಪ್ರೆಸ್ ಟ್ರೈನ್ ನಡುವೆ ಈ ಅಪಘಾತವಾಗಿತ್ತು. ಘೋಟ್ಕಿ (Ghotki) ಸಮೀಪ ರೇತಿ ಮತ್ತು ದಹಾರ್ಕಿ ರೈಲ್ವೆ ನಿಲ್ದಾಣಗಳ ಮಧ್ಯೆ ಈ ಅಪಘಾತವಾಗಿತ್ತು. ಮಿಲಾತ್ ಎಕ್ಸ್ಪ್ರೆಸ್ (Millat Express) ಟ್ರೈನ್ ಕರಾಚಿಯಿಂದ ಸರಗೋಢಾ ಕಡೆಗೆ ತೆರಳುತ್ತಿತ್ತು. ಇನ್ನೂ 50 ಮಂದಿಗೆ ಗಾಯಗಳಾಗಿವೆ.
ಕಳಪೆ ಗುಣಮಟ್ಟದ ರಸ್ತೆಗಳು, ಸಂಚಾರಿ ನಿಯಮಗಳನ್ನು ಪಾಲಿಸದಿರುವುದು ಮತ್ತು ವಾಹನಗಳನ್ನು ಸಕಾಲಕ್ಕೆ ದುರಸ್ತಿಗೊಳಿಸದಿರುವುದು ಪಾಕಿಸ್ತಾನದಲ್ಲಿ ಮಾರಕ ಅಪಘಾತಗಳಿಗೆ ಕಾರಣವಾಗಿದೆ ಎನ್ನಲಾಗಿದೆ.
(Bus accident at sindh province in Balochistan province 20 pilgrims returning from Sufi saint shrine died)
Published On - 4:06 pm, Fri, 11 June 21