AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೆನಡಾ ಪ್ರಧಾನಿ ಸ್ಥಾನಕ್ಕೆ ಜಸ್ಟಿನ್ ಟ್ರುಡೊ ರಾಜೀನಾಮೆ

ಕೆನಡಾದ ಪ್ರಧಾನಮಂತ್ರಿ ಜಸ್ಟಿನ್ ಟ್ರುಡೊ ಇಂದು ರಾಜೀನಾಮೆ ಘೋಷಿಸಿದ್ದಾರೆ. ಲಿಬರಲ್ ಪಕ್ಷದ ಮುಖ್ಯಸ್ಥನ ಸ್ಥಾನಕ್ಕೂ ಅವರು ರಾಜೀನಾಮೆ ನೀಡಿದ್ದಾರೆ. ಅವರು ತಮ್ಮ ಪಕ್ಷದೊಳಗೆ ಹೆಚ್ಚುತ್ತಿರುವ ಭಿನ್ನಾಭಿಪ್ರಾಯದ ನಡುವೆ ರಾಜೀನಾಮೆ ಘೋಷಿಸಿದ್ದಾರೆ. ಕೆನಡಾದಲ್ಲಿ ಹಂಗಾಮಿ ಪ್ರಧಾನಿ ಆಯ್ಕೆಯಾಗುವವರೆಗೂ ಜಸ್ಟಿನ್ ಟ್ರುಡೊ ಪಿಎಂ ಸ್ಥಾನದಲ್ಲಿ ಮುಂದುವರಿಯಲಿದ್ದಾರೆ. ತಮ್ಮ ರಾಜೀನಾಮೆಯ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಜಸ್ಟಿನ್ ಟ್ರುಡೊ ಘೋಷಿಸಿದ್ದಾರೆ.

ಕೆನಡಾ ಪ್ರಧಾನಿ ಸ್ಥಾನಕ್ಕೆ ಜಸ್ಟಿನ್ ಟ್ರುಡೊ ರಾಜೀನಾಮೆ
Justin Trudeau
ಸುಷ್ಮಾ ಚಕ್ರೆ
|

Updated on: Jan 06, 2025 | 10:17 PM

Share

ಟೊರೊಂಟೊ: ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ ಅವರು ಪ್ರಧಾನಮಂತ್ರಿಯಾಗಿ ಸುಮಾರು 1 ದಶಕದ ಆಳ್ವಿಕೆ ನಂತರ ಪ್ರಧಾನಿ ಸ್ಥಾನಕ್ಕೆ ಇಂದು ರಾಜೀನಾಮೆ ನೀಡಿದ್ದಾರೆ. ಕೆನಡಾದಲ್ಲಿ ಅವರ ನಾಯಕತ್ವದ ಮೇಲೆ ಹೆಚ್ಚುತ್ತಿರುವ ಅಸಮಾಧಾನದ ಹಿನ್ನೆಲೆಯಲ್ಲಿ ಈ ನಿರ್ಧಾರಕ್ಕೆ ಬಂದಿದ್ದಾರೆ ಎನ್ನಲಾಗಿದೆ. ಇದು ಅವರ ಸರ್ಕಾರದ ಹಣಕಾಸು ಸಚಿವರ ಹಠಾತ್ ನಿರ್ಗಮನದ ನಂತರ ಅವರ ಸರ್ಕಾರದೊಳಗೆ ಬೆಳೆಯುತ್ತಿರುವ ಭಿನ್ನಾಭಿಪ್ರಾಯದ ಸಂಕೇತವಾಗಿದೆ.

ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ ಇಂದು ತಮ್ಮ ಪಕ್ಷದೊಳಗೆ ಹೆಚ್ಚುತ್ತಿರುವ ಭಿನ್ನಾಭಿಪ್ರಾಯದ ನಡುವೆ ರಾಜೀನಾಮೆ ಘೋಷಿಸಿದರು. “ಪಕ್ಷವು ತನ್ನ ಮುಂದಿನ ನಾಯಕನನ್ನು ದೃಢವಾದ, ರಾಷ್ಟ್ರವ್ಯಾಪಿ ಸ್ಪರ್ಧಾತ್ಮಕ ಪ್ರಕ್ರಿಯೆಯ ಮೂಲಕ ಆಯ್ಕೆ ಮಾಡಿದ ನಂತರ ನಾನು ಪ್ರಧಾನ ಮಂತ್ರಿಯಾಗಿ ಪಕ್ಷದ ನಾಯಕತ್ವಕ್ಕೆ ರಾಜೀನಾಮೆ ನೀಡಲು ಉದ್ದೇಶಿಸಿದ್ದೇನೆ. ಮುಂದಿನ ಚುನಾವಣೆಯಲ್ಲಿ ಈ ದೇಶವು ಇನ್ನೂ ಉತ್ತಮ ಆಯ್ಕೆಗೆ ಅರ್ಹವಾಗಿದೆ ಎಂದು ನಾನು ಭಾವಿಸುತ್ತೇನೆ. ಆ ಚುನಾವಣೆಯಲ್ಲಿ ನಾನು ಅತ್ಯುತ್ತಮ ಆಯ್ಕೆಯಾಗಲು ಸಾಧ್ಯವಿಲ್ಲ ಎಂದು ನನಗೆ ಗೊತ್ತಿದೆ ಎಂದು ಟ್ರುಡೊ ಇಂದು ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.

ಇದನ್ನೂ ಓದಿ: ಕೆನಡಾದಲ್ಲಿ ಭಾರತ ಹಾಗೂ ಇತರ ವಿದೇಶೀ ವಿದ್ಯಾರ್ಥಿಗಳಿಗೆ ಕೆಲಸದ ಮಿತಿ 24 ಗಂಟೆಗಳಿಗೆ ಏರಿಕೆ

ತಮ್ಮ ನಾಯಕತ್ವದ ಮೇಲೆ ಹೆಚ್ಚುತ್ತಿರುವ ಅಸಮಾಧಾನದ ಹಿನ್ನೆಲೆಯಲ್ಲಿ ಜಸ್ಟಿನ್ ಟ್ರುಡೊ ಈ ನಿರ್ಧಾರ ತೆಗೆದುಕೊಂಡಿದ್ದಾರೆ. ಲಿಬರಲ್ ಪಕ್ಷದ ಹೊಸ ನಾಯಕನನ್ನು ಆಯ್ಕೆ ಮಾಡುವವರೆಗೆ ಟ್ರುಡೊ ಪ್ರಧಾನಿಯಾಗಿ ಮುಂದುವರಿಯಲಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

2015ರಿಂದ ಪ್ರಧಾನಿಯಾಗಿ ಅಧಿಕಾರದಲ್ಲಿರುವ ಟ್ರುಡೊ, “ಪಕ್ಷದ ನಾಯಕತ್ವಕ್ಕೆ ರಾಜೀನಾಮೆ ನೀಡಲು ಉದ್ದೇಶಿಸಿದ್ದೇನೆ” ಎಂದು ಇಂದು ಒಟ್ಟಾವಾದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಹೇಳಿದ್ದಾರೆ. ಸುದೀರ್ಘ ರಾಜಕೀಯ ಬಿಕ್ಕಟ್ಟಿನ ನಂತರ ಲಿಬರಲ್ ಪಕ್ಷದ ಮಿತ್ರಪಕ್ಷಗಳು ಅವರನ್ನು ಪ್ರಧಾನಿ ಹುದ್ದೆಯನ್ನು ತೊರೆಯುವಂತೆ ಒತ್ತಾಯಿಸಿದ್ದವು.

ಇದನ್ನೂ ಓದಿ: ಜಸ್ಟಿನ್ ಟ್ರುಡೊಗೆ ದೊಡ್ಡ ಹೊಡೆತ; ಕೆನಡಾ ಉಪ ಪ್ರಧಾನಿ ರಾಜೀನಾಮೆ

ಕೆನಡಾದ ಆರ್ಥಿಕತೆಯನ್ನು ದುರ್ಬಲಗೊಳಿಸುವ ಸುಂಕಗಳನ್ನು ವಿಧಿಸುವುದಾಗಿ ಅಮೆರಿಕದ ಚುನಾಯಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬೆದರಿಕೆ ಹಾಕಿದ್ದಾರೆ. ಈಗ ರಾಜೀನಾಮೆ ನೀಡಿದ್ದರೂ ಜನವರಿ 20ರಂದು ಅಮೆರಿಕದ ಚುನಾಯಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಧಿಕಾರ ವಹಿಸಿಕೊಳ್ಳುವಾಗ ಟ್ರುಡೊ ಇನ್ನೂ ಕೆನಡಾದ ಪ್ರಧಾನಿಯಾಗಿರಲಿದ್ದಾರೆ.

53 ವರ್ಷದ ಟ್ರುಡೊ ಅವರು ನವೆಂಬರ್ 2015ರಲ್ಲಿ ಕೆನಡಾದ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡರು. ಎರಡು ಬಾರಿ ಮರುಚುನಾವಣೆಯಲ್ಲಿ ಗೆದ್ದರು. ಈ ಮೂಲಕ ಕೆನಡಾದ ದೀರ್ಘಾವಧಿಯ ಪ್ರಧಾನ ಮಂತ್ರಿಗಳಲ್ಲಿ ಟ್ರುಡೊ ಕೂಡ ಒಬ್ಬರಾಗಿದ್ದಾರೆ. ಆದರೆ ಎರಡು ವರ್ಷಗಳ ಹಿಂದೆ ಹೆಚ್ಚಿನ ಬೆಲೆಗಳು ಮತ್ತು ವಸತಿ ಕೊರತೆಯ ಕಾರಣಕ್ಕೆ ಸಾರ್ವಜನಿಕರ ಕೋಪಕ್ಕೆ ತುತ್ತಾದ ಅವರ ಜನಪ್ರಿಯತೆಯು ಕುಸಿಯಲು ಪ್ರಾರಂಭಿಸಿತು.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ