ಕೊವಿಡ್ 19ನ ವಿವಿಧ ರೂಪಾಂತರ ವೈರಸ್ಗಳು ದಾಂಗುಡಿ ಇಟ್ಟರೂ, ಅತ್ಯಂತ ಹೆಚ್ಚು ಪ್ರಸರಣಗೊಂಡು ಆತಂಕ ಸೃಷ್ಟಿಸಿರುವ ತಳಿಗಳೆಂದರೆ ಡೆಲ್ಟಾ ಮತ್ತು ಒಮಿಕ್ರಾನ್. ಅದರಲ್ಲೂ ಒಮಿಕ್ರಾನ್ನ ಹಬ್ಬುವಿಕೆ ಅತ್ಯಂತ ವೇಗವಾಗಿದೆ. ಆದರೆ ಈ ಬೆನ್ನಲ್ಲೇ ಯುರೋಪ್ನ ದ್ವೀಪ ರಾಷ್ಟ್ರವಾದ ಸೈಪ್ರಸ್ನಲ್ಲಿ ಇನ್ನೊಂದು ಕೊವಿಡ್ 19ನ ಇನ್ನೊಂದು ತಳಿ ಕಾಣಿಸಿಕೊಂಡಿದೆ. ಅದು ಡೆಲ್ಟಾ ಮತ್ತು ಒಮಿಕ್ರಾನ್ ವೈರಸ್ಗಳ ಸಂಯೋಜಿತ ತಳಿಯಾಗಿದ್ದು, ಡೆಲ್ಟಾಕ್ರಾನ್ (Deltacron) ಎಂದು ಹೆಸರಿಡಲಾಗಿದೆ ಎಂದು ಸೈಪ್ರಸ್ ವಿಶ್ವವಿದ್ಯಾನಿಲಯದಲ್ಲಿ ಜೈವಿಕ ವಿಜ್ಞಾನಗಳ ಪ್ರಾಧ್ಯಾಪಕ ಮತ್ತು ಜೈವಿಕ ತಂತ್ರಜ್ಞಾನ ಮತ್ತು ಆಣ್ವಿಕ ವೈರಾಲಜಿಯ ಪ್ರಯೋಗಾಲಯದ ಮುಖ್ಯಸ್ಥ ಆಗಿರುವ ಲಿಯೊಂಡಿಯೊಸ್ ಕೊಸ್ಟ್ರಿಕಿಸ್ ತಿಳಿಸಿದ್ದಾರೆ.
ಶುಕ್ರವಾರ ಸಂದರ್ಶನವೊಂದರಲ್ಲಿ ಮಾತನಾಡಿದ ಕೊಸ್ಟ್ರಿಕಿಸ್, ನಾವೀಗ ಒಮಿಕ್ರಾನ್ ಮತ್ತು ಡೆಲ್ಟಾದ ಸಂಯೋಜನೆಯಿಂದ ಉಂಟಾದ ಒಂದು ಹೊಸ ತಳಿಯನ್ನು ಕಂಡುಕೊಂಡಿದ್ದೇವೆ. ಅದಕ್ಕೆ ಡೆಲ್ಟಾಕ್ರಾನ್ ಎಂದು ಹೆಸರಿಸಲಾಗಿದೆ. ಡೆಲ್ಟಾ ಜಿನೋಮ್ಗಳಲ್ಲಿ ಒಮಿಕ್ರಾನ್ ಮಾದರಿಯ ಜೆನೆಟಿಕ್ ಸಿಗ್ನಿಚರ್ಗಳು ಕಂಡುಬಂದಿದ್ದರಿಂದ ಈ ಹೆಸರಿಡಲಾಗಿದೆ. ಸದ್ಯ ಸೈಪ್ರಸ್ನಲ್ಲಿ 25 ಡೆಲ್ಟಾಕ್ರಾನ್ ಪ್ರಕರಣಗಳು ಕಂಡುಬಂದಿವೆ ಎಂದು ಮಾಹಿತಿ ನೀಡಿದ್ದಾರೆ. ಕೊವಿಡ್ 19 ಸೋಂಕಿನ ಸೌಮ್ಯ ಲಕ್ಷಣಗಳಿದ್ದು, ಆಸ್ಪತ್ರೆಗೆ ದಾಖಲಾಗದೆ ಇರುವವರಿಗಿಂತ, ಕೊರೊನಾ ಗಂಭೀರ ಸ್ವರೂಪಗಳಿದ್ದು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದವರಿಗೇ ಹೆಚ್ಚಿನ ಪ್ರಮಾಣದಲ್ಲಿ ಈ ಡೆಲ್ಟಾಕ್ರಾನ್ ಕಾಣಿಸಿಕೊಂಡಿದೆ ಎಂದೂ ತಿಳಿಸಿದ್ದಾರೆ. ಜಾಗತಿಕ ವಿಜ್ಞಾನ ಉಪಕ್ರಮ ಮತ್ತು ಪ್ರಾಥಮಿಕ ಮೂಲವಾದ ಜಿಐಎಸ್ಎಐಡಿಗೆ ಈ 25ಜನರ ಮಾದರಿಗಳನ್ನು ಕಳಿಸಿಕೊಡಲಾಗಿದೆ. ಅದು ವೈರಸ್ ಬದಲಾವಣೆಯನ್ನು ಟ್ರ್ಯಾಕ್ ಮಾಡುತ್ತದೆ. ಡೆಲ್ಟಾಕ್ರಾನ್ ಎಂಬುದು ಭವಿಷ್ಯದಲ್ಲಿ ಎಷ್ಟು ಗಂಭೀರವಾಗಬಹುದು? ಪ್ರಸರಣದ ವೇಗ ಎಷ್ಟು? ಒಮಿಕ್ರಾನ್ ಮತ್ತು ಡೆಲ್ಟಾಕ್ಕಿಂತಲೂ ಭಿಕರವಾ? ಎಂಬಿತ್ಯಾದಿ ವಿಚಾರಗಳನ್ನು ಅಧ್ಯಯನ ಮಾಡಬೇಕಾಗಿದೆ ಎಂದೂ ಕೊಸ್ಟ್ರಿಕಿಸ್ ಹೇಳಿದ್ದಾರೆ. ಉಳಿದ ವಿಜ್ಞಾನಿಗಳು ಈ ಸೋಂಕು ಪ್ರಯೋಗಾಲಯದಲ್ಲಿನ ಕಲ್ಮಷದಿಂದ ಪತ್ತೆಯಾಗಿರಬಹುದು ಎಂದು ಅಂದಾಜಿಸಿದ್ದಾರೆ. ಆದರೆ ಕೊಸ್ಟ್ರಿಕಿಸ್ ಮಾತ್ರ ಡೆಲ್ಟಾಕ್ರಾನ್ ಇದೆ ಎಂಬುದನ್ನು ದೃಢವಾಗಿಯೇ ತಿಳಿಸಿದ್ದಾರೆ.
ಇದನ್ನೂ ಓದಿ: Coronavirus: ಕೋವಿಡ್ ತಡೆಗಟ್ಟುವ ಡಯೆಟ್ ಫುಡ್ನಲ್ಲಿ ಹೆಚ್ಚು ಪ್ರೋಟೀನ್ಯುಕ್ತ ಆಹಾರವಿರಲಿ
Published On - 11:39 am, Mon, 10 January 22