Tiger Woods: ಕಾರು ಅಪಘಾತದಲ್ಲಿ ಖ್ಯಾತ ಗಾಲ್ಫ್ ಆಟಗಾರ ಟೈಗರ್ ವುಡ್ಸ್​ಗೆ ಗಂಭೀರ ಗಾಯ

Tiger Woods Car Crash: ಎಸ್​ಯುವಿ ಚಾಲನೆ ಮಾಡುತ್ತಿದ್ದ ಟೈಗರ್ ವುಡ್ಸ್ ಸೀಟ್ ಬೆಲ್ಟ್ ಧರಿಸಿದ್ದರು. ಹಾಗಾಗಿ ಮಾರಣಾಂತಿಕ ಅಪಘಾತದಿಂದ ಪಾರಾದರು ಎಂದು ರಕ್ಷಣಾಕಾರ್ಯಕರ್ತರು ಹೇಳಿದ್ದಾರೆ.

Tiger Woods: ಕಾರು ಅಪಘಾತದಲ್ಲಿ ಖ್ಯಾತ ಗಾಲ್ಫ್ ಆಟಗಾರ ಟೈಗರ್ ವುಡ್ಸ್​ಗೆ ಗಂಭೀರ ಗಾಯ
car crash Golf champion Tiger Woods suffers serious leg injuries
Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Feb 24, 2021 | 7:46 PM

ಲಾಸ್ ಏಂಜಲಿಸ್ : ಕ್ಯಾಲಿಫೋರ್ನಿಯಾದಲ್ಲಿ ಮಂಗಳವಾರ ಬೆಳಗ್ಗೆ ಸಂಭವಿಸಿದ ಭೀಕರ ಅಪಘಾತದಲ್ಲಿ ಖ್ಯಾತ ಗಾಲ್ಫ್ ಆಟಗಾರ ಟೈಗರ್ ವುಡ್ಸ್​ಗೆ ಗಂಭೀರ ಗಾಯವಾಗಿದೆ. ಟೈಗರ್ ಸಂಚರಿಸುತ್ತಿದ್ದ ಕಾರು ರಸ್ತೆಯಿಂದ ಉರುಳಿ ಬಿದ್ದಿತ್ತು. ಅಪಘಾತದ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಲಾಸ್ ಏಂಜಲಿಸ್ ಕೌಂಟಿ ಶೆರಿಫ್ಸ್ ಇಲಾಖೆ, ರೋಲಿಂಗ್ ಹಿಲ್ಸ್ ಎಸ್ಟೇಟ್ ಮತ್ತು ರಾಂಚೊ ಪಲೊಸ್ ವೆರ್ಡೆಸ್ ಗಡಿಭಾಗದಲ್ಲಿ ಫೆಬ್ರವರಿ 23ರಂದು ಬೆಳಗ್ಗೆ 7.12ಕ್ಕೆ ಈ ಘಟನೆ ಸಂಭವಿಸಿದೆ ಎಂದು ಹೇಳಿದೆ. ವುಡ್ಸ್ ಅವರು ಹಾವ್ತ್ರೋನ್ ಆವ್ ರಸ್ತೆ ಮೂಲಕ ಉತ್ತರಭಾಗಕ್ಕೆ ಸಂಚರಿಸುತ್ತಿದ್ದರು. ಅವರ ವಾಹನ ರಸ್ತೆಯ ವಿರುದ್ಧ ದಿಶೆಯಲ್ಲಿ ಹೋದಾಗ ರಸ್ತೆಯಿಂದ ಉರುಳಿ ಗುಡ್ಡದ ಕೆಳಭಾಗಕ್ಕೆ ಜಾರಿ ಬಿದ್ದಿದೆ. ಅಲ್ಲಿನ ಜನರು ತಕ್ಷಣವೇ 911ಕ್ಕೆ ಕರೆ ಮಾಡಿ ರಕ್ಷಣಾ ಕಾರ್ಯಕರ್ತರನ್ನು ಕರೆದಿದ್ದಾರೆ. ರಕ್ಷಣಾ ಕಾರ್ಯಕರ್ತರು ಅಲ್ಲಿಗೆ ತಲುಪುವವರೆಗೆ ವುಡ್ಸ್ ಪ್ರಜ್ಞಾವಸ್ಥೆಯಲ್ಲಿದ್ದರು ಎಂದು ಸುದ್ದಿಮೂಲಗಳು ವರದಿ ಮಾಡಿದೆ.

ಎಸ್​ಯುವಿ ಚಾಲನೆ ಮಾಡುತ್ತಿದ್ದ ವುಡ್ಸ್ ಸೀಟ್ ಬೆಲ್ಟ್ ಧರಿಸಿದ್ದರು. ಹಾಗಾಗಿ ಮಾರಣಾಂತಿಕ ಅಪಘಾತದಿಂದ ಪಾರಾದರು ಎಂದು ರಕ್ಷಣಾಕಾರ್ಯಕರ್ತರು ಹೇಳಿದ್ದಾರೆ. ಹಾರ್ಬರ್-ಯುಸಿಎಲ್ಎ ಮೆಡಿಕಲ್ ಸೆಂಟರ್​ನಲ್ಲಿ ವುಡ್ಸ್ ಚಿಕಿತ್ಸೆ ಪಡೆಯುತ್ತಿದ್ದು ಕಾಲಿಗೆ ತುಂಬಾ ಪೆಟ್ಟಾಗಿದೆ. ಅವರನ್ನು ಸರ್ಜರಿಗೊಳಪಡಿಸಲಾಗಿದೆ. 45ರ ಹರೆಯದ ವುಡ್ಸ್ ಪದೇಪದೇ ಮಂಡಿ ನೋವಿನಿಂದ ಬಳಲುತ್ತಿದ್ದರು. ಖ್ಯಾತ ಗಾಲ್ಫ್ ಆಟಗಾರರಾದ ವುಡ್ಸ್ ಯುಎಸ್ ಓಪನ್, ಬ್ರಿಟಿಷ್ ಓಪನ್, 2000ದಲ್ಲಿ ಪಿಜಿಎ ಚಾಂಪಿಯನ್ ಶಿಪ್ ಮತ್ತು 2001ರಲ್ಲಿ ಮಾಸ್ಟರ್ಸ್ ಕಿರೀಟ ಗೆದ್ದುಕೊಂಡಿದ್ದರು.

ಕಾಲಿಗೆ ಗಂಭೀರ ಗಾಯ
ಕಾಲಿಗೆ ಗಂಭೀರ ಗಾಯಗಳಾಗಿರುವ ವುಡ್ಸ್​ಗೆ ಒಂದಕ್ಕಿಂತ ಹೆಚ್ಚು ಸರ್ಜರಿ ಮಾಡಲಾಗುತ್ತದೆ ಎಂದು ಗಾಲ್ಫ್ ಡೈಜಸ್ಟ್ ಮ್ಯಾಗಜಿನ್​ನ ವುಡ್ಸ್ ಅವರ ಏಜೆಂಟ್ ಮಾರ್ಕ್ ಸ್ಟೈನ್ ಬರ್ಗ್ ಹೇಳಿದ್ದಾರೆ. ಅಪಘಾತಕ್ಕೆ ಕಾರಣ ಏನು ಎಂಬುದರ ಬಗ್ಗೆ ತನಿಖೆ ನಡೆಯುತ್ತಿದೆ. ಅಪಘಾತದ ವಿಡಿಯೊವನ್ನು ನೋಡಿದರೆ ವುಡ್ಸ್ ಸಂಚರಿಸುತ್ತಿದ್ದ ಕಾರು ಬೆಟ್ಟದ ಕೆಳಭಾಗಕ್ಕೆ ಉರುಳಿ ಬಿದ್ದು, ಕಿಟಕಿ ಗಾಜುಗಳು ಪುಡಿಯಾಗಿರುವುದು ಕಾಣುತ್ತದೆ.


ವುಡ್ಸ್ ಗುಣಮುಖರಾಗುವಂತೆ ಪ್ರಾರ್ಥಿಸಿದ ಗಣ್ಯರು
ಅಪಘಾತ ಸುದ್ದಿ ತಿಳಿಯುತ್ತಿದ್ದಂತೆ ವುಡ್ಸ್ ಅವರ ಗೆಳೆಯರು, ಗಣ್ಯರು ಟ್ವೀಟ್ ಮಾಡಿ ಶೀಘ್ರ ಗುಣಮುಖರಾಗುವಂತೆ ಪ್ರಾರ್ಥಿಸಿದ್ದಾರೆ. ನನ್ನ ಸಹೋದರ ಟೈಗರ್ ವುಡ್ಸ್ ಗಾಗಿ ಪ್ರಾರ್ಥಿಸುತ್ತೇವೆ. ನಾವೆಲ್ಲರೂ ಆತಂಕದಿಂದಲೇ ಮುಂದಿನ ಸುದ್ದಿಯನ್ನು ನಿರೀಕ್ಷಿಸುತ್ತಿದ್ದೇವೆ ಎಂದು ಮಾಜಿ ಬೇಸ್ ಬಾಲ್ ಪಟು ಅಲೆಕ್ಸ್ ರಾಡ್ರಿಗಸ್ ಟ್ವೀಟ್ ಮಾಡಿದ್ದಾರೆ.

ಟೈಗರ್ ವುಡ್ಸ್ ಗಾಗಿ ಪ್ರಾರ್ಥಿಸುತ್ತೇನೆ ಎಂದು ವುಡ್ಸ್ ಮಾಜಿ ಪ್ರೇಯಸಿ ಲಿಂಜ್ಸೆ ವೋನ್ ಟ್ವೀಟ್ ಮಾಡಿದ್ದಾರೆ.


ಶೀಘ್ರ ಗುಣಮುಖರಾಗಿ, ನೀವೇ ನಿಜವಾದ ಚಾಂಪಿಯನ್ ಎಂದು ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್  ಹೇಳಿರುವುದಾಗಿ ಜಾಸನ್ ಮಿಲ್ಲರ್ ಟ್ವೀಟ್ ಮಾಡಿದ್ದು, ಎಲ್ಲರ ಪ್ರಾರ್ಥನೆಗೆ ಧನ್ಯವಾದಗಳು ಎಂದು ಟೈಗರ್ ವುಡ್ ಟ್ವೀಟ್ ಮಾಡಿ ಪ್ರತಿಕ್ರಿಯಿಸಿದ್ದಾರೆ.

 ಇದನ್ನೂ ಓದಿ: ಗಾಲ್ಫ್​ ​ ಮೈದಾನದಲ್ಲಿ ಡ್ರೋನ್​ ಮೂಲಕ ಬಿಯರ್​ ವಿತರಣೆ: ವೈರಲ್​ ಆಯ್ತು ವಿಡಿಯೋ