
ಶಾಂಕ್ಸಿ, ಜೂನ್ 09: ಚೀನಾ(China)ದ ಶಾಂಕ್ಸಿ ಪ್ರಾಂತ್ಯದ ಕ್ಸಿಯಾನ್ ನಗರದ ಶೆನ್ ಎಂಬ ವ್ಯಕ್ತಿಯ ಕಥೆ ಇದು. ಒಂದು ದಶಕದ ಹಿಂದೆ, ಮಧ್ಯಮ ವರ್ಗದ ಪ್ರತಿಯೊಬ್ಬ ಸಾಮಾನ್ಯನಂತೆ ತನಗೂ ಒಂದು ಸ್ವಂತ ಮನೆ ಇರಬೇಕು ಎಂಬ ಕನಸು ಕಂಡಿದ್ದ ಶೆನ್, ಇಂದು ಆ ಮನೆಯೂ ಇಲ್ಲದೆ, ಕಷ್ಟಪಟ್ಟು ದುಡಿದ ಹಣವೂ ಸಿಗದೆ ಅಸಹಾಯಕರಾಗಿ ನಿಂತಿದ್ದಾರೆ. ರಿಯಲ್ ಎಸ್ಟೇಟ್‌ನ ಹಪಾಹಪಿತನ ಮತ್ತು ಕಾನೂನುಬಾಹಿರ ಹಗರಣಗಳು ಹೇಗೆ ಒಬ್ಬ ಸಾಮಾನ್ಯ ಮನುಷ್ಯನ ಬದುಕನ್ನು ಬೀದಿಗೆ ತರಬಲ್ಲವು ಎಂಬುದಕ್ಕೆ ಇವರ ಜೀವನವೇ ಒಂದು ಕಣ್ಣೀರಿನ ಉದಾಹರಣೆ.
ಕೇವಲ ಮೂರನೇ ಒಂದು ಭಾಗದ ಬೆಲೆಗೆ ಸಿಕ್ಕ ಆಮಿಷ
2013 ರಲ್ಲಿ, ಷಿಯಾನ್ ಬಳಿಯ ಹಳ್ಳಿಯೊಂದರಲ್ಲಿ ಅಪಾರ್ಟ್ಮೆಂಟ್ ಯೋಜನೆಯೊಂದು ಆರಂಭವಾಗಿತ್ತು. ಅಲ್ಲಿನ ಮಾರುಕಟ್ಟೆ ದರಕ್ಕಿಂತ ಕೇವಲ ಮೂರನೇ ಒಂದು ಭಾಗದಷ್ಟು ಕಡಿಮೆ ಬೆಲೆಗೆ (ಪ್ರತಿ ಚದರ ಮೀಟರ್‌ಗೆ ಸುಮಾರು 37,431 ರೂ. ರಂತೆ) ಫ್ಲಾಟ್ ಸಿಗುತ್ತಿದೆ ಎಂದು ತಿಳಿದ ಶೆನ್ ಸಂತೋಷಪಟ್ಟಿದ್ದರು. 90 ಚದರ ಮೀಟರ್ ವಿಸ್ತೀರ್ಣದ ಸುಂದರ ಅಪಾರ್ಟ್ಮೆಂಟ್‌ನ ಒಟ್ಟು ಮೌಲ್ಯ ಸುಮಾರು 33.69 ಲಕ್ಷ ರೂ.ಆಗಿತ್ತು.
ಆದರೆ, ಈ ಕಡಿಮೆ ಬೆಲೆಯ ಹಿಂದೆ ‘ಸೀಮಿತ ಆಸ್ತಿ ಹಕ್ಕುಗಳು’ (Limited Property Rights) ಎಂಬ ರಿಯಲ್ ಎಸ್ಟೇಟ್‌ನ ಕರಾಳ ಜಾಲ ಅಡಗಿದೆ ಎಂಬುದು ಅವರಿಗೆ ತಿಳಿದಿರಲಿಲ್ಲ. ಇದು ನಗರದ ಭೂಮಿಯ ಬದಲಿಗೆ, ಗ್ರಾಮೀಣ ಸಾಮೂಹಿಕ ಭೂಮಿಯಲ್ಲಿ ಯಾವುದೇ ಸರ್ಕಾರಿ ಅನುಮೋದನೆ ಇಲ್ಲದೆ ಅಕ್ರಮವಾಗಿ ನಿರ್ಮಿಸುವ ವಸತಿಯಾಗಿತ್ತು. ಇಂತಹ ಮನೆಗಳಿಗೆ ಯಾವುದೇ ಕಾನೂನು ರಕ್ಷಣೆ ಇರುವುದಿಲ್ಲ.
ಮನೆಯ ಆಸೆಗೆ ಬಿದ್ದ ಶೆನ್, ಭವಿಷ್ಯದಲ್ಲಿ ಎಲ್ಲಾ ದಾಖಲೆಗಳನ್ನು ನೀಡುವುದಾಗಿ ಡೆವಲಪರ್ ಕೊಟ್ಟ ಸುಳ್ಳು ಭರವಸೆಯನ್ನು ನಂಬಿ, ತನ್ನ ಜೀವಮಾನದ ಉಳಿತಾಯದಿಂದ 1,17,700 ಯುವಾನ್ (ಸುಮಾರು 16 ಲಕ್ಷ ರೂ.) ಹಣವನ್ನು ಡೌನ್ ಪೇಮೆಂಟ್ ಆಗಿ ಪಾವತಿಸಿದರು.
ಮತ್ತಷ್ಟು ಓದಿ: ಚೀನಾದಲ್ಲಿ ವಿಶ್ವದ ಅತಿದೊಡ್ಡ ಹೈಸ್ಪೀಡ್ ರೈಲ್ವೆ ನಿಲ್ದಾಣ; ಬೆಟ್ಟವನ್ನೇ ಸವರಿ, ರೋಬೋಟ್, ಎಐ ಬಳಸಿ ಆಯಿತು ನಿರ್ಮಾಣ
34ನೇ ಮಹಡಿಯ ಫ್ಲಾಟ್, ಆದರೆ ಕಟ್ಟಡಕ್ಕೆ ಕೇವಲ 32 ಅಂತಸ್ತು
2015 ರಲ್ಲಿ ಕೈಗೆ ಸಿಗಬೇಕಾಗಿದ್ದ ಮನೆ ನಿರ್ಮಾಣ ವಿಳಂಬದ ಕಾರಣದಿಂದಾಗಿ ಮುಂದೂಡಲ್ಪಡುತ್ತಾ ಸಾಗಿತು. ಕೊನೆಗೆ 2017 ರಲ್ಲಿ ಶೆನ್ ಅವರಿಗೆ ಡೆವಲಪರ್ ಕಡೆಯಿಂದ ಬಂದ ಒಂದು ಕರೆ ಅವರ ಕಾಲ ಕೆಳಗಿನ ಭೂಮಿಯನ್ನೇ ಕುಸಿಯುವಂತೆ ಮಾಡಿತು.
ಡೆವಲಪರ್ ಅತ್ಯಂತ ನಿರ್ಲಕ್ಷ್ಯದಿಂದ, ನೀವು ಖರೀದಿಸಿರುವ 34ನೇ ಮಹಡಿಯ ಫ್ಲಾಟ್ ಅಸ್ತಿತ್ವದಲ್ಲೇ ಇಲ್ಲ. ಏಕೆಂದರೆ ನಾವು ನಿರ್ಮಿಸಿರುವ ಇಡೀ ಕಟ್ಟಡವೇ ಕೇವಲ 32 ಅಂತಸ್ತುಗಳದ್ದಾಗಿದೆ ಎಂದು ತಿಳಿಸಿದ್ದರು.
ಕಂಪನಿಯು ಅವರಿಗೆ ಪರ್ಯಾಯವಾಗಿ 32ನೇ ಮಹಡಿಯಲ್ಲಿ ಮತ್ತೊಂದು ಫ್ಲಾಟ್ ನೀಡುವುದಾಗಿ ಹೇಳಿತಾದರೂ, ಆ ಸಮಯದಲ್ಲಿ ಉಳಿದ ಬಾಕಿ ಹಣವನ್ನು ತಕ್ಷಣವೇ ಹೊಂದಿಸಲು ಶೆನ್ ಅವರಿಂದ ಸಾಧ್ಯವಾಗಲಿಲ್ಲ. ಕೇವಲ ಎರಡು ತಿಂಗಳ ಅವಧಿಯಲ್ಲಿ ಡೆವಲಪರ್ ಆ ಫ್ಲಾಟ್‌ಅನ್ನು ಬೇರೊಬ್ಬ ಖರೀದಿದಾರನಿಗೆ ಮಾರಿ ಶೆನ್ ಅವರನ್ನು ಸಂಪೂರ್ಣವಾಗಿ ಬೀದಿಗೆ ತಳ್ಳಿದ್ದರು.
ಹಣವೂ ಇಲ್ಲ, ಮನೆಯೂ ಇಲ್ಲ
ಮನೆ ಕಳೆದುಕೊಂಡ ಶೆನ್ ತನ್ನ ಪೂರ್ಣ ಹಣವನ್ನು ಮರಳಿ ಪಡೆಯಲು ಡೆವಲಪರ್ ಕಚೇರಿಗೆ ಅಲೆಯಲಾರಂಭಿಸಿದರು. ಆದರೆ ಕಂಪನಿಯು ತಾನು ಆರ್ಥಿಕ ಬಿಕ್ಕಟ್ಟಿನಲ್ಲಿದ್ದೇನೆ ಎಂದು ನೆಪ ಒಡ್ಡಿತು. ಸತತ ಒತ್ತಾಯದ ನಂತರ 2020 ರಲ್ಲಿ 20,000 ಯುವಾನ್ ಮತ್ತು 2022 ರಲ್ಲಿ 50,000 ಯುವಾನ್‌ಗಳ ಭಾಗಶಃ ಮರುಪಾವತಿ ಸಿಕ್ಕಿತಾದರೂ, ಆ ನಂತರ ಡೆವಲಪರ್ ಊರು ಬಿಟ್ಟು ದೂರ ಹೋಗಿದ್ದ, ಕರೆಗೂ ಸಿಗುತ್ತಿರಲಿಲ್ಲ.
ನೊಂದ ಶೆನ್ ಕೊನೆಗೆ ನ್ಯಾಯದ ಮೊರೆ ಹೋದರು. ಮಧ್ಯಸ್ಥಿಕೆ ಅಧಿಕಾರಿಗಳು ಮತ್ತು ಸ್ಥಳೀಯ ನ್ಯಾಯಾಲಯವು ಶೆನ್ ಅವರ ಪರವಾಗಿ ತೀರ್ಪು ನೀಡಿ, ಉಳಿದ 47,700 ಯುವಾನ್ ಡೌನ್ ಪೇಮೆಂಟ್, ಅದಕ್ಕೆ ತಕ್ಕ ಬಡ್ಡಿ (27,000 ಯುವಾನ್) ಹಾಗೂ ವಿಳಂಬಕ್ಕೆ ಹೆಚ್ಚುವರಿ 47,000 ಯುವಾನ್ ಪರಿಹಾರವನ್ನು ನೀಡುವಂತೆ ಸಾಲಗಾರ ಡೆವಲಪರ್‌ಗೆ ಆದೇಶಿಸಿತು.
ಇಂದಿಗೂ ಮುಂದುವರಿದ ಕಣ್ಣೀರಿನ ಪಯಣ
ನ್ಯಾಯಾಲಯದ ಕಟ್ಟುನಿಟ್ಟಿನ ಆದೇಶವಿದ್ದರೂ, ಈ ವರ್ಷದ ಮೇ ತಿಂಗಳವರೆಗೂ ಶೆನ್ ಅವರಿಗೆ ಬಿಡಿಗಾಸೂ ಸಿಕ್ಕಿಲ್ಲ. ಏಕೆಂದರೆ, ಆ ವಂಚಕ ಡೆವಲಪರ್ ತನ್ನ ಹೆಸರಿನಲ್ಲಿ ಯಾವುದೇ ನೋಂದಾಯಿತ ಆಸ್ತಿ ಅಥವಾ ಬ್ಯಾಂಕ್ ಉಳಿತಾಯವನ್ನು ಹೊಂದಿಲ್ಲ ಎಂದು ವರದಿಯಾಗಿದೆ. ಇದರಿಂದಾಗಿ ಕೋರ್ಟ್ ಆದೇಶವಿದ್ದರೂ ಅದನ್ನು ಜಾರಿಗೊಳಿಸುವುದು ಅಸಾಧ್ಯವಾಗಿದೆ.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ