ಯುಎಸ್​ನ ಈ ಮಹಿಳೆ ವಿಶ್ವದಲ್ಲೇ ಅತಿಹೆಚ್ಚು ಉದ್ದ ಉಗುರು ಬೆಳೆಸಿರುವ ಹಿಂದೆ ಒಂದು ದುಃಖಕರ ಘಟನೆಯಿದೆ

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Aug 06, 2022 | 8:08 AM

ಡಯಾನಾ ಸಾಮಾನು ಖರೀದಿಸುತ್ತಿರುವಾಗಲೇ ಕಿರಿಮಗಳು ಗಾಬರಿಯಿಂದ ಫೋನ್ ಮಾಡಿದ್ದಳು. ‘ನಾನು ಸ್ಟೋರ್ ನಲ್ಲಿದ್ದಾಗ ನನ್ನ ಮಗಳು ಪೋನ್ ಮಾಡಿ, ಅಮ್ಮಾ, ತಿಷಾ ಎದ್ದೇಳುತ್ತಿಲ್ಲ ಎಂದಳು,’ ಎಂದು ಅವರು ಹೇಳಿದ್ದರು ಅಂತ ಜಿ ಡಬ್ಲ್ಯೂಅರ್ ವರದಿ ಮಾಡಿದೆ. 16 ವರ್ಷ ವಯಸ್ಸಿನ ಅವರ ಮಗಳು ನಿದ್ರೆಯಲ್ಲೇ ಅಸ್ತಮಾ ಅಟ್ಯಾಕ್​ಗೊಳಗಾಗಿ ಸತ್ತುಬಿಟ್ಟಿದ್ದಳು.

ಯುಎಸ್​ನ ಈ ಮಹಿಳೆ ವಿಶ್ವದಲ್ಲೇ ಅತಿಹೆಚ್ಚು ಉದ್ದ ಉಗುರು ಬೆಳೆಸಿರುವ ಹಿಂದೆ ಒಂದು ದುಃಖಕರ ಘಟನೆಯಿದೆ
ಜಿ ಡಬ್ಲ್ಯೂ ಆರ್ ಸರ್ಟಿಫಿಕೇಟ್​​ನೊಂದಿಗೆ ಡಯಾನಾ ಆರ್ಮ್​ಸ್ಟ್ರಾಂಗ್
Follow us on

ಅಮೆರಿಕಾದ ಮಿನಿಸೊಟ ನಗರಲ್ಲಿ (Minnesota) ವಾಸವಾಗಿರುವ ಡಯಾನಾ ಆರ್ಮ್​ಸ್ಟ್ರಾಂಗ್ (Diana Armstrong) ಹೆಸರಿನ ಮಹಿಳೆ ಕೈ ಬೆರಳುಗಳ ಉಗುರುಗಳನ್ನು ಅತಿಹೆಚ್ಚು ಉದ್ದ ಬೆಳಿಸಿರುವ ವಿಶ್ವ ದಾಖಲೆಯನ್ನು (ಮಹಿಳೆಯರ) ತನ್ನ ಹೆಸರಿಗೆ ಬರೆದುಕೊಂಡಿರುವರೆಂದು ಗಿನ್ನೆಸ್ ವರ್ಲ್ಡ್ ರೆಕಾರ್ಡ್ (ಜಿ ಡಬ್ಲ್ಯೂಅರ್) (GWR) ಮಂಗಳವಾರಂದು ಪ್ರಕಟಿಸಿದೆ. ಎರಡೂ ಕೈ ಬೆರಳುಗಳ ಉಗುರುಗಳನ್ನು ಬೆಳಸಿರುವ ದಾಖಲೆಯನ್ನೂ ಈ 63-ವರ್ಷ-ವಯಸ್ಸಿನ ಮಹಿಳೆ ತಮ್ಮದಾಗಿಸಿಕೊಂಡಿದ್ದಾರೆ. ಅವರ ಎರಡೂ ಕೈಬೆರಳುಗಳ ಉಗುರುಗಳ ಒಟ್ಟು ಉದ್ದ 42 ಅಡಿಗಿಂತ ಜಾಸ್ತಿ ಮಾರಾಯ್ರೇ! ಜಿಡಬ್ಕ್ಯೂಅರ್ ನೀಡಿರುವ ಮಾಹಿತಿ ಪ್ರಕಾರ ಡಯನಾ ಕಳೆದ 25 ವರ್ಷಗಳಿಂದ ಉಗುರು ಬೆಳಸುತ್ತಿದ್ದಾರೆ.

ಡಯಾನಾ ಕೈಬೆರಳು ಉಗುರುಗಳ ಅಳತೆ ಮಾಡಿದಾಗ ಒಟ್ಟಾರೆ (ಎಲ್ಲ ಉಗುರುಗಳು) ಉದ್ದ 42 ಅಡಿ 10.4 ಅಂಗುಲ ಆಗಿತ್ತು. ಈ ದಾಖಲೆಯನ್ನು ಈ ವರ್ಷ ಮಾರ್ಚ್​ನಲ್ಲಿ ಸ್ಥಾಪಿಸಲಾಗಿದೆ.

138.94 ಸೆಂ. ಮೀ (4 ಅಡಿ 6.7 ಅಂಗುಲ) ಉದ್ದವಿರುವ ಡಯಾನಾರ ಹೆಬ್ಬೊಟ್ಟಿನ ಉಗುರು ಉಳಿದ ಉಗುರುಗಳಿಗಿಂತ ಹೆಚ್ಚು ಉದ್ದವಿದೆ. ಅವರ ಕೈಬೆರಳುಗಳಲ್ಲಿ ಎಲ್ಲಕ್ಕಿಂತ ಕಡಿಮೆ ಉದ್ದವಿರುವ ಎಡಗೈ ತೋರುಬೆರಳನಿನ ಉಗುರು ಸಹ ಉಳಿದೆಲ್ಲ ಬೆರಳುಗಳ ಉಗುರುಗಳಿಗಿಂತ ಚಿಕ್ಕದಾಗಿದೆ, ಇದರ ಉದ್ದ 109. 2 ಸೆಂ. ಮೀ (3 ಅಡಿ 7 ಅಂಗುಲ).

ಡಯಾನಾ ಅವರು ಕೊನೆಯ ಬಾರಿ ತಮ್ಮ ಉಗುರು ಕತ್ತರಿಸಿಕೊಂಡಿದ್ದು 1997ರಲ್ಲಿ. ಆಘಾತಕಾರಿ ಘಟನೆಯೊಂದು ಅವರ ಕುಟುಂಬದಲ್ಲಿ ಸೃಷ್ಟಿಸಿದ ಬದಲಾವಣೆಯಿಂದಾಗಿ ತಾನು ಉಗುರು ಕತ್ತರಿಸುವುದನ್ನು ಬಿಟ್ಟಿದ್ದಾಗಿ ಡಯಾನಾ ಹೇಳಿದ್ದಾರೆ.

ಜಿಡಬ್ಕ್ಯೂಅರ್ ಬಿಡುಗಡೆ ಮಾಡಿರುವ ಪ್ರಕಟಣೆಯೊಂದರ ಪ್ರಕಾರ 1997 ಆ ದುರಂತಮಯ ದಿನ ಡಯಾನಾರಿಗೆ ಮೂಮೂಲಿನಂತೆಯೇ ಆರಂಭಗೊಂಡಿತ್ತು. ಬೆಳಗ್ಗೆ ತನ್ನ ಮಕ್ಕಳನ್ನು ಹಾಸಿಗೆಯಿಂದ ಎಬ್ಬಿಸಿ ಅಡುಗೆಗೆ ಬೇಕಾದ ಕಿರಾಣಾ ಸಾಮಾನು ಖರೀದಿಸಲು ಆಕೆ ಗ್ರೋಸರಿ ಅಂಗಡಿಗೆ ಹೋಗಿದ್ದರು.

ಡಯಾನಾ ಸಾಮಾನು ಖರೀದಿಸುತ್ತಿರುವಾಗಲೇ ಕಿರಿಮಗಳು ಗಾಬರಿಯಿಂದ ಫೋನ್ ಮಾಡಿದ್ದಳು. ‘ನಾನು ಸ್ಟೋರ್ ನಲ್ಲಿದ್ದಾಗ ನನ್ನ ಮಗಳು ಪೋನ್ ಮಾಡಿ, ಅಮ್ಮಾ, ತಿಷಾ ಎದ್ದೇಳುತ್ತಿಲ್ಲ ಎಂದಳು,’ ಎಂದು ಅವರು ಹೇಳಿದ್ದರು ಅಂತ ಜಿ ಡಬ್ಲ್ಯೂಅರ್ ವರದಿ ಮಾಡಿದೆ. 16 ವರ್ಷ ವಯಸ್ಸಿನ ಅವರ ಮಗಳು ನಿದ್ರೆಯಲ್ಲೇ ಅಸ್ತಮಾ ಅಟ್ಯಾಕ್​ಗೊಳಗಾಗಿ ಸತ್ತುಬಿಟ್ಟಿದ್ದಳು.

‘ಅದು ನನ್ನ ಬದುಕಿನ ಅತ್ಯಂತ ಕೆಟ್ಟ ದಿನ,’ ಅಂತ ಡಯಾನಾ ಹೇಳಿದ್ದನ್ನು ಜಿಡಬ್ಕ್ಯೂಅರ್ ಕೋಟ್ ಮಾಡಿದೆ. ಲತೀಷಾಳೇ ಪ್ರತಿ ವಾರಾಂತ್ಯದಲ್ಲಿ ಡಯಾನಾರ ಉಗುರುಗಳನ್ನು ಕತ್ತರಿಸಿ ಪಾಲಿಶ್ ಹಾಕುತ್ತಿದ್ದಳಂತೆ.

‘ಅವಳೊಬ್ಬಳೇ ನನ್ನ ಉಗುರು ಟ್ರಿಮ್ ಮಾಡುತ್ತಿದ್ದಳು. ಉಗುರು ಕತ್ತರಿಸಿ, ಫೈಲಿಂಗ್ ಮಾಡಿ ಪಾಲಿಶ್ ಹಾಕುತ್ತಿದ್ದಳು,’ ಆಂತ ಹೇಳಿರುವುದನ್ನು ಜಿಡಬ್ಕ್ಯೂಅರ್ ವರದಿ ಮಾಡಿದೆ.

ನಂತರದ ವರ್ಷಗಳಲ್ಲಿ ಡಯಾನಾ ಬೇರೆ ಮಕ್ಕಳು, ‘ಮಾ, ನಿನ್ನ ಉಗುರು ತುಂಬಾನೇ ಬೆಳೆದಿದೆ ಕಟ್ ಮಾಡೋದಾ,’ ಅಂತ ಕೇಳಿದರೆ, ‘ನಿಮ್ಮ ಕೆಲಸ ನೀವು ನೋಡಿಕೊಳ್ಳಿ’ ಎಂದು ಹೇಳುತ್ತಿದ್ದರಂತೆ.

ಈಗ ಅವರ ಉಗುರುಗಳು ತುಂಬಾ ಬೆಳೆದಿರುವುದರಿಂದ ಪ್ರತಿ ಒಂದು ಉಗುರಿಗೆ ಪಾಲಿಶ್ ಹಾಕಲು ಕನಿಷ್ಟ 4-5 ಗಂಟೆ ಬೇಕಾಗುತ್ತದಂತೆ.

ಈ ಹಿಂದೆ ಮಹಿಳೆಯರ ಪೈಕಿ ಅತಿ ಹೆಚ್ಚು ಉದ್ದ ಉಗರು ಬೆಳೆಸಿದ ದಾಖಲೆ ಅಮೇರಿಕಾದವರೇ ಆಯಾನ್ನಾ ವಿಲಿಯಮ್ಸ್ ಅವರ ಹೆಸೆರಲ್ಲಿತ್ತು. ಆದರೆ ನಂತರ ಅವರು ಅವುಗಳನ್ನು ಕಟ್ ಮಾಡಿಸಿದ್ದರು. ಡಯಾನಾ ಅವರು ವಿಲಿಯಮ್ಸ್ ದಾಖಲೆಯನ್ನು 570.03 ಸೆಂ. ಮೀಗಳಿಂದ (18.8 ಅಂಗುಲ) ಉತ್ತಮಪಡಿಸಿದ್ದಾರೆ.