ಬೀಜಿಂಗ್: ಬ್ರಹ್ಮಪುತ್ರ ನದಿಯ ಮೇಲೆ ನೆರೆ ರಾಷ್ಟ್ರ ಚೀನಾದ ಕಣ್ಣು ಬಿದ್ದಿದೆ. ಈ ನದಿಗೆ ಟಿಬೆಟ್ನಲ್ಲಿ ಅಣೆಕಟ್ಟು ಕಟ್ಟಿ, ಬೃಹತ್ ಜಲವಿದ್ಯುತ್ ಯೋಜನೆ ಪ್ರಾರಂಭ ಮಾಡಲು ಮುಂದಾಗಿದೆ.
14ನೇ ಪಂಚವಾರ್ಷಿಕ ಯೋಜನೆಯಡಿ ಅಣೆಕಟ್ಟು ನಿರ್ಮಿಸಲು ಚೀನಾ ಮುಂದಾಗಿದ್ದು, ಮುಂದಿನ ವರ್ಷದಲ್ಲಿ ಕಾರ್ಯ ಪ್ರಾರಂಭವಾಗಲಿದೆ ಎಂದು ಅಲ್ಲಿನ ಮಾಧ್ಯಮವೊಂದು ಹೇಳಿದೆ.
ಟಿಬೆಟ್ನಲ್ಲಿ ಬ್ರಹ್ಮಪುತ್ರಾ ನದಿಗೆ ಯಾರ್ಲುಂಗ್ ಝಾಂಗ್ಬೋ ನದಿ ಎಂದು ಕರೆಯಲಾಗುತ್ತಿದೆ. ಈ ನದಿಪಾತ್ರದಲ್ಲಿಯೇ ಚೀನಾ ಅಣೆಕಟ್ಟು ನಿರ್ಮಾಣಕ್ಕೆ ಮುಂದಾಗಿದೆ. ಈ ಬಗ್ಗೆ ಚೀನಾದ ವಿದ್ಯುತ್ ನಿರ್ಮಾಣ ನಿಗಮದ ಅಧ್ಯಕ್ಷ ಯಾನ್ ಝಿಯಾಂಗ್ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ್ದಾಗಿ ಗ್ಲೋಬಲ್ ಟೈಮ್ಸ್ ಕೂಡ ವರದಿ ಮಾಡಿದೆ. ಈ ಯೋಜನೆಯ ಸಂಪೂರ್ಣ ವರದಿ ಮುಂದಿನ ವರ್ಷ ಬಿಡುಗಡೆಯಾಗಲಿದೆ. ಇದು ಚೀನಾದ ಜಲವಿದ್ಯುತ್ ನಿರ್ಮಾಣ ನಿಗಮದ ಉದ್ಯಮದಲ್ಲಿಯೇ ಒಂದು ಐತಿಹಾಸಿಕ ಯೋಜನೆ ಎಂದೂ ಯಾನ್ ಅಭಿಪ್ರಾಯಪಟ್ಟಿದ್ದಾರೆ.
ಭಾರತ-ಬಾಂಗ್ಲಾ ಆತಂಕ
ಟಿಬೆಟ್ನಲ್ಲಿ ಬ್ರಹ್ಮಪುತ್ರಾ ನದಿಗೆ ಅಣೆಕಟ್ಟು ಕಟ್ಟಲು ಚೀನಾ ಮುಂದಾಗಿದ್ದು, ನದಿಯ ಕೆಳಪಾತ್ರದ ದೇಶಗಳಾದ ಭಾರತ ಮತ್ತು ಬಾಂಗ್ಲಾದೇಶದ ಆತಂಕಕ್ಕೆ ಕಾರಣವಾಗಿದೆ. ನದಿ ನೀರಿನ ಬಳಕೆ ಮಾಡುತ್ತಿರುವವರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಬೇಕು ಎಂದು ಭಾರತ ಚೀನಾಕ್ಕೆ ಹೇಳಿದೆ. ಅದಕ್ಕೆ ಪ್ರತಿಕ್ರಿಯೆ ನೀಡಿದ ಚೀನಾ, ಭಾರತ ಮತ್ತು ಬಾಂಗ್ಲಾದೇಶಗಳ ಹಿತಾಸಕ್ತಿಯನ್ನು ಗಮನದಲ್ಲಿ ಇಟ್ಟುಕೊಂಡು, ಯಾವುದೇ ತೊಂದರೆ ಆಗದ ರೀತಿಯಲ್ಲಿ ಅಣೆಕಟ್ಟು ಕಟ್ಟಲಾಗುವುದು. ಯಾವುದೇ ಆತಂಕ ಬೇಡ ಎಂದು ಭರವಸೆ ನೀಡಿದೆ.
ಟಿಬೆಟ್ನಲ್ಲಿ ಚೀನಾ 2015ರಲ್ಲಿ 1.5 ಶತಕೋಟಿ ಡಾಲರ್ ವೆಚ್ಚದಲ್ಲಿ ಝಾಮ್ ಜಲಶಕ್ತಿ ಸ್ಥಾವರವನ್ನು ನಿರ್ಮಾಣ ಮಾಡಿದೆ. ಇದೀಗ ಹೊಸ ಡ್ಯಾಮ್ನ್ನು ಟಿಬೆಟ್-ಅರುಣಾಚಲ ಪ್ರದೇಶದ ಗಡಿಭಾಗದಲ್ಲಿ ಮೆಡೋಗ್ ಪ್ರದೇಶದಲ್ಲಿ ಕಟ್ಟಲು ಮುಂದಾಗಿದೆ.
ಇದನ್ನೂ ಓದಿ: ಕೊರೊನಾ ಹುಟ್ಟಿದ್ದು ಚೀನಾದಲ್ಲಿ ಅಲ್ಲ ಭಾರತದಲ್ಲಿ.. ಚೀನಾ ಹೊಸ ವರಸೆಗೆ ಬಿದ್ದು ಬಿದ್ದು ನಕ್ಕ ಸಂಶೋಧಕರು