ಅಮೆರಿಕದ ಕಾನ್ಸಾಸ್ ಮೂಲಕ ಹಾದು ಹೋದ ಪ್ರಬಲ ಸುಂಟರಗಾಳಿ; ವಿಡಿಯೊ ನೋಡಿ

| Updated By: ರಶ್ಮಿ ಕಲ್ಲಕಟ್ಟ

Updated on: May 02, 2022 | 9:02 PM

ಹಾನಿಯ ಸಮೀಕ್ಷೆಗಾಗಿ ವಿಮಾನಗಳು ಮತ್ತು ಡ್ರೋನ್‌ಗಳನ್ನು ನಿಯೋಜಿಸುವುದರೊಂದಿಗೆ ಪರಿಸ್ಥಿತಿಯ ಮೌಲ್ಯಮಾಪನಗಳು ಇನ್ನೂ ನಡೆಯುತ್ತಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸದ್ಯಕ್ಕೆ, ಅವಶೇಷಗಳನ್ನು ತೆಗೆಯಲು ಮತ್ತು ಆಗಿರುವ ಹಾನಿಯನ್ನು...

ಅಮೆರಿಕದ ಕಾನ್ಸಾಸ್ ಮೂಲಕ ಹಾದು ಹೋದ ಪ್ರಬಲ ಸುಂಟರಗಾಳಿ; ವಿಡಿಯೊ ನೋಡಿ
ಸುಂಟರಗಾಳಿ
Follow us on

ಶುಕ್ರವಾರದಂದು ಅಮೆರಿಕದ ಕಾನ್ಸಾಸ್‌ನ (Kansas) ಕೆಲವು ಭಾಗಗಳಲ್ಲಿ ಸುಂಟರಗಾಳಿ (tornado) ಹಾದು ಹೋಗಿದ್ದು, ನೂರಾರು ಮನೆಗಳು ಮತ್ತು ಕಟ್ಟಡಗಳಿಗೆ ಹಾನಿಯಾಗಿದೆ. ಹವಾಮಾನಶಾಸ್ತ್ರಜ್ಞ ರೀಡ್ ಟಿಮ್ಮರ್(Reed Timmer) ಅವರು ಹಂಚಿಕೊಂಡಿರುವ ವಿಡಿಯೊದಲ್ಲಿ ಅಂಡೋವರ್ ಮೂಲಕ ಸುಂಟರಗಾಳಿ ಹೋಗುತ್ತಿರುವುದನ್ನು ಕಾಣಬಹುದು. ಅಂಡೋವರ್‌ನ ವಿಚಿತಾ ಉಪನಗರದಲ್ಲಿ ವ್ಯಾಪಕವಾದ ಹಾನಿಯನ್ನುಂಟುಮಾಡಿದ ಸುಂಟರಗಾಳಿಯು ಫುಜಿಟಾ ಮಾಪಕದಲ್ಲಿ EF-3 ಎಂದು ಮಾಪನ ಮಾಡಲಾಗಿದೆ. ಸುಂಟರಗಾಳಿಯ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು ಇದು 2.8 ಮಿಲಿಯನ್ ಗಿಂತ ಹೆಚ್ಚು ವೀಕ್ಷಣೆ ಪಡೆದಿದೆ. ಬಿಬಿಸಿ ಪ್ರಕಾರ ವಿಚಿತಾ ನಗರದಲ್ಲಿ 50 ರಿಂದ 100 ಕಟ್ಟಡಗಳು ಹಾನಿಗೊಳಗಾಗಿವೆ ಎಂದು ಮೇಯರ್ ಹೇಳಿದ್ದಾರೆ, ವಿಶೇಷವಾಗಿ ಅಂಡೋವರ್ ಉಪನಗರದಲ್ಲಿ ಭಾರೀ ನಾಶನಷ್ಟ ಸಂಭವಿಸಿದೆ. ಅದೃಷ್ಟವಶಾತ್, ಇದುವರೆಗೆ ಯಾವುದೇ ಗಂಭೀರ ಗಾಯಗಳ ವರದಿಯಾಗಿಲ್ಲ. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸ್ಥಳೀಯ ಅಧಿಕಾರಿಗಳು, ಕಟ್ಟಡಗಳು ಮತ್ತು ಕಾರುಗಳಿಗೆ ಹಾನಿಯಾಗಿದ್ದರೂ ಯಾವುದೇ ಸಾವು ಸಂಭವಿಸಿಲ್ಲ ಎಂದಿದ್ದಾರೆ. ಒಳ್ಳೆಯ ಸುದ್ದಿ ಏನೆಂದರೆ, ನಾವು ಕಳೆದ ರಾತ್ರಿ ಮಾತನಾಡಿದ್ದಕ್ಕಿಂತ ಹೆಚ್ಚಿನ ಗಾಯಗಳು ವರದಿಯಾಗಿಲ್ಲ ಎಂದು ಅಗ್ನಿಶಾಮಕ ಮುಖ್ಯಸ್ಥ ಚಾಡ್ ರಸೆಲ್ ಸ್ಥಳೀಯ ಸುದ್ದಿವಾಹಿನಿಗೆ ತಿಳಿಸಿದ್ದಾರೆ ಎಂದು ಬಿಬಿಸಿ ವರದಿ ಮಾಡಿದೆ. ಯಾವುದೇ ಸಾವುನೋವುಗಳ ವರದಿಗಳಿಲ್ಲ. ನಮಗೆ ಯಾವುದೇ ರಕ್ಷಣಾ ಕಾರ್ಯಾಚರಣೆ ಬಾಕಿ ಇಲ್ಲ, ಯಾರೂ ಇದೀಗ ಕಟ್ಟಡದಲ್ಲಿ ಸಿಕ್ಕಿಹಾಕಿಕೊಂಡಿಲ್ಲ ಎಂದು ರಸೆಲ್ ಹೇಳಿದ್ದಾರೆ.


ಹಾನಿಯ ಸಮೀಕ್ಷೆಗಾಗಿ ವಿಮಾನಗಳು ಮತ್ತು ಡ್ರೋನ್‌ಗಳನ್ನು ನಿಯೋಜಿಸುವುದರೊಂದಿಗೆ ಪರಿಸ್ಥಿತಿಯ ಮೌಲ್ಯಮಾಪನಗಳು ಇನ್ನೂ ನಡೆಯುತ್ತಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸದ್ಯಕ್ಕೆ, ಅವಶೇಷಗಳನ್ನು ತೆಗೆಯಲು ಮತ್ತು ಆಗಿರುವ ಹಾನಿಯನ್ನು ಪರಿಶೀಲಿಸಲು ತುರ್ತು ತಂಡಗಳು ಕೆಲಸ ಮಾಡುತ್ತಿರುವುದರಿಂದ ನಗರಕ್ಕೆ ಹೋಗುವ ರಸ್ತೆಗಳನ್ನು ಮುಚ್ಚಲಾಗಿದೆ ಎಂದು ಅಂಡೋವರ್ ಪೊಲೀಸ್ ಇಲಾಖೆ ತಿಳಿಸಿದೆ.

ಸಮೀಕ್ಷೆಯು ಪೂರ್ಣಗೊಂಡಂತೆ ಹೆಚ್ಚಿನ ವಿವರಗಳು ತಿಳಿಯಲಿವೆ. ಆದಾಗ್ಯೂ, EF-3 ರೇಟಿಂಗ್ ಎಂದರೆ ಗಾಳಿಯ ವೇಗವು 136 ಮತ್ತು 165 mph ನಡುವೆ ಇರುತ್ತದೆ ಎಂದು ನಮೂದಿಸಬೇಕು. ಚಂಡಮಾರುತದಿಂದ ಚೇತರಿಸಿಕೊಳ್ಳಲು ಅಂಡೋವರ್ ಗೆ ವರ್ಷಗಳು ಬೇಕಾಗುತ್ತದೆ ಎಂದು ರಸೆಲ್ ಹೇಳಿದ್ದಾರೆ.

ವಿದೇಶದ ಇತರ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ ಪ್ರಮುಖ  ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ