ಆಸ್ಟ್ರೇಲಿಯಾದಲ್ಲಿ ಕೊವಿಡ್​ 19 ಸೋಂಕಿತರ ಸಂಖ್ಯೆ, ಆಸ್ಪತ್ರೆಗೆ ದಾಖಲಾಗುವರ ಪ್ರಮಾಣ ದಾಖಲೆ ಮಟ್ಟದಲ್ಲಿ ಏರಿಕೆ; ಭಾರತಕ್ಕೆ ಎಚ್ಚರಿಕೆಯ ಗಂಟೆ

| Updated By: Lakshmi Hegde

Updated on: Jan 04, 2022 | 4:55 PM

ವಿಕ್ಟೋರಿಯಾದಲ್ಲಿ ಇಂದು 14,020 ಕೇಸ್​ಗಳು ದಾಖಲಾಗಿವೆ. ಸೋಮವಾರ 8577 ಸೋಂಕಿತರು ಪತ್ತೆಯಾಗಿದ್ದರು. ಒಂದೇ ದಿನದಲ್ಲಿ ಅರ್ಧದ ಹತ್ತಿರ ಏರಿಕೆಯಾಗಿದ್ದು, ಇಲ್ಲಿ 516 ಜನ ಆಸ್ಪತ್ರೆಗಳಲ್ಲಿ ಇದ್ದಾರೆ.

ಆಸ್ಟ್ರೇಲಿಯಾದಲ್ಲಿ ಕೊವಿಡ್​ 19 ಸೋಂಕಿತರ ಸಂಖ್ಯೆ, ಆಸ್ಪತ್ರೆಗೆ ದಾಖಲಾಗುವರ ಪ್ರಮಾಣ ದಾಖಲೆ ಮಟ್ಟದಲ್ಲಿ ಏರಿಕೆ; ಭಾರತಕ್ಕೆ ಎಚ್ಚರಿಕೆಯ ಗಂಟೆ
ಪ್ರಾತಿನಿಧಿಕ ಚಿತ್ರ (ಫೋಟೋ-ರಾಯಿಟರ್ಸ್​)
Follow us on

ಇದೀಗ ಮತ್ತೆ ಜಗತ್ತಿನ ವಿವಿಧ ದೇಶಗಳಲ್ಲಿ ಕೊವಿಡ್ 19 ಸೋಂಕಿತ(Covid 19 Virus)ರ ಸಂಖ್ಯೆಯಲ್ಲಿ ಏರಿಕೆಯಾಗುತ್ತಿದೆ. ಆಸ್ಟ್ರೇಲಿಯಾ(Australia)ದಲ್ಲಿ ಇಂದು ದಾಖಲೆ ಮಟ್ಟದಲ್ಲಿ ಕೊರೊನಾ ಕೇಸ್​ಗಳು ಕಾಣಿಸಿಕೊಂಡಿವೆ. ಹೀಗಾಗಿ ಆಸ್ಪತ್ರೆಗಳಿಗೆ ದಾಖಲಾಗುವವರ ಸಂಖ್ಯೆ ಹೆಚ್ಚುತ್ತಿದೆ. ತಪಾಸಣಾ ಕೇಂದ್ರಗಳೂ ತುಂಬಿ ತುಳುಕುತ್ತಿವೆ. ಇಡೀ ಆರೋಗ್ಯ ವ್ಯವಸ್ಥೆಯ ಮೇಲೆ ಮತ್ತೆ ಒತ್ತಡ ಉಂಟಾಗುತ್ತಿದೆ. ಇದು ಭಾರತದ ಪಾಲಿಗೂ ಕೂಡ ಎಚ್ಚರಿಕೆಯ ಸಂಕೇತವಾಗಿದೆ. ಭಾರತದಲ್ಲೂ ಕೂಡ ಇದೀಗ ಕೊವಿಡ್ 19 ಸೋಂಕಿನ ಪ್ರಕರಣಗಳು ಗಣನೀಯವಾಗಿ ಏರಿಕೆಯಾಗುತ್ತಿದ್ದು, ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಹೆಚ್ಚುತ್ತಿದೆ. ಇದು ಕೂಡ ಭಾರತದ ಆರೋಗ್ಯ ವ್ಯವಸ್ಥೆ ಮೇಲೆ ಕೆಟ್ಟ ಪರಿಣಾಮ ಬೀರುವುದನ್ನು ಅಲ್ಲಗಳೆಯುವಂತಿಲ್ಲ. ಭಾರತದಲ್ಲಿ 2ನೇ ಅಲೆ ಉತ್ತುಂಗಕ್ಕೆ ಏರಿದಾಗ ಆಕ್ಸಿಜನ್​, ಬೆಡ್​ಗಳ ಕೊರತೆಯಾಗಿತ್ತು. ಅದೇ ಸ್ಥಿತಿ ಮತ್ತೆ ತಲುಪಬಹುದಾದ ಆತಂಕ ಕಾಡುತ್ತಿದೆ.

ಯುಕೆ, ಯುಎಸ್​ ಬಳಿಕ ಇದೀಗ ಆಸ್ಟ್ರೇಲಿಯಾದಲ್ಲಿ ಕೊವಿಡ್ 19 ಉತ್ತುಂಗಕ್ಕೇರುತ್ತಿದೆ. ಆಸ್ಟ್ರೇಲಿಯಾದಲ್ಲಿ ಅತ್ಯಂತ ಹೆಚ್ಚು ಜನಸಂಖ್ಯೆ ಇರುವ ನ್ಯೂ ಸೌತ್​ ವೇಲ್ಸ್​ನಲ್ಲಿ ಇಂದು 23, 131 ಪ್ರಕರಣಗಳು ದಾಖಲಾಗಿವೆ. ಹೊಸ ವರ್ಷದ ಮೊದಲ ದಿನ 22,577 ಹೊಸ ಕೊವಿಡ್​ ಸೋಂಕಿನ ಕೇಸ್​ಗಳು ದಾಖಲಾಗಿದ್ದವು.  ಒಟ್ಟು 83, 376 ಮಂದಿಗೆ ತಪಾಸಣೆ ಮಾಡಲಾಗಿತ್ತು. ಅದರಲ್ಲಿ 23, 131 ಕೇಸ್​ಗಳು ದಾಖಲಾಗಿವೆ. 1,344 ಸೋಂಕಿತರು ಆಸ್ಪತ್ರೆಯಲ್ಲಿ ಇದ್ದಾರೆ. ಇದು ಸೆಪ್ಟೆಂಬರ್​ಗೆ ಹೋಲಿಸಿದರೆ ಅತ್ಯಂತ ಹೆಚ್ಚಿನ ಸಂಖ್ಯೆಯಾಗಿದೆ. ಅಂದಹಾಗೆ, ಇಲ್ಲಿ ಕೊವಿಡ್​ 19 ಪಾಸಿಟಿವಿಟಿ ರೇಟ್​ ಶೇ.28ರಷ್ಟು ಇದೆ.

ಇನ್ನೊಂದು ಪ್ರಮುಖ ರಾಜ್ಯ ವಿಕ್ಟೋರಿಯಾದಲ್ಲಿ ಇಂದು 14,020 ಕೇಸ್​ಗಳು ದಾಖಲಾಗಿವೆ. ಸೋಮವಾರ 8577 ಸೋಂಕಿತರು ಪತ್ತೆಯಾಗಿದ್ದರು. ಒಂದೇ ದಿನದಲ್ಲಿ ಅರ್ಧದ ಹತ್ತಿರ ಏರಿಕೆಯಾಗಿದ್ದು, ಇಲ್ಲಿ 516 ಜನ ಆಸ್ಪತ್ರೆಗಳಲ್ಲಿ ಇದ್ದಾರೆ. ಅದರಲ್ಲೂ 108 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.  ಆಸ್ಟ್ರೇಲಿಯಾದಲ್ಲಿ ಒಟ್ಟಾರೆ ಕೊವಿಡ್​ 19 ಸೋಂಕಿತರ ಸಂಖ್ಯೆ 5 ಲಕ್ಷದ ಗಡಿ ದಾಟಿದೆ. ಈ ಮಧ್ಯೆ ನ್ಯೂ ಸೌತ್​ ವೇಲ್​​ನ ಮುಖ್ಯ ವೈದ್ಯಾಧಿಕಾರಿ ಕೆರ್ರಿ ಚಾಂಟ್​, ಕೊರೊನಾ ಸೋಂಕು ಕಾಣಿಸಿಕೊಂಡ ತಕ್ಷಣ ಹೋಗಿ ಆಸ್ಪತ್ರೆಗಳಿಗೆ ದಾಖಲಾಗಬೇಡಿ. ಅಗತ್ಯ ಇಲ್ಲದಿದ್ದರೆ ಮನೆಯಲ್ಲೇ ಐಸೋಲೇಟ್ ಆಗಿ ಚಿಕಿತ್ಸೆ ಪಡೆದುಕೊಳ್ಳಿ. ಅನಗತ್ಯವಾಗಿ ಆರೋಗ್ಯ ವ್ಯವಸ್ಥೆಗೆ ಹೊರೆಯಾಗಬಾರದು ಎಂದಿದ್ದಾರೆ.

ಇದನ್ನೂ ಓದಿ: ಕಪ್ಪು ವೆಲ್ವೆಟ್ ಮತ್ತು ಲೆದರ್ ಗೌನಲ್ಲಿ 48ರ ಮಲೈಕಾ ಅರೋರಾ 25ರ ತರುಣಿಯರನ್ನು ನಾಚಿಸುವಂತಿದ್ದಾರೆ, ವಿಡಿಯೋ ನೋಡಿದವರು ಕ್ಲೀನ್ ಬೌಲ್ಡ್!!

Published On - 4:54 pm, Tue, 4 January 22