ಅಮೇಜಾನ್ ಮಳೆಕಾಡು (Amazon Rainforest) ದಟ್ಟಾರಣ್ಯ. ಸುಮ್ಮನೆ ಹೋದರೆ ದಾರಿ ತಪ್ಪುತ್ತದೆ. ವಿಷಕಾರಿ ಜಂತುಗಳು, ಕಾಡುಪ್ರಾಣಿಗಳ ಹಿಂಡೇ ಇದೆ. ಈ ಅಮೇಜಾನ್ ಕಾಡಿನ ಬಗ್ಗೆ ಈಗಾಗಲೇ ನಾವು ಕೇಳಿದ್ದೇವೆ. ಅಂಥ ಕಾಡಿನಲ್ಲಿ ಕಳೆದುಹೋಗಿದ್ದ ಬ್ರೆಜಿಲ್ನ ಇಬ್ಬರು ಬಾಲಕರು ಬರೋಬ್ಬರಿ 25 ದಿನಗಳ ನಂತರ ಜೀವಂತವಾಗಿ ಸಿಕ್ಕಿದ್ದಾರೆ. ಈ 25 ದಿನಗಳ ಕಾಲ ಕಾಡಲ್ಲಿ ಸಿಕ್ಕ ಹಣ್ಣನ್ನು ತಿಂದು, ಮಳೆನೀರನ್ನೇ ಕುಡಿದು ಬದುಕಿದ್ದಾಗಿ ಅಲ್ಲಿನ ಅಧಿಕಾರಿಗಳು ಮಾಹಿತಿ ನೀಡಿದ್ದಾರೆಂದು ಇಂಡಿಯಾ ಟುಡೆ ವರದಿ ಮಾಡಿದೆ. ಅಂದಹಾಗೇ ಈ ಹುಡುಗರ ಹೆಸರು ಗ್ಲೌಕೋ (7) ಮತ್ತು ಗ್ಲೆಸನ್ (9). ಇವರಿಬ್ಬರೂ ಸಹೋದರರು. ಇವರಿಬ್ಬರು 25 ದಿನಗಳ ಹಿಂದೆ ಯಾವ ಜಾಗದಿಂದ ಕಾಣೆಯಾಗಿದ್ದರೋ, ಅಲ್ಲಿಂದ ಸುಮಾರು 35 ಕಿಮೀ ದೂರದಲ್ಲಿ ಇದೀಗ ಪತ್ತೆಯಾಗಿದ್ದಾರೆ. ತುಂಬ ಹಸಿವಿನಿಂದ ಬಳಲುತ್ತಿದ್ದಾರೆ ಮತ್ತು ಇವರಿಬ್ಬರ ದೇಹ ಡಿಹೈಡ್ರೇಟ್ ಆಗಿದೆ ಎಂದೂ ಹೇಳಲಾಗಿದೆ.
ಬಾಲಕರು ಕಳೆದುಹೋಗಿ ತಿಂಗಳಾಗುತ್ತ ಬಂದಿತ್ತು. ಇದೀಗ ಪತ್ತೆಯಾಗಿದ್ದರೂ ಕೂಡ ಅಪೌಷ್ಟಿಕತೆ ಮತ್ತು ನಿರ್ಜಲೀಕರಣದಿಂದ ಬಳಲುತ್ತಿದ್ದಾರೆ. ಆದರೆ ಜೀವಕ್ಕೆ ಯಾವುದೇ ಅಪಾಯವೂ ಇಲ್ಲ. ಅವರಿಗೆ ಸೂಕ್ತ ಚಿಕಿತ್ಸೆ ಜತೆ, ಸರಿಯಾಗಿ ಆಹಾರ ಬಿದ್ದರೆ ಕೆಲವೇ ದಿನಗಳಲ್ಲಿ ಸುಧಾರಿಸಿಕೊಳ್ಳುತ್ತಾರೆ ಎಂದು ಸ್ಥಳೀಯ ಆರೋಗ್ಯಾಧಿಕಾರಿ ಜನುವರಿಯೊ ಕಾರ್ನೆರೊ ಡಾ ಕುನ್ಹಾ ನೆಟೊ ತಿಳಿಸಿದ್ದಾರೆ. ಇವರಿಬ್ಬರೂ ಬ್ರೆಜಿಲ್ನ ಸ್ಥಳೀಯ ಮುರಾ ಗುಂಪಿನ ಬಾಲಕರು. ಫೆ.18ರಂದು ತಮ್ಮ ಹಳ್ಳಿಯನ್ನು ಬಿಟ್ಟು, ಅಮೇಜಾನ್ ಪ್ರದೇಶದ ಮ್ಯಾನಿಕೋರ್ಗೆ ಹೋಗಿದ್ದರು. ಹಕ್ಕಿಗಳನ್ನು ಬೇಟೆಯಾಡಲು ತೆರಳಿದ್ದ ಇವರು ದಟ್ಟಾರಣ್ಯದೊಳಗೆ ಹೊಕ್ಕಿಬಿಟ್ಟಿದ್ದಾರೆ. ಆದರೆ ನಂತರ ಅವರಿಗೆ ವಾಪಸ್ ಬರಲು ಗೊತ್ತಾಗದೆ ಸಂಕಷ್ಟಕ್ಕೀಡಾಗಿದ್ದಾರೆ.
ಸ್ಥಳೀಯ ರಕ್ಷಣಾ ಅಧಿಕಾರಿಗಳು, ಆಡಳಿತಾಧಿಕಾರಿಗಳಂತೂ ಬಾಲಕರನ್ನು ಹುಡುಕಿ ಸಾಕಾಗಿ ಪ್ರಯತ್ನವನ್ನೇ ಕೈಬಿಟ್ಟಿದ್ದರು. ಆದರೆ ಅವರ ಹಳ್ಳಿಯ ಜನರು ಹುಡುಕಾಟ ನಿಲ್ಲಿಸಿರಲಿಲ್ಲ. ಹೀಗೆ ಒಂದು ದಿನ ಈ ಬಾಲಕರ ಕುಟುಂಬಕ್ಕೆ ಆಪ್ತನಾಗಿದ್ದವರೊಬ್ಬರು ಕಟ್ಟಿಗೆ ಕಡಿಯಲು ಅರಣ್ಯಕ್ಕೆ ಹೋಗಿದ್ದಾಗ ಬಾಲಕರು ಸಿಕ್ಕಿದ್ದಾರೆ ಎಂದೂ ಜನುವರಿಯೊ ಕಾರ್ನೆರೊ ತಿಳಿಸಿದ್ದಾರೆ. ಆದರೆ ಬಾಲಕರ ಸ್ಥಿತಿ ನೋಡಿದರೆ ಕನಿಕರ ಮೂಡುತ್ತದೆ. ಮೈಮೇಲೆಲ್ಲ ಗಾಯವಾಗಿದೆ. ಅದರಲ್ಲೂ ಚಿಕಕ್ ಹುಡುಗನಂತೂ ತುಂಬ ದುರ್ಬಲನಾಗಿದ್ದಾನೆ. ನಡೆಯಲೂ ಶಕ್ತಿಯಿಲ್ಲ ಅವನಿಗೆ ಎಂದಿದ್ದಾರೆ. ಸದ್ಯ ಇಬ್ಬರನ್ನೂ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.
ಇದನ್ನೂ ಓದಿ: Viral Photo: ಒಂದೇ ನೋಟದಲ್ಲಿ ಮೂರು ಬಗೆಯ ಚಿತ್ರವನ್ನು ಕಂಡು ಭ್ರಮಗೊಳಗಾದ ನೆಟ್ಟಿಗರು